ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಪ್ರಕಟನೆ
11ನೇ ಅಧ್ಯಾಯ
- Verse 1: ಇದಾದ ನಂತರ ಅಳತೆಗೋಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು : “ನೀನೆದ್ದು ದೇವರ ಆಲಯವನ್ನೂ ಬಲಿಪೀಠವನ್ನೂ ಅಳತೆಮಾಡು. ಆಲಯದಲ್ಲಿ ಆರಾಧಿಸುತ್ತಿರುವವರನ್ನು ಲೆಕ್ಕಮಾಡು.
- Verse 2: ಆಲಯದ ಹೊರ ಅಂಗಳವನ್ನು ಅಳತೆಮಾಡಬೇಡ; ಅದನ್ನು ಬಿಟ್ಟುಬಿಡು. ಅದನ್ನು ಜನರಿಗೆ ಬಿಟ್ಟುಕೊಡಲಾಗಿದೆ. ಅವರು ಪವಿತ್ರನಗರವನ್ನು ನಲವತ್ತೆರಡು ತಿಂಗಳವರೆಗೆ ತುಳಿದಾಡುವರು.
- Verse 3: ನಾನು ನನ್ನ ಇಬ್ಬರು ಸಾಕ್ಷಿಗಳನ್ನು ಕಳುಹಿಸುವೆನು. ಅವರು ಗೋಣಿತಟ್ಟನ್ನು ಉಟ್ಟುಕೊಂಡು ಒಂದು ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಪ್ರವಾದಿಸುವರು.”
- Verse 4: ಲೋಕಾಧಿಪತಿಯಾದ ದೇವರ ಸಾನ್ನಿಧ್ಯದಲ್ಲಿರುವ ಎರಡು ಓಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳು ಇವರೇ.
- Verse 5: ಯಾವನಾದರು ಇವರಿಗೆ ಕೇಡು ಬಗೆದರೆ ಇವರ ಬಾಯಿಯಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ. ಇವರಿಗೆ ಕೇಡು ಬಗೆಯಬೇಕೆಂದಿರುವವನು ಹೀಗೆಯೇ ಹತನಾಗುತ್ತಾನೆ.
- Verse 6: ತಾವು ಪ್ರವಾದನೆ ಮಾಡುವ ದಿನಗಳಲ್ಲಿ ಮಳೆ ಬಾರದಂತೆ ಆಕಾಶವನ್ನು ಮುಚ್ಚಿಬಿಡುವ ಸಾಮರ್ಥ್ಯ ಇವರಿಗಿದೆ. ಇದಲ್ಲದೆ, ಇವರಿಗೆ ಇಷ್ಟಬಂದಾಗಲೆಲ್ಲಾ ನೀರನ್ನು ರಕ್ತವನ್ನಾಗಿ ಪರಿವರ್ತಿಸುವ ಹಾಗು ಸಕಲ ವಿಧವಾದ ಉಪದ್ರವಗಳಿಂದ ಜಗತ್ತನ್ನು ಪೀಡಿಸುವ ಅಧಿಕಾರ ಇವರಿಗೆ ಇರುತ್ತದೆ.
- Verse 7: ಇವರ ಸಾಕ್ಷ್ಯನೀಡಿಕೆ ಮುಗಿದ ನಂತರ ಪಾತಾಳಕೂಪದಿಂದ ಮೃಗವೊಂದು ಮೇಲೇರಿಬರುತ್ತದೆ; ಅದು ಇವರೊಡನೆ ಯುದ್ಧಮಾಡಿ, ಜಯಗಳಿಸಿ ಇವರನ್ನು ಕೊಂದುಹಾಕುತ್ತದೆ.
- Verse 8: ಈ ಸಾಕ್ಷಿಗಳ ಶವಗಳು ಆ ಮಹಾನಗರದ ಬೀದಿಪಾಲಾಗುವುವು. ಆ ನಗರವನ್ನು ಸೊದೋಮ್ ಇಲ್ಲವೆ ಈಜಿಪ್ಟ್ ಎಂದು ಸೂಚ್ಯವಾಗಿ ಕರೆಯಲಾಗಿದೆ. ಈ ಸಾಕ್ಷಿಗಳ ಪ್ರಭುವನ್ನು ಸಹ ಇಲ್ಲಿಯೇ ಶಿಲುಬೆಗೇರಿಸಲಾಯಿತು.
- Verse 9: ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಜನರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳ ತನಕ ದಿಟ್ಟಿಸಿ ನೋಡುವರು; ಅವುಗಳನ್ನು ಸಮಾಧಿಮಾಡಲು ಬಿಡಲೊಲ್ಲರು.
- Verse 10: ಭೂನಿವಾಸಿಗಳನ್ನು ಪೀಡಿಸಿದ್ದ ಆ ಇಬ್ಬರು ಪ್ರವಾದಿಗಳು ಸತ್ತದ್ದಕ್ಕಾಗಿ ಲೋಕದ ಜನರು ಸಂತೋಷದಿಂದ ಸಂಭ್ರಮಿಸುವರು. ಒಬ್ಬರಿಗೊಬ್ಬರು ಬಹುಮಾನಗಳನ್ನು ಹಂಚಿಕೊಳ್ಳುವರು.
- Verse 11: ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವದಾಯಕ ಉಸಿರು ಬಂದು ಆ ಶವಗಳನ್ನು ಹೊಕ್ಕಾಗ ಅವರು ಎದ್ದುನಿಂತರು. ಇದನ್ನು ಕಂಡವರೆಲ್ಲರೂ ಭಯದಿಂದ ನಡುಗಿದರು.
- Verse 12: ಅನಂತರ ಆ ಪ್ರವಾದಿಗಳಿಗೆ, “ಮೇಲೇರಿ ಬನ್ನಿ,” ಎಂದು ಸ್ವರ್ಗದಿಂದ ಒಂದು ಮಹಾವಾಣಿ ತಿಳಿಸಿತು. ಶತ್ರುಗಳು ಅವರನ್ನು ನೋಡುತ್ತಿದ್ದಂತೆಯೇ ಅವರು ಮೇಘಾರೂಢರಾಗಿ ಸ್ವರ್ಗಕ್ಕೇರಿದರು.
- Verse 13: ಅದೇ ಗಳಿಗೆಯಲ್ಲಿ ಒಂದು ಭೀಕರ ಭೂಕಂಪವಾಯಿತು. ನಗರದ ಹತ್ತನೆಯ ಒಂದು ಭಾಗ ನಾಶವಾಯಿತು. ಏಳು ಸಾವಿರ ಜನರು ಆ ಭೂಕಂಪದಲ್ಲಿ ಹತರಾದರು. ಉಳಿದವರು ಭಯಭೀತರಾಗಿ ಸ್ವರ್ಗದಲ್ಲಿರುವ ದೇವರ ಮಹಿಮೆಯನ್ನು ಸ್ತುತಿಸಿದರು.
- Verse 14: ಹೀಗೆ ಎರಡನೆಯ ವಿಪತ್ತು ಮುಗಿಯಿತು. ಇಗೋ ಮೂರನೆಯ ವಿಪತ್ತು ಕೂಡಲೇ ಬಂದೆರಗುವುದು.
- Verse 15: ಏಳನೆಯ ದೂತನು ತನ್ನ ತುತೂರಿಯನ್ನು ಊದಿದನು. ಆಗ ಸ್ವರ್ಗದಲ್ಲಿ ಮಹಾಶಬ್ದಗಳು ಉಂಟಾಗಿ ಹೀಗೆ ಮೊಳಗಿದವು : “ವಿಶ್ವವನ್ನಾಳುವ ಅಧಿಕಾರವು ನಮ್ಮ ಸರ್ವೇಶನದು ಹಾಗು ಅವರಿಂದ ಅಭಿಷಿಕ್ತನಾದ ಲೋಕೋದ್ಧಾರಕನದು. ಇನ್ನಾತನು ಆಳುವನು ಎಂದೆಂದಿಗೂ".
- Verse 16: ತರುವಾಯ ದೇವರ ಸಾನ್ನಿಧ್ಯದಲ್ಲಿ ತಮ್ಮ ತಮ್ಮ ಪೀಠಗಳಲ್ಲಿ ಕುಳಿತಿದ್ದ ಇಪ್ಪತ್ನಾಲ್ಕು ಸಭಾಪ್ರಮುಖರು ದೇವರಿಗೆ ಸಾಷ್ಟಾಂಗವೆರಗಿ ಆರಾಧಿಸಿದರು. ಅಲ್ಲದೆ,
- Verse 17: “ಪ್ರಭುವೇ, ದೇವನೇ, ಸರ್ವಶಕ್ತನೇ, ಇರುವಾತನೂ ಇದ್ದಾತನೂ ನೀನೇ ಘನಾಧಿಕಾರವನ್ನು ತೋರಿ ನೀ ಆಳುತ್ತಿರುವೆ ಧನ್ಯವಾದಗಳನ್ನು ನಿನಗೆ ಸಲ್ಲಿಸುವೆ.
- Verse 18: ಕೆರಳಿದವು ವಿಶ್ವ ರಾಷ್ಟ್ರಗಳು ಎರಗಿತು ನಿನ್ನ ಪ್ರಕೋಪವು ಸಮೀಪಿಸಿತು ಮೃತರ ನ್ಯಾಯತೀರ್ಪಿನ ದಿನವು ಬಂದಿದೆ ಸಮಯ ಸನ್ಮಾನಿಸಲು ನಿನ್ನ ದಾಸರನು, ಪ್ರವಾದಿಗಳನು, ದೇವಪ್ರಜೆಗಳನು ನಿನ್ನಲ್ಲಿ ಭಯಭಕುತಿಯುಳ್ಳ ಹಿರಿಯ ಕಿರಿಯರನು. ಇದಿಗೋ ಬಂದಿದೆ ಗಳಿಗೆಯು ಲೋಕನಾಶಕರನ್ನು ವಿನಾಶಗೊಳಿಸಲು", ಎಂದು ಹಾಡಿದರು.
- Verse 19: ಆಗ ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿರುವುದು ಕಾಣಿಸಿತು; ಇದಲ್ಲದೆ ಮಿಂಚುಗಳು, ಗುಡುಗು, ಗರ್ಜನೆಗಳು ಉಂಟಾದವು. ಭೂಕಂಪವೂ ಆಯಿತು. ಜೋರಾದ ಆಲಿಕಲ್ಲಿನ ಮಳೆ ಸುರಿಯಿತು.