ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ತೀತನಿಗೆ
3ನೇ ಅಧ್ಯಾಯ
- Verse 1: ಆಳುವವರಿಗೂ ಅಧಿಕಾರಿಗಳಿಗೂ ಕ್ರೈಸ್ತವಿಶ್ವಾಸಿಗಳು ವಿಧೇಯರಾಗಿ ನಡೆದುಕೊಳ್ಳಬೇಕೆಂದು ಜ್ಞಾಪಕಪಡಿಸು. ಎಲ್ಲಾ ಸತ್ಕಾರ್ಯಗಳನ್ನು ಕೈಗೊಳ್ಳಲು ಅವರು ಸಿದ್ಧರಿರಬೇಕು.
- Verse 2: ಅವರು ಯಾರನ್ನೂ ದೂಷಿಸದೆ, ಯಾರೊಡನೆಯೂ ಜಗಳವಾಡದೆ, ಸಾಧುಗುಣದಿಂದ ಎಲ್ಲರೊಡನೆ ಸೌಜನ್ಯದಿಂದ ನಡೆದುಕೊಳ್ಳಲಿ.
- Verse 3: ಹಿಂದೆ ನಾವು ಅವಿವೇಕಿಗಳೂ ಅವಿಧೇಯರೂ ಆಗಿ ದಾರಿ ತಪ್ಪಿಹೋಗಿದ್ದೆವು. ಅನೇಕ ಪ್ರಲೋಭನೆಗಳಿಗೂ ದುರಿಚ್ಛೆಗಳಿಗೂ ಗುಲಾಮರಾಗಿದ್ದೆವು. ದುಷ್ಟತನ ಹಾಗೂ ಮತ್ಸರಗಳಲ್ಲಿ ಕಾಲ ಕಳೆಯುತ್ತಾ ಅಸಹ್ಯರೂ ಪರಸ್ಪರ ದ್ವೇಷಿಗಳೂ ಆಗಿದ್ದೆವು.
- Verse 4: ಹೀಗಿರುವಾಗ, ಜಗದ್ರಕ್ಷಕರಾದ ದೇವರ ದಯೆಯೂ ಅವರ ಜನಪ್ರೇಮವೂ ಪ್ರಕಟವಾದವು.
- Verse 5: ಆಗ ಅವರೇ ನಮ್ಮನ್ನು ಉದ್ಧರಿಸಿದರು. ನಮ್ಮ ಸ್ವಂತ ಪುಣ್ಯಕಾರ್ಯಗಳು ನಮಗೆ ಈ ಉದ್ಧಾರವನ್ನು ತರಲಿಲ್ಲ. ಪುನರ್ಜನ್ಮವನ್ನು ಸೂಚಿಸುವ ಸ್ನಾನ ಹಾಗೂ ನೂತನ ಜೀವವನ್ನೀಯುವ ಪವಿತ್ರಾತ್ಮ ಈ ಮೂಲಕ ಅವರೇ ನಮ್ಮನ್ನು ಕರುಣೆಯಿಂದ ಉದ್ಧಾರಮಾಡಿದರು.
- Verse 6: ಪವಿತ್ರಾತ್ಮರನ್ನು ನಮ್ಮ ಉದ್ಧಾರಕ ಯೇಸುಕ್ರಿಸ್ತರ ಮುಖಾಂತರ ದೇವರು ನಮಗೆ ಧಾರಾಳವಾಗಿ ಅನುಗ್ರಹಿಸಿದ್ದಾರೆ.
- Verse 7: ಹೀಗೆ ದೈವಾನುಗ್ರಹದಿಂದ ನಾವು ದೇವರೊಡನೆ ಸತ್ಸಂಬಂಧವನ್ನು ಹೊಂದಿದೆವು. ನಿತ್ಯಜೀವದ ಭರವಸೆಯನ್ನು ಪಡೆದು ಆ ಜೀವಕ್ಕೆ ಬಾಧ್ಯಸ್ಥರಾದೆವು. ಇದು ಸತ್ಯವಾದ ಮಾತು.
- Verse 8: ದೇವರಲ್ಲಿ ವಿಶ್ವಾಸವಿಟ್ಟವರು ಸತ್ಕಾರ್ಯಗಳಲ್ಲಿ ನಿರತರಾಗುವಂತೆ ನೀನು ಇವೆಲ್ಲವನ್ನೂ ದೃಢವಾಗಿ ಬೋಧಿಸಬೇಕೆಂಬುದೇ ನನ್ನ ಅಪೇಕ್ಷೆ. ಇವು ಎಲ್ಲರಿಗೂ ಹಿತಕರವಾಗಿವೆ ಹಾಗೂ ಪ್ರಯೋಜನಕರವಾಗಿವೆ.
- Verse 9: ಹುರುಳಿಲ್ಲದ ತರ್ಕಗಳಿಂದಲೂ ಉದ್ದುದ್ದ ವಂಶಾವಳಿಗಳಿಂದಲೂ ಕಲಹ ಕಚ್ಚಾಟಗಳಿಂದಲೂ ಧರ್ಮಶಾಸ್ತ್ರವನ್ನು ಕುರಿತಾದ ವಾಗ್ವಾದಗಳಿಂದಲೂ ನೀನು ದೂರವಿರು. ಅವು ನಿಷ್ಪ್ರಯೋಜಕ ಹಾಗೂ ವ್ಯರ್ಥವಾದುವು.
- Verse 10: ಕ್ರೈಸ್ತಸಭೆಯಲ್ಲಿ ಭೇದಭಾವ ಹುಟ್ಟಿಸುವವನಿಗೆ ಒಂದೆರಡು ಸಾರಿ ಬುದ್ಧಿಹೇಳು. ಅನಂತರ ಅವನಷ್ಟಕ್ಕೇ ಬಿಟ್ಟುಬಿಡು.
- Verse 11: ಅಂಥವನು ಪತಿತ ಹಾಗೂ ಪಾಪಿಯೆಂದು ತಿಳಿ. ಅವನ ದುಷ್ಕೃತ್ಯಗಳೇ ಅವನ ಮೇಲೆ ತೀರ್ಪಿಡುತ್ತವೆ.
- Verse 12: ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದಿರುವುದರಿಂದ ಅರ್ತೆಮನನ್ನಾಗಲೀ ತುಖಿಕನನ್ನಾಗಲೀ ನಿನ್ನ ಬಳಿಗೆ ಕಳಿಸುತ್ತೇನೆ. ಅವರಲ್ಲೊಬ್ಬನು ನಿನ್ನ ಬಳಿಗೆ ಬಂದಾಗ ನೀನು ಕೂಡಲೇ ನಿಕೊಪೊಲಿಗೆ ಬಂದುಬಿಡು.
- Verse 13: ಧರ್ಮಶಾಸ್ತ್ರಜ್ಞನಾದ ಜೇನನಿಗೂ ಅಪೊಲೋಸನಿಗೂ ಅವರ ಪ್ರಯಾಣಕ್ಕೆ ಬೇಕಾದ ಸಹಾಯಮಾಡು. ಅವರಿಗೆ ಏನು ಕೊರತೆಯಾಗದಂತೆ ನೋಡಿಕೋ.
- Verse 14: ನಮ್ಮ ಜನರು ಸತ್ಕ್ರಿಯೆಗಳಲ್ಲಿ ನಿರತರಾಗಿರಲಿ. ಕುಂದುಕೊರತೆಯಲ್ಲಿರುವವರಿಗೆ ನೆರವಾಗಲಿ. ಪರೋಪಕಾರವನ್ನು ಕಲಿತುಕೊಳ್ಳಲಿ. ವ್ಯರ್ಥಜೀವನವನ್ನು ನಡೆಸದಿರಲಿ.
- Verse 15: ನನ್ನ ಜೊತೆ ಇರುವವರೆಲ್ಲ ನಿನಗೆ ಶುಭಾಶಯಗಳನ್ನು ಕಳಿಸಿದ್ದಾರೆ. ಅಲ್ಲಿ ನಿನ್ನೊಂದಿಗಿರುವ ಕ್ರೈಸ್ತಬಾಂಧವರಿಗೂ ನನ್ನ ವಂದನೆಗಳನ್ನು ಸಲ್ಲಿಸು. ದೇವರ ಅನುಗ್ರಹ ನಿಮ್ಮೆಲ್ಲರಲ್ಲಿ ಇರಲಿ!