ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
2 ಅರಸುಗಳು
4ನೇ ಅಧ್ಯಾಯ
- Verse 1: ಒಂದು ದಿನ ಪ್ರವಾದಿಮಂಡಲಿಯವರಲ್ಲಿ ಒಬ್ಬನ ಹೆಂಡತಿ ಎಲೀಷನನ್ನು ಭೇಟಿಯಾದಳು. ಅವನಿಗೆ, “ನಿಮ್ಮ ಸೇವಕನಾದ ನನ್ನ ಗಂಡ ಮರಣಹೊಂದಿದನು. ಅವನು ಸರ್ವೇಶ್ವರನಲ್ಲಿ ಭಯಭಕ್ತಿ ಉಳ್ಳವನಾಗಿದ್ದನೆಂಬುದು ನಿಮಗೆ ತಿಳಿದ ವಿಷಯ. ಸಾಲಕೊಟ್ಟವನು ನನ್ನ ಇಬ್ಬರು ಮಕ್ಕಳನ್ನು ಗುಲಾಮರನ್ನಾಗಿ ತೆಗೆದುಕೊಂಡು ಹೋಗುವುದಕ್ಕೆ ಬಂದಿದ್ದಾನೆ,” ಎಂದು ಮೊರೆಯಿಟ್ಟಳು.
- Verse 2: ಎಲೀಷನು, “ನಾನು ನಿನಗೇನು ಮಾಡಬೇಕೆನ್ನುತ್ತೀ? ನಿನ್ನ ಮನೆಯಲ್ಲಿ ಏನಿದೆ, ಹೇಳು,” ಎಂದನು. ಅದಕ್ಕೆ ಆಕೆ, “ನಿಮ್ಮ ದಾಸಿಯ ಮನೆಯಲ್ಲಿ ಒಂದು ಮೊಗೆ ಎಣ್ಣೆ ಹೊರತಾಗಿ ಏನೂ ಇಲ್ಲ,” ಎಂದು ಉತ್ತರಕೊಟ್ಟಳು.
- Verse 3: ಆಗ ಎಲೀಷನು, “ಹೋಗಿ ನಿನ್ನ ನೆರೆಯವರಿಂದ ಸಿಕ್ಕುವಷ್ಟು ಬರಿದಾದ ಪಾತ್ರೆಗಳನ್ನು ಕೇಳಿ ತೆಗೆದುಕೊಂಡು ಬಾ.
- Verse 4: ಅನಂತರ ನಿನ್ನ ಮಕ್ಕಳನ್ನು ಒಳಗೆ ಕರೆದುಕೊಂಡು ಬಾಗಿಲನ್ನು ಮುಚ್ಚಿ ಎಣ್ಣೆಯನ್ನು ಆ ಪಾತ್ರೆಗಳಿಗೆ ಹೊಯ್ಯಿ, ತುಂಬಿದ ಆ ಪಾತ್ರೆಗಳನ್ನೆಲ್ಲಾ ಒಂದು ಕಡೆಯಿಡು,” ಎಂದು ಹೇಳಿದನು.
- Verse 5: ಆಕೆ ಹೋಗಿ ಮಕ್ಕಳನ್ನು ಒಳಗೆ ಕರೆದುಕೊಂಡು ಬಾಗಿಲನ್ನು ಮುಚ್ಚಿ, ಅವರು ಮುಂದಿಟ್ಟ ಪಾತ್ರೆಗಳಲ್ಲೆಲ್ಲಾ ಎಣ್ಣೆ ಹೊಯ್ದಳು.
- Verse 6: ಪಾತ್ರೆಗಳು ತುಂಬಿದಾಗ, ಆಕೆ ತನ್ನ ಮಗನಿಗೆ, “ಇನ್ನೊಂದು ಪಾತ್ರೆಯನ್ನು ತಂದಿಡು,” ಅನ್ನಲು ಅವನು, “ಪಾತ್ರೆಗಳು ತೀರಿಹೋದುವು,” ಎಂದು ಉತ್ತರಕೊಟ್ಟನು. ಕೂಡಲೆ ಎಣ್ಣೆ ಉಕ್ಕುವುದೂ ನಿಂತುಹೋಯಿತು.
- Verse 7: ತರುವಾಯ ಆಕೆ ಆ ದೈವಪುರುಷನ ಹತ್ತಿರ ಬಂದು ನಡೆದದ್ದನ್ನೆಲ್ಲಾ ತಿಳಿಸಿದಳು. ಅವನು ಆಕೆಗೆ, “ಹೋಗಿ ಆ ಎಣ್ಣೆಯನ್ನು ಮಾರಿ ಸಾಲ ತೀರಿಸು; ಉಳಿದ ಹಣದಿಂದ ನೀನೂ ನಿನ್ನ ಮಕ್ಕಳೂ ಜೀವನ ಮಾಡಿರಿ,” ಎಂದನು.
- Verse 8: ಒಂದು ಸಾರಿ ಎಲೀಷನು ಶೂನೇಮಿಗೆ ಹೋದನು. ಅಲ್ಲಿ ಒಬ್ಬ ಶ್ರೀಮಂತ ಮಹಿಳೆ ಇದ್ದಳು. ಆಕೆ ಅವನನ್ನು ತನ್ನ ಮನೆಯಲ್ಲಿ ಊಟಮಾಡಬೇಕೆಂದು ಒತ್ತಾಯಪಡಿಸಿದಳು. ಅಂದಿನಿಂದ ಅವನು ಆ ಮಾರ್ಗವಾಗಿ ಹೋಗುವಾಗಲೆಲ್ಲಾ ಆ ಮನೆಯಲ್ಲೇ ಊಟಮಾಡುತ್ತಿದ್ದನು.
- Verse 9: ಆ ಮಹಿಳೆ ತನ್ನ ಗಂಡನಿಗೆ, “ಯಾವಾಗಲೂ ಈ ದಾರಿಯಿಂದ ಹೋಗುತ್ತಾ ಬರುತ್ತಾ ಇರುವ ಆ ವ್ಯಕ್ತಿ ಒಬ್ಬ ಸಂತನು ಹಾಗು ದೈವಪುರುಷನು ಆಗಿರುತ್ತಾನೆಂದು ನನಗೆ ಗೊತ್ತಾಯಿತು.
- Verse 10: ಆದುದರಿಂದ ನಾವು ಅವನಿಗಾಗಿ ಮಾಳಿಗೆಯ ಮೇಲೆ ಒಂದು ಸಣ್ಣ ಕೋಣೆಯನ್ನು ಕಟ್ಟಿಸೋಣ. ಅದರಲ್ಲಿ ಒಂದು ಮಂಚ, ಮೇಜು, ಕುರ್ಚಿ, ದೀಪಸ್ತಂಭ ಇವುಗಳನ್ನು ಇಡೋಣ; ಅವನು ಇಲ್ಲಿಗೆ ಬಂದಾಗೆಲ್ಲಾ ಅದರಲ್ಲಿ ವಾಸಮಾಡಲಿ,” ಎಂದು ಹೇಳಿದಳು.
- Verse 11: ಒಂದು ದಿನ ಎಲೀಷನು ಅಲ್ಲಿಗೆ ಬಂದು ಆ ಕೋಣೆಯೊಳಗೆ ಪ್ರವೇಶಿಸಿ ದಣಿವಾರಿಸಿಕೊಂಡನು.
- Verse 12: ಅನಂತರ ಆ ಶೂನೇಮ್ಯಳನ್ನು ಕರೆಯಬೇಕೆಂದು ತನ್ನ ಸೇವಕನಾದ ಗೇಹಜಿಗೆ ಆಜ್ಞಾಪಿಸಿದನು. ಅವನು ಹೋಗಿ ಆಕೆಯನ್ನು ಕರೆಯಲು ಆಕೆ ಬಂದು ಮುಂದೆ ನಿಂತಳು.
- Verse 13: ಆಗ ಎಲೀಷನು ಗೇಹಜಿಯ ಮುಖಾಂತರ ಆಕೆಯನ್ನು, “ನೀನು ಕಷ್ಟಪಟ್ಟು ನಮಗೆ ಇಷ್ಟೆಲ್ಲಾ ಉಪಕಾರಮಾಡಿದೆ; ನಾನು ನಿನಗೆ ಯಾವ ಪ್ರತ್ಯುಪಕಾರ ಮಾಡಲಿ? ನಿನ್ನ ಪರವಾಗಿ ಅರಸನ ಮುಂದಾಗಲಿ, ಸೇನಾಪತಿಯ ಮುಂದಾಗಲಿ ಮಾತಾಡಬೇಕಾದರೆ ಹೇಳು,” ಎಂದು ಕೇಳಿದನು. ಆಕೆ, “ನಾನು ಸ್ವಕುಲದವರ ಮಧ್ಯೆ ಸುಖವಾಗಿದ್ದೇನೆ,” ಎಂದು ಉತ್ತರಕೊಟ್ಟಳು.
- Verse 14: ಆಮೇಲೆ ಎಲೀಷನು ಗೇಹಜಿಯನ್ನು, “ನಾವು ಆಕೆಗೆ ಯಾವ ಉಪಕಾರ ಮಾಡಬಹುದು?” ಎಂದು ಕೇಳಿದನು. ಅವನು, “ಆಕೆಗೆ ಮಗನಿಲ್ಲ, ಗಂಡನು ಮುದುಕನಾಗಿದ್ದಾನೆ,” ಎಂದನು.
- Verse 15: ಇದನ್ನು ಕೇಳಿ ಎಲೀಷನು ಆ ಮಹಿಳೆಯನ್ನು ಕರೆಯಬೇಕೆಂದು ಆಜ್ಞಾಪಿಸಿದನು. ಅವನು ಹೋಗಿ ಕರೆದನು. ಆಕೆ ಬಂದು ಬಾಗಿಲಿನ ಹತ್ತಿರ ನಿಂತಳು.
- Verse 16: ಎಲೀಷನು ಆಕೆಗೆ, “ನೀನು ಬರುವ ವರ್ಷ ಇದೇ ಕಾಲದಲ್ಲಿ ಒಬ್ಬ ಮಗನನ್ನು ಅಪ್ಪಿಕೊಂಡಿರುವೆ,” ಎಂದನು. ಅದಕ್ಕೆ ಆಕೆ, “ದೈವಪುರುಷರೇ, ಒಡೆಯರೇ, ಹೀಗೆ ಹೇಳಿ ನಿಮ್ಮ ದಾಸಿಯನ್ನು ವಂಚಿಸಬೇಡಿ,” ಎಂದು ನುಡಿದಳು.
- Verse 17: ಆ ಮಹಿಳೆ ಗರ್ಭಿಣಿಯಾಗಿ, ಎಲೀಷನು ಹೇಳಿದಂತೆ ಮುಂದಿನ ವರ್ಷ, ಅದೇ ಕಾಲದಲ್ಲಿ ಒಬ್ಬ ಮಗನನ್ನು ಹೆತ್ತಳು.
- Verse 18: ಹುಡುಗನು ದೊಡ್ಡವನಾದ ಮೇಲೆ, ಒಂದು ದಿನ ಹೊಲದಲ್ಲಿ ಬೆಳೆ ಕೊಯ್ಯುವವರ ಸಂಗಡ ಇದ್ದ ತನ್ನ ತಂದೆಯ ಬಳಿಗೆ ಹೋದನು.
- Verse 19: ಅಲ್ಲಿದ್ದಾಗ ಅವನು ಇದ್ದಕ್ಕಿದ್ದ ಹಾಗೆ, “ಅಪ್ಪಾ, ನನ್ನ ತಲೆ ಸಿಡಿಯುತ್ತಿದೆ, ಸಿಡಿಯುತ್ತಿದೆ,” ಎಂದು ಕೂಗಿಕೊಂಡನು. ತಂದೆ ಒಬ್ಬ ಸೇವಕನನ್ನು ಕರೆದು, “ಇವನನ್ನು ತಾಯಿಯ ಹತ್ತಿರ ತೆಗೆದುಕೊಂಡು ಹೋಗು,” ಎಂದು ಆಜ್ಞಾಪಿಸಿದನು.
- Verse 20: ಸೇವಕನು ಹುಡುಗನನ್ನು ಅವನ ತಾಯಿಗೆ ತಂದೊಪ್ಪಿಸಿದನು. ಹುಡುಗನು ಮಧ್ಯಾಹ್ನದವರೆಗೂ ತಾಯಿಯ ತೊಡೆಯ ಮೇಲೆಯೇ ಇದ್ದು ಅನಂತರ ಸತ್ತನು.
- Verse 21: ಕೂಡಲೆ ಆಕೆ ಅವನನ್ನು ದೈವಪುರುಷನ ಕೋಣೆಗೆ ತೆಗೆದುಕೊಂಡು ಹೋಗಿ, ಅವನ ಮಂಚದ ಮೇಲೆ ಮಲಗಿಸಿ, ಬಾಗಿಲು ಮುಚ್ಚಿ, ಗಂಡನನ್ನು ಕರೆಯಿಸಿದಳು.
- Verse 22: “ದಯವಿಟ್ಟು ನನಗಾಗಿ ಒಬ್ಬ ಸೇವಕನನ್ನೂ ಒಂದು ಕತ್ತೆಯನ್ನೂ ಕಳುಹಿಸಿ; ನಾನು ಬೇಗನೆ ಆ ದೈವಪುರುಷನ ಬಳಿಗೆ ಹೋಗಿ ಬರುತ್ತೇನೆ,” ಎಂದು ಕೇಳಿದಳು.
- Verse 23: ಅದಕ್ಕೆ ಅವನು, “ಇಂದು ಅಮಾವಾಸ್ಯೆಯೂ ಅಲ್ಲ, ಸಬ್ಬತ್ತೂ ಅಲ್ಲ, ಈ ದಿನ ಹೋಗಿ ಪ್ರಯೋಜನವಿಲ್ಲ,” ಎಂದನು.
- Verse 24: ಆಕೆ, “ಚಿಂತೆಯಿಲ್ಲ,” ಎಂದು ಹೇಳಿ ಕತ್ತೆಗೆ ತಡಿಹಾಕಿಸಿ, ಕುಳಿತುಕೊಂಡು ಸೇವಕನಿಗೆ, “ಹೊಡೆ, ಓಡಿಸುತ್ತಾ ಹೋಗು; ನಾನು ಅಪ್ಪಣೆ ಮಾಡುವವರೆಗೂ ನಿಲ್ಲಿಸಬೇಡ,” ಎಂದು ಆಜ್ಞಾಪಿಸಿದಳು.
- Verse 25: ಹೀಗೆ ಆಕೆ ಪ್ರಯಾಣ ಮಾಡಿ ಕರ್ಮೆಲ್ ಬೆಟ್ಟದ ಮೇಲಿದ್ದ ದೈವಪುರುಷನ ಬಳಿಗೆ ಬಂದಳು. ಅವನು ಈಕೆಯನ್ನು ದೂರದಿಂದಲೇ ಕಂಡು ತನ್ನ ಸೇವಕನಾದ ಗೇಹಜಿಗೆ,
- Verse 26: “ಅಗೋ, ಅಲ್ಲಿ ಶೂನೇಮ್ಯಳು; ನೀನು ಓಡಿಹೋಗಿ ಆಕೆಯನ್ನು ಭೇಟಿಯಾಗು; ‘ನಿನಗೂ ನಿನ್ನ ಗಂಡನಿಗೂ ಮಗನಿಗೂ ಕ್ಷೇಮವೇ?’ ಎಂದು ವಿಚಾರಿಸು,” ಎಂಬುದಾಗಿ ಆಜ್ಞಾಪಿಸಿ ಕಳುಹಿಸಿದನು. ಆಕೆ ಆ ಸೇವಕನಿಗೆ, “ಕ್ಷೇಮ,” ಎಂದು ಉತ್ತರಕೊಟ್ಟು, ಬೆಟ್ಟದ ಮೇಲಿದ್ದ ದೈವಪುರುಷನ ಬಳಿಗೆ ಬಂದು, ಅವನ ಪಾದಗಳನ್ನು ಹಿಡಿದಳು.
- Verse 27: ಗೇಹಜಿಯು ಆಕೆಯನ್ನು ದೂಡುವುದಕ್ಕಾಗಿ ಹತ್ತಿರ ಬಂದನು. ದೈವಪುರುಷನು, “ಬಿಡು, ತಡೆಯಬೇಡ; ಆಕೆಗೆ ಮನಸ್ಸಿನಲ್ಲಿ ತೀವ್ರ ದುಃಖವಿರುವ ಹಾಗೆ ತೋರುತ್ತದೆ. ಸರ್ವೇಶ್ವರ ಆಕೆಯ ದುಃಖವನ್ನು ನನಗೆ ತಿಳಿಸಲಿಲ್ಲ; ಮರೆಮಾಡಿದ್ದಾರೆ,” ಎಂದು ಹೇಳಿದನು.
- Verse 28: ಆಕೆ ದೈವಪುರುಷನಿಗೆ, “ನನಗೆ ಒಬ್ಬ ಮಗ ಬೇಕೆಂದು ಒಡೆಯರಾದ ನಿಮ್ಮನ್ನು ನಾನು ಬೇಡಿಕೊಂಡೆನೆ? ನನ್ನನ್ನು ವಂಚಿಸಬಾರದೆಂದು ಮೊರೆಯಿಟ್ಟೆನಲ್ಲವೆ?” ಎಂದಳು.
- Verse 29: ಆಗ ಎಲೀಷನು ಗೇಹಜಿಗೆ, “ನೀನು ಹೋಗಿ, ನಡುಕಟ್ಟಿಕೊಂಡು, ನನ್ನ ಕೋಲನ್ನು ತೆಗೆದುಕೊಂಡು ಹೋಗಿ, ಆ ಹುಡುಗನ ಮುಖದ ಮೇಲಿಡು; ಹೋಗುವಾಗ ದಾರಿಯಲ್ಲಿ ಯಾರನ್ನೂ ವಂದಿಸಬೇಡ; ಯಾವ ವಂದನೆಯನ್ನೂ ಸ್ವೀಕರಿಸಬೇಡ," ಎಂದು ಹೇಳಿ ಕಳುಹಿಸಿದನು.
- Verse 30: ಆದರೂ ಆ ಹುಡುಗನ ತಾಯಿ, “ಸರ್ವೇಶ್ವರನಾಣೆ, ನಿಮ್ಮ ಜೀವದಾಣೆ, ನಾನು ನಿಮ್ಮನ್ನು ಬಿಟ್ಟುಹೋಗುವುದಿಲ್ಲ,” ಎಂದಳು. ಆದ್ದರಿಂದ ಎಲೀಷನು ಆಕೆಯ ಜೊತೆಯಲ್ಲೇ ಹೊರಟನು.
- Verse 31: ಅವರ ಮುಂದಾಗಿ ಹೋದ ಗೇಹಜಿಯು ಕೋಲನ್ನು ಹುಡುಗನ ಮುಖದ ಮೇಲಿಟ್ಟರೂ ಶಬ್ದವಿರಲಿಲ್ಲ, ಜೀವದ ಲಕ್ಷಣವಿರಲಿಲ್ಲ. ಆದುದರಿಂದ ಅವನು ಹಿಂದಿರುಗಿ ಬಂದು ಎಲೀಷನನ್ನು ಎದುರುಗೊಂಡು, “ಹುಡುಗನು ಎಚ್ಚರವಾಗಲಿಲ್ಲ,” ಎಂದನು.
- Verse 32: ಎಲೀಷನು ಆ ಮನೆಯನ್ನು ಮುಟ್ಟಿದಾಗ, ಸತ್ತ ಹುಡುಗನನ್ನು ತನ್ನ ಮಂಚದ ಮೇಲೆ ಇಟ್ಟಿರುವುದನ್ನು ಕಂಡನು.
- Verse 33: ಯಾರೂ ಒಳಗೆ ಬಾರದಂತೆ ಆ ಕೋಣೆಯ ಬಾಗಿಲನ್ನು ಮುಚ್ಚಿಕೊಂಡು ಸರ್ವೇಶ್ವರನನ್ನು ಪ್ರಾರ್ಥಿಸಿದನು.
- Verse 34: ಅನಂತರ ಹುಡುಗನ ಬಾಯಿ, ಕಣ್ಣು, ಕೈಗಳಿಗೆ ತನ್ನ ಬಾಯಿ, ಕಣ್ಣು, ಕೈಗಳು ಮುಟ್ಟುವಂತೆ ಅವನ ಮೇಲೆ ಬೋರಲು ಬಿದ್ದನು. ಆದ್ದರಿಂದ ಹುಡುಗನ ದೇಹ ಬೆಚ್ಚಗಾಯಿತು.
- Verse 35: ಆಮೇಲೆ ಹುಡುಗನನ್ನು ಬಿಟ್ಟು ಎದ್ದು ಮನೆಯನ್ನು ತುಸುಹೊತ್ತು ಅತ್ತಿತ್ತ ಅಡ್ಡಾಡಿ, ತಿರುಗಿ ಅವನ ಮೇಲೆ ಬೋರಲು ಬೀಳಲು, ಹುಡುಗನು ಏಳು ಸಾರಿ ಸೀತು ಕಣ್ತೆರೆದನು.
- Verse 36: ಆಗ ಎಲೀಷನು ಗೇಹಜಿಗೆ, “ಶೂನೇಮ್ಯಳನ್ನು ಕರೆ,” ಎಂದು ಆಜ್ಞಾಪಿಸಲು, ಅವನು ಆಕೆಯನ್ನು ಕರೆದನು. ಆಕೆ ಬಂದಾಗ ಎಲೀಷನು, “ನಿನ್ನ ಮಗನನ್ನುತೆಗೆದುಕೋ,” ಎಂದು ಹೇಳಿದನು.
- Verse 37: ಆಕೆ ಹತ್ತಿರ ಬಂದು ಅವನ ಪಾದಗಳಿಗೆ ಬಿದ್ದು, ಸಾಷ್ಟಾಂಗ ನಮಸ್ಕಾರ ಮಾಡಿ, ಮಗನನ್ನು ತೆಗೆದುಕೊಂಡು ಹೋದಳು.
- Verse 38: ಎಲೀಷನು ಪುನಃ ಗಿಲ್ಗಾಲಿಗೆ ಹೋದನು. ಆಗ ನಾಡಿನಲ್ಲಿ ಬರವಿತ್ತು. ಪ್ರವಾದಿಮಂಡಲಿಯವರು ತನ್ನ ಮುಂದೆ ಕೂಡಿಬರಲು ಅವನು ತನ್ನ ಸೇವಕನಿಗೆ, “ದೊಡ್ಡ ಹಂಡೆಯನ್ನು ತೆಗೆದುಕೊಂಡು ಇವರಿಗೆ ಅಡಿಗೆಮಾಡು,” ಎಂದು ಆಜ್ಞಾಪಿಸಿದನು.
- Verse 39: ಅವರಲ್ಲಿ ಒಬ್ಬನು ಯಾವುದಾದರೊಂದು ತರಕಾರಿ ಸಿಕ್ಕೀತೆಂದು ಕಾಡಿಗೆ ಹೋಗಿ, ಅಲ್ಲಿ ಒಂದು ಕಾಡುಬಳ್ಳಿಯನ್ನು ಕಂಡು, ಉಡಿತುಂಬಾ ಅದರ ಕಾಯಿಗಳನ್ನು ಕಿತ್ತುಕೊಂಡುಬಂದು, ತುಂಡು ತುಂಡುಮಾಡಿ ಆ ಪಾತ್ರೆಯೊಳಗೆ ಹಾಕಿದನು. ಅದು ಎಂಥ ಕಾಯಿಯೆಂಬುದು ಯಾರಿಗೂ ಗೊತ್ತಿರಲಿಲ್ಲ.
- Verse 40: ಜನರಿಗೆ ಅದನ್ನೇ ಊಟಕ್ಕೆ ಬಡಿಸಿದರು; ಅವರು ಅದನ್ನು ಬಾಯೊಳಗೆ ಹಾಕಿದ ಕೂಡಲೆ ತಿನ್ನಲಾರದೆ, “ದೈವಪುರುಷನೇ, ಪಾತ್ರೆಯಲ್ಲಿ ವಿಷ!” ಎಂದು ಕೂಗಿದರು.
- Verse 41: ಆಗ ಅವನು, “ಹಿಟ್ಟನ್ನು ತಂದುಕೊಡಿ,” ಎಂದು ಹೇಳಿದನು; ಅವರು ತರಲು ಅದನ್ನು ಆ ಪಾತ್ರೆಯೊಳಗೆ ಹಾಕಿ, “ಈಗ ಇದನ್ನು ಬಡಿಸಬಹುದು,” ಎಂದನು. ಕೂಡಲೆ ಪಾತ್ರೆಯಲ್ಲಿದ್ದ ವಿಷವೆಲ್ಲಾ ಹೋಗಿತ್ತು.
- Verse 42: ಒಂದು ದಿನ ಬಾಳ್ಷಾಲಿಷಾ ಊರಿನ ಒಬ್ಬ ವ್ಯಕ್ತಿ, ಇಪ್ಪತ್ತು ಜವೆಗೋದಿಯ ರೊಟ್ಟಿಗಳನ್ನೂ ಒಂದು ಚೀಲ ತುಂಬಾ ಹಸೀ ತೆನೆಗಳನ್ನೂ ಪ್ರಥಮಫಲದ ಕಾಣಿಕೆಯಾಗಿ ತೆಗೆದುಕೊಂಡು ಬಂದು ದೈವಪುರುಷನಿಗೆ ಸಮರ್ಪಿಸಿದನು. ಎಲೀಷನು ತನ್ನ ಸೇವಕನಿಗೆ, “ಇದನ್ನು ಜನರಿಗೆ ಕೊಡು; ಅವರು ಊಟಮಾಡಲಿ,” ಎಂದು ಹೇಳಿದನು.
- Verse 43: ಅದಕ್ಕೆ ಅವನು, “ಇಷ್ಟನ್ನು ನೂರುಮಂದಿಗೆ ಹೇಗೆ ಬಡಿಸಲಿ,” ಎಂದನು. ಎಲೀಷನು, “ಇರಲಿ, ಕೊಡು; ಅವರು ಊಟಮಾಡಲಿ. ‘ಅವರು ಅದನ್ನು ಊಟಮಾಡಿ ತೃಪ್ತರಾಗಿ ಇನ್ನೂ ಉಳಿಸಿಕೊಳ್ಳುವರು’ ಎಂಬುದು ಸರ್ವೇಶ್ವರನ ನುಡಿ,” ಎಂದು ಹೇಳಿದನು.
- Verse 44: ಸೇವಕನು ಬಡಿಸಿದನು. ಸರ್ವೇಶ್ವರನು ನುಡಿದಂತೆಯೇ ಜನರು ಊಟಮಾಡಿ, ತೃಪ್ತರಾಗಿ ಇನ್ನೂ ಉಳಿಸಿಕೊಂಡರು.