पवित्र बाइबिल
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
13ನೇ ಅಧ್ಯಾಯ
- Verse 1: “ಇವೆಲ್ಲವನ್ನು ನನ್ನ ಕಣ್ಣುಗಳು ಕಂಡಿವೆ. ಕಿವಿಗಳು ಕೇಳಿ ಗ್ರಹಿಸಿಕೊಂಡಿವೆ.
- Verse 2: ನೀವು ತಿಳಿದಿರುವುದನ್ನು ನಾನೂ ತಿಳಿದವ ನಿಮಗಿಂತ ನಾನು ಕೀಳೇನೂ ಅಲ್ಲ.
- Verse 3: ಸರ್ವಶಕ್ತನೊಡನೆ ಮಾತಾಡಲು ನನಗಿದೆ ಆಸೆ ದೇವರೊಂದಿಗೆ ವಾದಿಸಲು ನನಗಿದೆ ಅಪೇಕ್ಷೆ.
- Verse 4: ನೀವು ಸುಳ್ಳಿಗೆ ಸುಣ್ಣ ಬಳಿಯುವವರು ನೀವೆಲ್ಲರು ಏತಕ್ಕೂ ಬಾರದ ವೈದ್ಯರು.
- Verse 5: ನೀವು ಸುಮ್ಮನಿದ್ದರೆ ಚೆನ್ನ ಮೌನವೇ ನಿಮಗೆ ಉತ್ತಮ.
- Verse 6: ಈಗ ಕೇಳಿ ನನ್ನ ವಾದವನ್ನು ಆಲಿಸಿರೀಗ ನನ್ನ ತರ್ಕವನ್ನು.
- Verse 7: ದೇವರ ಪಕ್ಷ ವಹಿಸಿ ನೀವು ಅನ್ಯಾಯ ನುಡಿಯುವಿರೋ? ಅವರಿಗೋಸ್ಕರ ಕಪಟ ಮಾತಾಡುವಿರೋ?
- Verse 8: ಅವರಿಗೆ ಮುಖದಾಕ್ಷಿಣ್ಯ ತೋರುವಿರೋ? ದೇವರ ಪರವಾಗಿ ನೀವು ವಾದಿಸುವಿರೋ?
- Verse 9: ದೇವರು ನಿಮ್ಮನ್ನು ಪರಿಶೋಧಿಸಿದರೆ ನಿಮಗೆ ಒಳಿತೆ? ಮನುಷ್ಯರಂತೆ ಆತನನ್ನು ಮೋಸಗೊಳಿಸಲಾದೀತೆ?
- Verse 10: ನೀವು ಗುಟ್ಟಾಗಿ ಪಕ್ಷಪಾತಮಾಡಿದರೂ ಆತ ನಿಮ್ಮನ್ನು ಖಂಡಿಸದೆ ಬಿಡನು.
- Verse 11: ಆತನ ಪ್ರತಿಭೆ ನಿಮ್ಮನ್ನು ಹೆದರಿಸದೋ? ದೈವಭಯವು ನಿಮ್ಮನ್ನು ಆವರಿಸದೋ?
- Verse 12: ನಿಮ್ಮ ಸ್ಮೃತಿಗಳು ಬೂದಿಯ ಸಾಮತಿಗಳು ನಿಮ್ಮ ವಾದಗಳು ಮಣ್ಣಿನ ಗೋಡೆಗಳು.
- Verse 13: ಸುಮ್ಮನಿರಿ, ನನ್ನನ್ನು ಮಾತಾಡಲು ಬಿಡಿ ನನ್ನ ಮೇಲೆ ಏನು ಬೇಕಾದರೂ ಬರಲಿ.
- Verse 14: ಪ್ರಾಣವನ್ನು ನಾನು ಕಚ್ಚಿಕೊಂಡಿದ್ದೇನೆ ಬಾಯಲಿ ಜೀವವನ್ನು ನಾನು ಹಿಡಿದುಕೊಂಡಿದ್ದೇನೆ ಕೈಯಲಿ.
- Verse 15: ಇಗೋ, ದೇವರು ಕೊಲ್ಲುವನೆನ್ನನು ಅದಕ್ಕಾಗಿ ನಾನು ಕಾದಿರುವೆನು. ಆದರೂ ನನ್ನ ನಡತೆ ಸರಿಯೆಂಬುದನು ಆತನ ಮುಂದೆಯೆ ರುಜುವಾತುಪಡಿಸುವೆನು.
- Verse 16: ಭಕ್ತಿಹೀನನು ಆತನ ಮುಂದೆ ಬರಲಾರ ನಾನು ಉದ್ಧಾರವಾಗುವೆನೆಂಬುದಕ್ಕೆ ಇದೇ ಆಧಾರ.
- Verse 17: ಕೇಳಿ, ನನ್ನ ಮಾತನ್ನು ಲಕ್ಷ್ಯವಿಟ್ಟು ನನ್ನ ಅರಿಕೆಯನ್ನು ಕಿವಿಗೊಟ್ಟು.
- Verse 18: ಇಗೋ ನನ್ನ ಮೊಕದ್ದಮೆಯನ್ನು ಸಿದ್ಧಗೊಳಿಸಲಾಗಿದೆ ನಾನು ನಿರ್ದೋಷಿಯೆಂಬ ನಿರ್ಣಯ ನನಗೆ ಗೊತ್ತೇ ಇದೆ.
- Verse 19: ದೇವಾ, ನನ್ನ ಮೇಲೆ ಆಪಾದನೆ ಹೊರಿಸಲು ಬರುವೆಯಾ? ಹಾಗಾದರೆ ಮೌನತಾಳಿ ನಾ ಮಾಡುವೆ ಪ್ರಾಣತ್ಯಾಗ.
- Verse 20: ನನ್ನೆರಡು ಕೋರಿಕೆಗಳನ್ನು ಈಡೇರಿಸಯ್ಯಾ ಆಗ ನಿನ್ನ ದೃಷ್ಟಿಗೆ ನಾನು ಮರೆಮಾಡಿಕೊಳ್ಳಲಾರೆನಯ್ಯಾ.
- Verse 21: ಹಿಂತೆಗೆದುಕೊ ನನ್ನ ಮೇಲೆತ್ತಿರುವ ನಿನ್ನ ಕೈಗಳನು ಅಂಜಿಕೆಗೀಡು ಮಾಡದಿರಲಿ ನಿನ್ನ ದಿಗಿಲು ನನ್ನನು.
- Verse 22: ಆ ಬಳಿಕ ನೀನು ಕರೆದರೆ ನಾನು ಉತ್ತರಕೊಡುವೆ ಇಲ್ಲವೆ, ನಾನು ಮಾತಾಡಿದರೆ ನೀನೆ ಉತ್ತರಿಸುವೆ.
- Verse 23: ನನ್ನ ಅಕ್ರಮಗಳೆಷ್ಟು? ಪಾಪಗಳೆಷ್ಟು? ನನ್ನ ಪಾಪದೋಷಗಳನ್ನು ತಿಳಿಯಪಡಿಸು.
- Verse 24: ನೀನೇಕೆ ನನಗೆ ವಿಮುಖನಾಗಿರುವೆ? ನನ್ನನ್ನೇಕೆ ಶತ್ರು ಎಂದೆಣಿಸುವೆ?
- Verse 25: ಗಾಳಿಗೆ ತೂರುವ ತರಗೆಲೆಯನ್ನು ಬೆದರಿಸುವೆಯಾ? ಒಣಗಿದ ಹೊಟ್ಟನ್ನು ಬೆನ್ನಟ್ಟಿಹೋಗುವೆಯಾ?
- Verse 26: ನನ್ನ ವಿಷಯವಾಗಿ ಕಹಿಯಾದ ತೀರ್ಪನು ಬರೆದಿರುವೆ ಯೌವನದ ಪಾಪಪರಿಣಾಮಗಳನು ನನ್ನ ಮೇಲೆ ಹೊರಿಸಿರುವೆ.
- Verse 27: ನನ್ನ ಕಾಲುಗಳಿಗೆ ನೀ ಕೋಳವನ್ನು ತೊಡಿಸಿರುವೆ ನನ್ನ ನಡತೆಯನು ದಿಟ್ಟಿಸಿ ನೋಡುತ್ತಿರುವೆ ನನ್ನ ಹೆಜ್ಜೆ ಹೆಜ್ಜೆಯನು ಲೆಕ್ಕಿಸುತ್ತಿರುವೆ.
- Verse 28: ಕೊಳೆತ ಪದಾರ್ಥದಂತೆ, ನುಸಿಹಿಡಿದ ಬಟ್ಟೆಯಂತೆ ನಾನು ಕ್ಷಯಿಸಿ ಹೋಗುತ್ತಿರುವೆ.”