पवित्र बाइबिल
ಹೊಸ ಒಡಂಬಡಿಕೆ
ಮತ್ತಾಯ
24ನೇ ಅಧ್ಯಾಯ
- Verse 1: ಯೇಸುಸ್ವಾಮಿ ಮಹಾದೇವಾಲಯವನ್ನು ಬಿಟ್ಟುಹೋಗುತ್ತಿದ್ದರು. ಅದರ ಕಟ್ಟಡಗಳತ್ತ ಅವರ ಗಮನ ಸೆಳೆಯಲು ಶಿಷ್ಯರು ಅವರ ಬಳಿಗೆ ಬಂದರು.
- Verse 2: ಆಗ ಯೇಸು, “ಇವುಗಳನ್ನೆಲ್ಲಾ ನೀವು ನೋಡುತ್ತಾ ಇದ್ದೀರಲ್ಲವೆ? ನಾನು ನಿಮಗೆ ಹೇಳುತ್ತೇನೆ ಕೇಳಿ: ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವರು,” ಎಂದರು.
- Verse 3: ಬಳಿಕ ಯೇಸುಸ್ವಾಮಿ ಓಲಿವ್ ಗುಡ್ಡದ ಮೇಲೆ ಕುಳಿತರು. ಶಿಷ್ಯರು ಅವರ ಬಳಿಗೆ ಬಂದು, “ಇದೆಲ್ಲಾ ಸಂಭವಿಸುವುದು ಯಾವಾಗ? ನಿಮ್ಮ ಪುನರಾಗಮನದ ಹಾಗೂ ಕಾಲಾಂತ್ಯದ ಪೂರ್ವಸೂಚನೆ ಏನು? ನಮಗೆ ತಿಳಿಸಿ,” ಎಂದು ಪ್ರತ್ಯೇಕವಾಗಿ ಕೇಳಿಕೊಂಡರು.
- Verse 4: ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ.
- Verse 5: ಅನೇಕರು ‘ನಾನೇ ಕ್ರಿಸ್ತ, ನಾನೇ ಕ್ರಿಸ್ತ,’ ಎನ್ನುತ್ತಾ ನನ್ನ ಹೆಸರನ್ನೇ ಹೇಳಿಕೊಂಡು ಬರುವರು. ಮಾತ್ರವಲ್ಲ, ಎಷ್ಟೋ ಜನರನ್ನು ತಪ್ಪುದಾರಿಗೆಳೆಯುವರು.
- Verse 6: ಇದೂ ಅಲ್ಲದೆ, ನೀವು ರಣಕಹಳೆಗಳನ್ನೂ ಸಮರಗಳ ಸುದ್ದಿಯನ್ನೂ ಕೇಳುವಿರಿ. ಆಗ ಕಳವಳಪಡದಂತೆ ಎಚ್ಚರಿಕೆಯಿಂದಿರಿ. ಇವೆಲ್ಲವು ಸಂಭವಿಸಲೇಬೇಕು. ಆದರೆ ಇದಿನ್ನೂ ಕಾಲಾಂತ್ಯವಲ್ಲ.
- Verse 7: ಜನಾಂಗಕ್ಕೆ ವಿರುದ್ಧ ಜನಾಂಗವೂ ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರವೂ ಯುದ್ಧಕ್ಕಿಳಿಯುವುವು. ಅಲ್ಲಲ್ಲಿ ಕ್ಷಾಮಡಾಮರಗಳೂ ಭೂಕಂಪಗಳೂ ಸಂಭವಿಸುವುವು.
- Verse 8: ಇವೆಲ್ಲವೂ ಪ್ರಸವ ವೇದನೆಯ ಪ್ರಾರಂಭ ಮಾತ್ರ.
- Verse 9: “ಬಳಿಕ ಜನರು ನಿಮ್ಮನ್ನು ಕಷ್ಟಸಂಕಟಗಳಿಗೆ ಗುರಿಮಾಡಿ ಕೊಲ್ಲುವರು. ನೀವು ನನ್ನವರು, ಆದುದರಿಂದಲೇ ಜನಾಂಗಗಳೆಲ್ಲ ನಿಮ್ಮನ್ನು ದ್ವೇಷಿಸುವುವು.
- Verse 10: ಆ ದಿನಗಳಲ್ಲಿ ಬಹುಮಂದಿ ವಿಶ್ವಾಸಭ್ರಷ್ಟರಾಗುವರು, ಒಬ್ಬರಿಗೊಬ್ಬರು ದ್ರೋಹ ಬಗೆಯುವರು. ಒಬ್ಬರನ್ನೊಬ್ಬರು ದ್ವೇಷಿಸುವರು.
- Verse 11: ಅನೇಕ ಸುಳ್ಳುಪ್ರವಾದಿಗಳು ತಲೆಯೆತ್ತಿಕೊಂಡು ಎಷ್ಟೋಮಂದಿಯನ್ನು ವಂಚಿಸುವರು.
- Verse 12: ಭ್ರಷ್ಟಾಚಾರವು ಬೆಳೆದು ಬಹುಜನರ ಪ್ರೀತಿ ಉಡುಗಿಹೋಗುವುದು.
- Verse 13: ಆದರೆ ಕೊನೆಯವರೆಗೂ ಸ್ಥಿರವಾಗಿರುವವರು ಜೀವೋದ್ಧಾರವನ್ನು ಹೊಂದುವರು.
- Verse 14: ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸರ್ವಜನಾಂಗಗಳಿಗೂ ಸಾಕ್ಷಿಯಾಗಿ ಜಗತ್ತಿನಲ್ಲೆಲ್ಲಾ ಪ್ರಬೋಧಿಸಲಾಗುವುದು. ಅಂತ್ಯವು ಬರುವುದು ಅನಂತರವೇ.
- Verse 15: “ಪ್ರವಾದಿ ದಾನಿಯೇಲನು ಸೂಚಿಸಿರುವ ‘ವಿನಾಶಕರ ವಿಕಟ ಮೂರ್ತಿ’ ಪವಿತ್ರಸ್ಥಾನದಲ್ಲಿ ನಿಂತಿರುವುದನ್ನು ನೀವು ಕಾಣುವಿರಿ.
- Verse 16: (ಇದನ್ನು ಓದುವವನು ಅರ್ಥಮಾಡಿಕೊಳ್ಳಲಿ). ಆಗ ಜುದೇಯದಲ್ಲಿರುವ ಜನರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ.
- Verse 17: ಮಾಳಿಗೆಯ ಮೇಲಿರುವವನು ಇಳಿದು ಮನೆಯಿಂದ ಏನನ್ನೂ ತೆಗೆದುಕೊಳ್ಳದೆ ಓಡಿಹೋಗಲಿ.
- Verse 18: ಹೊಲಗದ್ದೆಯಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳಲು ಹಿಂದಿರುಗದಿರಲಿ.
- Verse 19: ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಹಾಗೂ ಹಾಲೂಡಿಸುವ ತಾಯಂದಿರ ಗೋಳೇನು!
- Verse 20: ಈ ನಿಮ್ಮ ಪಲಾಯನ ಚಳಿಗಾಲದಲ್ಲಾಗಲಿ, ಸಬ್ಬತ್ ದಿನದಲ್ಲಾಗಲಿ ಸಂಭವಿಸದಂತೆ ಪ್ರಾರ್ಥನೆಮಾಡಿರಿ.
- Verse 21: ಏಕೆಂದರೆ ಆಗ ಬರಲಿರುವ ಸಂಕಷ್ಟಗಳು ಸೃಷ್ಟಿಯ ಆದಿಯಿಂದ ಇಂದಿನವರೆಗೂ ಇರಲಿಲ್ಲ; ಇನ್ನು ಮುಂದಕ್ಕೂ ಇರುವುದಿಲ್ಲ.
- Verse 22: ಆ ದಿನಗಳ ಅವಧಿಯನ್ನು ಕಡಿಮೆಮಾಡದೆ ಇದ್ದಲ್ಲಿ ಯಾವ ಮಾನವನೂ ಉಳಿಯುವಂತಿಲ್ಲ. ಆದರೆ ದೇವರು ಆರಿಸಿಕೊಂಡವರ ಪ್ರಯುಕ್ತ ಆ ದಿನಗಳನ್ನು ಕಡಿಮೆಮಾಡಲಾಗುವುದು.
- Verse 23: “ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತ ಇಲ್ಲಿದ್ದಾನೆ, ಅಗೋ, ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿ.
- Verse 24: ಏಕೆಂದರೆ ಕಪಟ ಉದ್ಧಾರಕರೂ ವಂಚಕ ಪ್ರವಾದಿಗಳೂ ತಲೆಯೆತ್ತಿಕೊಳ್ಳುವರು. ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನೂ ಮೋಸಗೊಳಿಸುವಂತಹ ಮಹತ್ಕಾರ್ಯಗಳನ್ನೂ ಪವಾಡಗಳನ್ನೂ ಮಾಡಿತೋರಿಸುವರು.
- Verse 25: ಎಚ್ಚರಿಕೆ! ನಾನು ನಿಮಗೆ ಮುಂಚಿತವಾಗಿಯೇ ಇದನ್ನು ತಿಳಿಸುತ್ತಾ ಇದ್ದೇನೆ.
- Verse 26: ಆದ್ದರಿಂದ ಯಾರಾದರು, ‘ಅಗೋ ಕ್ರಿಸ್ತ ಅಡವಿಯಲ್ಲಿದ್ದಾನೆ,’ ಎಂದರೆ ಅಲ್ಲಿಗೆ ಹೋಗಬೇಡಿ. ‘ಇಗೋ, ಇಲ್ಲೇ ಒಳಗೆ ಅವಿತುಕೊಂಡಿದ್ದಾನೆ,’ ಎಂದರೂ ಅದನ್ನು ನಂಬಬೇಡಿ.
- Verse 27: ಏಕೆಂದರೆ ಪೂರ್ವದಿಂದ ಮಿನುಗಿ ಪಶ್ಚಿಮದವರೆಗೂ ಹೊಳೆಯುವ ಮಿಂಚಿನಂತೆ ಇರುವುದು ನರಪುತ್ರನ ಆಗಮನ.
- Verse 28: ಹೆಣವಿದ್ದೆಡೆ ರಣಹದ್ದುಗಳು ಬಂದು ಸೇರುತ್ತವೆ.
- Verse 29: “ಆ ದಿನಗಳ ಸಂಕಷ್ಟಗಳು ಮುಗಿದ ಕೂಡಲೇ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಕಳಚಿ ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು.
- Verse 30: ಆಗ ನರಪುತ್ರನ ಚಿಹ್ನೆ ಆಕಾಶದಲ್ಲಿ ಕಾಣಿಸಿಕೊಳ್ಳುವುದು. ಪೃಥ್ವಿಯ ಪ್ರಜೆಗಳೆಲ್ಲಾ ಅತ್ತು ಪ್ರಲಾಪಿಸುವರು. ನರಪುತ್ರನು ಶಕ್ತಿಸಾಮರ್ಥ್ಯದಿಂದಲೂ ಮಹಾಮಹಿಮೆಯಿಂದಲೂ ಮೇಘಾರೂಢನಾಗಿ ಆಗಮಿಸುವುದನ್ನು ಅವರು ಕಾಣುವರು.
- Verse 31: ತುತೂರಿಯ ಘೋಷಣೆಯೊಂದಿಗೆ ಆತನು ತನ್ನ ದೂತರನ್ನು ನಾಲ್ಕು ದಿಕ್ಕುಗಳಿಗೂ ಕಳುಹಿಸುವನು. ಅವರು ಹೋಗಿ ಆತನಿಂದ ಆಯ್ಕೆಯಾದ ಜನರನ್ನು ವಿಶ್ವದ ಅಷ್ಟದಿಕ್ಕುಗಳಿಂದ ಒಟ್ಟುಗೂಡಿಸುವರು.
- Verse 32: “ಅಂಜೂರದ ಮರದಿಂದ ಒಂದು ಪಾಠ ಕಲಿತುಕೊಳ್ಳಿ. ಅದರ ಎಳೆ ರೆಂಬೆಗಳಲ್ಲಿ ಎಲೆಗಳು ಚಿಗುರುವಾಗ ವಸಂತಕಾಲ ಸಮೀಪಿಸಿತು ಎಂದು ತಿಳಿದುಕೊಳ್ಳುತ್ತೀರಿ.
- Verse 33: ಅಂತೆಯೇ ಇದೆಲ್ಲವನ್ನು ನೋಡುವಾಗ ನರಪುತ್ರನು ಸಮೀಪಿಸಿಬಿಟ್ಟಿದ್ದಾನೆ, ಹೊಸ್ತಿಲಲ್ಲೇ ಇದ್ದಾನೆಂದು ತಿಳಿದುಕೊಳ್ಳಿ.
- Verse 34: ಇದೆಲ್ಲವೂ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿಹೋಗದೆಂದು ನಿಮಗೆ ಒತ್ತಿ ಹೇಳುತ್ತೇನೆ.
- Verse 35: ಭೂಮ್ಯಾಕಾಶಗಳು ಗತಿಸಿಹೋಗುವುವು; ಆದರೆ ನನ್ನ ಮಾತುಗಳು ಶಾಶ್ವತವಾಗಿ ನಿಲ್ಲುವುವು.
- Verse 36: “ಆ ದಿನವಾಗಲಿ, ಆ ಗಳಿಗೆಯಾಗಲಿ ಯಾವಾಗ ಬರುವುದೆಂದು ದೇವರೇ ಹೊರತು ಮತ್ತಾರೂ ಅರಿಯರು. ಸ್ವರ್ಗದ ದೂತರೇ ಆಗಲಿ, ಪುತ್ರನೇ ಆಗಲಿ ಅದನ್ನು ಅರಿಯರು.
- Verse 37: ನೋವನ ಕಾಲದಲ್ಲಿ ಆದಂತೆಯೇ ನರಪುತ್ರನು ಬರುವಾಗಲೂ ಆಗುವುದು.
- Verse 38: ಜಲಪ್ರಳಯಕ್ಕೆ ಹಿಂದಿನ ದಿನಗಳಲ್ಲಿ ನೋವನು ನಾವೆಯನ್ನು ಹತ್ತುವ ದಿನದವರೆಗೆ ಜನರು ತಿನ್ನುತ್ತಲೇ ಇದ್ದರು; ಕುಡಿಯುತ್ತಲೇ ಇದ್ದರು; ಮದುವೆ ಮಾಡಿಕೊಳ್ಳುವುದರಲ್ಲೂ ಮಾಡಿಕೊಡುವುದರಲ್ಲೂ ನಿರತರಾಗಿದ್ದರು.
- Verse 39: ಜಲಪ್ರಳಯ ಬಂದು ಅವರನ್ನು ಕೊಚ್ಚಿಕೊಂಡು ಹೋಗುವ ತನಕ ಅದರ ಅರಿವೇ ಅವರಿಗಿರಲಿಲ್ಲ. ನರಪುತ್ರನು ಆಗಮಿಸುವಾಗಲೂ ಹಾಗೆಯೇ ನಡೆಯುವುದು.
- Verse 40: ಆಗ ಹೊಲದಲ್ಲಿದ್ದ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು. ಇನ್ನೊಬ್ಬನನ್ನು ಬಿಡಲಾಗುವುದು.
- Verse 41: ಒಂದೇ ಕಲ್ಲಿನಲ್ಲಿ ಬೀಸುತ್ತ ಇರುವ ಇಬ್ಬರು ಮಹಿಳೆಯರಲ್ಲಿ ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.
- Verse 42: ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು, ಆದ್ದರಿಂದ ಎಚ್ಚರವಾಗಿರಿ.
- Verse 43: ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು, ಅಲ್ಲವೆ?
- Verse 44: ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು.
- Verse 45: “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿ ಆಳುಗಳಿಗೆ ದವಸಧಾನ್ಯಗಳನ್ನು ಅಳೆದುಕೊಟ್ಟು ತನ್ನ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಕಗೊಂಡವನು.
- Verse 46: ಯಜಮಾನನು ಮನೆಗೆ ಹಿಂದಿರುಗಿಬಂದಾಗ ಆ ಮೇಸ್ತ್ರಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.
- Verse 47: ಅಂಥವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುತ್ತಾನೆಂಬುದು ನಿಶ್ಚಯ.
- Verse 48: ಆದರೆ ಆ ಮೇಸ್ತ್ರಿ ದುಷ್ಟನಾಗಿದ್ದು ‘ನನ್ನ ಯಜಮಾನ ತಡಮಾಡುವನು’ ಎಂದು ನೆನಸಿಕೊಂಡು,
- Verse 49: ತನ್ನ ಜೊತೆಯ ಸೇವಕರನ್ನು ಹೊಡೆಯತೊಡಗಿದರೆ, ಕುಡುಕರ ಸಂಗಡ ತಿಂದುಕುಡಿಯಲಾರಂಭಿಸಿದರೆ,
- Verse 50: ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು.
- Verse 51: ಅವನನ್ನು ಚಿತ್ರಹಿಂಸೆಗೂ ಕಪಟಿಗಳ ದುರ್ಗತಿಗೂ ಗುರಿಮಾಡುವನು. ಅಲ್ಲಿರುವವರೊಡನೆ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು.