ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಯಕೋಬನು
3ನೇ ಅಧ್ಯಾಯ
- Verse 1: ಸಹೋದರರೇ, ಎಲ್ಲರೂ ಬೋಧಕರಾಗಲು ಆತುರಪಡಬೇಡಿ. ಬೋಧಕರಾದ ನಾವು ಇತರರಿಗಿಂತಲೂ ತೀವ್ರವಾದ ನ್ಯಾಯವಿಚಾರಣೆಗೆ ಗುರಿಯಾಗುತ್ತೇವೆ.
- Verse 2: ನಾವೆಲ್ಲರೂ ಎಷ್ಟೋ ವಿಷಯಗಳಲ್ಲಿ ತಪ್ಪುಮಾಡುವುದುಂಟು. ತನ್ನ ಮಾತಿನಲ್ಲಿ ತಪ್ಪುಮಾಡದೆ ಪೂರ್ತಿಯಾಗಿ ತನ್ನನ್ನೇ ಸ್ವಾಧೀನದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ ಸಿದ್ಧಪುರುಷನೇ ಹೌದು.
- Verse 3: ಕುದುರೆಗಳನ್ನು ಗಮನಿಸಿರಿ, ಅವುಗಳ ಬಾಯಿಗೆ ಹಾಕುವ ಚಿಕ್ಕ ಕಡಿವಾಣದಿಂದ ನಮಗೆ ಇಷ್ಟಬಂದ ಕಡೆಗೆ ಅವುಗಳನ್ನು ನಡೆಸುತ್ತೇವೆ.
- Verse 4: ಅಂತೆಯೇ, ಹಡಗು ಎಷ್ಟೇ ದೊಡ್ಡದಿರಲಿ, ಎಂತಹ ಬಿರುಗಾಳಿಯ ಬಡಿತಕ್ಕೇ ಸಿಕ್ಕಿರಲಿ, ಕೇವಲ ಒಂದು ಚಿಕ್ಕ ಚುಕ್ಕಾಣಿಯಿಂದ ನಾವಿಕನು ತನಗೆ ಇಷ್ಟಬಂದ ಕಡೆಗೆ ಅದನ್ನು ತಿರುಗಿಸುತ್ತಾನೆ.
- Verse 5: ನಾಲಿಗೆಯೂ ಹಾಗೆಯೇ. ಅದು ಶರೀರದ ಸಣ್ಣ ಅಂಗವಾಗಿದ್ದರೂ ಬಡಾಯಿ ಕೊಚ್ಚುವುದು ಬಹಳ. ಒಂದು ಸಣ್ಣ ಕಿಡಿಯು ದೊಡ್ಡ ಕಾಡನ್ನೇ ಸುಡಬಲ್ಲದು.
- Verse 6: ನಾಲಿಗೆಯು ಆ ಬೆಂಕಿಯ ಕಿಡಿಯಂತೆ. ಅದು ಅಧರ್ಮಲೋಕದ ಪ್ರತೀಕ. ಅಂಗಾಂಗಗಳ ನಡುವೆ ಇದ್ದು ಇಡೀ ಶರೀರವನ್ನು ಮಲಿನಗೊಳಿಸುತ್ತದೆ. ನರಕಾಗ್ನಿಯಿಂದ ಹೊತ್ತಿಕೊಂಡು ಅದು ಬಾಳಿನ ಚಕ್ರಕ್ಕೆ ಬೆಂಕಿಯನ್ನು ಹಚ್ಚುತ್ತದೆ.
- Verse 7: ಸಕಲ ಜಾತಿಯ ಪ್ರಾಣಿಪಕ್ಷಿಗಳನ್ನೂ ಹರಿದಾಡುವ ಜಂತುಗಳನ್ನೂ ಜಲಜೀವಿಗಳನ್ನೂ ಮಾನವ ಪಳಗಿಸಬಲ್ಲನು; ಪಳಗಿಸಿಯೂ ಇದ್ದಾನೆ.
- Verse 8: ಆದರೆ ನಾಲಿಗೆಯನ್ನಾದರೋ ಹತೋಟಿಗೆ ತರಲು ಯಾರಿಗೂ ಸಾಧ್ಯವಿಲ್ಲ. ಅದು ಸತತ ಕೇಡನ್ನುಂಟುಮಾಡುವ ಕಿಡಿ; ಮೃತ್ಯುಮಾರಕ ವಿಷಕೊಂಡಿ.
- Verse 9: ಪ್ರಭುವನ್ನೂ ಪರಮ ಪಿತನನ್ನೂ ಸ್ತುತಿಸುವುದು ಅದೇ ನಾಲಿಗೆಯೇ; ದೇವಸ್ವರೂಪದಲ್ಲಿ ಸೃಷ್ಟಿಸಲಾದ ಮಾನವನನ್ನು ಶಪಿಸುವುದೂ ಅದೇ ನಾಲಿಗೆಯೇ.
- Verse 10: ಸ್ತುತಿ ಶಾಪಗಳೆರಡೂ ಒಂದೇ ಬಾಯಿಂದ ಹೊರಡುತ್ತವೆ. ಪ್ರಿಯ ಸಹೋದರರೇ, ಇದು ತರವಲ್ಲ.
- Verse 11: ಒಂದೇ ಬುಗ್ಗೆಯಿಂದ ಸಿಹಿ ನೀರು, ಸೌಳು ನೀರು - ಎರಡೂ ಬರುವುದುಂಟೇ?
- Verse 12: ಅಂಜೂರದ ಮರ ಓಲಿವ್ ಹಣ್ಣನ್ನು ಕೊಡುವುದುಂಟೇ? ದ್ರಾಕ್ಷಿಯ ಬಳ್ಳಿಯಲ್ಲಿ ಅಂಜೂರ ಸಿಕ್ಕೀತೇ? ಎಂದಿಗೂ ಇಲ್ಲ. ಅಂತೆಯೇ ಸೌಳು ನೀರಿನ ಒರತೆಯಿಂದ ಸಿಹಿ ನೀರು ಬರುವುದಿಲ್ಲ.
- Verse 13: ನಿಮ್ಮಲ್ಲಿ ಯಾರಾದರೂ ಜ್ಞಾನಿಯೂ ವಿವೇಕಿಯೂ ಆದವನು ಇದ್ದಾನೋ? ಅಂಥವನು ಜ್ಞಾನದ ಲಕ್ಷಣವಾಗಿರುವ ವಿನಯಶೀಲತೆಯನ್ನು ತನ್ನ ನಡೆನುಡಿಯಲ್ಲಿ ತೋರ್ಪಡಿಸಲಿ.
- Verse 14: ನಿಮ್ಮ ಹೃದಯದಲ್ಲಿ ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ತುಂಬಿರುವಾಗ ಜ್ಞಾನಿಗಳೆಂದು ಕೊಚ್ಚಿಕೊಳ್ಳಬೇಡಿ; ಸತ್ಯಕ್ಕೆ ವಿರುದ್ಧವಾಗಿ ಸುಳ್ಳಾಡಬೇಡಿ.
- Verse 15: ಅಂಥ ಜ್ಞಾನ ದೇವರಿಂದ ಬಂದ ಜ್ಞಾನವಲ್ಲ; ಅದು ಪ್ರಾಪಂಚಿಕವಾದುದು, ಪ್ರಾಕೃತವಾದುದು, ಪೈಶಾಚಿಕವಾದುದು.
- Verse 16: ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ಇರುವ ಕಡೆಗಳಲ್ಲೆಲ್ಲಾ ನಾನಾವಿಧವಾದ ಅಕ್ರಮಗಳೂ ದುಶ್ಚಟಗಳು ಇರುತ್ತವೆ.
- Verse 17: ದೇವರಿಂದ ಬರುವ ಜ್ಞಾನವಾದರೋ ಮೊಟ್ಟಮೊದಲನೆಯದಾಗಿ ಪವಿತ್ರವಾದುದು. ಅದು ಶಾಂತಿಸಮಾಧಾನ ಉಳ್ಳದ್ದು. ಸಹನೆ ಸಂಯಮವುಳ್ಳದ್ದು, ನ್ಯಾಯಸಮ್ಮತವಾದದ್ದು, ದಯೆದಾಕ್ಷಿಣ್ಯಗಳಿಂದಲೂ ಸತ್ಕಾರ್ಯಗಳಿಂದಲೂ ಫಲಭರಿತವಾದದ್ದು. ವಂಚನೆಯಾಗಲಿ, ಚಂಚಲತೆಯಾಗಲಿ ಅದರಲ್ಲಿ ಇರುವುದಿಲ್ಲ.
- Verse 18: ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ.