ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
13ನೇ ಅಧ್ಯಾಯ
- Verse 1: ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:
- Verse 2: “ನರಪುತ್ರನೇ, ಪ್ರವಾದನೆ ಮಾಡಿ ಸ್ವಕಲ್ಪಿತವಾದುದನ್ನೇ ಸಾರುತ್ತಲಿರುವ ಇಸ್ರಯೇಲಿನ ಪ್ರವಾದಿಗಳಿಗೆ ಖಂಡನೆಯಾಗಿ ನೀನು ಪ್ರವಾದಿಸುತ್ತ ಹೀಗೆ ಹೇಳು: “ಸರ್ವೇಶ್ವರನ ವಾಕ್ಯವನ್ನು ಕೇಳಿರಿ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ:
- Verse 3: ‘ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುವ ಮೂರ್ಖಪ್ರವಾದಿಗಳಿಗೆ ಧಿಕ್ಕಾರ!
- Verse 4: ಇಸ್ರಯೇಲೇ, ನಿನ್ನ ಪ್ರವಾದಿಗಳು ಹಾಳು ಪ್ರದೇಶಗಳಲ್ಲಿನ ಗುಳ್ಳೆನರಿಗಳಂತಿದ್ದಾರೆ!
- Verse 5: ಸರ್ವೇಶ್ವರನ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ನೀವು ಪೌಳಿಯ ಒಡಕುಗಳನ್ನೇರಲಿಲ್ಲ. ಇಸ್ರಯೇಲ್ ವಂಶದ ರಕ್ಷಣೆಗಾಗಿ ಗೋಡೆಯನ್ನು ಗಟ್ಟಿಮಾಡಲೂ ಇಲ್ಲ.
- Verse 6: ಸರ್ವೇಶ್ವರ ಇಂತೆನ್ನುತ್ತಾರೆಂದು ನುಡಿ: ಅಂಥವರಿಗೆ ಆದ ದರ್ಶನ ಮಿಥ್ಯ; ಕೇಳಿಸಿದ ವಾಣಿ ಸುಳ್ಳು; ಸರ್ವೇಶ್ವರ ಅವರನ್ನು ಕಳುಹಿಸಲಿಲ್ಲ. ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ.
- Verse 7: ನಾನು ಮಾತಾಡದೆ ಇದ್ದರೂ ‘ಸರ್ವೇಶ್ವರ ಇಂತೆನ್ನುತ್ತಾರೆ’ ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನ ಮಿಥ್ಯ, ನೀವು ಹೇಳಿದ ಭವಿಷ್ಯ ಸುಳ್ಳು.’
- Verse 8: ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: “ನೀವು ವ್ಯರ್ಥವಾದುದನ್ನು ನುಡಿದು ಸುಳ್ಳಾದುದನ್ನು ಕಂಡದ್ದರಿಂದ ಇಗೋ, ನಿಮಗೆ ವಿರುದ್ಧವಾಗಿದ್ದೇನೆ, ಇದು ಸರ್ವೇಶ್ವರನಾದ ದೇವರೆಂಬ ನನ್ನ ನುಡಿ.
- Verse 9: ಮಿಥ್ಯದರ್ಶನ ಹೊಂದಿ ಸುಳ್ಳು ಭವಿಷ್ಯ ಹೇಳುವ ಪ್ರವಾದಿಗಳ ಮೇಲೆ ನಾನು ಕೈಮಾಡುವೆನು; ಅವರು ನನ್ನ ಜನರ ಹಿರಿಯ ಸಭೆಯಲ್ಲಿ ಸೇರಕೂಡದು, ಇಸ್ರಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರು ಲಿಖಿತವಾಗಬಾರದು, ಅವರು ಇಸ್ರಯೇಲ್ ನಾಡನ್ನು ಪ್ರವೇಶಿಸಲೂಬಾರದು. ನಾನೇ ಸರ್ವೇಶ್ವರನಾದ ದೇವರು ಎಂದು ನಿಮಗೆ ಗೊತ್ತಾಗುವುದು.
- Verse 10: “ಅಶಾಂತಿಯಿರುವಾಗಲೂ ಅವರು ಶಾಂತಿಯಿದೆ ಎಂದು ಹೇಳಿ ನನ್ನ ಜನಗಳನ್ನು ವಂಚಿಸಿದ್ದಾರೆ. ಜನರು ದುರ್ಬಲ ಗೋಡೆಯನ್ನು ಕಟ್ಟಿದ್ದಾರೆ. ಅದಕ್ಕೆ ಆ ಪ್ರವಾದಿಗಳು ಸುಣ್ಣ ಬಳಿಯುತ್ತಾರೆ;
- Verse 11: ಆದಕಾರಣ, ನೀನು ಸುಣ್ಣ ಬಳಿಯುವವರಿಗೆ ಹೀಗೆ ನುಡಿ: ‘ವಿಪರೀತ ಮಳೆಯಾಗಿ ಗೋಡೆ ಬಿದ್ದುಹೋಗುವುದು, ಆನೆಕಲ್ಲುಗಳು ಸುರಿಯುವುವು; ಬಿರುಗಾಳಿ ಗೋಡೆಯನ್ನು ಕೆಡವಿಹಾಕುವುದು;
- Verse 12: ಇಗೋ, ಗೋಡೆ ಬಿದ್ದ ಮೇಲೆ, ‘ನೀವು ಬಳಿದ ಸುಣ್ಣ ಎಲ್ಲಿ?’ ಎಂದು ನಿಮ್ಮನ್ನು ಕೇಳುವರಲ್ಲವೆ?’
- Verse 13: “ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ‘ನಾನು ಸಿಟ್ಟುಗೊಂಡು ಗೋಡೆಯನ್ನು ಬಿರುಗಾಳಿಯಿಂದ ಕೆಡವಿಹಾಕುವೆನು; ಅದನ್ನು ನಾಶಮಾಡಲು ನನ್ನ ಕೋಪದಿಂದ ವಿಪರೀತ ಮಳೆಯುಂಟಾಗುವುದು; ರೋಷದಿಂದ ಆನೆಕಲ್ಲುಗಳು ಸುರಿಯುವುವು.
- Verse 14: ನೀನು ಸುಣ್ಣ ಬಳಿದ ಗೋಡೆಯನ್ನು ನಾನು ಹೀಗೆ ಕೆಡವಿ ನೆಲಸಮಮಾಡಿ ಅದರ ಅಸ್ತಿವಾರವನ್ನು ಹೊರಗೆಡಹುವೆನು; ಅದು ಹೀಗೆ ಬಿದ್ದುಹೋಗುವಾಗ ನೀವು ಅದರೊಳಗೆ ಸಿಕ್ಕಿ ನಾಶವಾಗುವಿರಿ; ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.’
- Verse 15: “ಹೀಗೆ ನಾನು ಗೋಡೆಯಲ್ಲಿಯೂ ಅದಕ್ಕೆ ಸುಣ್ಣಬಳಿದ ನಿಮ್ಮಲ್ಲಿಯೂ ರೋಷವನ್ನು ತೀರಿಸಿಕೊಂಡು ಇಂತೆನ್ನುವೆನು:
- Verse 16: ‘ಇಸ್ರಯೇಲಿನ ಪ್ರವಾದಿಗಳೇ, ಅಶಾಂತಿಯಿದ್ದರೂ ಶಾಂತಿಯ ದರ್ಶನಗಳನ್ನು ನೀವು ಕಂಡು ಜೆರುಸಲೇಮಿನ ಬಗ್ಗೆ ಪ್ರವಾದಿಸಿದ್ದೀರಲ್ಲವೆ? ಗೋಡೆ ಇಲ್ಲವಾಯಿತು, ಅದಕ್ಕೆ ಸುಣ್ಣ ಬಳಿದವರೂ ಇಲ್ಲವಾದರು; ಇದು ಸರ್ವೇಶ್ವರನಾದ ದೇವರ ನುಡಿ.’
- Verse 17: “ನರಪುತ್ರನೇ, ಸ್ವಕಲ್ಪಿತವಾದದ್ದನ್ನು ಭವಿಷ್ಯವಾಣಿ ಎಂದು ಹೇಳುವ ನಿನ್ನ ಸ್ವಕುಲ ಮಹಿಳೆಯರ ಕಡೆಗೆ ಮುಖಮಾಡಿಕೊಂಡು ಅವರನ್ನೂ ಖಂಡಿಸಿ ಹೀಗೆ ಪ್ರವಾದಿಸು:
- Verse 18: ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ಜನರ ಪ್ರಾಣಗಳನ್ನು ಬೇಟೆಯಾಡಬೇಕೆಂದು, ಎಲ್ಲರ ಮೊಣಕೈಗಳಿಗೆ ತಾಯಿತಿಗಳನ್ನು ಕಟ್ಟಿ, ಉದ್ದವಾದವರಿಗೂ ಗಿಡ್ಡವಾದವರಿಗೂ ತಕ್ಕತಕ್ಕ ಮುಸುಕುಗಳನ್ನು ಸಿದ್ಧಮಾಡಿಕೊಂಡಿರುವ ಮಹಿಳೆಯರಿಗೆ ಧಿಕ್ಕಾರ! ಮಹಿಳೆಯರೇ, ನೀವು ನನ್ನ ಜನರ ಪ್ರಾಣಗಳನ್ನು ಬೇಟೆಯಾಡಿ, ನಿಮಗೆ ಬೇಕಾದವರ ಪ್ರಾಣಗಳನ್ನು ಉಳಿಸಿಕೊಳ್ಳುವಿರೋ?
- Verse 19: ನೀವು ಹಿಡಿಯುವಷ್ಟೆ ಜವೆಗೋಧಿಗೆ, ಚೂರುಪಾರು ರೊಟ್ಟಿಗೆ ಆಸೆಪಟ್ಟು, ಸುಳ್ಳುಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳಿ, ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.”
- Verse 20: ಹೀಗಿರಲು, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಅಕಟಾ! ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವುದಕ್ಕೆ ಸಾಧನವಾದ ನಿಮ್ಮ ತಾಯಿತಿಗಳಿಗೆ ನಾನು ಹೇಸಿ, ಅವುಗಳನ್ನು ನಿಮ್ಮ ಕೈಗಳಿಂದ ಕಿತ್ತುಹಾಕುವೆನು; ನೀವು ಬೇಟೆಯಾಡುವ ಪ್ರಾಣಿಗಳನ್ನು ಬಿಡುಗಡೆಮಾಡಿ ಪಕ್ಷಿಗಳ ಹಾಗೆ ಸ್ವತಂತ್ರವಾಗಿಸುವೆನು.
- Verse 21: ನಾನು ನಿಮ್ಮ ಮುಸುಕುಗಳನ್ನೂ ಹರಿದು, ನನ್ನ ಜನರನ್ನು ನಿಮ್ಮ ಕೈಯಿಂದ ತಪ್ಪಿಸುವೆನು; ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕುವುದಿಲ್ಲ; ನಾನೆ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.
- Verse 22: “ನಾನು ಎದೆಗುಂದಿಸದ ಶಿಷ್ಯನ ಮನಸ್ಸನ್ನು ನೀವು ಸುಳ್ಳಾಡಿ ಕುಂದಿಸಿದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನನ್ನು ಪ್ರೋತ್ಸಾಹಿಸಿದ್ದೀರಿ.
- Verse 23: ಆದಕಾರಣ ನೀವು ಮಿಥ್ಯದರ್ಶನವನ್ನು ಹೊಂದಿ, ಸುಳ್ಳುಭವಿಷ್ಯ ಹೇಳುವ ಕೆಲಸ ಇನ್ನು ನಡೆಯುವುದೇ ಇಲ್ಲ; ನನ್ನ ಜನರನ್ನು ನಿಮ್ಮ ಕೈವಶದಿಂದ ಬಿಡಿಸುವೆನು; ನಾನೆ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.”