ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
19ನೇ ಅಧ್ಯಾಯ
- Verse 1: “ಇಸ್ರಯೇಲ್ ಅರಸರನ್ನು ಕುರಿತ ಈ ಶೋಕ ಗೀತೆಯನ್ನು ಹಾಡು:
- Verse 2: ಇಗೋ, ನಿನ್ನ ತಾಯಿ, ಸಿಂಹಗಳ ಮಧ್ಯೆ ಸಿಂಹಿಣಿ, ಸಾಕಿದಳು ತನ್ನ ಮರಿಗಳನು, ಯುವ ಸಿಂಹಗಳ ನಡುವೆ ಪವಡಿಸಿ.
- Verse 3: ಯುವ ಸಿಂಹವಾಯಿತು ಆಕೆ ಬೆಳೆಸಿದಾ ಮರಿಯೊಂದು, ನರಭಕ್ಷಕ ಆಗಲಾರಂಭಿಸಿತದು ಬೇಟೆಯನು ಕಲಿತು.
- Verse 4: ಇದ ಕೇಳಿದ ರಾಷ್ಟ್ರಗಳು ಹಿಡಿದವದನ್ನು ಗುಂಡಿತೋಡಿ, ಈಜಿಪ್ಟ್ ದೇಶಕೊಯ್ದವು ಅದಕ್ಕೆ ಬಿಗಿದು ಸರಪಣಿ.
- Verse 5: ತನ್ನ ನಂಬಿಕೆ ನಿರೀಕ್ಷೆ ಹಾಳಾಯಿತೆಂದುಕೊಂಡಾ ಸಿಂಹಿಣಿ, ಪ್ರಾಯಕ್ಕೆ ತಂದಳು ತನ್ನ ಮರಿಗಳಲ್ಲಿ ಇನ್ನೊಂದನ್ನು ಸಾಕಿ.
- Verse 6: ಇದು ಕೂಡ ಯುವಸಿಂಹವಾಯಿತು ಇತರ ಸಿಂಹಗಳ ನಡುವೆ ತಿರುಗಾಡಿತು. ಬೇಟೆಯಾಡುವುದನು ಕಲಿತು ತಾನೂ ನರಭಕ್ಷಕನಾಗಲಾರಂಭಿಸಿತು.
- Verse 7: ನೆಲಸಮ ಮಾಡಿತು ಪಟ್ಟಣಗಳನೆ ನಾಶಮಾಡಿತು ಕೋಟೆಕೊತ್ತಲುಗಳನೆ ನಾಡಿಗೆ ನಾಡೇ ನಡುಗಿತು ಅದರ ಗರ್ಜನೆಗೆ.
- Verse 8: ಆಗ ಬಂದವು ಸುತ್ತಲಿನ ರಾಷ್ಟ್ರಗಳು ಒಟ್ಟುಗೂಡಿ, ಸಿಕ್ಕಿಸಿದವು ಅದನ್ನು ಬಲೆಯೊಡ್ಡಿ, ಗುಂಡಿತೋಡಿ.
- Verse 9: ಒಯ್ದವು ಅದನ್ನು ಬಾಬಿಲೋನಿನ ಅರಸನ ಬಳಿಗೆ ಬಿಗಿದು ಸರಪಣಿ, ಹಾಕಿ ಪಂಜರದೊಳಗೆ. ಅದರ ಗರ್ಜನೆ ಇಸ್ರಯೇಲಿನ ಗಿರಿಗಳಿಗೆ ಕೇಳಿಸದಂತೆ, ಸೇರಿಸಿಬಿಟ್ಟವು ಅದನ್ನು ಸುಭದ್ರ ಕೋಟೆಯೊಳಗೆ.
- Verse 10: ನಿನ್ನ ಹೆತ್ತ ತಾಯಿ ದ್ರಾಕ್ಷಾಲತೆಯಂತೆ ನೀರಾವರಿಯಲಿ ನಾಟಿದ್ದಾ ಲತೆಯಂತೆ ಬೆಳೆದಿತ್ತದು ಫಲವತ್ತಾಗಿ, ಹುಲುಸಾಗಿ, ಅತಿ ತಂಪಾಗಿಯೆ.
- Verse 11: ಅದರಲ್ಲಿದ್ದವು ರಾಜದಂಡ ಯೋಗ್ಯವಾದ ಗಟ್ಟಿ ಕೊಂಬೆಗಳು ಮಿಕ್ಕ ರೆಂಬೆಗಳಿಗಿಂತ ಅಧಿಕವಾಗಿತ್ತವುಗಳ ಎತ್ತರವು ಹಲವಾರು ರೆಂಬೆಗಳ ಮಧ್ಯೆ ಉದ್ದುದ್ದವಾಗಿ ಕಾಣಿಸಿದವು.
- Verse 12: ಕಿತ್ತು ಬಿಸಾಡಿದರು ಕ್ರೋಧಿಗಳು ಆ ಲತೆಯನು ಬಾಡಿಸಿತು ಅದರ ಫಲವನು ಮೂಡಣಗಾಳಿಯು ಮುದುರಿ ಒಣಗಿಹೋದುವು ಅದರ ಗಟ್ಟಿಕೊಂಬೆಗಳು.
- Verse 13: ದಹಿಸಿಬಿಟ್ಟಿತು ಅವುಗಳನು ಅಗ್ನಿಜ್ವಾಲೆಯು, ಈಗದು ನಾಟಿಕೊಂಡಿದೆ ನೀರಿಲ್ಲದ ಬೆಂಗಾಡಿನೊಳು.
- Verse 14: ಅದರ ಕಾಂಡದಿಂದ ಹೊರಟ ಬೆಂಕಿಯು ದಹಿಸಿಬಿಟ್ಟಿದೆ ಅದರ ಫಲಗಳನು ಎಂದೇ ಇನ್ನು ಉಳಿದಿಲ್ಲ ಅದರೊಳು ರಾಜದಂಡಕೆ ಯೋಗ್ಯವಾದ ಗಟ್ಟಿಕೊಂಬೆಯು.” ಇದೊಂದು ಶೋಕ ಗೀತೆ; ರೂಢಿಯಲ್ಲಿ ಇರುವ ಜಾನಪದ ಗೀತೆ.