పరిశుద్ధ గ్రంథము
ಹಳೆಯ ಒಡಂಬಡಿಕೆ
ವಿಮೋಚನಕಾಂಡ
32ನೇ ಅಧ್ಯಾಯ
- Verse 1: ‘ಮೋಶೆ ಬೆಟ್ಟದಿಂದ ಇಳಿಯದೆ ತಡಮಾಡಿದ್ದನ್ನು ಇಸ್ರಯೇಲರು ನೋಡಿ, ಆರೋನನ ಬಳಿಗೆ ಕೂಡಿಬಂದರು. ಅವನಿಗೆ, “ಈಜಿಪ್ಟ್ ದೇಶದಿಂದ ನಮ್ಮನ್ನು ಕರೆದುಕೊಂಡು ಬಂದ ಆ ಮೋಶೆ ಏನಾದನೋ ಗೊತ್ತಿಲ್ಲ. ಆದ್ದರಿಂದ ಏಳು, ನಮ್ಮನ್ನು ಮುನ್ನಡೆಸಿಕೊಂಡು ಹೋಗಲು ನಮಗೊಬ್ಬ ದೇವರನ್ನು ಮಾಡಿಸಿಕೊಡು,” ಎಂದು ಕೇಳಿದರು.
- Verse 2: ಅದಕ್ಕೆ ಆರೋನನು, “ನಿಮ್ಮ ಹೆಂಡತಿಯರು, ಗಂಡುಮಕ್ಕಳು ಹಾಗು ಹೆಣ್ಣುಮಕ್ಕಳು ಹಾಕಿಕೊಂಡಿರುವ ಚಿನ್ನದ ಕಿವಿಯೋಲೆಗಳನ್ನು ಬಿಚ್ಚಿ ನನಗೆ ಒಪ್ಪಿಸಿರಿ,” ಎಂದನು.
- Verse 3: ಜನರೆಲ್ಲರು ತಮ್ಮ ತಮ್ಮ ಕಿವಿಯೋಲೆಗಳನ್ನು ಬಿಚ್ಚಿ ಆರೋನನ ಬಳಿಗೆ ತಂದುಕೊಟ್ಟರು.
- Verse 4: ಅವನು ಆ ಚಿನ್ನವನ್ನು ತನ್ನ ವಶಕ್ಕೆ ತೆಗೆದುಕೊಂಡು, ಹೋರಿಕರುವಿನ ಆಕಾರವನ್ನು ಉಳಿಯಿಂದ ರೂಪಿಸಿ ಎರಕ ಹೊಯಿಸಿದನು. ಆಗ ಜನರು, “ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ಇದೇ” ಎಂದು ಹೇಳಿದರು.
- Verse 5: ಆರೋನನು ಇದನ್ನು ನೋಡಿ ಆ ಹೋರಿಕರುವಿನ ಮುಂದೆ ಒಂದು ಬಲಿಪೀಠವನ್ನು ಕಟ್ಟಿಸಿ, “ನಾಳೆ ಸರ್ವೇಶ್ವರ ಸ್ವಾಮಿಯ ಗೌರವಾರ್ಥ ಹಬ್ಬವನ್ನು ಆಚರಿಸಬೇಕು,” ಎಂದು ಪ್ರಕಟಿಸಿದನು.
- Verse 6: ಅಂತೆಯೇ ಮರುದಿನ ಬೆಳಿಗ್ಗೆ ಜನರು ಎದ್ದು ದಹನಬಲಿಗಳನ್ನೂ ಸಮಾಧಾನಬಲಿಗಳನ್ನೂ ಸಮರ್ಪಿಸಿದರು. ಬಳಿಕ ತಿನ್ನಲೂ ಕುಡಿಯಲೂ ಕುಳಿತುಕೊಂಡರು. ಆಮೇಲೆ ಎದ್ದು ಕುಣಿದಾಡಿದರು.
- Verse 7: ಇತ್ತ ಸರ್ವೇಶ್ವರ ಮೋಶೆಗೆ, “ನೀನು ಕೂಡಲೆ ಬೆಟ್ಟದಿಂದ ಇಳಿದುಹೋಗು, ಈಜಿಪ್ಟಿನಿಂದ ನೀನು ಕರೆದುತಂದ ನಿನ್ನ ಜನರು ಕೆಟ್ಟುಹೋದರು.
- Verse 8: ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಇಷ್ಟು ಬೇಗನೆ ತೊರೆದುಬಿಟ್ಟು ತಮಗೇ ಲೋಹದ ಹೋರಿಕರುವನ್ನು ಮಾಡಿಸಿಕೊಂಡು, ಅದಕ್ಕೆ ಅಡ್ಡಬಿದ್ದು, ಬಲಿಗಳನ್ನರ್ಪಿಸಿ, ‘ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದುತಂದ ದೇವರು’ ಎಂದು ಹೇಳಿಕೊಳ್ಳುತ್ತಿದ್ದಾರೆ.
- Verse 9: ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ಞೆಗೆ ಬಗ್ಗದ ಹಟಮಾರಿಗಳು.
- Verse 10: ಆದಕಾರಣ ನೀನು ನನಗೆ ಅಡ್ಡಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮ ಮಾಡುವೆನು. ಬಳಿಕ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗ ಉದಯಿಸುವಂತೆ ಮಾಡುವೆನು,” ಎಂದು ಹೇಳಿದರು.
- Verse 11: ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆಂದು ಬೇಡಿಕೊಂಡನು: “ಸ್ವಾಮಿ ಸರ್ವೇಶ್ವರಾ, ಮಹಾಶಕ್ತಿಯಿಂದಲೂ ಭುಜಬಲದಿಂದಲೂ ತಾವೇ ಈಜಿಪ್ಟಿನಿಂದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿ ಕಾರಬಹುದೆ?
- Verse 12: ಈಜಿಪ್ಟಿನವರು ತಮ್ಮ ವಿಷಯದಲ್ಲಿ, ‘ಸರ್ವೇಶ್ವರನು ಕೇಡುಮಾಡಬೇಕೆಂಬ ಉದ್ದೇಶದಿಂದಲೇ ಇಸ್ರಯೇಲರನ್ನು ಇಲ್ಲಿಂದ ಕರೆದುಕೊಂಡು ಹೋದದ್ದು; ಅವರನ್ನು ಬೆಟ್ಟಗುಡ್ಡಗಳಲ್ಲಿ ಸಾಯಿಸಿ ಇಳೆಯಲ್ಲಿ ಉಳಿಯದಂತೆ ನಿರ್ಮೂಲ ಮಾಡಬೇಕೆಂದೇ ಅವರನ್ನು ಕರೆದುಕೊಂಡು ಹೋದದ್ದು ಎಂದು ಆಡಿಕೊಳ್ಳುವುದಕ್ಕೆ ಎಡೆಮಾಡಿಕೊಳ್ಳಬೇಕೆ? ತಾವು ಕೋಪಾಗ್ನಿಯನ್ನು ಬಿಟ್ಟು ತಮ್ಮ ಪ್ರಜೆಗೆ ಕೇಡುಮಾಡಬೇಕೆಂಬ ಮನಸ್ಸನ್ನು ಮಾರ್ಪಡಿಸಿಕೊಳ್ಳಿ.
- Verse 13: ತಮ್ಮ ದಾಸರಾದ ಅಬ್ರಹಾಮ್, ಇಸಾಕ್ ಹಾಗು ಯಕೋಬರನ್ನು ನೆನಪಿಗೆ ತಂದುಕೊಳ್ಳಿ. ತಾವು ತಮ್ಮ ಜೀವದಾಣೆ ಪ್ರಮಾಣ ಮಾಡಿ ಅವರಿಗೆ, ‘ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನು; ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನು; ಮತ್ತು ಅವರು ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು’ ಎಂದು ತಾವು ಮಾತುಕೊಡಲಿಲ್ಲವೆ?” ಎಂದನು.
- Verse 14: ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆಂದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊಂಡರು.
- Verse 15: ಮೋಶೆ ಆಜ್ಞಾಶಾಸನಗಳಿದ್ದ ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟದಿಂದ ಇಳಿದುಬಂದನು. ಆ ಹಲಗೆಗಳ ಎರಡು ಪಕ್ಕಗಳಲ್ಲೂ ಅಕ್ಷರಗಳು ಬರೆದಿದ್ದವು. ಇಕ್ಕಡೆಗಳಲ್ಲೂ ಬರಹವಿತ್ತು.
- Verse 16: ಆ ಶಿಲಾಶಾಸನಗಳು ದೇವರ ಕೆಲಸವೇ ಆಗಿದ್ದವು. ಅವುಗಳಲ್ಲಿ ಬರೆದಿದ್ದು ದೇವರು ಕೆತ್ತಿದ ಅಕ್ಷರಗಳೇ ಆಗಿದ್ದವು.
- Verse 17: ಇತ್ತ ಇಸ್ರಯೇಲರು ಕೇಕೆ ಹಾಕುತ್ತಾ ಕೂಗಾಡುತ್ತಿದ್ದುದನ್ನು ಯೆಹೋಶುವನು ಕೇಳಿ ಮೋಶೆಗೆ, “ಪಾಳೆಯದ ಕಡೆಯಿಂದ ಕಾಳಗದ ಧ್ವನಿ ಕೇಳಿಸುತ್ತಿದೆ,” ಎಂದು ಹೇಳಿದನು.
- Verse 18: ಅದಕ್ಕೆ ಮೋಶೆ, ನನಗೆ ಕೇಳಿಸುವುದು ವಿಜಯ ಗೀತೆಯಲ್ಲ ಅದು ಅಪಜಯದ ಶೋಕ ಗೀತೆಯೂ ಅಲ್ಲ ಕೇಳಿಸುತ್ತಿದೆ ನನಗೆ ಸಂಗೀತ ಶ್ಲೋಕ.
- Verse 19: ಮೋಶೆ ಪಾಳೆಯದ ಹತ್ತಿರಕ್ಕೆ ಬಂದು ಆ ಹೋರಿಕರುವನ್ನೂ ಜನರ ಕುಣಿದಾಟವನ್ನೂ ಕಂಡಾಗ ಕಡುಕೋಪಗೊಂಡನು. ಕೈಯಲ್ಲಿದ್ದ ಶಿಲಾಶಾಸನಗಳನ್ನು ಬೆಟ್ಟದ ಬುಡಕ್ಕೆ ಬಿಸಾಡಿ ಒಡೆದುಹಾಕಿಬಿಟ್ಟನು.
- Verse 20: ಜನರು ಮಾಡಿಸಿಕೊಂಡಿದ್ದ ಆ ಹೋರಿಕರುವನ್ನು ತೆಗೆದು ಬೆಂಕಿಯಿಂದ ಸುಟ್ಟು, ಅರೆದು, ಪುಡಿಪುಡಿಮಾಡಿ, ನೀರಿನಲ್ಲಿ ಕಲಸಿ, ಇಸ್ರಯೇಲರಿಗೆ ಆ ನೀರನ್ನು ಕುಡಿಸಿದನು.
- Verse 21: ಅಲ್ಲದೆ, ಆರೋನನನ್ನು ಉದ್ದೇಶಿಸಿ, “ನೀನು ಈ ಜನರಿಂದ ಮಹಾಪಾಪವನ್ನು ಮಾಡಿಸಿರುವೆ. ಹೀಗೆ ಮಾಡಿಸಲು ಇವರು ನಿನಗೇನು ಮಾಡಿದರು,” ಎಂದು ವಿಚಾರಿಸಿದನು. ಅದಕ್ಕೆ ಆರೋನನು,
- Verse 22: ಒಡೆಯಾ, ಕೋಪಗೊಳ್ಳಬೇಡಿ. ಈ ಜನರು ಎಂಥ ಹಟಮಾರಿಗಳೆಂದು ನೀವೇ ಬಲ್ಲಿರಿ.
- Verse 23: ಅವರು ನನ್ನ ಬಳಿಗೆ ಬಂದು, “ನಮ್ಮನ್ನು ಮುನ್ನಡೆಸಿಕೊಂಡು ಹೋಗಲು ನಮಗೊಬ್ಬ ದೇವರನ್ನು ಮಾಡಿಸಿಕೊಡು. ಈಜಿಪ್ಟಿನಿಂದ ನಮ್ಮನ್ನು ಕರೆದುಕೊಂಡು ಬಂದ ಮೋಶೆ ಏನಾದನೋ ಗೊತ್ತಿಲ್ಲ,” ಎಂದರು
- Verse 24: ಅದಕ್ಕೆ ನಾನು, “ಯಾರಲ್ಲಿ ಚಿನ್ನದ ಒಡವೆ ಇದೆಯೋ ಅವರೆಲ್ಲರು ಅದನ್ನು ತೆಗೆದು ನನಗೆ ಕೊಡಬೇಕು,” ಎಂದೆ. ಅವರು ಹಾಗೆಯೇ ಕೊಟ್ಟರು. ನಾನು ಆ ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಈ ಹೋರಿಕರು ಹೊರಗೆ ಬಂತು,” ಎಂದನು.
- Verse 25: ಇಸ್ರಯೇಲರು ಅಂಕೆಮೀರಿ ಇಷ್ಟಬಂದಂತೆ ನಡೆದುಕೊಳ್ಳಲು ಆರೋನನು ಬಿಟ್ಟುಬಿಟ್ಟಿದ್ದನು. ಈ ಕಾರಣ ಅವರು ವಿರೋಧಿಗಳ ಅಪಹಾಸ್ಯಕ್ಕೆ ಗುರಿಯಾಗಿದ್ದರು.
- Verse 26: ಹೀಗೆ ಅವರು ಕ್ರಮವಿಲ್ಲದೆ ಸ್ವೇಚ್ಛಾಚಾರದಿಂದ ನಡೆದುಕೊಳ್ಳುವುದನ್ನು ಮೋಶೆ ನೋಡಿ, ಪಾಳೆಯದ ಹೊರಬಾಗಿಲಲ್ಲಿ ನಿಂತುಕೊಂಡು, “ಸರ್ವೇಶ್ವರನ ಪರವಾಗಿರುವವರೆಲ್ಲರು ನನ್ನ ಬಳಿಗೆ ಬರಬೇಕು,” ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರು ಅವನ ಬಳಿಗೆ ಕೂಡಿಬಂದರು.
- Verse 27: ಮೋಶೆ ಅವರಿಗೆ, “ಇಸ್ರಯೇಲರ ದೇವರಾದ ಸರ್ವೇಶ್ವರನ ಅಪ್ಪಣೆ ಇದು: ನಿಮ್ಮಲ್ಲಿ ಪ್ರತಿಯೊಬ್ಬನು ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳೆಯದ ನಡುವೆ ಒಂದು ಬಾಗಿಲಿನಿಂದ ಇನ್ನೊಂದು ಬಾಗಿಲಿನವರೆಗೆ ಹೋಗುತ್ತಾ ಬರುತ್ತಾ ಅಣ್ಣ-ತಮ್ಮ, ಗೆಳೆಯ-ನೆರೆಯವ ಎಂದು ಲಕ್ಷಿಸದೆ ಈ ಜನರನ್ನು ಸಂಹರಿಸಬೇಕು,” ಎಂದು ಹೇಳಿದನು.
- Verse 28: ಲೇವಿಯ ಕುಲದವರು ಮೋಶೆಯ ಆಜ್ಞೆಯ ಮೇರೆಗೆ ಮಾಡಿದರು. ಆ ದಿನ ಹೆಚ್ಚು ಕಡಿಮೆ ಮೂರು ಸಾವಿರ ಮಂದಿ ಹತರಾದರು.
- Verse 29: ಮೋಶೆ ಆ ಲೇವಿಯರಿಗೆ, “ಈದಿನ ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ ಅಣ್ಣತಮ್ಮಂದಿರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ ನಿಮ್ಮನ್ನೇ ಸರ್ವೇಶ್ವರನ ಸೇವೆಗೆ ಪ್ರತಿಷ್ಠಾಪಿಸಿಕೊಂಡಿದ್ದೀರಿ. ಆದ್ದರಿಂದ ಅವರು ಈ ದಿನ ನಿಮ್ಮನ್ನು ಆಶೀರ್ವದಿಸಿರುವರು,” ಎಂದು ಹೇಳಿದನು.
- Verse 30: ಮರುದಿನ ಮೋಶೆ ಜನರಿಗೆ, “ನೀವು ಮಹಾಪಾಪವನ್ನು ಮಾಡಿದಿರಿ. ಆದರೂ ನಾನು ಬೆಟ್ಟಹತ್ತಿ ಸರ್ವೇಶ್ವರನ ಸನ್ನಿಧಿಗೆ ಹೋಗುವೆನು. ಬಹುಶಃ ನೀವು ಮಾಡಿದ ಪಾಪಕೃತ್ಯಕ್ಕೆ ಕ್ಷಮಾಪಣೆ ನನ್ನ ಮುಖಾಂತರ ದೊರಕೀತು,” ಎಂದು ಹೇಳಿದನು.
- Verse 31: ಅಂತೆಯೇ ಮೋಶೆ ಸರ್ವೇಶ್ವರನ ಬಳಿಗೆ ಮರಳಿ ಬಂದು, “ಅಕಟಕಟಾ, ಚಿನ್ನದಿಂದ ದೇವರನ್ನು ಮಾಡಿಕೊಂಡು ಈ ಜನರು ಮಹಾಪಾಪವನ್ನು ಕಟ್ಟಿಕೊಂಡಿದ್ದಾರೆ! ಆದರೂ ಕರುಣೆಯಿಟ್ಟು ಅವರ ಪಾಪವನ್ನು ಕ್ಷಮಿಸಿಬಿಡಿ.
- Verse 32: ಇಲ್ಲವಾದರೆ ನೀವು ಬರೆದಿರುವ (ಜೀವಿತರ) ಪಟ್ಟಿಯಿಂದ ನನ್ನ ಹೆಸರನ್ನು ಅಳಿಸಿಬಿಡಿಯೆಂದು ಕೇಳಿಕೊಳ್ಳುತ್ತೇನೆ,” ಎಂದು ಪ್ರಾರ್ಥಿಸಿದನು.
- Verse 33: ಅದಕ್ಕೆ ಸರ್ವೇಶ್ವರ, “ಯಾರ್ಯಾರು ನನ್ನ ಮಾತನ್ನು ಮೀರಿ ಪಾಪಮಾಡಿದ್ದಾರೋ ಅವರ ಹೆಸರುಗಳನ್ನೇ ನನ್ನಲ್ಲಿರುವ ಪಟ್ಟಿಯಿಂದ ಅಳಿಸಿಬಿಡುತ್ತೇನೆ.
- Verse 34: ನೀನಾದರೋ ಇಲ್ಲಿಂದ ಹೊರಟು ನಾನು ನಿನಗೆ ಹೇಳಿದ ನಾಡಿಗೆ ಈ ಜನರನ್ನು ನಡೆಸಿಕೊಂಡು ಹೋಗು. ನನ್ನ ದೂತನು ನಿನ್ನ ಮುಂದುಗಡೆ ನಡೆಯುವನು. ಆದರೂ ನಾನು ಅವರನ್ನು ದಂಡಿಸುವ ದಿನದಂದು ಅವರ ಪಾಪಕ್ಕೆ ತಕ್ಕಂತೆ ದಂಡಿಸುವೆನು.
- Verse 35: ಇಸ್ರಯೇಲರು ಆರೋನನ ಕೈಯಿಂದ ಆ ಹೋರಿಕರುವನ್ನು ಮಾಡಿಸಿದ್ದರಿಂದ ಸರ್ವೇಶ್ವರ ಅವರನ್ನು ದಂಡಿಸಿದರು.