पवित्र बाइबिल
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
16ನೇ ಅಧ್ಯಾಯ
- Verse 1: ಲೇವಿಯ ಮರಿಮಗನೂ ಕೆಹಾತನ ಮೊಮ್ಮಗನೂ ಇಚ್ಚಾರನ ಮಗನೂ ಆದ ಕೋರಹ ಮತ್ತು ರೂಬೇನ್ ಕುಲದವರಲ್ಲಿ ಎಲೀಯಾಬನ ಮಕ್ಕಳಾದ ದಾತಾನ್ ಹಾಗೂ ಅಬೀರಾಮ್ ಮತ್ತು ಪೆಲೆತನ ಮಗ ಓನ್ - ಇವರು ಮೋಶೆಗೆ ವಿರುದ್ಧ ಪ್ರತಿಭಟಿಸಿದರು.
- Verse 2: ಇವರ ಸಮೇತ ಸಮುದಾಯದವರಲ್ಲಿ ಮುಖ್ಯಸ್ಥರೂ ಸಲಹೆಗಾರರೂ ಹೆಸರಾಂತ ವ್ಯಕ್ತಿಗಳೂ ಆಗಿದ್ದ 250 ಮಂದಿ ಇಸ್ರಯೇಲರು ಕೂಡ ದಂಗೆಯೆದ್ದರು.
- Verse 3: ಇವರೆಲ್ಲರೂ ಜೊತೆಗೂಡಿ ಮೋಶೆ ಮತ್ತು ಆರೋನರ ಬಳಿಗೆ ಬಂದು, “ನಿಮ್ಮ ವರ್ತನೆ ಅಧಿಕವಾಯಿತು. ಈ ಸಮುದಾಯದಲ್ಲಿ ಪ್ರತಿಯೊಬ್ಬನೂ ಪ್ರತಿಷ್ಠಿತನೇ. ಸರ್ವೇಶ್ವರ ಇವರೆಲ್ಲರಲ್ಲಿ ವಾಸವಾಗಿದ್ದಾರಲ್ಲವೇ? ಹೀಗಿರಲಾಗಿ ಸರ್ವೇಶ್ವರನ ಸಮುದಾಯದವರಿಗಿಂತ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವುದೇಕೆ?” ಎಂದು ವಾದಿಸಿದರು.
- Verse 4: ಈ ಮಾತುಗಳನ್ನು ಕೇಳಿದ್ದೇ ಮೋಶೆ ನೆಲದ ಮೇಲೆ ಬೋರಲಾಗಿ ಬಿದ್ದನು.
- Verse 5: ಕೋರಹನಿಗೂ ಅವನ ಪಂಗಡದವರೆಲ್ಲರಿಗೂ ಹೀಗೆಂದನು: “ಸರ್ವೇಶ್ವರ ತನ್ನವರು ಯಾರೆಂದು ನಾಳೆ ತಿಳಿಸುವರು. ಯಾರನ್ನು ಪ್ರತಿಷ್ಠಿಸಿದ್ದಾರೋ ಹಾಗೂ ತಾವೇ ಆರಿಸಿಕೊಂಡಿದ್ದಾರೋ ಅವರನ್ನು ಮಾತ್ರ ತಮ್ಮ ಹತ್ತಿರಕ್ಕೆ ಬರಗೊಳಿಸುವರು.
- Verse 6: ನೀವು ಮಾಡಬೇಕಾದುದಿಷ್ಟು - ಕೋರಹನು ಮತ್ತು ಅವನ ಪಂಗಡದವರಾದ ನೀವೆಲ್ಲರೂ ಧೂಪಾರತಿಗಳನ್ನು ತಂದು ಅವುಗಳಲ್ಲಿ ಕೆಂಡವನ್ನಿಟ್ಟು ನಾಳೆ ಸರ್ವೇಶ್ವರನ ಸನ್ನಿಧಿಯಲ್ಲಿ ಧೂಪ ಹಾಕಬೇಕು.
- Verse 7: ಆಗ ಸರ್ವೇಶ್ವರ ಯಾರನ್ನು ಮೆಚ್ಚುತ್ತಾರೋ ಅವನೇ ದೇವರಿಗೆ ಪ್ರತಿಷ್ಠಿತನೆಂದು ತಿಳಿದುಕೊಳ್ಳುವಿರಿ. ಲೇವಿಯರೇ, ಅಧಿಕವಾಗಿರುವುದು ನಿಮ್ಮ ವರ್ತನೆಯೆ!”
- Verse 8: ಮೋಶೆ ಕೋರಹನಿಗೆ - “ಲೇವಿಯರೇ ಕೇಳಿ:
- Verse 9: ಇಸ್ರಯೇಲರ ದೇವರು ತಮ್ಮ ಸಮೂದಾಯದವರಾದ ನಿಮ್ಮನ್ನು ಪ್ರತ್ಯೇಕಿಸಿ ತಮ್ಮ ಗುಡಾರದ ಪರಿಚರ್ಯವನ್ನು ಮಾಡಲು ಹಾಗೂ ಸರ್ವಸಮುದಾಯದ ಸೇವೆಯನ್ನು ಕೈಗೊಳ್ಳಲು ತಮ್ಮ ಬಳಿಯಲ್ಲೇ ಇಟ್ಟುಕೊಂಡರು.
- Verse 10: ಇದು ಕೋರಹನಾದ ನಿನಗೂ ನಿನ್ನ ಸ್ವಕುಲದವರಾದ ಲೇವಿಯರಿಗೂ ಕೇವಲ ಅಲ್ಪಕಾರ್ಯವೆಂದು ತೋರಿತೇ? ಯಾಜಕ ಪದವಿ ನಿಮಗಾಗಬೇಕೆಂದು ಕೋರುತ್ತೀರೋ?
- Verse 11: ಆರೋನನಂಥವನಿಗೇ ವಿರೋಧವಾಗಿ ಗೊಣಗುವವರಾದ್ದರಿಂದ ನೀನು ಮತ್ತು ನಿನ್ನ ಪಂಗಡದವರೆಲ್ಲರು ಸರ್ವೇಶ್ವರನಿಗೆ ವಿರುದ್ಧ ಕೂಡಿಕೊಂಡವರಾದಿರಿ!” ಎಂದನು.
- Verse 12: ಮೋಶೆ ಎಲೀಯಾಬನ ಮಕ್ಕಳಾದ ದಾತಾನ್ ಮತ್ತು ಅಬಿರಾಮರನ್ನು ಬರುವಂತೆ ಹೇಳಿಕಳಿಸಿದನು.
- Verse 13: ಅವರು ಅವನಿಗೆ, “ನಾವು ಬರುವುದಿಲ್ಲ, ಹಾಲೂಜೇನೂ ಹರಿಯುವ ದೇಶದಿಂದ ನಮ್ಮನ್ನು ಕರೆತಂದು ಈ ಮರಳುಗಾಡಿನಲ್ಲಿ ಸಾಯಿಸುತ್ತಿರುವೆ. ಇದು ಅಲ್ಪಕಾರ್ಯವೆಂದು ಎಣಿಸುತ್ತೀಯೋ? ನಮ್ಮ ಮೇಲೆ ದೊರೆತನ ಮಾಡಬೇಕೆಂದು ಕೋರುತ್ತಿರುವೆಯೋ?”
- Verse 14: ಅಷ್ಟುಮಾತ್ರವಲ್ಲ, ಹಾಲೂಜೇನೂ ಹರಿಯುವ ದೇಶಕ್ಕೆ ನಮ್ಮನ್ನು ಸೇರಿಸಲೇಯಿಲ್ಲ; ಹೊಲ ಹಾಗು ದ್ರಾಕ್ಷೆತೋಟಗಳನ್ನು ನಮ್ಮ ಸ್ವಾಧೀನಕ್ಕೆ ಕೊಟ್ಟೂ ಇಲ್ಲ. ಈ ಜನರ ಕಣ್ಣಿಗೆ ಮಣ್ಣುಹಾಕಬೇಕೆಂದಿರುವೆಯಾ? ನಾವು ಬರುವುದಿಲ್ಲ,” ಎಂದು ಹೇಳಿದರು.
- Verse 15: ಅದಕ್ಕೆ ಮೋಶೆ ಬಹುಕೋಪಗೊಂಡನು. ಸರ್ವೇಶ್ವರನಿಗೆ, “ತಾವು ಇವರ ನೈವೇದ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡಿ. ನಾನು ಇವರಿಂದ ಒಂದು ಕತ್ತೆಯನ್ನೂ ಕೂಡ ತೆಗೆದುಕೊಂಡವನಲ್ಲ. ಅವರಲ್ಲಿ ಒಬ್ಬನಿಗಾದರೂ ಹಾನಿಮಾಡಿದವನಲ್ಲ,” ಎಂದು ಮನವಿಮಾಡಿದನು.
- Verse 16: ಮೋಶೆ ಕೋರಹನಿಗೆ, “ನೀನೂ ನಿನ್ನ ಪಂಗಡದವರು ಮತ್ತು ಆರೋನನು ನಾಳೆ ಸರ್ವೇಶ್ವರನ ಸನ್ನಿಧಿಗೆ ಬರಬೇಕು.
- Verse 17: ಪಂಗಡದ ಪ್ರತಿಯೊಬ್ಬನು ತನ್ನ ತನ್ನ ಧೂಪಾರತಿಯನ್ನು ಅಂದರೆ ಒಟ್ಟು 250 ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಸರ್ವೇಶ್ವರನ ಸನ್ನಿಧಿಗೆ ಬರಬೇಕು. ನೀನು ಮತ್ತು ಆರೋನನು ಕೂಡ ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು,” ಎಂದು ಹೇಳಿದನು.
- Verse 18: ಅದರಂತೆ ಅವರೆಲ್ಲರೂ ತಮ್ಮ ತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಬಂದು, ಅವುಗಳಲ್ಲಿ ಕೆಂಡವನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಮತ್ತು ಆರೋನರ ಜೊತೆ ದೇವದರ್ಶನದ ಗುಡಾರದ ಬಾಗಿಲಲ್ಲಿ ನಿಂತುಕೊಂಡರು.
- Verse 19: ಬಳಿಕ ಕೋರಹನು ಸಮುದಾಯದವರೆಲ್ಲರನ್ನು ತಮಗೆದುರಾಗಿ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಬರಮಾಡಿದನು. ಆಗ ಸರ್ವೇಶ್ವರನ ತೇಜಸ್ಸು ಸಮುದಾಯದವರೆಲ್ಲರಿಗೆ ಹೊಳೆಯಿತು.
- Verse 20: ಮೋಶೆ - ಆರೋನರಿಗೆ ಸರ್ವೇಶ್ವರ,
- Verse 21: “ನೀವು ಈ ಸಮುದಾಯದವರಿಂದ ಪ್ರತ್ಯೇಕವಾಗಿ ನಿಲ್ಲಿ; ನಾನು ಇವರನ್ನು ಒಂದು ಕ್ಷಣಮಾತ್ರದಲ್ಲಿ ಭಸ್ಮ ಮಾಡಿಬಿಡುತ್ತೇನೆ,” ಎಂದರು.
- Verse 22: ಮೋಶೆ ಮತ್ತು ಆರೋನರು ಅಡ್ಡಬಿದ್ದು, “ದೇವರೇ, ಸರ್ವ ದೇಹಾತ್ಮಗಳಿಗೆ ದೇವರಾಗಿರುವವರೇ, ಒಬ್ಬನೇ ಒಬ್ಬನು ಪಾಪ ಮಾಡಿರುವಲ್ಲಿ ನೀವು ಸಮುದಾಯದ ಎಲ್ಲರ ಮೇಲೆ ಕೋಪಗೊಳ್ಳಬಹುದೆ?” ಎಂದು ಭಿನ್ನವಿಸಿದರು.
- Verse 23: ಆಗ ಸರ್ವೇಶ್ವರ ಮೋಶೆಗೆ,
- Verse 24: “ಇಸ್ರಯೇಲ್ ಸಮಾಜದವರು ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದ ಸುತ್ತಲಿರದೆ ದೂರವಿರಬೇಕೆಂದು ಅವರಿಗೆ ಆಜ್ಞಾಪಿಸು,” ಎಂದರು.
- Verse 25: ಆಗ ಮೋಶೆ ಎದ್ದು ದಾತಾನ್ - ಅಬೀರಾಮರ ಬಳಿಗೆ ಹೋದನು. ಇಸ್ರಯೇಲರ ಹಿರಿಯರು ಅವನ ಹಿಂದೆ ಹೋದರು.
- Verse 26: ಇಸ್ರಯೇಲ್ ಸಮಾಜದವರಿಗೆ ಅವನು, “ಈ ದುಷ್ಟರ ಡೇರೆಗಳ ಬಳಿಯಿರದೆ ದೂರಹೋಗಿ. ಇವರ ಸೊತ್ತಿನಲ್ಲಿ ಯಾವುದನ್ನೂ ಮುಟ್ಟಬೇಡಿ. ಇವರ ದೋಷಗಳಿಗೆ ಬರಲಿರುವ ಶಿಕ್ಷೆ ನಿಮ್ಮನ್ನು ಕೊಚ್ಚಿಕೊಂಡು ಹೋದೀತು,” ಎಂದು ಎಚ್ಚರಿಸಿದನು.
- Verse 27: ಆದಕಾರಣ ಅವರೆಲ್ಲ ಕೋರಹ, ದಾತಾನ್ ಮತ್ತು ಅಬೀರಾಮರ ಗುಡಾರದ ಸುತ್ತಲಿರದೆ ಬೇರೆಹೋದರು. ದಾತಾನ್, ಅಬೀರಾಮ ಮತ್ತು ಅವರ ಮಡದಿ ಮಕ್ಕಳು, ಬಂಧುಬಳಗದವರೂ ಹೊರಗೆ ಬಂದು ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ನಿಂತುಕೊಂಡರು.
- Verse 28: ಮೋಶೆ ಜನರಿಗೆ, “ಈ ಕಾರ್ಯಗಳೆಲ್ಲ ನನ್ನ ಸ್ವಂತ ಆಲೋಚನೆಯಿಂದ ಆಗಲಿಲ್ಲ, ಸರ್ವೇಶ್ವರನೇ ಇವುಗಳನ್ನು ನಡೆಸುವುದಕ್ಕೆ ನನ್ನನ್ನು ಕಳಿಸಿದ್ದಾರೆಂದು ನೀವೇ ತಿಳಿದುಕೊಳ್ಳಬಹುದು.
- Verse 29: ಅದು ಹೇಗೆಂದರೆ - ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ, ಅಥವಾ ಎಲ್ಲರಿಗೂ ಸಂಭವಿಸುವ ಗತಿ ಇವರಿಗೆ ಒದಗಿದರೆ ಸರ್ವೇಶ್ವರ ನನ್ನನ್ನು ಕಳಿಸಲಿಲ್ಲವೆಂದು ತಿಳಿದುಕೊಳ್ಳಬೇಕು.
- Verse 30: ಬದಲಿಗೆ ಸರ್ವೇಶ್ವರ ಇವರಿಗಾಗಿ ಆಶ್ಚರ್ಯಕರವಾದ ಶಿಕ್ಷೆಯನ್ನು ಕಲ್ಪಿಸಿ ಅಂದರೆ ಭೂಮಿ ಬಾಯ್ದೆರೆದು ಇವರನ್ನು ಹಾಗೂ ಇವರಿಗಿರುವ ಸರ್ವಸ್ವವನ್ನು ನುಂಗಿಬಿಟ್ಟರೆ, ಇವರೆಲ್ಲರು ಸಜೀವಿಗಳಾಗಿ ಪಾತಾಳಕ್ಕೆ ಹೋಗಿಬಿಟ್ಟರೆ, ಇವರು ಸರ್ವೇಶ್ವರನನ್ನು ಉಲ್ಲಂಘಿಸಿದವರೆಂದು ನೀವು ತಿಳಿದುಕೊಳ್ಳಬೇಕು,” ಎಂದು ಹೇಳಿದನು.
- Verse 31: ಮೋಶೆ ಈ ಮಾತುಗಳನ್ನು ಹೇಳಿ ಮುಗಿಸಿದ ಕೂಡಲೆ ಆ ಜನರ ಕೆಳಗಿದ್ದ ನೆಲವು ಸೀಳಿತು.
- Verse 32: ಭೂಮಿ ಬಾಯ್ದೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸೇರಿದ ವ್ಯಕ್ತಿಗಳೆಲ್ಲರನ್ನೂ ಅವರ ಸರ್ವಸ್ವವನ್ನೂ ನುಂಗಿಬಿಟ್ಟಿತು.
- Verse 33: ಅವರು ಸಜೀವರಾಗಿ ತಮ್ಮ ಸರ್ವಸ್ವ ಸಹಿತವಾಗಿ ಪಾತಾಳಕ್ಕೆ ಇಳಿದುಬಿಟ್ಟರು. ಭೂಮಿ ಅವರನ್ನು ಮುಚ್ಚಿಕೊಂಡಿತು.
- Verse 34: ಹೀಗೆ ಅವರು ಸಮುದಾಯದಿಂದ ನಾಶವಾದರು. ಅವರ ಸುತ್ತಲಿದ್ದ ಇಸ್ರಯೇಲರೆಲ್ಲರೂ ಸಾಯುವವರ ಹಾಹಾಕಾರವನ್ನು ಕೇಳಿ, “ಭೂಮಿ ನಮ್ಮನ್ನು ನುಂಗದಿರಲಿ” ಎಂದುಕೊಂಡು ಓಡಿಹೋದರು.
- Verse 35: ಸರ್ವೇಶ್ವರನ ಬಳಿಯಿಂದ ಬೆಂಕಿ ಹೊರಟು ಧೂಪಾರತಿಯನ್ನು ಅರ್ಪಿಸುತ್ತಿದ್ದ ಆ 250 ಮಂದಿಯನ್ನು ಭಸ್ಮಮಾಡಿತು.
- Verse 36: ಸರ್ವೇಶ್ವರ ಸ್ವಾಮಿ ಮೋಶೆಗೆ,
- Verse 37: “ಸುಟ್ಟುಹೋದವರ ನಡುವೆಯಿಂದ ಆ ಧೂಪಾರತಿಗಳನ್ನು ಎತ್ತಬೇಕೆಂದು ಮಹಾಯಾಜಕ ಆರೋನನ ಮಗ ಎಲ್ಲಾಜಾರನಿಗೆ ಆಜ್ಞಾಪಿಸು; ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರಕ್ಕೆ ಚೆಲ್ಲು.
- Verse 38: ಆ ಧೂಪಾರತಿಗಳು ಸರ್ವೇಶ್ವರನ ಸನ್ನಿಧಿಗೆ ತರಲಾದವುಗಳು. ಈ ಕಾರಣ ಪವಿತ್ರವಾದುವು. ಆದುದರಿಂದ ಅವುಗಳನ್ನು ತಗಡುಗಳಾಗಿ ತಟ್ಟಿ ಬಲಿಪೀಠಕ್ಕೆ ಮುಚ್ಚಳವನ್ನಾಗಿ ಮಾಡಿಸು. ಹೀಗೆ ಅವು ಇಸ್ರಯೇಲರಿಗೆ ನೆನಪು ಹುಟ್ಟಿಸುವ ಗುರುತುಗಳಾಗುವುವು,” ಎಂದು ಹೇಳಿದರು.
- Verse 39: ಮೋಶೆಯ ಮುಖಾಂತರ ಸರ್ವೇಶ್ವರ ಹೇಳಿದ ಅಪ್ಪಣೆಯ ಮೇರೆಗೆ ಯಾಜಕ ಎಲ್ಲಾಜಾರನು, ಸುಟ್ಟುಹೋದವರು ತಂದಿದ್ದ ಆ ಕಂಚಿನ ಧೂಪಾರತಿಗಳನ್ನು ತಗಡುಗಳನ್ನಾಗಿ ತಟ್ಟಿಸಿ ಬಲಿಪೀಠಕ್ಕೆ ಮುಚ್ಚಳವನ್ನು ಮಾಡಿಸಿದನು.
- Verse 40: ಆರೋನನ ಸಂತತಿಯವರಲ್ಲದೆ ಇತರರು ಸರ್ವೇಶ್ವರನ ಸನ್ನಿಧಿಗೆ ಬಂದು ಧೂಪವನ್ನು ಅರ್ಪಿಸಬಾರದು; ಅರ್ಪಿಸಿದರೆ ಕೋರಹನಿಗೂ ಅವನ ಪಂಗಡದವರಿಗೂ ಆದ ಗತಿಗೆ ಗುರಿಯಾಗುವರು ಎಂದು ಇಸ್ರಯೇಲರಿಗೆ ಎಚ್ಚರಿಕೆ ನೀಡುವ ಚಿನ್ಹೆಯಾಯಿತು.
- Verse 41: ಆದರೂ ಇಸ್ರಯೇಲ್ ಸಮುದಾಯದವರು ಮೋಶೆ ಮತ್ತು ಆರೋನರ ಮೇಲೆ ಗೊಣಗುಟ್ಟ ತೊಡಗಿದರು. ‘ಸರ್ವೇಶ್ವರನ ಜನರನ್ನು ಸಾಯಸಿದವರು ನೀವೇ’ ಎಂದು ಹೇಳುವವರಾದರು.
- Verse 42: ಸಮುದಾಯದವರೆಲ್ಲರೂ ಹೀಗೆ ಮೋಶೆ ಮತ್ತು ಆರೋನರ ವಿರುದ್ಧ ಪ್ರತಿಭಟಿಸಲು ಸಭೆ ಸೇರಿದರು. ಅವರು ದೇವದರ್ಶನದ ಗುಡಾರದತ್ತ ನೋಡಿದಾಗ, ಮೇಘವೊಂದು ಅದನ್ನು ಆವರಿಸಿತು ಮತ್ತು ಸರ್ವೇಶ್ವರನ ತೇಜಸ್ಸು ಹೊಳೆಯಿತು.
- Verse 43: ಮೋಶೆ - ಆರೋನರು ದೇವದರ್ಶನದ ಗುಡಾರದ ಮುಂಭಾಗಕ್ಕೆ ಬಂದರು.
- Verse 44: ಆಗ ಸರ್ವೇಶ್ವರ ಮೋಶೆಗೆ: “ನೀವಿಬ್ಬರು ಸಮುದಾಯದವರೊಂದಿಗೆ ಸೇರದೆ ಬೇರೆ ನಿಲ್ಲಬೇಕು. ಒಂದೇ ಕ್ಷಣದಲ್ಲಿ ನಾನು ಅವರನ್ನು ಭಸ್ಮ ಮಾಡಿಬಿಡುತ್ತೇನೆ,” ಎಂದರು. ಆಗ ಮೋಶೆ ಆರೋನರು ಸಾಷ್ಠಾಂಗವೆರಗಿದರು.
- Verse 45: ಆಗ ಸರ್ವೇಶ್ವರ ಮೋಶೆಗೆ: “ನೀವಿಬ್ಬರು ಸಮುದಾಯದವರೊಂದಿಗೆ ಸೇರದೆ ಬೇರೆ ನಿಲ್ಲಬೇಕು. ಒಂದೇ ಕ್ಷಣದಲ್ಲಿ ನಾನು ಅವರನ್ನು ಭಸ್ಮ ಮಾಡಿಬಿಡುತ್ತೇನೆ,” ಎಂದರು. ಆಗ ಮೋಶೆ ಆರೋನರು ಸಾಷ್ಠಾಂಗವೆರಗಿದರು.
- Verse 46: ಮೋಶೆ, ಆರೋನನನ್ನು ಉದ್ದೇಶಿಸಿ, “ಸರ್ವೇಶ್ವರನಿಗೆ ಕೋಪವುಂಟಾಗಿದೆ: ಈ ಜನರೊಳಗೆ ಘೋರ ವ್ಯಾಧಿಯೊಂದು ಪ್ರಾರಂಭವಾಗಿಬಿಟ್ಟಿದೆ. ನೀನು ಧೂಪಾರತಿಯನ್ನು ತೆಗೆದುಕೊಂಡು ಅದರಲ್ಲಿ ಬಲಿಪೀಠದಿಂದ ಕೆಂಡಗಳನ್ನು ಇಟ್ಟು ಧೂಪ ಹಾಕಿ ಸಮುದಾಯದವರ ಬಳಿಗೆ ಬೇಗ ಹೋಗು; ಅವರ ಪರವಾಗಿ ದೋಷಪರಿಹಾರವನ್ನು ಮಾಡು,” ಎಂದು ಹೇಳಿದನು.
- Verse 47: ಮೋಶೆ ಹೇಳಿದಂತೆಯೇ ಆರೋನನು ಧೂಪಾರತಿಯನ್ನು ತೆಗೆದುಕೊಂಡು ಸಮುದಾಯದವರ ಬಳಿಗೆ ಓಡಿಬಂದಾಗ ಆ ಘೋರವ್ಯಾಧಿ ಜನರಲ್ಲಿ ಹರಡಿಕೊಳ್ಳುತ್ತಲಿತ್ತು. ಅವನು ಧೂಪಹಾಕಿ ಆ ಜನರ ಪರವಾಗಿ ದೋಷಪರಿಹಾರ ಮಾಡಿದನು;
- Verse 48: ಸತ್ತವರಿಗೂ ಹಾಗೂ ಬದುಕುವವರಿಗೂ ನಡುವೆ ಅವನು ನಿಂತನು. ಆ ವಿಪತ್ತು ಶಮನವಾಯಿತು.
- Verse 49: ಕೋರಹನನ್ನು ಸೇರಿಕೊಂಡು ಸತ್ತವರಲ್ಲದೆ ಆ ವಿಪತ್ತಿನಿಂದಲೇ ಸತ್ತವರ ಸಂಖ್ಯೆ 14,700:
- Verse 50: ವಿಪತ್ತು ನಿಂತಮೇಲೆ ಆರೋನನು ದೇವದರ್ಶನದ ಗುಡಾರದ ಬಳಿಯಿದ್ದ ಮೋಶೆಯ ಬಳಿಗೆ ಹಿಂದಿರುಗಿದನು.