ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
18ನೇ ಅಧ್ಯಾಯ
- Verse 1: ಪ್ರಭುವೇ, ನೀನೆ ನನ್ನ ಬಲವು I ನನಗಿದೆ ನಿನ್ನಲೇ ಒಲವು II
- Verse 2: ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ I ಆತನೇ ನನ್ನ ದೇವ, ನನ್ನಾಶ್ರಯ ದುರ್ಗ I ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ II
- Verse 3: ಪ್ರಭು ಸ್ತುತ್ಯಾರ್ಹನು I ಶತ್ರುಗಳಿಂದ ಕಾಪಾಡುವನು, ನಾನವಗೆ ಮೊರೆಯಿಡಲು II
- Verse 4: ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು I ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು II
- Verse 5: ಆವರಿಸಿಕೊಂಡವು ಪಾತಾಳ ಪಾಶಗಳು I ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು II
- Verse 6: ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ I ಪ್ರಾರ್ಥನೆ ಮಾಡಿದೆ ಆ ನನ್ನ ದೇವನಲಿ I ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ II
- Verse 7: ಆಗ ಕಂಪಿಸಿತು ಭೂಮಿ ಗಡಗಡನೆ I ಕದಲಿದವು ಬೆಟ್ಟದ ಬುಡಗಳು ಮಿಲಮಿಲನೆ I ಏಕೆನೆ, ಸಿಟ್ಟೇರಿತ್ತು ಆತನಿಗೆ II
- Verse 8: ಹೊರಬಂದಿತು ಹೊಗೆ ಆತನ ಮೂಗಿಂದ I ಹೊರಟಿತು ಅಗ್ನಿಜ್ವಾಲೆ ಆತನ ಬಾಯಿಂದ I ಕಾದುಕೆಂಡವಾಗಿಸಿತದು ಎದುರಿಗೆ ಸಿಕ್ಕಿದ್ದನೆಲ್ಲ II
- Verse 9: ಆಕಾಶವನೆ ಬಾಗಿಸಿ ಆತನಿಳಿದು ಬರಲು I ಸೇರಿತು ಆತನ ಕಾಲಡಿ ಕಾರ್ಮುಗಿಲು II
- Verse 10: ಬಂದಿಳಿದನು ‘ಕೆರೂಬಿ’ ವಾಹನಾರೂಢನಾಗಿ I ಇಳಿದು ಬಂದನು ವಾಯುರೆಕ್ಕೆಗಳ ವೇಗದಲಿ II
- Verse 11: ಕತ್ತಲನು ಕವಿಸಿಕೊಂಡನು ಸುತ್ತಲು ಛತ್ರಾಂಬರದೊಳು I ಮರೆಯಾದನು ಜಲಮಯ ನೀಲಮೇಘಗಳ ಮಧ್ಯದೊಳು II
- Verse 12: ಹೊಳೆಯಿತು ಮಿಂಚು ಆತನ ತೇಜದ ಸನ್ನಿಧಿಯಿಂದ I ಸುರಿಯಿತು ಕಲ್ಮಳೆ, ಉರಿಗೆಂಡ ಕಾರ್ಮೋಡಗಳಿಂದ II
- Verse 13: ಗುಡುಗಿದನು ಸರ್ವೇಶ್ವರ ಗಗನಮಂಡಲದಿಂದ I ಮೊಳಗಿತು ವಾಣಿ ಆ ಪರಾತ್ಪರನ ವದನದಿಂದ I ಸುರಿಯಿತಿದೋ ಕಲ್ಮಳೆ, ಉರಿಗೆಂಡ ಮೇಲಿಂದ II
- Verse 14: ಚದರಿಸಿದನು ಶತ್ರುಗಳನು ಬಾಣಗಳನ್ನೆಸೆದು I ತಳಮಳಗೊಳಿಸಿದನವರನು ಸಿಡಿಲನು ಹೊಡೆದು II
- Verse 15: ಪ್ರಭು, ನಿನ್ನ ಗದರಿಕೆಯಿಂದ, ನಿನ್ನಾ ಶ್ವಾಸಭರದಿಂದ I ಕಾಣಿಸಿಕೊಂಡಿತು ಇಂಗಿಹೋದ ಸಮುದ್ರದ ತಳ I ತೋರಿಬಂದಿತು ಭೂಲೋಕದ ಅಸ್ತಿಭಾರ II
- Verse 16: ಮೇಲಣಲೋಕದಿಂದ ಹಿಡಿದುಕೊಂಡನು ಕೈಚಾಚಿ I ಸೆಳೆದುಕೊಂಡ ಆ ಜಲರಾಶಿಗಳಿಂದೆನ್ನನು ಕೈನೀಡಿ II
- Verse 17: ಬಿಡಿಸಿ ರಕ್ಷಿಸಿದನೆನ್ನಾ ಶತ್ರುಗಳಿಂದ I ನನಗಿಂತ ಪುಷ್ಟ, ಬಲಿಷ್ಟ ಹಗೆಗಳಿಂದ II
- Verse 18: ನನ್ನ ಮೇಲೆರಗಿದ್ದರೂ ಹಗೆಗಳು ದುರಂತಕಾಲದಲಿ I ನನಗುದ್ಧಾರಕನಾದ ಪ್ರಭು, ಆ ವಿಪತ್ಕಾಲದಲಿ II
- Verse 19: ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ I ಅಕ್ಕರೆಯಿಂದ ಮೆಚ್ಚಿ ರಕ್ಷಕನಾದ ನನಗೆ II
- Verse 20: ನನಗೊಳಿತು ಮಾಡಿದನಾತ ಸನ್ನಡತೆಗೆ ತಕ್ಕಂತೆ I ಪ್ರತಿಫಲವನಿತ್ತನು ನನ್ನ ಹಸ್ತಶುದ್ಧತೆಗೆ ತಕ್ಕಹಾಗೆ II
- Verse 21: ದೇವರನು ತೊರೆದು ದುರುಳನಾಗದೆ I ನಾನನುಸರಿಸಿದೆ ಪ್ರಭುವಿನ ಮಾರ್ಗವನೆ II
- Verse 22: ಆತನ ವಿಧಿನಿಯಮಗಳನು ಅಲಕ್ಷ್ಯಮಾಡದೆ I ಆತನಾಜ್ಞೆಗಳನ್ನಿಟ್ಟೆ ಸದಾ ನನ್ನ ಕಣ್ಗಳ ಮುಂದೆ II
- Verse 23: ಪಾಪದಲಿ ಬೀಳದೆ ನಡೆದೆ ಎಚ್ಚರಿಕೆಯಾಗಿ I ಆತನ ದೃಷ್ಟಿಯಲಿದ್ದೆ ನಿರ್ದೋಷಿಯಾಗಿ II
- Verse 24: ನಾ ನೀತಿವಂತ, ನಿರಪರಾಧಿಯೆಂದರಿತು I ನನಗಿತ್ತನಾ ಪ್ರಭು ತಕ್ಕ ಪ್ರತಿಫಲವನು II
- Verse 25: ಕರುಣೆಯುಳ್ಳವನಿಗಾತ ಕರುಣಾಮಯಿ I ದೋಷರಹಿತನಿಗಾತ ನಿರ್ದೋಷಿ II
- Verse 26: ಶುದ್ಧನಿಗಾತ ಪರಿಶುದ್ಧನು I ಮೂರ್ಖನಿಗಾತ ಮಹಾವಕ್ರನು II
- Verse 27: ದೀನದಲಿತರನು ಉದ್ಧರಿಸುವವನು ನೀನು I ತಗ್ಗಿಸಿಬಿಡುವೆಯಲ್ಲವೆ ಪ್ರಭು, ಸೊಕ್ಕಿನ ಲೋಚಕರನು? II
- Verse 28: ಹೊತ್ತಿಸುವೆ ಪ್ರಭು, ನೀನೆನ್ನ ಬಾಳಿನ ದೀಪವನು I ಕತ್ತಲನು ನೀಗಿಸಿ ಜ್ಯೋತಿ ಬೆಳಗುವನಾ ದೇವನು II
- Verse 29: ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನ ಮೇಲೆ ಬೀಳಬಲ್ಲೆ I ದೇವನೆರವಿದ್ದಲ್ಲಿ ನಾ ಕೋಟೆಕೊತ್ತಲನೆ ಹಾರಬಲ್ಲೆ II
- Verse 30: ದೇವರ ಮಾರ್ಗ ದೋಷರಹಿತ I ಸರ್ವೇಶ್ವರನ ವಚನ ಪರಮಪುನೀತ I ಆಶ್ರಿತರೆಲ್ಲರಿಗಾತ ರಕ್ಷಣಾಕವಚ II
- Verse 31: ಪ್ರಭುವಲ್ಲದೆ ಇನ್ನಾವ ದೇವರುಂಟು? I ನಮ್ಮ ದೇವನಲ್ಲದೆ ಉದ್ಧಾರಕನೆಲ್ಲುಂಟು? II
- Verse 32: ನಡುಕಟ್ಟಾಗಿ ನನಗೆ ಬಿಗಿದಿದ್ದಾನೆ ಶೌರ್ಯ I ಆತನಿಂದಲೇ ಸರಾಗ ನನ್ನ ಮಾರ್ಗ II
- Verse 33: ನನಗಿತ್ತನಾತ ಹುಲ್ಲೆಯಂತ ಮೊನೆಗಾಲು I ಎನ್ನ ಬಿಗಿ ನಿಲ್ಲಿಸಿದ ಮಲೆಗಳ ಮೇಲೂ II
- Verse 34: ಯುದ್ಧವಿದ್ಯೆಯ ಕಲಿತೆ ಆತನಿಂದಲೆ I ಎಂದೇ ನಾ ಕಂಚಿನ ಬಿಲ್ಲನೆ ಬಗ್ಗಿಸಬಲ್ಲೆ II
- Verse 35: ನನ್ನ ಪರ ನೀನೇ ಗುರಾಣಿ ಹಿಡಿದು ರಕ್ಷಿಸಿದೆ I ನಿನ್ನ ಬಲಗೈ ನನಗೆ ಆಧಾರವಾಗಿದೆ I ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ II
- Verse 36: ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ I ನನ್ನ ಹೆಜ್ಜೆಗಳು ಕದಲವು ಈ ನಿಮಿತ್ತ II
- Verse 37: ಹಿಡಿದುಕೊಳ್ವೆನು ಶತ್ರುಗಳನು ಬೆನ್ನಟ್ಟಿ I ಅವರನು ನಿರ್ಮೂಲ ಮಾಡದೆ ಬರೆನು ಹಿಂತಿರುಗಿ II
- Verse 38: ಅವರನು ಮತ್ತೆ ಏಳದಂತೆ ಹೊಡೆದೆ I ಅವರು ಕಾಲಿಗೆ ಬೀಳುವಂತೆ ಮಾಡಿದೆ II
- Verse 39: ನನಗಿತ್ತೆ ನೀ ಕದನಕ್ಕಾಗುವ ಶೌರ್ಯವೆಂಬ ನಡುಕಟ್ಟು I ತಗ್ಗಿಸಿದೆ ಎದುರಾಳಿಗಳನು ನನಗಧೀನ ಮಾಡಿಬಿಟ್ಟು II
- Verse 40: ಆ ಶತ್ರುಗಳೋಡಿದರು ನನಗೆ ಬೆಂಗೊಟ್ಟು I ಆ ಹಗೆಗಳನು ನಿರ್ಮೂಲ ಮಾಡಿದೆ ನಾ ಗುರಿಯಿಟ್ಟು II
- Verse 41: ಎಲ್ಲಿ ಯಾಚಿಸಿದರೂ ಅವರಿಗಿರಲಿಲ್ಲ ರಕ್ಷಕ I ಸರ್ವೇಶ್ವರನಿಗೆ ಮೊರೆಯಿಟ್ಟರು ದೊರಕಲಿಲ್ಲ ಉತ್ತರ II
- Verse 42: ಪುಡಿಪುಡಿ ಮಾಡಿದೆ ನಾನವರನು ಗಾಳಿಗೆ ತೂರುವ ಧೂಳಿನಂತೆ I ಎತ್ತೆಸೆದುಬಿಟ್ಟೆ ನಾನವರನು ಮೋರಿಯ ಕೆಸರಿನಂತೆ II
- Verse 43: ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ I ನನ್ನನುಳಿಸಿ ಜನಾಂಗಗಳಿಗೆ ಜನಪನಾಗಿಸಿದೆ I ನಾನರಿಯದ ಜನರನೂ ನನಗಧೀನರನ್ನಾಗಿಸಿದೆ II
- Verse 44: ದೇಶಾಂತರದವರೂ ಮುದುರಿಕೊಂಡರು ನನ್ನ ಮುಂದೆ I ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ ಮಾತ್ರಕೆ II
- Verse 45: ಎದೆಗುಂದಿದವರಾದರು ಆ ವಿದೇಶಿಯರು I ತಮ್ಮ ಕೋಟೆಯಿಂದ ನಡುಗುತ್ತಾ ಹೊರಬಂದರು II
- Verse 46: ಸರ್ವೇಶ್ವರನು ಚೈತನ್ಯಸ್ವರೂಪನು I ನನ್ನುದ್ಧಾರಕನಾದವಗೆ ಸ್ತುತಿಸ್ತೋತ್ರವು I ನನ್ನ ರಕ್ಷಿಸುವ ದೇವರಿಗೆ ಜಯಕಾರವು II
- Verse 47: ನನ್ನ ಶತ್ರುಗಳಿಗೆ ವಿಧಿಸುವನಾದೇವ ಪ್ರತಿದಂಡನೆ I ಜನಾಂಗಗಳನು ಅಧೀನಪಡಿಸುವನಾತ ನನಗೆ II
- Verse 48: ಶತ್ರುಗಳಿಂದ ನೀನೆನ್ನ ಮುಕ್ತಗೊಳಿಸಿದೆ I ಎದುರಾಳಿಗೆ ತಪ್ಪಿಸಿ ನನ್ನನ್ನುನ್ನತಿಗೇರಿಸಿದೆ I ಹಿಂಸಾತ್ಮಕರಿಂದ ನೀಯೆನ್ನ ಸಂರಕ್ಷಿಸಿದೆ II
- Verse 49: ಎಂತಲೆ, ಅನ್ಯಜನಗಳ ಮಧ್ಯೆ ನಿನ್ನ ಸ್ತುತಿಪೆನು I ನಿನ್ನ ನಾಮವನು ಸರ್ವೇಶ್ವರಾ, ಸಂಕೀರ್ತಿಪೆನು II
- Verse 50: ತಾನೇ ನೇಮಿಸಿದ ಅರಸನಿಗೆ I ಆತನೀವನು ವಿಶೇಷ ರಕ್ಷಣೆ II
- Verse 51: ಅನುಗ್ರಹಿಸುವನಾತ ಅನಂತಾನಂತ ಕೃಪೆ I ತಾನಭಿಷೇಕಿಸಿದ ದಾವೀದನಿಗೆ, ಆತನ ಸಂತತಿಗೆ II