ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
77ನೇ ಅಧ್ಯಾಯ
- Verse 1: ಮೊರೆಯಿಡುವೆನು, ಕೂಗಿ ಮೊರೆಯಿಡುವೆನು I ಸ್ವಾಮಿ ದೇವನು ನನಗೆ ಕಿವಿಗೊಡುವನು II
- Verse 2: ಸಂಕಟದ ವೇಳೆಯೊಳು ಸ್ವಾಮಿಯನು ನಾ ಕರೆದೆ I ಇರುಳೆಲ್ಲ ಆಯಾಸವರಿಯದೆ ಕೈಚಾಚಿದೆ I ಎನ್ನ ಮನಸ್ಸಿತ್ತು ದುಃಖಶಮನಗೊಳ್ಳದೆ II
- Verse 3: ದೇವರನು ಸ್ಮರಿಸಿ ನಿಟ್ಟುಸಿರಿಡುತಿಹೆನು I ಹಂಬಲಿಸಿ ಮನದಲೇ ನಾ ಮರುಗುತಿಹೆನು II
- Verse 4: ನಿದ್ರಿಸದಂತೆ ನೀನೆನ್ನ ಕಣ್ಗಳ ತೆರೆದಿರುವೆ I ನುಡಿಯಲಾಗದ ತೆರದಿ ನಾ ತಳಮಳಗೊಂಡಿರುವೆ II
- Verse 5: ನೆನಪಿಗೆ ತಂದುಕೊಂಡೆ ಹಳೆಯ ದಿನಗಳನು I ಸ್ಮರಿಸಿಕೊಂಡೆ ಉರುಳಿಹೋದ ವರುಷಗಳನು II
- Verse 6: ನಿನ್ನ ಧ್ಯಾನ ಬರುತ್ತದೆ ನೆನಪಿಗೆ ರಾತ್ರಿಯೊಳು I ಆಲೋಚನೆ ಸುಳಿಯುತ್ತದೆ ನನ್ನಾಂತರ್ಯದೊಳು I ಈ ತೆರನ ಪ್ರಶ್ನೆಯೇಳುತ್ತದೆನ್ನ ಮನದೊಳು : II
- Verse 7: ಕೈಬಿಟ್ಟುಬಿಡುವನೋ ಪ್ರಭು ಸದಾಕಾಲಕು? I ಕೃಪೆಯನು ತೋರನೋ ಮತ್ತೆಂದೆಂದಿಗೂ? II
- Verse 8: ಆತನಚಲ ಪ್ರೀತಿ ಇನ್ನು ಮಾಯವಾಯಿತೋ? I ಆತನ ವಾಗ್ದಾನ ತಲತಲಾಂತರಕು ಮುಗಿಯಿತೋ? II
- Verse 9: ಕರುಣೆ ತೋರಲು ದೇವನು ಮರೆತುಬಿಟ್ಟನೋ? I ಕರುಳಿಗೆ ಕೋಪದಿಂದ ಬರೆಹಾಕಿಕೊಂಡನೋ? II
- Verse 10: ಆಗ ನಾನು “ನೆನೆಯಲೀಪರಿ, ನನ್ನ ಚಪಲತೆಯೇ ಕಾರಣ I ಮಾಡುವೆನೀಗ ಪರಾತ್ಪರನಾ ಪವಾಡ ವರುಷಗಳ ಸ್ಮರಣ” II
- Verse 11: ವರ್ಣಿಸುವೆನು ಪ್ರಭುವಿನ ಮಹತ್ಕಾರ್ಯಗಳೆಲ್ಲವನು I ಸ್ಮರಿಸುವೆ ನೀನಾದಿಯಿಂದ ನಡೆಸಿದ ಅದ್ಭುತಗಳನು II
- Verse 12: ಧ್ಯಾನಿಸುವೆ ನಾನಿನ್ನ ಕಾರ್ಯಗಳನೆಲ್ಲ I ಮಾಡುವೆ ಮನನ ನಿನ್ನ ಪವಾಡಗಳನೆಲ್ಲ II
- Verse 13: ನಿನ್ನ ಮಾರ್ಗ ದೇವಾ, ಪರಿಶುದ್ಧವಾದುದಯ್ಯಾ I ನಮ್ಮ ದೇವರಂತಹ ಮಹಾ ದೇವರಾರಯ್ಯಾ? II
- Verse 14: ಅದ್ಭುತಗಳನು ನಡೆಸುವಂತಹ ದೇವ ನೀನೆಮಗೆ I ತೋರ್ಪಡಿಸಿದೆ ನಿನ್ನಾ ಪರಾಕ್ರಮವನು ಜನತೆಗೆ II
- Verse 15: ನಿನ್ನ ಭುಜಬಲದಿಂದ ಯಕೋಬ, ಜೋಸೆಫ್ ವಂಶಜರನು I ಉದ್ಧಾರ ಮಾಡಿದೆ ನಿನ್ನ ಪ್ರಜೆಗಳಾಗಿಹ ಆ ಜನರನು II
- Verse 16: ಜಲರಾಶಿಗಳು ದೇವಾ, ನಿನ್ನ ಕಂಡವು I ಕಾಣುತ್ತಲೇ ನಡುಗಿ ತಳಮಳಗೊಂಡವು I ತಳದವರೆಗೂ ಅಲ್ಲಕಲ್ಲೋಲವಾದವು II
- Verse 17: ಮಳೆಗರಿಯಿತಾ ಮೇಘಮಂಡಲವು I ಭೋರ್ಗರೆಯಿತಾಗ ಅಂತರಿಕ್ಷವು I ಮಿಂಚಿದವು ಎಲ್ಲೆಡೆ ನಿನ್ನಂಬುಗಳು II
- Verse 18: ಮೊಳಗಿತು ನಿನ್ನ ಗುಡುಗು ಬಿರುಗಾಳಿಯಲಿ I ಹೊಳೆಯಿತು ನಿನ್ನ ಮಿಂಚು ಇಡೀ ಲೋಕದಲಿ I ಕಂಪಿಸಿತೀ ಭೂಮಂಡಲ ನಡುನಡುಗಿ II
- Verse 19: ಸಾಗರವನೆ ನೀ ತುಳಿದು ನಡೆದೆ I ಮಹಾಸಾಗರವನೆ ನೀ ದಾಟಿದೆ I ಹೆಜ್ಜೆಯ ಗುರುತನೂ ಕಾಣಬಿಡದೆ II
- Verse 20: ಕುರುಬನು ತನ್ನ ಕುರಿಮಂದೆಯನು ಕರೆದೊಯ್ಯುವಂತೆ I ಮೋಶೆ, ಆರೋನರಿಂದ ನಿನ್ನ ಪ್ರಜೆಗಳನು ನಡೆಸಿದೆ II