ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
88ನೇ ಅಧ್ಯಾಯ
- Verse 1: ಪ್ರಭು, ಜೀವೋದ್ಧಾರಕನೇ ಕೇಳು I ನಿನಗೆ ಮೊರೆಯಿಡುವೆ ಹಗಲಿರುಳು II
- Verse 2: ನನ್ನ ಯೋಚನೆ ನಿನ್ನ ಬಳಿಸೇರಲಿ I ನನ್ನ ಕೂಗು ನಿನ್ನ ಕಿವಿಗೆ ಬೀಳಲಿ II
- Verse 3: ಸಂಕಟದಿಂದ ತುಂಬಿದೆ ನನ್ನ ಜೀವನ I ಪಾತಾಳವ ಸಮೀಪಿಸಿದೆ ನನ್ನ ಪ್ರಾಣ II
- Verse 4: ನಾನಿರುವೆ ಸಮಾಧಿ ಸೇರಲಿರುವವರಂತೆ I ಇರುವೆ ಶಕ್ತಿಯಿಲ್ಲದ ನರಮಾನವರಂತೆ II
- Verse 5: ಇರುವೆ ಹತನಾಗಿ ಸಮಾಧಿ ಸೇರಿದವನಂತೆ I ಮೃತರಾದವರೊಳು ನಿರಾಕೃತನಾದವನಂತೆ II ನಿನ್ನಾ ನೆನಕೆಯಿಂದ ಅಳಿದು ಹೋದವನಂತೆ I ನಿನ್ನಾ ಪಾಲನೆಯಿಂದ ದೂರವಾದವನಂತೆ II
- Verse 6: ದಬ್ಬಿರುವೆ ನೀನೆನ್ನನು ಅಧೋಲೋಕಕೆ I ಅಗಾಧಸ್ಥಳಕೆ, ಗಾಢ ಅಂಧಕಾರಕೆ II
- Verse 7: ನಿನ್ನ ಕಡುಕೋಪ ಎರಗಿಬಿಟ್ಟಿದೆ ನನ್ನ ಮೇಲೆ II ನನ್ನ ಬಾಧಿಸುತ್ತಿವೆ ಅದರ ಕಲ್ಲೋಲ ಮಾಲೆ II
- Verse 8: ಆಪ್ತರೂ ಹೇಸಿ ದೂರಸರಿವಂತೆ ಮಾಡಿರುವೆ I ಬಂಧಿತನಾದ ನಾನು ಬಿಡಿಸಿಕೊಳ್ಳಲಾಗದಿರುವೆ II
- Verse 9: ಮಬ್ಬಾಗಿ ಹೋಗಿವೆ ಕಣ್ಗಳು ಬಾಧೆಯಿಂದ I ಪ್ರಭೂ, ಕೈಯೊಡ್ಡಿ ಮೊರೆಯಿಡುತ್ತಿರುವೆ ಸದಾ II
- Verse 10: ಮೃತರು ನಿನ್ನದ್ಭುತಗಳನು ಮೆಚ್ಚುವುದುಂಟೆ I ಸತ್ತ ಜನರೆದ್ದು ನಿನ್ನ ಸ್ತುತಿಸುವುದುಂಟೆ? II
- Verse 11: ಸಾರುವುದುಂಟೆ ಸಮಾಧಿಯಲಿ ನಿನ್ನ ಕೃಪೆಯನು? I ಅಧೋಲೋಕದಲಿ ನಿನ್ನ ಪ್ರಾಮಾಣಿಕತೆಯನು? II
- Verse 12: ತಿಳಿವರೆ ನಿನ್ನ ಪವಾಡಗಳನು ಇರುಳ ನಿಶೆಯೊಳು? I ನಿನ್ನ ನ್ಯಾಯ ನೀತಿಯನು ಮರೆವಾ ಲೋಕದೊಳು? II
- Verse 13: ನಾನಾದರೋ ಪ್ರಭೂ, ಮೊರೆಯಿಡುವೆ ನಿನಗೆ I ಉದಯದಲೆ ಸೇರುವುದೆನ್ನ ಜಪ ನಿನ್ನ ಸನ್ನಿಧಿಗೆ II
- Verse 14: ಪ್ರಭು, ನನ್ನ ತಳ್ಳಿಬಿಟ್ಟೆಯೇಕೆ? I ಮುಖವನು ತಿರುಗಿಸಿಕೊಂಡೆಯೇಕೆ? II
- Verse 15: ಬಾಲ್ಯದಿಂದಲು ಬಾಧಿತನು, ಮೃತಪ್ರಾಯನು I ನಿನ್ನ ದಂಡನೆ ಸಹಿಸಿ ಸೊರಗಿದವನು ನಾನು II
- Verse 16: ನನ್ನನು ಆವರಿಸಿಕೊಂಡಿದೆ ನಿನ್ನ ಕಡುಕೋಪಾಗ್ನಿಯು I ನನ್ನ ಹಾಳುಮಾಡುತ್ತಿದೆ ನಿನ್ನ ಭಯಂಕರ ದಾಳಿಯು II
- Verse 17: ದಿನವೆಲ್ಲಾ ನನ್ನನು ಅವು ಸುತ್ತುಗಟ್ಟಿವೆ I ಪ್ರವಾಹದಂತೆ ಎನ್ನ ಮೇಲೆ ಹರಿಯುತ್ತಿವೆ II
- Verse 18: ಬಂಧುಮಿತ್ರರನು ನನ್ನಿಂದ ದೂರ ಮಾಡಿರುವೆ I ಅಂಧಕಾರದೊಡನೆ ಸಂಗಾತಿಯನ್ನಾಗಿಸಿರುವೆ II