ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಮಾರ್ಕ
11ನೇ ಅಧ್ಯಾಯ
- Verse 1: ಯೇಸುಸ್ವಾಮಿ ಮತ್ತು ಅವರ ಜೊತೆಯಲ್ಲಿದ್ದವರು ಜೆರುಸಲೇಮನ್ನು ಸಮೀಪಿಸಿದರು. ಓಲಿವ್ ಗುಡ್ಡದ ಬಳಿಯಿರುವ ಬೆತ್ಫಗೆ ಮತ್ತು ಬೆಥಾನಿಯ ಕಡೆಗೆ ಬಂದಾಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕರೆದು, ಹೀಗೆಂದು ಹೇಳಿಕಳುಹಿಸಿದರು:
- Verse 2: “ನಿಮ್ಮೆದುರಿಗಿರುವ ಆ ಹಳ್ಳಿಗೆ ಹೋಗಿರಿ; ಅದನ್ನು ಸೇರುತ್ತಲೇ, ಕಟ್ಟಿಹಾಕಿರುವ ಹೇಸರಗತ್ತೆಯ ಮರಿಯೊಂದನ್ನು ಕಾಣುವಿರಿ. ಈವರೆಗೆ ಅದರ ಮೇಲೆ ಯಾರೂ ಸವಾರಿಮಾಡಿಲ್ಲ. ಅದನ್ನು ಬಿಚ್ಚಿ ಇಲ್ಲಿಗೆ ತನ್ನಿ.
- Verse 3: ಯಾರಾದರೂ ನಿಮ್ಮನ್ನು ‘ಅದನ್ನೇಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ, ‘ಪ್ರಭುವಿಗೆ ಇದು ಬೇಕಾಗಿದೆ. ಅವರು ಇದನ್ನು ಬೇಗನೆ ಹಿಂದಕ್ಕೆ ಕಳುಹಿಸಿಕೊಡುವರು,’ ಎಂದು ಹೇಳಿ,” ಎಂದರು.
- Verse 4: ಶಿಷ್ಯರು ಹೋಗಿ ಬೀದಿಯಲ್ಲಿದ್ದ ಹೇಸರಗತ್ತೆಯ ಮರಿಯೊಂದನ್ನು ಕಂಡರು. ಬಾಗಿಲಿನ ಬಳಿ ಕಟ್ಟಿಹಾಕಿದ್ದ ಅದನ್ನು ಶಿಷ್ಯರು ಬಿಚ್ಚಿದರು.
- Verse 5: ಅಲ್ಲಿ ನಿಂತಿದ್ದವರಲ್ಲಿ ಕೆಲವರು, ಇದನ್ನು ನೋಡಿ, “ಅದನ್ನೇಕೆ ಬಿಚ್ಚುತ್ತೀರಿ?” ಎಂದು ಕೇಳಿದರು.
- Verse 6: ಯೇಸು ಹೇಳಿದಂತೆಯೇ ಶಿಷ್ಯರು ಉತ್ತರಕೊಡಲು, ಆ ಮರಿಕತ್ತೆಯನ್ನು ತೆಗೆದುಕೊಂಡುಹೋಗಲು ಬಿಟ್ಟುಕೊಟ್ಟರು.
- Verse 7: ಶಿಷ್ಯರು ಅದನ್ನು ಯೇಸುವಿನ ಬಳಿಗೆ ತಂದು, ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಿದರು. ಯೇಸು ಅದನ್ನು ಹತ್ತಿ ಕುಳಿತರು.
- Verse 8: ಅನೇಕರು ತಮ್ಮ ಹೊದಿಕೆಗಳನ್ನು ದಾರಿಯಲ್ಲಿ ಹಾಸಿದರು. ಇನ್ನೂ ಕೆಲವರು ತೋಟಗಳಿಂದ ಮರದ ರೆಂಬೆಗಳನ್ನು ಕಡಿದು, ಎಲೆಗಳನ್ನು ಹರಡಿದರು.
- Verse 9: ಯೇಸುವಿನ ಹಿಂದೆಯೂ ಮುಂದೆಯೂ ಇದ್ದವರು - “ಜಯವಾಗಲಿ ! ಸರ್ವೇಶ್ವರನ ನಾಮದಲ್ಲಿ ಬರುವವರಿಗೆ ಮಂಗಳವಾಗಲಿ !
- Verse 10: ನಮ್ಮ ಪೂರ್ವಜ ದಾವೀದನ ಸಾಮ್ರಾಜ್ಯ ಉದಯವಾಗಲಿದೆ; ಅದಕ್ಕೆ ಶುಭವಾಗಲಿ ! ಮಹೋನ್ನತದಲ್ಲಿ ದೇವರಿಗೆ ಜಯವಾಗಲಿ !” ಎಂದು ಘೋಷಿಸುತ್ತಿದ್ದರು.
- Verse 11: ಯೇಸು ಜೆರುಸಲೇಮನ್ನು ಸೇರಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ನಡೆಯುತ್ತಿದ್ದ ಎಲ್ಲವನ್ನೂ ನೋಡುವಷ್ಟರಲ್ಲಿ ಕತ್ತಲಾಗುತ್ತಾ ಬಂದಿತು; ಆದುದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು, ಅವರು ಬೆಥಾನಿಯಕ್ಕೆ ಹೊರಟುಹೋದರು.
- Verse 12: ಮರುದಿನ ಅವರೆಲ್ಲರೂ ಬೆಥಾನಿಯದಿಂದ ಜೆರುಸಲೇಮಿಗೆ ಬರುತ್ತಿದ್ದಾಗ ಯೇಸುಸ್ವಾಮಿಗೆ ಹಸಿವಾಯಿತು.
- Verse 13: ದೂರದಲ್ಲಿ ಎಲೆ ತುಂಬಿದ ಅಂಜೂರದ ಮರವೊಂದು ಕಣ್ಣಿಗೆ ಬಿದ್ದಿತು. ಅದರಲ್ಲಿ ಹಣ್ಣೇನಾದರೂ ಸಿಕ್ಕೀತೆಂದು ಅಲ್ಲಿಗೆ ಹೋದರು. ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳೇ ಹೊರತು ಇನ್ನೇನೂ ಕಾಣಲಿಲ್ಲ. ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ.
- Verse 14: ಯೇಸು ಆ ಮರಕ್ಕೆ, “ಇನ್ನು ಮುಂದೆ ನಿನ್ನ ಹಣ್ಣನ್ನು ಯಾರೂ ಎಂದಿಗೂ ತಿನ್ನದಂತಾಗಲಿ,” ಎಂದರು. ಶಿಷ್ಯರು ಈ ಮಾತುಗಳನ್ನು ಕೇಳಿಸಿಕೊಂಡರು.
- Verse 15: ತರುವಾಯ ಅವರು ಜೆರುಸಲೇಮಿಗೆ ಬಂದರು. ಯೇಸುಸ್ವಾಮಿ ಮಹಾದೇವಾಲಯಕ್ಕೆ ಹೋಗಿ, ಅಲ್ಲಿ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟತೊಡಗಿದರು; ನಾಣ್ಯ ವಿನಿಮಯಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿದರು; ಪಾರಿವಾಳಗಳನ್ನು ಮಾರುತ್ತಿದ್ದವರ ಮಣೆಗಳನ್ನು ಉರುಳಿಸಿದರು.
- Verse 16: ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದುಹೋಗುವವರನ್ನು ತಡೆದರು.
- Verse 17: “ ‘ಸರ್ವಜನಾಂಗಗಳಿಗೂ ಪ್ರಾರ್ಥನಾಲಯ ನನ್ನೀ ಆಲಯ’ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ ಅಲ್ಲವೇ? ನೀವು ಅದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾಡಿದ್ದೀರಿ,” ಎಂದು ಯೇಸು ಅವರಿಗೆ ಬುದ್ಧಿಹೇಳಿದರು.
- Verse 18: ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ನಡೆದ ಈ ಸಂಗತಿಯನ್ನು ಕೇಳಿ ಯೇಸುವನ್ನು ಕೊಲ್ಲಿಸುವ ಮಾರ್ಗವನ್ನು ಹುಡುಕತೊಡಗಿದರು. ಏಕೆಂದರೆ, ಯೇಸುವನ್ನು ಕಂಡರೆ ಅವರಿಗೆ ಭಯವಿತ್ತು. ಕಾರಣ - ಜನರೆಲ್ಲರೂ ಅವರ ಬೋಧನೆಗೆ ಮಾರುಹೋಗಿದ್ದರು.
- Verse 19: ಸೂರ್ಯಾಸ್ತಮದ ಬಳಿಕ ಯೇಸು ಮತ್ತು ಶಿಷ್ಯರು ಪಟ್ಟಣದಿಂದ ಹೊರಗೆಹೋದರು.
- Verse 20: ಬೆಳಿಗ್ಗೆ ಅವರೆಲ್ಲರೂ ಅದೇ ಮಾರ್ಗವಾಗಿ ಹಿಂದಿರುಗುವಾಗ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು.
- Verse 21: ಪೇತ್ರನು ಹಿಂದಿನ ದಿನ ನಡೆದುದನ್ನು ಸ್ಮರಿಸಿಕೊಂಡು, ಯೇಸುಸ್ವಾಮಿಗೆ, “ಗುರುವೇ, ತಾವು ಶಪಿಸಿದ ಆ ಅಂಜೂರದ ಮರ ಈಗ ಒಣಗಿಹೋಗಿದೆ,” ಎಂದನು.
- Verse 22: ಅದಕ್ಕೆ ಯೇಸು, “ನಿಮಗೆ ದೇವರಲ್ಲಿ ವಿಶ್ವಾಸವಿರಲಿ,
- Verse 23: ಆಗ ಯಾವನಾದರೂ ಈ ಬೆಟ್ಟಕ್ಕೆ, ‘ನೀನು ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ, ಮನಸ್ಸಿನಲ್ಲಿ ಸಂದೇಹಪಡದೆ, ಅದು ಸಂಭವಿಸುವುದೆಂದು ವಿಶ್ವಾಸಿಸಿದರೆ, ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಅವನು ಹೇಳಿದಂತೆಯೇ ಆಗುವುದು.
- Verse 24: ಆದುದರಿಂದ ನೀವು ಪ್ರಾರ್ಥನೆಯಲ್ಲಿ ಏನೆಂದು ಬೇಡಿಕೊಳ್ಳುತ್ತೀರೋ, ಅದನ್ನೆಲ್ಲಾ ಪಡೆದಾಯಿತೆಂದು ವಿಶ್ವಾಸಿಸಿರಿ; ಅದು ಲಭಿಸುವುದು ನಿಶ್ಚಯವೆಂದು ನಿಮಗೆ ಹೇಳುತ್ತೇನೆ.
- Verse 25: ಇದಲ್ಲದೆ, ನೀವು ಪ್ರಾರ್ಥನೆ ಮಾಡುವಾಗಲೆಲ್ಲ, ಯಾರಿಗಾದರೂ ವಿರೋಧವಾಗಿ ನಿಮ್ಮ ಮನಸ್ಸಿನಲ್ಲಿ ಏನಾದರೂ ಇದ್ದರೆ, ಅದನ್ನು ಕ್ಷಮಿಸಿಬಿಡಿ,
- Verse 26: ಆಗ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸಿಬಿಡುವರು."
- Verse 27: ಯೇಸು ಮತ್ತು ಶಿಷ್ಯರು ಪುನಃ ಜೆರುಸಲೇಮಿಗೆ ಬಂದರು. ಯೇಸು ದೇವಾಲಯದ ಆವರಣದಲ್ಲಿ ತಿರುಗಾಡುತ್ತಿದ್ದಾಗ ಮುಖ್ಯಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾಪ್ರಮುಖರು ಅವರ ಬಳಿಗೆ ಬಂದು,
- Verse 28: “ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು?” ಎಂದು ಕೇಳಿದರು.
- Verse 29: ಅದಕ್ಕೆ ಯೇಸು, “ನಾನೂ ನಿಮಗೆ ಒಂದು ಪ್ರಶ್ನೆ ಹಾಕುತ್ತೇನೆ; ಅದಕ್ಕೆ ಉತ್ತರಕೊಡಿ. ಆಗ ಯಾವ ಅಧಿಕಾರದಿಂದ ನಾನು ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ.
- Verse 30: ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ? ಮನುಷ್ಯರಿಂದಲೋ? ಉತ್ತರಕೊಡಿ,” ಎಂದರು. ಇದನ್ನು ಕೇಳಿದ ಅವರು ತಮ್ಮ ತಮ್ಮೊಳಗೇ ತರ್ಕಮಾಡುತ್ತಾ,
- Verse 31: “ದೇವರಿಂದ ಬಂದಿತೆಂದು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವನು.
- Verse 32: ‘ಮನುಷ್ಯರಿಂದ ಬಂದಿತು’ ಎಂದು ಹೇಳೋಣ ಎಂದರೆ ಅದೂ ಆಗದು,” ಎಂದುಕೊಂಡರು. ಯೊವಾನ್ನನು ನಿಜವಾದ ಪ್ರವಾದಿಯೆಂದು ಸರ್ವರು ನಂಬಿದ್ದರಿಂದ ಅವರಿಗೆ ಜನರ ಭಯವಿತ್ತು.
- Verse 33: ಆದುದರಿಂದ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, “ಹಾಗಾದರೆ ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.