पवित्र बाइबिल
ಹೊಸ ಒಡಂಬಡಿಕೆ
ಹಿಬ್ರಿಯರಿಗೆ
7ನೇ ಅಧ್ಯಾಯ
- Verse 1: ಈ ಮೆಲ್ಕಿಸದೇಕನು ಸಾಲೇಮ್ ನಗರದ ರಾಜನೂ ಮಹೋನ್ನತ ದೇವರ ಯಾಜಕನೂ ಆಗಿದ್ದನು. ಶತ್ರುರಾಜರನ್ನು ಗೆದ್ದು ಹಿಂದಿರುಗುತ್ತಿದ್ದ ಅಬ್ರಹಾಮನನ್ನು ಈತನು ಎದುರುಗೊಂಡು ಆಶೀರ್ವದಿಸಿದನು.
- Verse 2: ಆಗ ಅಬ್ರಹಾಮನು ತಾನು ಗೆದ್ದು ತಂದಿದ್ದ ಎಲ್ಲದರಲ್ಲೂ ದಶಮಾಂಶವನ್ನು ಆತನಿಗೆ ಕೊಟ್ಟು ಗೌರವಿಸಿದನು. ಮೆಲ್ಕಿಸದೇಕ ಎಂಬ ಹೆಸರಿನ ಮೂಲಾರ್ಥ, ‘ನ್ಯಾಯನೀತಿಯ ಅರಸ.’ ಅಲ್ಲದೆ, ಆತನು ಸಾಲೇಮಿನ ಅರಸನೂ ಆಗಿದ್ದನು. ಆದ್ದರಿಂದ ‘ಶಾಂತಿಸಮಾಧಾನದ ಅರಸ’ ಎಂಬ ಅರ್ಥವೂ ಉಂಟು.
- Verse 3: ಆತನಿಗೆ ತಂದೆತಾಯಿಯಾಗಲಿ ವಂಶಾವಳಿಯಾಗಲಿ ಇಲ್ಲ. ಆತನ ಜನ್ಮಕ್ಕೆ ಆದಿಯಾಗಲಿ, ಜೀವನಕ್ಕೆ ಅಂತ್ಯವಾಗಲಿ ಇಲ್ಲ. ಆತನು ದೇವಪುತ್ರನನ್ನು ಹೋಲುತ್ತಾನೆ. ಶಾಶ್ವತ ಯಾಜಕನಾಗಿ ಉಳಿಯುತ್ತಾನೆ.
- Verse 4: ನಮ್ಮ ಪಿತಾಮಹ ಅಬ್ರಹಾಮನೇ ತಾನು ಗೆದ್ದುತಂದ ಶ್ರೇಷ್ಠ ವಸ್ತುಗಳಲ್ಲಿ ದಶಮಾಂಶವನ್ನು ಈ ಮೆಲ್ಕಿಸದೇಕನಿಗೆ ಸಲ್ಲಿಸಿ ಗೌರವಿಸಬೇಕಾದರೆ ಆತನು ಎಂಥ ಮಹಾಪುರುಷನೆಂದು ನೀವೇ ಆಲೋಚಿಸಿ ನೋಡಿ.
- Verse 5: ಲೇವಿಯ ಕುಲದವರಲ್ಲಿ ಯಾಜಕ ಪದವಿಯನ್ನು ಹೊಂದಿದವರು ಜನರಿಂದ, ಅಂದರೆ ಅಬ್ರಹಾಮನ ವಂಶಜರಾದ ತಮ್ಮ ಸ್ವಜನರಿಂದ, ದಶಮಾಂಶವನ್ನು ತೆಗೆದುಕೊಳ್ಳುವುದಕ್ಕೆ ಧರ್ಮಶಾಸ್ತ್ರದಲ್ಲಿ ಅಪ್ಪಣೆ ಉಂಟು.
- Verse 6: ಆದರೆ ಲೇವಿಯ ಕುಲದವನಲ್ಲದ ಮೆಲ್ಕಿಸದೇಕನು ಅಬ್ರಹಾಮನಿಂದಲೇ ದಶಮಾಂಶವನ್ನು ಪಡೆದನು; ಮಾತ್ರವಲ್ಲದೆ, ದೇವರ ವಾಗ್ದಾನವನ್ನು ಪಡೆದ ಅಬ್ರಹಾಮನನ್ನೇ ಆಶೀರ್ವದಿಸಿದನು.
- Verse 7: ಆಶೀರ್ವದಿಸುವವನು, ಆಶೀರ್ವಾದ ಪಡೆದವನಿಗಿಂತ ದೊಡ್ಡವನು ಎನ್ನುವುದು ನಿರ್ವಿವಾದ.
- Verse 8: ಇದಲ್ಲದೆ, ದಶಮಾಂಶವನ್ನು ಪಡೆಯುತ್ತಿರುವ ಲೇವಿಯರು ಕೇವಲ ಮರ್ತ್ಯ ಮಾನವರು; ಅದನ್ನು ಪಡೆದ ಮೆಲ್ಕಿಸದೇಕನು ತಾನು ಅಮರ್ತ್ಯ ಯಾಜಕನೆಂದು ಸಾಕ್ಷ್ಯಾಧಾರ ಪಡೆದವನು.
- Verse 9: ಅಷ್ಟೇ ಅಲ್ಲ, ದಶಮಾಂಶವನ್ನು ತೆಗೆದುಕೊಳ್ಳುತ್ತಿದ್ದ ಲೇವಿಯೂ ಕೂಡ ಅಬ್ರಹಾಮನ ಮುಖಾಂತರ ದಶಮಾಂಶವನ್ನು ತೆತ್ತನು ಎಂದು ಹೇಳಬಹುದು.
- Verse 10: ಹೇಗೆಂದರೆ, ಮೆಲ್ಕಿಸದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ಇನ್ನೂ ಹುಟ್ಟಿರಲಿಲ್ಲವಾದರೂ ತತ್ವಶಃ ಆತನು ತನ್ನ ಪೂರ್ವಜ ಅಬ್ರಹಾಮನ ಉದರದಲ್ಲಿದ್ದನು.
- Verse 11: ಇಸ್ರಯೇಲರಿಗೆ ಕೊಡಲಾದ ಧರ್ಮಶಾಸ್ತ್ರ ಲೇವಿಯರ ಯಾಜಕತ್ವದ ಮೇಲೆಯೇ ಆಧಾರಗೊಂಡಿದೆ. ಲೇವಿಯರ ಈ ಯಾಜಕತ್ವದಿಂದಲೇ ಸಂಪೂರ್ಣ ಸಿದ್ಧಿ ಪ್ರಾಪ್ತವಾಗುತ್ತಿತ್ತಾದರೆ, ಆರೋನನ ಪರಂಪರೆಗೆ ಸೇರದೆ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಬೇರೊಬ್ಬ ಯಾಜಕನು ಕಾಣಿಸಿಕೊಳ್ಳುವ ಅವಶ್ಯಕತೆ ಏನಿತ್ತು?
- Verse 12: ಯಾಜಕತ್ವ ಬದಲಾವಣೆಗೊಂಡರೆ ಧರ್ಮಶಾಸ್ತ್ರವೂ ಬದಲಾವಣೆಗೊಳ್ಳಬೇಕಾದುದು ಅಗತ್ಯ.
- Verse 13: ಇದನ್ನೆಲ್ಲಾ ಯಾರನ್ನು ಕುರಿತು ಹೇಳಲಾಗಿದೆಯೋ ಆ ವ್ಯಕ್ತಿ ಹುಟ್ಟಿದ್ದು ಬೇರೊಂದು ಕುಲದಲ್ಲಿ. ಆ ಕುಲದಲ್ಲಿ ಎಂದೂ ಯಾರೂ ಬಲಿಪೀಠದ ಸೇವೆ ಮಾಡಿದವರಲ್ಲ.
- Verse 14: ನಮ್ಮ ಪ್ರಭು ಹುಟ್ಟಿದ್ದು ಯೂದನ ಕುಲದಲ್ಲಿ ಎಂಬುದು ತಿಳಿದ ವಿಷಯ. ಮೋಶೆ ಯಾಜಕರನ್ನು ಕುರಿತು ಮಾತನಾಡಿದಾಗ ಈ ಕುಲದ ಬಗ್ಗೆ ಏನನ್ನೂ ಹೇಳಲಿಲ್ಲ.
- Verse 15: ಹೀಗೆ ಕಾಣಿಸಿಕೊಂಡ ಯಾಜಕ ಮೆಲ್ಕಿಸದೇಕನನ್ನು ಹೋಲುವುದರಿಂದ ನಾವು ಹೇಳುವ ವಿಷಯ ಇನ್ನೂ ಸ್ಪಷ್ಟವಾಗುತ್ತದೆ.
- Verse 16: ಇವರು ಯಾಜಕರಾದುದು ಅಳಿವಿಲ್ಲದ ಜೀವಶಕ್ತಿಯಿಂದ; ಕುಲಗೋತ್ರಗಳ ನಿಯಮಾನುಸಾರವಾದ ದೈಹಿಕ ಹುಟ್ಟಿನಿಂದಲ್ಲ.
- Verse 17: “ನೀನು ಸದಾಕಾಲವೂ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಯಾಜಕನು,” ಎಂದು ಪವಿತ್ರಗ್ರಂಥ ಸಮರ್ಥಿಸುತ್ತದೆ.
- Verse 18: ಹಳೆಯ ಶಾಸನವು ಶಿಥಿಲವೂ ವಿಫಲವೂ ಆದಕಾರಣ, ಅದನ್ನು ರದ್ದುಗೊಳಿಸಲಾಯಿತು.
- Verse 19: ಏಕೆಂದರೆ, ಧರ್ಮಶಾಸ್ತ್ರವು ಏನನ್ನೂ ಸಿದ್ಧಿಗೆ ತರಲಿಲ್ಲ. ಅದಕ್ಕೆ ಬದಲಾಗಿ ದೇವರ ಸನ್ನಿಧಿಗೆ ನಮ್ಮನ್ನು ಕೊಂಡೊಯ್ಯಬಲ್ಲ ನಂಬಿಕೆ ನಿರೀಕ್ಷೆಯನ್ನು ನಮಗೆ ಒದಗಿಸಲಾಗಿದೆ.
- Verse 20: ಇದಲ್ಲದೆ, ಲೇವಿಯರು ಯಾಜಕರಾದಾಗ, ದೇವರು ಯಾವ ಶಪಥವನ್ನೂ ಮಾಡಲಿಲ್ಲ.
- Verse 21: ಇವರಾದರೋ “ಎಂದೆಂದಿಗೂ ನೀ ಯಾಜಕನೆಂದು ಸರ್ವೇಶ್ವರನೇ ಪ್ರಮಾಣಿಸಿಹರು ಮನಸ್ಸನ್ನೆಂದೂ ಬದಲಾಯಿಸರವರು,” ಎಂಬ ಶಪಥ ಪಡೆದಿರುವ ಯಾಜಕರು.
- Verse 22: ಆದ್ದರಿಂದಲೇ, ಯೇಸು ಅತ್ಯಂತ ಶ್ರೇಷ್ಠವಾದ ಒಡಂಬಡಿಕೆಗೆ ಆಧಾರಪುರುಷರಾಗಿದ್ದಾರೆ.
- Verse 23: ಲೇವಿಯರ ಯಾಜಕಸೇವೆಯನ್ನು ಮರಣವು ಮೊಟಕುಗೊಳಿಸುತ್ತಿದ್ದುದರಿಂದ ಅನೇಕರು ಯಾಜಕರಾಗಬೇಕಾಗುತ್ತಿತ್ತು.
- Verse 24: ಯೇಸುವಾದರೋ ಚಿರಂಜೀವಿಯಾದುದರಿಂದ ಅವರ ಯಾಜಕತ್ವವು ಶಾಶ್ವತವಾಗಿ ಉಳಿಯುವಂಥಾದ್ದು.
- Verse 25: ಆದಕಾರಣ, ತಮ್ಮ ಮುಖಾಂತರ ದೇವರನ್ನು ಅರಸುವವರನ್ನು ಯೇಸು ಸಂಪೂರ್ಣವಾಗಿ ಉದ್ಧಾರಮಾಡಬಲ್ಲರು. ಅಂಥವರ ಪರವಾಗಿ ವಿಜ್ಞಾಪಿಸಲೆಂದೇ ಯೇಸು ಸದಾ ಬದುಕಿರುವರು.
- Verse 26: ನಮಗೆ ಬೇಕಾಗಿದ್ದ ಪ್ರಧಾನ ಯಾಜಕರು ಯೇಸುವೇ. ಇವರು ಪರಿಶುದ್ಧರು, ನಿರ್ದೋಷಿ, ನಿಷ್ಕಳಂಕರು, ಪಾಪಿಗಳಿಂದ ಪ್ರತ್ಯೇಕಿಸಲಾದವರು, ಗಗನಮಂಡಲಗಳಿಗಿಂತಲೂ ಉನ್ನತದಲ್ಲಿರುವವರು.
- Verse 27: ಇವರು ಮಿಕ್ಕ ಪ್ರಧಾನಯಾಜಕರಂತೆ ಮೊದಲು ಸ್ವಂತ ಪಾಪಗಳಿಗಾಗಿಯೂ ಅನಂತರ ಜನರ ಪಾಪಗಳಿಗಾಗಿಯೂ ದಿನಂಪ್ರತಿ ಪರಿಹಾರಬಲಿಯನ್ನು ಒಪ್ಪಿಸಬೇಕಾಗಿಲ್ಲ. ಏಕೆಂದರೆ, ಜನರ ಪಾಪಪರಿಹಾರಕ್ಕಾಗಿ ಒಮ್ಮೆಗೇ ಶಾಶ್ವತವಾಗಿ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಂಡರು.
- Verse 28: ಧರ್ಮಶಾಸ್ತ್ರ ನೇಮಿಸುವ ಪ್ರಧಾನಯಾಜಕರು ಕುಂದುಕೊರತೆಯುಳ್ಳ ಮಾನವರು. ಆದರೆ, ಧರ್ಮಶಾಸ್ತ್ರದ ತರುವಾಯ ಬಂದ ಹಾಗೂ ಶಪಥದಿಂದ ಕೂಡಿದ ದೈವವಾಕ್ಯವು ಸದಾ ಸರ್ವಸಂಪೂರ್ಣರಾದ ಪುತ್ರನನ್ನೇ ಪ್ರಧಾನಯಾಜಕರನ್ನಾಗಿ ನೇಮಿಸುತ್ತದೆ.