வேதாகமம்
ಹಳೆಯ ಒಡಂಬಡಿಕೆ
ಯಾಜಕಕಾಂಡ
11ನೇ ಅಧ್ಯಾಯ
1 : ಸರ್ವೇಶ್ವರ ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಹೀಗೆಂದು ಆಜ್ಞಾಪಿಸಿದರು:
2 : “ನೀವು ಇಸ್ರಯೇಲರಿಗೆ ತಿಳಿಸಬೇಕಾದ ವಿಷಯಗಳು ಇವು -
3 : ಭೂಮಿಯ ಮೇಲಿರುವ ಚತುಷ್ಪಾದ ಪ್ರಾಣಿಗಳಲ್ಲಿ ಈ ಕೆಳಕಂಡವುಗಳ ಮಾಂಸವನ್ನು ನೀವು ತಿನ್ನಬಹುದು: ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲುಕು ಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು.
4 : ಆದರೆ ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ ಒಂಟೆ ಮೆಲುಕುಹಾಕುವಂಥದ್ದಾದರೂ ಅದಕ್ಕೆ ಸೀಳು ಗೊರಸು ಇಲ್ಲ. ಆದುದರಿಂದ ನೀವು ಅದರ ಮಾಂಸವನ್ನು ಅಶುದ್ಧವೆಂದು ತಿಳಿಯಬೇಕು.
5 : (ಬಿಲದ ಮೊಲ ಮೆಲುಕುಹಾಕುವಂಥದ್ದು; ಆದರೂ ಸೀಳು ಗೊರಸು ಇಲ್ಲವಾದ್ದರಿಂದ ಅದು ನಿಮಗೆ ಅಶುದ್ಧ.
6 : ಮೊಲ ಮೆಲುಕುಹಾಕುವಂಥದ್ದು; ಆದರೂ ಸೀಳುಗೊರಸು ಇಲ್ಲವಾದ ಕಾರಣ ಅದು ನಿಮಗೆ ಅಶುದ್ಧ.)
7 : ಹಂದಿಯ ಗೊರಸು ಸೀಳಿದೆ. ಆದರೂ ಅದು ಮೆಲುಕು ಹಾಕುವುದಿಲ್ಲ. ಆದ್ದರಿಂದ ಅದು ನಿಮಗೆ ಅಶುದ್ಧ.
8 : ಇಂಥವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಹೆಣವನ್ನು ಮುಟ್ಟಬಾದರು. ಅವುಗಳನ್ನು ಅಶುದ್ಧವೆಂದೆಣಿಸಬೇಕು.
9 : ಜಲಜಂತುಗಳಲ್ಲಿ ನೀವು ತಿನ್ನಬಹುದಾದವುಗಳು ಯಾವುವೆಂದರೆ - ಸಮುದ್ರದಲ್ಲಿಯಾಗಲಿ, ನದಿಯಲ್ಲಿಯಾಗಲಿ, ಬೇರೆ ಜಲಾಶಯದಲ್ಲಿಯಾಗಲಿ, ಯಾವ ಜಾತಿಯ ಪ್ರಾಣಿಗೆ ರೆಕ್ಕೆ ಇದ್ದು ಮೈಯೆಲ್ಲಾ ಪರೆಪರೆಯಾಗಿರುವುದೋ ಅದರ ಮಾಂಸವನ್ನು ತಿನ್ನಬಹುದು.
10 : ಆದರೆ ಸಮುದ್ರದಲ್ಲಿದ್ದರೂ ನದಿಯಲ್ಲಿದ್ದರೂ ಜಲಚರಗಳಾದ ಸಕಲವಿಧವಾದ ಜೀವಜಂತುಗಳಲ್ಲಿ ಯಾವ ಜಾತಿಗೆ ರೆಕ್ಕೆಯೂ ಪರೆಪರೆಯಾದ ಮೈಯೂ ಇರುವುದಿಲ್ಲವೋ ಅದು ನಿಮಗೆ ನಿಷಿದ್ಧವಾದದ್ದು.
11 : ಅಂಥವು ಸಂಪೂರ್ಣವಾಗಿ ನಿಷಿದ್ಧವಾಗಿರುವುದರಿಂದ ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅವುಗಳ ಹೆಣಗಳು ನಿಮಗೆ ಹೇಯವಾಗಿರಬೇಕು.
12 : ಜಲಜಂತುಗಳಲ್ಲಿ ಯಾವುದಕ್ಕೆ ರೆಕ್ಕೆಗಳೂ ಪರೆಪರೆಯಾದ ಮೈಯೂ ಇಲ್ಲವೋ ಅವು ನಿಮಗೆ ಹೇಯವಾಗಿರಬೇಕು.
13 : ಪಕ್ಷಿಗಳಲ್ಲಿ ಇವುಗಳು ನಿಮಗೆ ನಿಷಿದ್ಧವು; ಗರುಡ, ಬೆಟ್ಟದ ಹದ್ದು,
15 : ಸಕಲ ವಿಧವಾದ ಗಿಡಗ, ಎಲ್ಲಾ ವಿಧವಾದ ಕಾಗೆ,
16 : ಉಷ್ಟ್ರಪಕ್ಷಿ, ಉಲೂಕ, ಕಡಲ ಹಕ್ಕಿ,
17 : ಸಕಲ ವಿಧವಾದ ಡೇಗೆ, ಗೂಬೆ, ಹೆಗ್ಗೂಬೆ, ಕರೇಟು,
18 : ಚೀಲಮೂಗಿ, ರಣಹದ್ದು, ನೀರು ಕಾಗೆ, ಕೊಕ್ಕರೆ,
19 : ಎಲ್ಲ ವಿಧವಾದ ಬಕ, ಹೆಡೆ ಹಕ್ಕಿ, ಕಣ್ಣಕಪಡಿ, ಇವುಗಳ ಮಾಂಸವನ್ನು ತಿನ್ನಬಾರದು; ಇವು ಹೇಯವಾಗಿರಬೇಕು.
20 : ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ಹೇಯವಾಗಿರಬೇಕು.
21 : ಆದರೆ ಕಾಲುಳ್ಳ ಯಾವ ಕ್ರಿಮಿಕೀಟಗಳಿಗೆ ನೆಲದ ಮೇಲೆ ಹಾರುವುದಕ್ಕೋಸ್ಕರ ಮುದುರಿಕೊಂಡಿರುವ ತೊಡೆಗಳು ಇರುತ್ತವೆಯೋ ಅವುಗಳನ್ನು ನೀವು ತಿನ್ನಬಹುದು.
22 : ಸಕಲವಿಧವಾದ ಮಿಡತೆಗಳನ್ನೂ, ಬೋಳ ಮಿಡತೆಗಳನ್ನೂ, ಜಿಟ್ಟಿ ಮಿಡತೆಗಳನ್ನೂ, ಸಣ್ಣ ಮಿಡತೆಗಳನ್ನೂ ಇವುಗಳನ್ನೆಲ್ಲಾ ತಿನ್ನಬಹುದು.
23 : ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಸಕಲ ವಿಧವಾದ ಕ್ರಿಮಿಕೀಟಗಳು ನಿಮಗೆ ನಿಷಿದ್ಧವು.
24 : ಇದಲ್ಲದೆ ಈ ಕೆಳಗೆ ಹೇಳಿರುವ ಜಂತುಗಳಿಂದ ನಿಮಗೆ ಅಪವಿತ್ರತೆಯುಂಟಾಗುತ್ತದೆ. ಅವುಗಳ ಹೆಣ ಯಾವನಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
25 : ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು, ಮತ್ತು ಸಾಂಯಂಕಾಲದವರೆಗೂ ಅಶುದ್ಧನಾಗಿರುವನು.
26 : ಅವು ಯಾವುವೆಂದರೆ, ಯಾವ ಪ್ರಾಣಿ ಗೊರಸು ಸ್ವಲ್ಪ ಸೀಳಿದ್ದರೂ ಇಗ್ಗೊರಸಾಗಿಲ್ಲವೋ ಮತ್ತು ಮೆಲುಕು ಹಾಕುವುದಿಲ್ಲವೋ ಅದು ನಿಮಗೆ ಅಶುದ್ಧ. ಅವುಗಳು ಯಾವನಿಗೆ ಸೋಂಕುವುವೋ ಅವನು ಅಶುದ್ಧನಾಗುವನು.
27 : ಚತುಷ್ಪಾದ ಪ್ರಾಣಿಗಳಲ್ಲಿ ಅಂಗಾಲುಗಳಿಂದ ನಡೆಯುವುವುಗಳೆಲ್ಲಾ ನಿಮಗೆ ಅಶುದ್ಧವಾಗಿರುವುವು. ಅವುಗಳ ಹೆಣ ಯಾವನಿಗೆ ಸೋಂಕುವುದೋ ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
28 : ಅವುಗಳ ಹೆಣವನ್ನು ಎತ್ತಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು ಮತ್ತು ಆ ಸಾಯಂಕಾಲದವರೆಗೂ ಅಶುದ್ಧನಾಗಿರುವನು. ಅವು ನಿಮಗೆ ಅಶುದ್ಧ.
29 : ನೆಲದ ಮೇಲೆ ಸಂಚರಿಸುವ ಸಣ್ಣ ಜಂತುಗಳಲ್ಲಿ ಇವು ನಿಮಗೆ ಅಶುದ್ಧವಾಗಿರಬೇಕು: ಯಾವುವೆಂದರೆ - ಮುಂಗುಸಿ, ಇಲಿ, ಸಕಲವಿಧವಾದ ಉಡ, ಹಾವುರಾಣಿ,
30 : ಊಸುರುವಳ್ಳಿ, ಹಲ್ಲಿ, ಬಸವನಹುಳ, ಚಿಟ್ಟಿಲಿ ಇವೇ.
31 : ನೆಲದ ಮೇಲೆ ಸಂಚರಿಸುವ ಈ ಅಶುದ್ಧವಾದ ಸಣ್ಣ ಜಂತುಗಳ ಹೆಣವು ಯಾರಿಗೆ ಸೋಂಕುವುದೋ ಅವರು ಸಾಯಂಕಾಲದವರೆಗೂ ಅಶುದ್ಧರಾಗಿರುವರು.
32 : ಇವುಗಳ ಹೆಣವು ಯಾವ ವಸ್ತುವಿನ ಮೇಲೆ ಬೀಳುವುದೋ ಆ ವಸ್ತು ಅಶುದ್ಧವಾಗಿರುವುದು. ಅದು ಮರದ ವಸ್ತುವಾಗಲಿ ಬಟ್ಟೆಯಾಗಲಿ ಚರ್ಮವಾಗಲಿ ಗೋಣಿಯಾಗಲಿ ಅದು ಎಂಥದಾದರೂ ಯಾವ ಕೆಲಸಕ್ಕೆ ಉಪಯೋಗವಾಗಿದ್ದರೂ ಅದನ್ನು ನೀರಿನಲ್ಲಿ ನೆನಸಬೇಕು; ಅದು ಸಾಯಂಕಾಲದವರೆಗೂ ಅಶುದ್ಧವಾಗಿರುವುದು; ತರುವಾಯ ಶುದ್ಧಿಯಾಗುವುದು.
33 : ಆ ಜಂತುಗಳ ಹೆಣ ಮಣ್ಣಿನ ಪಾತ್ರೆಯಲ್ಲಿ ಬಿದ್ದರೆ ಆ ಪಾತ್ರೆಯಲ್ಲಿರುವುದೆಲ್ಲಾ ಅಶುದ್ಧವಾಗಿರುವುದು. ಮತ್ತು ಆ ಪಾತ್ರೆಯನ್ನು ನೀವು ಒಡೆದುಬಿಡಬೇಕು.
34 : ಅದರಲ್ಲಿರುವ ತಿನ್ನತಕ್ಕ ಪದಾರ್ಥವೆಲ್ಲಾ ನೀರಿನಿಂದ ನೆನದದ್ದಾಗಿದ್ದರೆ ಅಶುದ್ಧವಾಗುವುದು. ಪಾನದ್ರವ್ಯವು ಆ ಪಾತ್ರೆಯಲ್ಲಿದ್ದರೆ ಅದೂ ಅಶುದ್ಧವಾಗುವುದು.
35 : ಆ ಜಂತುಗಳ ಹೆಣ ಯಾವ ವಸ್ತುಗಳ ಮೇಲೆ ಬಿದ್ದರೂ ಆ ವಸ್ತು ಅಶುದ್ಧವಾಗುವುದು. ಒಲೆಗಳಲ್ಲಿ ಅದು ಒಂಟಿ ಒಲೆಯಾಗಿದ್ದರೂ ಜೋಡಿ ಒಲೆಯಾಗಿದ್ದರೂ ಅದು ಅಶುದ್ಧವಾದುದರಿಂದ ಅದನ್ನು ಒಡೆದುಬಿಡಬೇಕು. ಅದು ಅಶುದ್ಧವೇ.
36 : ಒರತೆ ಮೊದಲಾದ ಜಲಾಶಯಗಳನ್ನು ಮಾತ್ರ ನೀವು ಶುದ್ಧವೆಂದೆಣಿಸಬೇಕು. ಆದರೆ ಇವುಗಳೊಳಗಿಂದ ಆ ಹೆಣವನ್ನು ಎತ್ತಿದವನು ಅಶುದ್ಧನಾಗುವನು.
37 : ಬಿತ್ತಬೇಕಾದ ಬೀಜದ ಮೇಲೆ ಈ ಜಂತುಗಳ ಹೆಣ ಬಿದ್ದರೆ ಆ ಬೀಜವು ಅಶುದ್ಧವಾಗುವುದಿಲ್ಲ.
38 : ನೀರು ಹಾಕಿ ನೆನಸಿದ ಬೀಜದ ಮೇಲೆ ಆ ಹೆಣ ಬಿದ್ದರೆ ಅದು ನಿಮಗೆ ಅಶುದ್ಧ.
39 : ಆಹಾರಕ್ಕೆ ಯೋಗ್ಯವಾಗಿರುವ ಪ್ರಾಣಿ ಸತ್ತರೆ ಅದರ ಹೆಣವನ್ನು ಮುಟ್ಟಿದವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
40 : ಆ ಹೆಣದಲ್ಲಿ ಸ್ವಲ್ಪ ತಿಂದವನು ಸಹ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವನು ಆ ದಿನದ ಸಾಯಂಕಾಲದವರೆಗೂ ಅಶುದ್ಧನಾಗಿರುವನು. ಆ ಹೆಣವನ್ನು ಹೊತ್ತವನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಅವನು ಆ ಸಾಯಂಕಾಲದವರೆಗೂ ಅಶುದ್ಧನಾಗಿರುವನು.
41 : ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೆಲ್ಲಾ ಹೇಯವಾಗಿವೆ; ಅವುಗಳ ಮಾಂಸವನ್ನು ತಿನ್ನಬಾರದು.
42 : ಹೊಟ್ಟೆಯಿಂದ ನಡೆಯುವಂಥದನ್ನೂ ಕಾಲಿನಿಂದ ಹರಿದಾಡುವಂಥದನ್ನೂ ಬಹಳ ಕಾಲುಳ್ಳದ್ದನ್ನೂ ಅಂತೂ ನೆಲದ ಮೇಲೆ ಹರಿದಾಡುವ ಯಾವ ಸಣ್ಣ ಜೀವಿಯನ್ನೂ ನೀವು ತಿನ್ನಬಾರದು; ಅವು ಹೇಯವಾಗಿವೆ.
43 : ನೀವು ಅಂತ ಯಾವ ಸಣ್ಣ ಜೀವಿಯನ್ನೂ ತಿಂದು ನಿಮ್ಮನ್ನು ನೀವೇ ಹೇಸಿಕೆಮಾಡಿಕೊಂಡು ಅಶುದ್ಧರಾಗಬಾರದು.
44 : ಏಕೆಂದರೆ ನಾನು ನಿಮ್ಮ ದೇವರಾದ ಸರ್ವೇಶ್ವರ; ನೀವು ದೇವಜನರಿಗೆ ತಕ್ಕಂತಿರಬೇಕು. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. ನೆಲದ ಮೇಲೆ ಹರಿದಾಡುವ ಯಾವ ಜಂತುವಿನಿಂದಾದರೂ ನೀವು ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು.
45 : ನಿಮ್ಮ ದೇವರಾಗಿರುವುದಕ್ಕೆ ನಿಮ್ಮನ್ನು ಈಜಿಪ್ಟಿನಿಂದ ಬರಮಾಡಿದ ಸರ್ವೇಶ್ವರ ನಾನು; ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು.
46 : ಇದೇ ಪಶು, ಪಕ್ಷಿ, ಜಲಚರ ಹಾಗು ಕ್ರಿಮಿಕೀಟಗಳ ವಿಷಯವಾದ ವಿಧಿ.
47 : ಇದರಿಂದ ಶುದ್ಧಾಶುದ್ಧಗಳನ್ನೂ, ಭಕ್ಷ್ಯಾಭಕ್ಷ್ಯಗಳನ್ನೂ ವಿವೇಚಿಸುವುದಕ್ಕೆ ನಿಮ್ಮಿಂದಾಗುವುದು