पवित्र बाइबिल
ಹಳೆಯ ಒಡಂಬಡಿಕೆ
2 ಅರಸುಗಳು
2ನೇ ಅಧ್ಯಾಯ
1 : ಸರ್ವೇಶ್ವರಸ್ವಾಮಿ ಎಲೀಯನನ್ನು ಸುಂಟರಗಾಳಿಯಲ್ಲಿ ಪರಲೋಕಕ್ಕೆ ಸೇರಿಸುವ ಸಮಯ ಬಂದಿತು. ಆಗ ಎಲೀಯನು ಎಲೀಷನೊಡನೆ ಗಿಲ್ಗಾಲನ್ನು ಬಿಟ್ಟು ಹೊರಟನು.
2 : ದಾರಿಯಲ್ಲಿ ಎಲೀಯನು ಎಲೀಷನಿಗೆ, “ದಯವಿಟ್ಟು ನೀನು ಇಲ್ಲೇ ಇರು; ಸರ್ವೇಶ್ವರ ನನಗೆ ಬೇತೇಲಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾರೆ,” ಎಂದನು. ಎಲೀಷನು, “ಸರ್ವೇಶ್ವರನ ಆಣೆ, ನಿಮ್ಮ ಜೀವದಾಣೆ, ನಾನು ನಿಮ್ಮನ್ನು ಬಿಟ್ಟಿರಲಾರೆ,” ಎಂದು ಉತ್ತರಕೊಟ್ಟನು. ಬಳಿಕ ಅವರಿಬ್ಬರೂ ಬೇತೇಲಿಗೆ ಹೋದರು.
3 : ಬೇತೇಲಿನ ಪ್ರವಾದಿಮಂಡಲಿಯವರು ಎಲೀಷನನ್ನು ಭೇಟಿಯಾದರು. “ಸರ್ವೇಶ್ವರ ಈ ದಿನ ನಿಮ್ಮ ಗುರುವನ್ನು ನಿಮ್ಮ ಬಳಿಯಿಂದ ಮೇಲಕ್ಕೆ ತೆಗೆದುಕೊಳ್ಳುವರೆಂಬುದು ನಿಮಗೆ ಗೊತ್ತೇ?” ಎಂದು ಕೇಳಿದರು. ಅದಕ್ಕೆ ಎಲೀಷನು, “ನನಗೆ ಗೊತ್ತಿದೆ; ಆದರೆ ನೀವು ಸುಮ್ಮನಿರಿ,” ಎಂದನು.
4 : ಎಲೀಯನು ಎಲೀಷನಿಗೆ, “ದಯವಿಟ್ಟು ಇಲ್ಲೇ ಇರು; ಸರ್ವೇಶ್ವರ ನನಗೆ ಜೆರಿಕೋವಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾರೆ,” ಎಂದು ಹೇಳಿದನು. ಆದರೆ ಎಲೀಷನು, “ಸರ್ವೇಶ್ವರನಾಣೆ, ನಿಮ್ಮ ಜೀವದಾಣೆ, ನಾನು ನಿಮ್ಮನ್ನು ಬಿಟ್ಟಿರುವುದಿಲ್ಲ,” ಎಂದು ಉತ್ತರಕೊಟ್ಟು ಅವನ ಜೊತೆಯಲ್ಲೇ ಜೆರಿಕೋವಿಗೆ ಹೋದನು.
5 : ಅಲ್ಲಿನ ಪ್ರವಾದಿಮಂಡಲಿಯವರು ಎಲೀಷನನ್ನು ಭೇಟಿಯಾಗಿ, “ಸರ್ವೇಶ್ವರ ಈ ದಿನ ನಿಮ್ಮ ಗುರುವನ್ನು ನಿಮ್ಮ ಬಳಿಯಿಂದ ಮೇಲಕ್ಕೆ ತೆಗೆದುಕೊಳ್ಳುವರು ಎಂಬುದು ನಿಮಗೆ ತಿಳಿದಿದೆಯೊ?” ಎಂದು ಕೇಳಿದರು. ಅದಕ್ಕೆ ಅವನು, “ತಿಳಿದಿದೆ; ಆದರೆ ನೀವು ಸುಮ್ಮನಿರಿ,” ಎಂದು ಉತ್ತರಿಸಿದನು.
6 : ಎಲೀಯನು ಮತ್ತೆ ಎಲೀಷನಿಗೆ, “ದಯವಿಟ್ಟು ನೀನು ಇಲ್ಲೆಯಿರು; ಸರ್ವೇಶ್ವರ ನನಗೆ ಜೋರ್ಡನಿಗೆ ಹೋಗಬೇಕೆಂದು ಆಜ್ಞಾಪಿಸಿ ಇದ್ದಾರೆ,” ಎಂದನು. ಆಗ ಅವನು, “ಸರ್ವೇಶ್ವರನ ಆಣೆ, ನಿಮ್ಮ ಜೀವದಾಣೆ, ನಾನು ನಿಮ್ಮನ್ನು ಬಿಟ್ಟಿರಲಾಗದು,” ಎಂದು ಉತ್ತರಕೊಟ್ಟನು. ಆದುದರಿಂದ ಇಬ್ಬರೂ ಹೊರಟು ಜೋರ್ಡನ್ ನದಿಯ ದಡಕ್ಕೆ ಬಂದರು.
7 : ಪ್ರವಾದಿಮಂಡಲಿಯವರಲ್ಲಿ ಐವತ್ತುಮಂದಿ ಇವರ ಹಿಂದಿನಿಂದಲೇ ಬಂದು ಸ್ವಲ್ಪ ದೂರದಲ್ಲಿ ನಿಂತುಕೊಂಡರು.
8 : ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಿಚಿ, ಅದರಿಂದ ನೀರನ್ನು ಹೊಡೆದನು. ನೀರು ಇಬ್ಭಾಗವಾಯಿತು; ಅವರಿಬ್ಬರೂ ಒಣ ನೆಲದ ಮೇಲೆ ದಾಟಿಹೋದರು.
9 : ಅವರು ಆಚೆ ದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು, “ನಿನ್ನನ್ನು ಬಿಟ್ಟುಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತಿ ಹೇಳು?” ಎಂದು ಕೇಳಿದನು. ಅದಕ್ಕೆ ಎಲೀಷನು, “ನಿಮಗಿರುವ ಆತ್ಮಶಕ್ತಿಯಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸಿ,” ಎಂದು ಬೇಡಿಕೊಂಡನು.
10 : ಆಗ ಎಲೀಯನು, “ನೀನು ದುರ್ಲಭವಾದದ್ದನ್ನು ಕೇಳಿಕೊಂಡೆ; ಆದರೂ ನನ್ನನ್ನು ನಿನ್ನ ಬಳಿಯಿಂದ ತೆಗೆಯಲಾಗುವಾಗ ನೀನು ನನ್ನನ್ನು ನೋಡುವುದಾದರೆ ಅದು ದೊರಕುವುದು; ಇಲ್ಲವಾದರೆ ದೊರಕುವುದಿಲ್ಲ,” ಎಂದನು.
11 : ಅವರು ಮಾತನಾಡುತ್ತಾ ಮುಂದೆ ಹೋಗುತ್ತಿರುವಾಗ ಫಕ್ಕನೆ ಅಗ್ನಿಮಯವಾದ ರಥರಥಾಶ್ವಗಳು ನಡುವೆ ಬಂದು ಅವರನ್ನು ವಿಂಗಡಿಸಿದವು. ಎಲೀಯನು ಸುಂಟರಗಾಳಿಯಲ್ಲಿ ಪರಲೋಕಕ್ಕೆ ಹೋದನು.
12 : ಎಲೀಷನು ಅದನ್ನು ನೋಡುತ್ತಾ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಯೇಲರಿಗೆ ರಥರಥಾಶ್ವಗಳಾಗಿದ್ದವರೇ,” ಎಂದು ಕೂಗಿಕೊಂಡನು. ಎಲೀಯನು ತನಗೆ ಕಾಣಿಸದೆ ಹೋದಮೇಲೆ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡುಮಾಡಿದನು.
13 : ಅನಂತರ ಅವನು ಮೇಲಿನಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು ಜೋರ್ಡನ್ ನದೀತೀರಕ್ಕೆ ಬಂದನು.
14 : “ಎಲೀಯನ ದೇವರಾದ ಸರ್ವೇಶ್ವರನೆಲ್ಲಿ?” ಎಂದುಕೊಂಡು ಆ ಕಂಬಳಿಯಿಂದ ನೀರನ್ನು ಹೊಡೆದನು. ಅದು ಇಬ್ಭಾಗ ಆಯಿತು. ಅವನು ದಾಟಿಹೋದನು.
15 : ದೂರದಲ್ಲಿ ನಿಂತಿದ್ದ ಜೆರಿಕೋವಿನ ಪ್ರವಾದಿಮಂಡಲಿಯವರು ಇದನ್ನು ಕಂಡು, “ಎಲೀಯನಿಗಿದ್ದ ಆತ್ಮಶಕ್ತಿ ಎಲೀಷನ ಮೇಲೆ ಬಂದು ನೆಲಸಿದೆ,” ಎಂದು ತಿಳಿದುಕೊಂಡರು. ಅವನನ್ನು ಎದುರುಗೊಂಡು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.
16 : ಅನಂತರ ಅವರು ಅವನಿಗೆ, “ನಿಮ್ಮ ಸೇವಕರಾದ ನಮ್ಮಲ್ಲಿ ಐವತ್ತುಮಂದಿ ಬಲಿಷ್ಠ ಜನರಿದ್ದಾರೆ; ನಿಮ್ಮ ಯಜಮಾನರನ್ನು ಹುಡುಕಲು ಹೋಗುವುದಕ್ಕೆ ಅವರಿಗೆ ಅಪ್ಪಣೆಯಾಗಲಿ. ಸರ್ವೇಶ್ವರನ ಆತ್ಮ ಅವರನ್ನು ಎತ್ತಿಕೊಂಡುಹೋಗಿ ಒಂದು ಬೆಟ್ಟದ ಮೇಲಾಗಲಿ, ತಗ್ಗಿನಲ್ಲಾಗಲಿ ಇಟ್ಟಿರಬಹುದು,” ಎಂದು ಹೇಳಿದರು. ಅವನು, “ನೀವು ಕಳುಹಿಸಬೇಡಿ,” ಎಂದನು.
17 : ಆದರೆ ಅವರು ಅವನನ್ನು ಒತ್ತಾಯಪಡಿಸಿದ್ದರಿಂದ ಅವನು ಬೇಸರಗೊಂಡು ಕಳುಹಿಸುವುದಕ್ಕೆ ಅಪ್ಪಣೆಕೊಟ್ಟನು. ಅವರು ಐವತ್ತುಮಂದಿಯನ್ನು ಕಳುಹಿಸಿದರು. ಇವರು ಮೂರು ದಿವಸ ಹುಡುಕಿದರೂ ಎಲೀಯನನ್ನು ಕಾಣಲಿಲ್ಲ.
18 : ಇನ್ನೂ ಜೆರಿಕೋವಿನಲ್ಲೇ ಇದ್ದ ಎಲೀಷನ ಬಳಿಗೆ ಅವರು ಬಂದರು. ಅವನು, “’ಹೋಗಬೇಡಿ,’ ಎಂದು ನಾನು ಹೇಳಲಿಲ್ಲವೇ?’ ಎಂದನು.
19 : ಜೆರಿಕೋವಿನ ಜನರು ಎಲೀಷ, “ನಮ್ಮ ಒಡೆಯರಾದ ನಿಮಗೆ ಗೊತ್ತಿರುವಂತೆ ಈ ಊರು ಕಟ್ಟಿಸಿರುವ ಸ್ಥಳ ಚೆನ್ನಾಗಿದೆ. ಆದರೆ ನೀರು ಕೆಟ್ಟದ್ದು. ಆದುದರಿಂದ ಗರ್ಭಪಾತ ಹೆಚ್ಚು,” ಎಂದು ಹೇಳಿದರು.
20 : ಆಗ ಎಲೀಷನು, “ಒಂದು ಹೊಸ ಮಡಕೆಯಲ್ಲಿ ಉಪ್ಪು ಹಾಕಿ ಅದನ್ನು ತಂದುಕೊಡಿ,” ಎಂದನು. ಅವರು ತಂದುಕೊಟ್ಟರು.
21 : ಅವನು ಬುಗ್ಗೆಗೆ ಹೋಗಿ ಆ ನೀರಿನಲ್ಲಿ ಉಪ್ಪುಹಾಕಿದನು; “’ಇನ್ನು ಮುಂದೆ ಈ ನೀರಿನಿಂದ ಮರಣವಾಗಲಿ ಗರ್ಭಪಾತವಾಗಲಿ ಸಂಭವಿಸದಂತೆ ಇದರಲ್ಲಿದ್ದ ದೋಷವನ್ನೆಲ್ಲಾ ಪರಿಹರಿಸಿದ್ದೇನೆ,’ ಎಂಬುದಾಗಿ ಸರ್ವೇಶ್ವರ ನುಡಿದಿದ್ದಾರೆ,” ಎಂದನು.
22 : ಕೂಡಲೆ ನೀರಿನಲ್ಲಿದ್ದ ದೋಷವೆಲ್ಲಾ ಪರಿಹಾರವಾಯಿತು. ಎಲೀಷನ ವಾಕ್ಯಬಲದಿಂದ ಅದು ಇಂದಿನವರೆಗೂ ಹಾಗೆಯೇ ಶುದ್ಧವಾಗಿದೆ.
23 : ಎಲೀಷನು ಅಲ್ಲಿಂದ ಬೇತೇಲಿಗೆ ಹೊರಟನು. ಅಲ್ಲಿನ ಗುಡ್ಡವನ್ನು ಹತ್ತುತ್ತಿರುವಾಗ ಆ ಊರಿನ ಹುಡುಗರು ಹೊರಗೆ ಬಂದರು. “ಬೋಳು ತಲೆಯವನೇ, ಏರು; ಬೋಳುತಲೆಯವನೇ ಏರು,” ಎಂದು ಕೂಗಿ ಅವನನ್ನು ಅಣಕಿಸಿದರು.
24 : ಎಲೀಷನು ಅವರ ಕಡೆಗೆ ತಿರುಗಿ, ಸರ್ವೇಶ್ವರನ ಹೆಸರಿನಲ್ಲಿ ಅವರನ್ನು ಶಪಿಸಿದನು. ಕೂಡಲೆ ಕಾಡಿನಿಂದ ಎರಡು ಹೆಣ್ಣುಕರಡಿಗಳು ಬಂದು ಆ ಹುಡುಗರಲ್ಲಿ ನಾಲ್ವತ್ತೆರಡು ಮಂದಿಯನ್ನು ಸೀಳಿಬಿಟ್ಟವು.
25 : ಎಲೀಷನು ಅಲ್ಲಿಂದ ಕಾರ್ಮೆಲ್ ಬೆಟ್ಟಕ್ಕೆ ಹೋಗಿ ಅನಂತರ ಸಮಾರಿಯಕ್ಕೆ ಬಂದನು.