ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
69ನೇ ಅಧ್ಯಾಯ
1 : ಒಡನೆ ಕೈ ನೀಡಿ ಕಾಪಾಡು ದೇವಾ I ಕುತ್ತಿಗೆಗೆ ಬಂದಿದೆ ತುಂಬು ಪ್ರವಾಹ II
2 : ಮುಳುಗುತಿಹೆನು ಕಳ್ಳುಸುಬಿನಲಿ; ಕಾಲೂರಲೆನಗೆ ನೆಲವಿಲ್ಲ I ಸಿಕ್ಕಿಹೆನು ಆಳ ಮಡುವಿನಲ್ಲಿ, ಹುಚ್ಚುಹೊಳೆ ಕೊಚ್ಚುತ್ತಿದೆಯಲ್ಲಾ II
3 : ಕಾಯ್ದು ಕಾಯ್ದು ಕಣ್ಣು ಗುಳಿಬಿದ್ದಿದೆ ದೇವಾ, ನಿನಗಾಗಿ I ಗಂಟಲು ಒಣಗಿದೆ, ಜೀವ ಸೊರಗಿದೆ, ನಿನ್ನ ಕೂಗಿ ಕೂಗಿ II
4 : ತಲೆ ಕೂದಲಿಗಿಂತ ಮಿಗಿಲಿಹರು ನಿಷ್ಕಾರಣ ದ್ವೇಷಿಗಳು I ಬಲಿಷ್ಟರಿಹರು ನನ್ನ ಕೊಲೆಗಡುಕರು, ನಿರ್ನಿಮಿತ್ತ ಶತ್ರುಗಳು I ಕಳ್ಳನಾನಲ್ಲನಾದರೂ ದಂಡಕೋರುತಿಹರು ವೈರಿಗಳು II
5 : ನನ್ನ ಮೂರ್ಖತನವನು ದೇವಾ, ನೀ ಬಲ್ಲೆಯಯ್ಯಾ I ನನ್ನಪರಾಧಗಳು ನಿನಗೆ ಮರೆಯಾಗಿಲ್ಲವಯ್ಯಾ II
6 : ಪ್ರಭು ಸೇನಾಧೀಶ್ವರಾ, I ನನ್ನಿಂದ ನಿರಾಶೆಯಾಗದಿರಲಿ, ನಿನ್ನ ನಂಬಿದವರಿಗೆ II ಇಸ್ರಯೇಲರ ದೇವಾ I ನನ್ನಿಂದ ನಿಂದೆಯಾಗದಿರಲಿ ನಿನ್ನ ದರ್ಶನಾರ್ಥಿಗಳಿಗೆ II
7 : ನಿನಗಾಗಿಯೇ ನಾ ನಿಂದೆಗೊಳಗಾದೆನಯ್ಯಾ I ನಾಚಿಕೆಯಿಂದಲೆ ಮುಖ ಮುಚ್ಚಿಕೊಂಡೆನಯ್ಯಾ II
8 : ನನ್ನವರಿಗೇ ನಾನನ್ಯನಾದೆನಯ್ಯಾ I ಒಡ ಹುಟ್ಟಿದವರಿಗೇ ಹೊರಗಿನವನಾದೆನಯ್ಯಾ II
9 : ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ I ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ II
10 : ಅತ್ತತ್ತು ನಾ ಒಪ್ಪೊತ್ತಿದ್ದುದೆಲ್ಲಾ I ಚುಚ್ಚುಮಾತಿಗೆ ಕಾರಣವಾಯಿತಲ್ಲಾ II
11 : ಗೋಣಿತಟ್ಟನು ನಾನುಟ್ಟುಕೊಂಡೆನಯ್ಯಾ I ಅಣಕ ಅವಹೇಳನಕೆ ಗುರಿಯಾದೆನಯ್ಯಾ II
12 : ಊರ ಬಾಗಿಲಲಿ ಕೂರುವವರ ಹರಟೆಗೆ ಕಾರಣನಾದೆನಯ್ಯಾ I ಸಾರಾಯಿ ಮದ್ಯಸಾರ ಕುಡಿವವರ ಪದ್ಯವಸ್ತುವಾದೆನಯ್ಯಾ II
13 : ಪ್ರಸನ್ನಕಾಲದಲ್ಲಿ ಪ್ರಭು, ನಾ ಮೊರೆಯಿಡುತ್ತಿರುವೆ ನಿನಗೆ I ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ II
14 : ಕಳ್ಳುಸುಬಿನಲಿ ನಾನಿಳಿದು ಹೋಗದಂತೆ ಸೆಳೆದುಕೊ I ಪೊಳ್ಳು ದುರುಳರ ಮಡುವಿನಲಿ ನಾ ಮುಳುಗದಂತೆ ಎಳೆದುಕೊ II
15 : ಹುಚ್ಚು ಹೊಳೆಯು ಎನ್ನ ಕೊಚ್ಚದಿರಲಯ್ಯಾ I ಮಡುವು ಎನ್ನ ಸೆಳೆದುಕೊಳ್ಳದಿರಲಯ್ಯಾ I ಪಾತಾಳವೆನ್ನನು ನುಂಗದಿರಲಯ್ಯಾ II
16 : ಆಲಿಸೆನ್ನ ಪ್ರಭು, ನಿನ್ನ ಪ್ರೀತಿ ಸುಮಧುರ I ಕಟಾಕ್ಷಿಸೆನ್ನನು ದೇವಾ, ಕರುಣಾಸಾಗರ II
17 : ನಿನ್ನ ದಾಸನಿಗೆ ವಿಮುಖನಾಗಬೇಡಯ್ಯಾ I ಆಪತ್ತಿನಲ್ಲಿರುವೆ, ತಡಮಾಡಬೇಡಯ್ಯಾ II
18 : ಹತ್ತಿರ ಬಂದೆನ್ನ ಉದ್ಧರಿಸಯ್ಯಾ I ಶತ್ರುಗಳ ಕೈಯಿಂದ ರಕ್ಷಿಸಯ್ಯಾ II
19 : ನನಗಾದ ನಿಂದೆ, ಅಪಮಾನ, ಲಜ್ಜೆ ನಿನಗೆ ತಿಳಿದಿದೆಯಯ್ಯಾ I ನನ್ನ ವೈರಿ ವಿರೋಧಿಗಳು ನಿನಗೆ ಮರೆಯಾಗಿಲ್ಲವಯ್ಯಾ II
20 : ನಿಂದೆಯಿಂದ ಮನನೊಂದು ಹತಾಶನಾಗಿರುವೆನಯ್ಯಾ I ಹಾತೊರೆದರೂ ದಯೆತೋರುವನಾರೂ ಸಿಗಲಿಲ್ಲ I ಅರಸಿದರೂ ಸಾಂತ್ವನನೀಡುವವನು ದೊರಕಲಿಲ್ಲ II
21 : ಹಸಿದ ನನಗೆ ವಿಷಬೆರೆತ ಆಹಾರವಿತ್ತರಯ್ಯಾ I ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ II
22 : ಅವರಿಗೆ ಬಡಿಸಿದ ಊಟವೇ ಅವರಿಗೆ ಉರುಲಾಗಲಿ I ಅವರ ಹಬ್ಬದೌತಣವೇ ಅವರಿಗೆ ಬೋನಾಗಲಿ II
23 : ಅವರ ಕಣ್ಣು ಮಬ್ಬಾಗಿ ಕಾಣದೆಹೋಗಲಿ I ಅವರ ಸೊಂಟ ಬಿಡುವಿಲ್ಲದೆ ನಡುಗುತ್ತಿರಲಿ II
24 : ನಿನ್ನ ರೌದ್ರ ಅವರ ಮೇಲೆರಗಲಿ I ನಿನ್ನ ಕೋಪಾಗ್ನಿ ಅವರನು ದಹಿಸಲಿ II
25 : ಅವರ ಪಾಳೆಯ ಹಾಳು ಬೀಳಲಿ I ಅವರ ಗುಡಾರ ಬಿಕೋ ಎನಿಸಲಿ II
26 : ನೀ ಗಾಯಪಡಿಸಿದವರನು ಪೀಡಿಸುತಿಹರು I ಗಾಯದ ಮೇಲೆ ಬರೆಯೆಳೆಯುತಿಹರು II
27 : ದಂಡನೆ ಮೇಲೆ ದಂಡನೆಯನು ಅವರಿಗೆ ವಿಧಿಸು I ಅವರು ನಿರಪರಾಧಿಗಳೆಂಬುದನು ತಪ್ಪಿಸು II
28 : ಉಳಿಸಬೇಡವರನು ಜೀವಬಾಧ್ಯರ ಪಟ್ಟಿಯಲಿ I ಸೇರಿಸಬೇಡವರನು ಸಜ್ಜನರ ಸಂಖ್ಯೆಯಲಿ II
29 : ದೇವಾ, ನಾ ನೊಂದುಬೆಂದಿಹೆನಯ್ಯಾ I ಉದ್ಧರಿಸಿ ನನ್ನನು ಕಾಪಾಡಯ್ಯಾ II
30 : ಸಂಕೀರ್ತಿಸುವೆನು ದೇವರ ಶ್ರೀನಾಮವನು I ಕೃತಜ್ಞತೆಯಿಂದಾತನನು ಕೊಂಡಾಡುವೆನು II
31 : ಸ್ವಾಮಿ ದೇವನಿಗಿದುವೇ ಸುಪ್ರೀತಿ I ಕೊಂಬುಗೊರಸುಳ್ಳ ಗೂಳಿಬಲಿಗಿಂತ II
32 : ಇದನರಿತು ದೀನದಲಿತರು ಆನಂದಗೊಳ್ಳಲಿ I ದೇವನನು ಅರಸುವವರು ಪುನಶ್ಚೇತನಗೊಳ್ಳಲಿ II
33 : ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು I ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು II
34 : ಭೂಮ್ಯಾಕಾಶಗಳು ಆತನನು ಕೊಂಡಾಡಲಿ I ಸಾಗರಗಳು, ಜಲಚರಗಳು ಆತನನು ಭಜಿಸಲಿ II
35 : ರಕ್ಷಿಸುವನು ದೇವನು ಆ ಸಿಯೋನ್ ಪಟ್ಟಣವನು I ಕಟ್ಟಿಸುವನು ಯೆಹೂದ ನಾಡಿನ ನಗರಗಳನು I ಸ್ವಂತವಾಗಿರಿಸಿಕೊಂಬರು ಆತನ ಪ್ರಜೆ ಅದನು II
36 : ಅವರ ವಂಶಜರೇ ಬಾಧ್ಯಸ್ಥರಾಗುವರದಕೆ I ದೇವರನಾಮ ಪ್ರಿಯರೇ ನಿವಾಸಿಗಳು ಅದಕೆ II