வேதாகமம்
ಹಳೆಯ ಒಡಂಬಡಿಕೆ
ಯೆಜೆಕಿಯೇಲನು
23ನೇ ಅಧ್ಯಾಯ
1 : ಸರ್ವೇಶ್ವರ ಮತ್ತೊಂದು ವಾಣಿಯನ್ನು ನನಗೆ ದಯಪಾಲಿಸಿದರು:
2 : “ನರಪುತ್ರನೇ, ಒಬ್ಬ ತಾಯಿಯ ಮಕ್ಕಳಾದ ಇಬ್ಬರು ಹೆಂಗಸರಿದ್ದರು.
3 : ಅವರು ಈಜಿಪ್ಟಿನಲ್ಲಿ ಸೂಳೆತನ ಮಾಡುತ್ತಿದ್ದರು. ಬಾಲ್ಯದಲ್ಲಿ ವೇಶ್ಯೆಯರಾಗಿ ನಡೆಯುತ್ತಿದ್ದರು. ಅಲ್ಲಿನ ಪುರುಷರು ಅವರ ಸ್ತನಗಳನ್ನು ಹಿಸುಕಿದರು, ಎಳೆಯ ತೊಟ್ಟುಗಳನ್ನು ಸವರಿಸಿದರು.
4 : ಹಿರಿಯಳ ಹೆಸರು ಒಹೊಲ, ಕಿರಿಯವಳ ಹೆಸರು ಒಹೊಲೀಬ. ಅವರು ನನ್ನವರಾಗಿ ಗಂಡು ಹೆಣ್ಣು ಮಕ್ಕಳನ್ನು ಹೆತ್ತರು. ಒಹೊಲ ಸಮಾರಿಯವನ್ನೂ, ಒಹೊಲೀಬ ಜೆರುಸಲೇಮನ್ನೂ ಸೂಚಿಸುವ ಹೆಸರುಗಳು.
5 : ಒಹೊಲಳು ನನ್ನವಳಾಗಿದ್ದರೂ ಹಾದರ ನಡೆಸಿ
6 : ತನ್ನ ಮಿಂಡರನ್ನು ಅಂದರೆ, ಯೋಧರು, ನೀಲಾಂಬರರು, ಅಶ್ವಾರೂಢರು, ನಾಯಕ-ಉಪನಾಯಕರು ಎಲ್ಲ ಮನೋಹರ ಯುವಕರೂ ಆದ ಅಸ್ಸೀರಿಯರನ್ನು ಮೋಹಿಸಿ ಅವರಿಗೆ
7 : ತನ್ನನ್ನು ಸೂಳೆಯಾಗಿ ಒಪ್ಪಿಸಿಕೊಂಡಳು; ಇವರೆಲ್ಲರು ಅಸ್ಸೀರಿಯದಲ್ಲಿನ ಗಣ್ಯವ್ಯಕ್ತಿಗಳು; ಅವಳು ಯಾರನ್ನು ಮೋಹಿಸಿದಳೋ ಅವರ ವಿಗ್ರಹಗಳಿಂದ ತನ್ನನ್ನೇ ಹೊಲಸುಮಾಡಿಕೊಂಡಳು.
8 : ಅವಳು ಈಜಿಪ್ಟಿನಲ್ಲಿ ಇದ್ದಂದಿನಿಂದಲೂ ತನ್ನ ಸೂಳೆತನವನ್ನು ಬಿಡಲಿಲ್ಲ; ಬಾಲ್ಯದಲ್ಲಿಯೇ ಅಲ್ಲಿಯವರು ಅವಳೊಂದಿಗೆ ಮಲಗಿ, ಅವಳ ಎಳೆಯ ತೊಟ್ಟುಗಳನ್ನು ನಸುಕಿ, ಅವಳ ಸಂಗಡ ಸೂಳೆಗಾರಿಕೆಯನ್ನು ಹೆಚ್ಚೆಚ್ಚಾಗಿ ಮಾಡಿದರು.
9 : ಆದಕಾರಣ ನಾನು ಅವಳನ್ನು ಅವಳ ಮಿಂಡರ ಕೈಗೆ ಅಂದರೆ, ಅವಳು ಮೋಹಿಸಿದ ಅಸ್ಸೀರಿಯರ ಕೈಗೆ ಒಪ್ಪಿಸಿದೆ.
10 : ಇವರು ಅವಳನ್ನು ಅವಮಾನಪಡಿಸಿ, ಅವಳ ಗಂಡು ಹೆಣ್ಣು ಮಕ್ಕಳನ್ನು ಎತ್ತಿಕೊಂಡು ಹೋಗಿ, ಅವಳನ್ನು ಖಡ್ಗದಿಂದ ಸಂಹರಿಸಿದರು. ನ್ಯಾಯನಿರ್ಣಯವಾಗುವಾಗ ಹೆಂಗಸರಲ್ಲಿ ಅವಳಿಗೆ ಕೆಟ್ಟ ಹೆಸರು ಬಂದಿತು.
11 : “ಅವಳ ತಂಗಿಯಾದ ಒಹೊಲೀಬಳು ಇದನ್ನು ನೋಡಿಯೂ ಅವಳಿಗಿಂತ ಅಧಿಕವಾಗಿ ಮೋಹಗೊಂಡು, ಅಕ್ಕನ ಹಾದರಕ್ಕಿಂತ ಹೆಚ್ಚಾಗಿ ಹಾದರವನ್ನು ನಡೆಸಿ ಅವಳನ್ನು ಮೀರುವಷ್ಟು ಕೆಟ್ಟವಳಾದಳು.
12 : ಇವಳು ನಾಯಕ-ಉಪನಾಯಕರೂ ಯೋಧರೂ ವಿಚಿತ್ರ ವಸ್ತ್ರಧಾರಿಗಳೂ ಅಶ್ವಾರೂಢರೂ ಎಲ್ಲ ಮನೋಹರ ಯುವಕರೂ ಆದ ಅಸ್ಸೀರಿಯರನ್ನು ಮೋಹಿಸಿದಳು.
13 : ಇವಳೂ ಅಪವಿತ್ರಳಾದುದ್ದನ್ನು ಕಂಡೆನು. ಇಬ್ಬರೂ ಒಂದೇ ಮಾರ್ಗವನ್ನು ಹಿಡಿದಿದ್ದರು.
14 : “ಇವಳು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿದಳು; ಬಾಬಿಲೋನಿಯರ ಚಿತ್ರಗಳನ್ನು ಅಂದರೆ, ಸೊಂಟಕ್ಕೆ ನಡುಕಟ್ಟನ್ನು ಕಟ್ಟಿ, ತಲೆಗೆ ಚುಂಗಿನ ರುಮಾಲನ್ನು ಧರಿಸಿ, ನೋಟಕ್ಕೆ ಸರದಾರರಂತಿದ್ದ ಆ ಬಾಬಿಲೋನಿನ ಕಸ್ದೀಯರ ಆಕಾರಗಳನ್ನು ಗೋಡೆಯಲ್ಲಿ ಕಿರಮಂಜಿಯಿಂದ ಚಿತ್ರಿಸಿರುವುದನ್ನು ನೋಡಿದ ಕೂಡಲೆ ಇವಳು ಮೋಹಗೊಳ್ಳುತ್ತಿದ್ದಳು.
15 : “ಇವಳು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿದಳು; ಬಾಬಿಲೋನಿಯರ ಚಿತ್ರಗಳನ್ನು ಅಂದರೆ, ಸೊಂಟಕ್ಕೆ ನಡುಕಟ್ಟನ್ನು ಕಟ್ಟಿ, ತಲೆಗೆ ಚುಂಗಿನ ರುಮಾಲನ್ನು ಧರಿಸಿ, ನೋಟಕ್ಕೆ ಸರದಾರರಂತಿದ್ದ ಆ ಬಾಬಿಲೋನಿನ ಕಸ್ದೀಯರ ಆಕಾರಗಳನ್ನು ಗೋಡೆಯಲ್ಲಿ ಕಿರಮಂಜಿಯಿಂದ ಚಿತ್ರಿಸಿರುವುದನ್ನು ನೋಡಿದ ಕೂಡಲೆ ಇವಳು ಮೋಹಗೊಳ್ಳುತ್ತಿದ್ದಳು.
16 : ಬಾಬಿಲೋನಿಯಾದ ಆ ವ್ಯಕ್ತಿಗಳ ಬಳಿಗೆ ದೂತರನ್ನು ಕಳುಹಿಸುತ್ತಿದ್ದಳು.
17 : ಆ ಬಾಬಿಲೋನಿನವರು ಇವಳ ರತಿಮಂಚವನ್ನೇರಿ ತಮ್ಮ ಕಾಮತೃಷೆಯಿಂದ ಇವಳನ್ನು ಕೆಡಿಸಿದರು; ಇವಳು ಅವರಿಂದ ಎಷ್ಟು ಅಶುದ್ಧಳಾದಳೆಂದರೆ ಇವಳಿಗೇ ಅವರ ಬಗ್ಗೆ ಜಿಗುಪ್ಸೆ ಹುಟ್ಟಿತು.
18 : ಇವಳು ಮುಚ್ಚುಮರೆಯಿಲ್ಲದೆ ಹಾದರಮಾಡಿ ತನ್ನ ಮಾನವನ್ನೇ ಕೆಡಿಸಿಕೊಂಡಾಗ ನನ್ನ ಅನುರಾಗ, ಮೊದಲು ಇವಳ ಅಕ್ಕನಿಂದ ದೂರವಾದ ಹಾಗೆ, ಇವಳಿಂದಲೂ ದೂರವಾಯಿತು.
19 : ಆದರೂ ಇವಳು ತಾನು ಈಜಿಪ್ಟ್ ದೇಶದಲ್ಲಿ ಸೂಳೆಯಾಗಿದ್ದ ತನ್ನ ತಾರುಣ್ಯವನ್ನು ನೆನಪುಮಾಡಿಕೊಂಡು ತನ್ನ ಸೂಳೆತನವನ್ನು ಇನ್ನೂ ಹೆಚ್ಚಿಸಿದಳು.
20 : ಕತ್ತೆಗಳಂತೆ ಬೆದೆಯುಳ್ಳವರು, ಕುದುರೆಗಳಂತೆ ದಾಟುವವರು ಆದ ಕಸ್ದೀಯ ಮಿಂಡರನ್ನು ಮೋಹಿಸಿದಳು.
21 : ಒಹೊಲೀಬಳೇ, ನಿನ್ನ ಪುಟ್ಟ ಮೊಲೆಗಳಿಗೆ ಆಸೆಬಿದ್ದ ಈಜಿಪ್ಟ್ರಿಂದ ತೊಟ್ಟುಗಳನ್ನು ಚಿವುಟಿಸಿಕೊಂಡ ನಿನ್ನ ತಾರುಣ್ಯದ ಕಾಮವನ್ನು ನೀನು ನೆನಪಿಗೆ ತಂದುಕೊಂಡು ಆ ಮಿಂಡರನ್ನು ಮೋಹಿಸಿದೆಯಲ್ಲವೆ?”
22 : ಹೀಗಿರಲು, ಒಹೊಲೀಬಳೇ, ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಇಗೋ, ಯಾವ ಮಿಂಡರಿಂದ ನಿನ್ನ ಆಸೆ ತೊಲಗಿತೋ ಆ ಮಿಂಡರನ್ನು ಅಂದರೆ, ಮನೋಹರ ಯುವಕರು, ಎಲ್ಲ ನಾಯಕ ಉಪನಾಯಕರು, ಪ್ರಭುಪ್ರಧಾನರು, ಅಶ್ವಾರೂಢರು ಆದ ಬಾಬಿಲೋನಿನವರು,
23 : ಸಮಸ್ತ ಕಸ್ದೀಯರು, ಪಕೋದಿನವರು, ಷೋಯದವರು, ಕೋಯದವರು, ಇವರನ್ನೂ ಇವರೊಂದಿಗೆ ಅಸ್ಸೀರಿಯರೆಲ್ಲರನ್ನೂ ನಾನು ನಿನಗೆ ವಿರುದ್ಧ ಎಬ್ಬಿಸಿ, ಎಲ್ಲ ಕಡೆಯಿಂದಲೂ ನಿನ್ನ ಮೇಲೆ ಬೀಳುವಂತೆ ಮಾಡುವೆನು.
24 : ಅವರು ಆಯುಧ, ರಥ, ಸರಕುಗಾಡಿ, ಜನಾಂಗಗಳ ಸಮೂಹ, ಇವುಗಳೊಂದಿಗೆ ನಿನ್ನ ಮೇಲೆ ಬೀಳುವರು; ಗುರಾಣಿ, ಖೇಡ್ಯ, ಶಿರಸ್ತ್ರಾಣ, ಇವುಗಳನ್ನು ಧರಿಸಿ, ನಿನಗೆ ವಿರುದ್ಧ ಸುತ್ತುಮುತ್ತಲು ವ್ಯೂಹ ಕಟ್ಟುವರು. ನ್ಯಾಯತೀರಿಸುವ ಅಧಿಕಾರವನ್ನು ನಾನು ಅವರಿಗೆ ಕೊಡುವೆನು; ಅವರು ತಮ್ಮ ನ್ಯಾಯಾನುಸಾರ ತೀರ್ಪುನೀಡಿ ನಿನ್ನನ್ನು ದಂಡಿಸುವರು.
25 : ನಾನು ನನ್ನ ರೋಷವನ್ನು ನಿನ್ನ ಮೇಲೆ ಸುರಿಯಲು ಅವರು ನಿನ್ನಲ್ಲಿ ಕೋಪ ತೀರಿಸಿಕೊಳ್ಳುವರು; ನಿನ್ನ ಮೂಗುಕಿವಿಗಳನ್ನು ಕತ್ತರಿಸಿಬಿಡುವರು; ನಿನ್ನಲ್ಲಿ ಉಳಿದವರು ಖಡ್ಗಕ್ಕೆ ತುತ್ತಾಗುವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನ ಜನಶೇಷವು ಅಗ್ನಿಗೆ ಆಹುತಿಯಾಗುವುದು.
26 : ನಿನ್ನ ವಸ್ತ್ರಗಳನ್ನು ಸೆಳೆದು, ನಿನ್ನ ಚಂದದ ಒಡವೆಗಳನ್ನು ಕಳಚಿಬಿಡುವರು.
27 : ಹೀಗೆ ನಾನು ನಿನ್ನ ಲಂಪಟತನವನ್ನೂ ನೀನು ಈಜಿಪ್ಟಿನಲ್ಲಿ ಇದ್ದಂದಿನಿಂದ ನಡೆದುಬಂದ ನಿನ್ನ ಸೂಳೆತನವನ್ನೂ ನಿನ್ನಿಂದ ತೊಲಗಿಸುವೆನು. ಆಮೇಲೆ ನೀನು ಅವರ ಕಡೆಗೆ ಇನ್ನು ಕಣ್ಣೆತ್ತದೆ ಈಜಿಪ್ಟನ್ನು ನೆನಪಿಗೆ ತಂದುಕೊಳ್ಳಲಾರೆ.”
28 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಇಗೋ, ನೀನು ಯಾರನ್ನು ಹಗೆಮಾಡುತ್ತೀಯೋ ಯಾರ ಬಗ್ಗೆ ಅಸಹ್ಯಪಡುತ್ತಿಯೋ
29 : ಅವರ ಕೈಗೆ ನಿನ್ನನ್ನು ನಾನು ಒಪ್ಪಿಸುವೆನು. ಅವರು ನಿನ್ನಲ್ಲಿ ಹಗೆ ತೀರಿಸಿಕೊಳ್ಳುವರು. ನೀನು ದುಡಿದದ್ದನ್ನೆಲ್ಲಾ ಅಪಹರಿಸಿ, ನಿನ್ನನ್ನು ಬಟ್ಟಬರಿದುಮಾಡಿ ಬಿಟ್ಟುಬಿಡುವರು; ಹೀಗೆ ನಾಚಿಕೆಗೀಡಾದ ನಿನ್ನ ಹಾದರವು, ಹೌದು, ನಿನ್ನ ಲಂಪಟತನ ಹಾಗು ಸೂಳೆತನ ಬಯಲಿಗೆ ಬರುವುವು.
30 : ಈ ವಿಪತ್ತುಗಳು ನಿನಗೆ ಸಂಭವಿಸುವುದಕ್ಕೆ, ನೀನು ಜನಾಂಗಗಳನ್ನು ಮೋಹಿಸಿ ಅವರ ವಿಗ್ರಹಗಳಿಂದ ನಿನ್ನನ್ನೇ ಹೊಲಸುಮಾಡಿಕೊಂಡಿದ್ದೇ ಕಾರಣ.
31 : ನೀನು ನಿನ್ನ ಅಕ್ಕನ ಹಾದಿಯಲ್ಲೆ ನಡೆದುಕೊಂಡದ್ದರಿಂದ ಅವಳು ಕುಡಿದ ಪಾತ್ರೆಯನ್ನೇ ನಿನ್ನ ಕೈಗೆ ಕೊಡುವೆನು.”
32 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಆಳವೂ ಅಗಲವೂ ಬಹಳ ಹಿಡಿಯುವುದೂ ಆದ ನಿನ್ನ ಅಕ್ಕನ ಪಾತ್ರೆಯಲ್ಲೇ ನೀನೂ ಕುಡಿದು ಹಾಸ್ಯಕ್ಕೂ ಕುಚೋದ್ಯಕ್ಕೂ ಗುರಿಯಾಗುವೆ. ಸಮಾರಿಯಳೆಂಬ ನಿನ್ನ ಅಕ್ಕನು ಕುಡಿದ ಬೆಚ್ಚುಬೆರಗಿನಾ ಕೊಡದಿಂದಲೇ
33 : ನೀನೂ ಕುಡಿದು, ಕುಡಿದು ಪೂರಾ ಅಮಲೇರಿ ದುಃಖಭರಿತಳಾಗುವೆ. ಅದರಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿಯುವೆ.
34 : ಅದರ ಬೋಕಿಗಳನ್ನು ಕಚ್ಚಿ, ನೆಕ್ಕಿ, ನಿನ್ನ ಮೊಲೆಗಳನ್ನು ಬಗೆದುಕೊಳ್ಳುವೆ. ಇದು ನನ್ನ ಅಪ್ಪಣೆ ಎಂಬುದೇ ಸರ್ವೇಶ್ವರನಾದ ದೇವರ ನುಡಿ.
35 : ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ. ‘ನೀನು ನನ್ನನ್ನು ಮರೆತು, ನನಗೆ ಬೆನ್ನುಮಾಡಿದ್ದರಿಂದ ನಿನ್ನ ಲಂಪಟತನದ ಮತ್ತು ಸೂಳೆತನದ ಫಲವನ್ನು ಅನುಭವಿಸಬೇಕು.’
36 : ಸರ್ವೇಶ್ವರ ನನಗೆ ಹೀಗೆ ಹೇಳಿದರು: “ನರಪುತ್ರನೇ, ಒಹೊಲಳಿಗೂ ಒಹೊಲೀಬಳಿಗೂ ನ್ಯಾಯತೀರಿಸಲು ನಿನ್ನ ಮನಸ್ಸು ಸ್ಥಿರವಾಗಿದೆಯೇ? ಹಾಗಾದರೆ ಅವರ ದುರಾಚಾರಗಳನ್ನು ಅವರಿಗೆ ತಿಳಿಸು.
37 : ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಸಿಕ್ತವಾಗಿದೆ, ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡುಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಆಹುತಿಕೊಟ್ಟಿದ್ದಾರೆ.
38 : ಇದಲ್ಲದೆ, ನನಗೆ ಈ ಅಪರಾಧವನ್ನು ನಡೆಸಿದ್ದಾರೆ: ಆಹುತಿಕೊಟ್ಟ ದಿನದಲ್ಲೇ ನನ್ನ ಪವಿತ್ರಾಲಯವನ್ನು ಅಪವಿತ್ರಪಡಿಸಿ, ನಾನು ನೇಮಿಸಿದ ಸಬ್ಬತ್ ದಿನವನ್ನು ಅಶುದ್ಧ ಮಾಡಿದರು.
39 : ತಮ್ಮ ಮಕ್ಕಳನ್ನು ಕೊಂದು, ತಮ್ಮ ವಿಗ್ರಹಗಳಿಗೆ ಅರ್ಪಿಸಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಸೇರಿ ಅಪವಿತ್ರಮಾಡಿದರು; ಹೌದು, ನನ್ನ ಮಂದಿರದ ನಟ್ಟನಡುವೆ ಇದನ್ನು ನಡೆಸಿದರು.
40 : “ಇಷ್ಟರಲ್ಲಿ ದೂತನನ್ನು ಕಳುಹಿಸಿ ಪುರುಷರನ್ನು ದೂರದಿಂದ ಕರೆಯಿಸಿಕೊಂಡರು. ಇಗೋ, ಅವರೂ ಬಂದರು. ಎಲೌ ಹೆಂಗಸೇ, ಅವರಿಗಾಗಿ ನೀನು ಸ್ನಾನಮಾಡಿ, ಕಣ್ಣಿಗೆ ಕಾಡಿಗೆ ಹಚ್ಚಿ,
41 : ನಿನ್ನನ್ನು ಆಭರಣಗಳಿಂದ ಸಿಂಗರಿಸಿಕೊಂಡು ವೈಭವದ ಮಂಚದ ಮೇಲೆ ಕೂತಿರುವೆ. ಅದರ ಮುಂದೆ ಔತಣಕ್ಕೆ ಸಿದ್ಧವಾಗಿದ್ದ ಮೇಜಿನ ಮೇಲೆ ನನ್ನ ಧೂಪತೈಲಗಳನ್ನು ಇಟ್ಟಿರುವೆ.
42 : ಅಲ್ಲಿ ವಿನೋದ ಪ್ರಿಯರ ದೊಡ್ಡ ಗುಂಪಿನವರ ಕಳಕಳವಾಯಿತು; ಅರಣ್ಯದಿಂದ ಕರೆಯಿಸಿಕೊಂಡ ಕುಡುಕರು ನಾಡಾಡಿಗರೊಂದಿಗೆ ಸೇರಿ ಅಸ್ಸೀರಿಯರಿಬ್ಬರ ಕೈಗೆ ಕಡಗವನ್ನು ತೊಡಿಸಿ, ಅವರ ತಲೆಗೆ ಸುಂದರ ಕಿರೀಟವನ್ನಿಟ್ಟರು.
43 : ಆಗ ನಾನು - ‘ಆಹಾ, ಕಳೆಗುಂದಿದವಳಿಗೆ ಇನ್ನೂ ವ್ಯಭಿಚಾರವೇ! ಇವರು ಅವಳೊಂದಿಗೆ ಅವಳು ಇವರೊಂದಿಗೆ ಜಾರತನ ಮಾಡುತ್ತಾರಲ್ಲಾ’ ಎಂದುಕೊಂಡೆ.
44 : ಸೂಳೆಯನ್ನು ಸೇರುವ ಹಾಗೆ ಈ ಜನರು ಅವಳನ್ನು ಸೇರಿದರು; ಹೌದು, ಕೆಟ್ಟಹೆಂಗಸರಾದ ಒಹೊಲಳನ್ನೂ ಒಹೊಲೀಬಳನ್ನೂ ಸೇರಿದರು.
45 : ಸದ್ಧರ್ಮಿಗಳು ಅವರಿಗೆ ನ್ಯಾಯತೀರಿಸಿ ವ್ಯಭಿಚಾರಿಣಿಯರಿಗೂ ರಕ್ತಹರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು; ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಸಿಕ್ತವಾಗಿದೆ.”
46 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ನಾನು ಈ ಹೆಂಗಸರ ದಂಡನೆಗಾಗಿ ಸಭೆಯನ್ನು ಸೇರಿಸುವೆನು. ಇವರನ್ನು ಸೂರೆಗೆ ಒಳಗಾಗಿಸಿ ಎಲ್ಲರಿಗೂ ಭಯಾಸ್ಪದವಾಗುವಂತೆ ಮಾಡುವೆನು.
47 : ಸಭೆಯವರು ಇವರ ಮೇಲೆ ಕಲ್ಲುತೂರಿ, ಕತ್ತಿಗಳಿಂದ ಸಂಹರಿಸಿ, ಇವರ ಗಂಡುಹೆಣ್ಣು ಮಕ್ಕಳನ್ನು ಕೊಂದು, ಇವರ ಮನೆಗಳನ್ನು ಬೆಂಕಿಯಿಂದ ಸುಟ್ಟುಬಿಡುವರು.
48 : ಹೀಗೆ ನಾನು ನಾಡಿನೊಳಗಿಂದ ಲಂಪಟತನವನ್ನು ತೊಲಗಿಸುವೆನು; ಇದರಿಂದ ಸಮಸ್ತ ಮಹಿಳೆಯರಿಗೂ ನಿಮ್ಮ ಲಂಪಟತನವನ್ನೂ ಅನುಸರಿಸಬಾರದೆಂಬ ಬುದ್ಧಿ ಬರುವುದು.
49 : ನಿಮ್ಮ ಲಂಪಟತನದ ಫಲವನ್ನು ನಿಮಗೇ ತಿನ್ನಿಸುವರು; ನಿಮ್ಮ ವಿಗ್ರಹಗಳಿಂದಾದ ನಿಮ್ಮ ಪಾಪದ ಫಲವನ್ನು ನೀವು ಅನುಭವಿಸಿ, ನಾನೇ ಸರ್ವೇಶ್ವರನಾದ ದೇವರು ಎಂದು ತಿಳಿದುಕೊಳ್ಳುವಿರಿ.”