P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
29ನೇ ಅಧ್ಯಾಯ
- Verse 1: ಸುರಪುತ್ರರೇ, ಪ್ರಭುವಿನ ಸ್ತುತಿಮಾಡಿರಿ I ಬಲುಮೆ, ಮಹಿಮೆ, ಅವನದೇ ಎಂದು ಸಾರಿರಿ II
- Verse 2: ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು I ಪೂಜಿಸಿರಿ ಪವಿತ್ರಾಂಬರರಾಗಿ ಆತನನು II
- Verse 3: ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ I ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ I ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ II
- Verse 4: ಪ್ರಭುವಿನ ಧ್ವನಿ ಶಕ್ತಿಯುತ I ಆತನ ಶಬ್ಧ ವೈಭವಯುತ II
- Verse 5: ಆತನ ಗರ್ಜನೆಗೆ ಮುರಿದುಬೀಳುವುವು ದೇವದಾರು ಮರಗಳು I ಹೌದ್ಹೌದು, ಸೀಳಿ ಹೋಳಾಗುವುವು ಲೆಬನೋನಿನ ಮಹಾ ವೃಕ್ಷಗಳು II
- Verse 6: ಜಿಗಿಯುವುದು ಲೆಬನೋನ್ ಪರ್ವತ ಎಳೆಗರುವಿನಂತೆ I ನೆಗೆಯುವುದು ಗಿರಿ ಸಿಯೋನ್ ಕಾಡೆಮ್ಮೆಯ ಕರುವಂತೆ II
- Verse 7: ಆತನ ಮಹಾ ಗರ್ಜನೆಗೆ ಥಳಥಳಿಸುವುವು ಕೋಲ್ಮಿಂಚುಗಳು I ಕಂಪಿಸುವುದು ಕಾದೇಶ ಅರಣ್ಯ, ಕದಲುವುವು ಕಾಡುಮೇಡುಗಳು II
- Verse 8: ಆತನ ಮಹಾ ಗರ್ಜನೆಗೆ ಥಳಥಳಿಸುವುವು ಕೋಲ್ಮಿಂಚುಗಳು I ಕಂಪಿಸುವುದು ಕಾದೇಶ ಅರಣ್ಯ, ಕದಲುವುವು ಕಾಡುಮೇಡುಗಳು II
- Verse 9: ಈಯುವುವು ಜಿಂಕೆಗಳು, ನಗ್ನವಾಗುವುವು ವೃಕ್ಷಗಳು I ಜಯಜಯ ಘೋಷಮಾಡುವರೆಲ್ಲರು ಆತನಾಲಯದೊಳು II
- Verse 10: ಜಲಪ್ರಳಯದೊಳು ಪ್ರಭು ಆಸೀನನಾಗಿಹನು I ಯುಗಯುಗಾಂತರಕು ಅರಸನಾಗಿ ಆಳುವನು II
- Verse 11: ಅನುಗ್ರಹಿಸಲಿ ಪ್ರಭು ತನ್ನ ಜನರಿಗೆ ಶಕ್ತಿಯನು I ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು II