P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
85ನೇ ಅಧ್ಯಾಯ
1 : ಪ್ರಭೂ, ತೋರಿಸಿದೆ ಕರುಣೆ ನಿನ್ನ ನಾಡಿಗೆ I ಮರಳಿಸಿದೆ ಸುಕ್ಷೇಮವನು ಯಕೋಬ್ಯರಿಗೆ II
2 : ಮನ್ನಿಸಿದೆ ನಿನ್ನ ಪ್ರಜೆಯ ದ್ರೋಹವನು I ಕ್ಷಮಿಸಿದೆ ನೀ ಅವರ ಪಾಪಗಳೆಲ್ಲವನು II
3 : ತೊರೆದುಬಿಟ್ಟೆ ಸ್ವಾಮೀ, ನಿನ್ನ ರೋಷವನು I ಆರಿಸಿಬಿಟ್ಟೆ ನಿನ್ನ ಕೋಪಾಗ್ನಿಯನು II
4 : ಪುನಶ್ಚೇತನಗೊಳಿಸೆಮ್ಮನು ದೇವ, ಉದ್ಧಾರಕ I ತೊರೆದುಬಿಡು ನಮ್ಮ ಬಗ್ಗೆ ನಿನಗಿರುವ ಸಿಟ್ಟುಸಿಡುಕ II
5 : ಸದಾಕಾಲಕೂ ನಮ್ಮ ಮೇಲೆ ಸಿಟ್ಟಾಗಿರುವೆಯಾ? ತಲತಲಾಂತರಗಳಿಗೂ ಕೋಪವನು ಬೆಳೆಸುವೆಯಾ?
6 : ನವಜೀವವನು ತುಂಬಿಸಲಾರೆಯಾ ನಮ್ಮಲಿ? I ಆಗ ನಿನ್ನ ಜನರು ಆನಂದಿಸುವರು ನಿನ್ನಲಿ II
7 : ತೋರಿಸೆಮಗೆ ಪ್ರಭು ಕರುಣೆಯನು I ಅನುಗ್ರಹಿಸೆಮಗೆ ರಕ್ಷಣೆಯನು II
8 : ನಾ ಕೇಳುತ್ತಿರುವೆನು, ಪ್ರಭು ಹೇಳುವುದನು I ತನ್ನ ಜನರಿಗಾತ ನುಡಿವುದು ಶಾಂತಿಯನು I ಇನ್ನಾದರು ತೊರೆಯೋಣ ಮೂರ್ಖತೆಯನು II
9 : ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ I ಇದರಿಂದಾತನ ಮಹಿಮೆ ನಾಡಿಲ್ಲಿರುವುದು ನಿರುತ II
10 : ಪ್ರೀತಿಯೂ ಸತ್ಯವೂ ಒಂದನ್ನೊಂದು ಕೂಡಿರುವುವು I ನೀತಿಯೂ ಶಾಂತಿಯೂ ಒಂದನ್ನೊಂದು ಚುಂಬಿಸುವುವು II
11 : ಸತ್ಯತೆಯು ಹುಟ್ಟುವುದು ಭೂಮಿಯಿಂದ I ನೀತಿಯು ದೃಷ್ಟಿಸುವುದು ಗಗನದಿಂದ II
12 : ಪ್ರಭು ಕೊಟ್ಟೇ ತೀರುವನು ಒಳಿತನು I ನಮ್ಮ ನಾಡು ನೀಡುವುದು ಬೆಳೆಯನು II
13 : ನಡೆವುದು ಪ್ರಭುವಿನ ಮುಂದೆ ನೀತಿ I ಮಾಡುವುದು ಆತನ ಹೆಜ್ಜೆಗೆ ಹಾದಿ II