पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
13ನೇ ಅಧ್ಯಾಯ
1 : ಎಷ್ಟುಕಾಲ ಪ್ರಭು, ನೀ ಎನ್ನ ಪೂರ್ತಿ ಮರೆತಿರುವೆ? I ಇನ್ನೆಷ್ಟರ ತನಕ ನೀನೆನಗೆ ವಿಮುಖನಾಗಿರುವೆ? II
2 : ಎನಿತುಕಾಲ ನಾ ಚಿಂತೆಯಿಂದಿರಬೇಕು? I ದಿನವೆಲ್ಲಾ ಮನದಲ್ಲಿ ನೊಂದಿರಬೇಕು? I ನನ್ನ ಮೇಲೆ ವೈರಿ ದೊರೆತನ ಮಾಡಬೇಕು? II
3 : ಹೇ ಪ್ರಭು, ಹೇ ದೇವ, ಎನ್ನ ವೀಕ್ಷಿಸಿ ಸದುತ್ತರ ಪಾಲಿಸು I ಮರಣ ನಿದ್ರೆ ಬಾರದಂತೆ ನನ್ನ ನೇತ್ರಗಳನು ಬೆಳಗಿಸು II
4 : ತಾನು ಜಯಗಳಿಸಿದೆನೆಂದು ಶತ್ರು ಹೇಳಿಕೊಳ್ಳದಿರಲಿ I ನಾನು ಜಾರಿ ಬಿದ್ದೆನೆಂದು ವೈರಿ ಹಿರಿಹಿಗ್ಗದಿರಲಿ II
5 : ನಿನ್ನಚಲ ಪ್ರೀತಿಯಲ್ಲಿದೆ ನನಗಿದೆ ವಿಶ್ವಾಸ I ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ II
6 : ಪ್ರಭು ಮಾಡಿದ ಮಹೋಪಕಾರಗಳಿಗಾಗಿ I ಹಾಡುವೆ ಗೀತವನು ಮನಃಪೂರ್ವಕವಾಗಿ II