ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
22ನೇ ಅಧ್ಯಾಯ
1 : ದೇವಾ, ಓ ಎನ್ನ ದೇವಾ, ಏಕೆನ್ನ ಕೈಬಿಟ್ಟೆ? I ಕಿವಿಗೊಡದೆ ಏಕೆ ದೂರವಾಗಿಬಿಟ್ಟೆ? II
2 : ಹಗಲೆಲ್ಲ ಕೂಗಿಕೊಂಡರೂ ನೀ ಬರಲಿಲ್ಲವಲ್ಲಾ I ಇರುಳೆಲ್ಲಾ ಮೊರೆಯಿಟ್ಟರೂ ನೆಮ್ಮದಿಯಿಲ್ಲವಲ್ಲಾ II
3 : ಆದರೂ ದೇವಾ, ನೀನಂತು ಪರಮಪೂಜ್ಯನು I ಇಸ್ರಯೇಲರ ಸ್ತುತ್ಯ ಸಿಂಹಾಸನದಲಿ ಆಸೀನನು II
4 : ನಿನ್ನಲಿ ಭರವಸೆಯಿತ್ತರು ನಮ್ಮ ಪೂರ್ವಜರು I ಉದ್ಧಾರವಾದರು ನಿನ್ನ ನಂಬಿದವರೆಲ್ಲರು II
5 : ನಿನಗೆ ಮೊರೆಯಿಟ್ಟವರು ವಿಮುಕ್ತರಾದರಯ್ಯಾ I ವಿಶ್ವಾಸವಿಟ್ಟು ಹತಾಶರಾಗಲಿಲ್ಲವಯ್ಯಾ II
6 : ಮನುಜ ನಾನು, ಕ್ರಿಮಿಕೀಟಕೆ ಸಮಾನನು I ಅಲಕ್ಷಿತನು, ಪರರಿಂದ ತಿರಸ್ಕೃತನು II
7 : ನೋಡುವವರೆಲ್ಲಾ ಎನ್ನನಣಕಿಸುತಿಹರು I ತುಟಿಯೋರೆ ಮಾಡಿ ತಲೆಯಾಡಿಸುತಿಹರು II
8 : “ಇತ್ತನಿವನು ಭರವಸೆ, ಪ್ರಭುವೆ ತನ್ನುದ್ಧಾರಕನೆಂದು I ಆತನಿಗಿವನು ಮೆಚ್ಚುಗೆಯಾದರೆ ರಕ್ಷಿಸಲಿ” - ಇಂತೆಂದು II
9 : ಮಾತೆಯುದರದಿಂದ ಎನ್ನನು ಹೊರಬರಿಸಿದವನು ನೀನು I ನಿಶ್ಚಿಂತೆಯಾ ಕೂಸನು ಆಕೆಯ ಮಡಿಲಲಿ ಇರಿಸಿದವನು ನೀನು II
10 : ಆಗರ್ಭದಿಂದಲೆ ನೀನೆನಗಧಾರ I ತಾಯಿ ಹೆತ್ತಂದಿನಿಂದಲೇ ಕರ್ತಾರ II
11 : ದುರುಳರು ಅರುಗಲೇ ಇರೆ, ನೆರವಿಗಾರೂ ಇಲ್ಲ I ನನ್ನಿಂದ ನೀ ದೂರಸರಿವುದು ಸರಿಯಲ್ಲ II
12 : ಸುತ್ತಿಕೊಂಡಿವೆಯೆನ್ನನು ಬಲವಂತ ಹೋರಿಗಳು I ಮುತ್ತಿಕೊಂಡಿವೆ ಬಾಷಾನಿನ ಹಲವು ಗೂಳಿಗಳು II
13 : ಗರ್ಜಿಸುವ ಉಗ್ರಸಿಂಹಗಳಂತೆ ವೈರಿಗಳು I ಕಾದಿಹರು ಬಾಯಿ ತೆರೆದು ನನ್ನ ಕಬಳಿಸಲು II
14 : ಕ್ಷಯಿಸುತ್ತಿರುವೆ ನಾ ಚೆಲ್ಲಿದ ನೀರಿನಂತೆ I ಎಲುಬುಗಳು ಅಲುಗಿವೆ, ಎದೆ ಕರಗಿದೆ ಮೇಣದಂತೆ II
15 : ಎನ್ನ ಗೋಣು ಒಣಗಿಹೋಗಿದೆ ಒಡೆದ ಮಡಕೆಯಂತೆ I ಅಂಗುಳಕೆ ಜಿಹ್ವೆ ಅಂಟಿದೆ; ಮಣ್ಣಿಗೆನ್ನ ಸೇರಿಸಿದೆ II
16 : ಮುತ್ತಿದೆ ದುರುಳರ ಹಿಂಡು; ಸುತ್ತಿವೆ ಕುನ್ನಿಗಳು I ಕುತ್ತಿವೆ ನನ್ನ ಕೈಗಳು ಮೇಣ್ ಕಾಲುಗಳು II
17 : ಎಣಿಸಬಹುದಿದೆ ನನ್ನೆಲುಬುಗಳೆಲ್ಲವನು I ಹಿಗ್ಗುತಿಹರು ದುರುಗುಟ್ಟಿ ನೋಡೆನ್ನನು II
18 : ನನ್ನ ಉಡುಗೆಗಳನ್ನು ಹಂಚಿಕೊಂಡರು I ನನ್ನ ಅಂಗಿಗೋಸ್ಕರ ಚೀಟುಹಾಕಿದರು II
19 : ನನ್ನಿಂದ ದೂರ ಸರಿಯಲುಬೇಡ, ಪ್ರಭು I ನೀನೆನ್ನ ಶಕ್ತಿ, ನೆರವಾಗಲು ತ್ವರೆಮಾಡು II
20 : ಕತ್ತಿಗೆ ತುತ್ತಾಗದಂತೆ ತಪ್ಪಿಸು I ಕುಕ್ಕುರಗಳಿಂದ ಪ್ರಾಣವನುಳಿಸು II
21 : ರಕ್ಷಿಸೆನ್ನನು ಸಿಂಹದ ಬಾಯಿಂದ I ಬಿಡಿಸು ಕಾಡುಕೋಣದ ಕೊಂಬಿನಿಂದ II
22 : ಸೋದರರಿಗೆ, ಸಾರುವೆ ನಿನ್ನ ನಾಮ ಮಹಿಮೆಯನ್ನು I ತುಂಬಿದ ಸಭೆಯಲಿ ಮಾಡುವೆ, ನಿನ್ನ ಸ್ತುತಿಯನ್ನು II
23 : ಮಣಿಯಿರಿ, ಪ್ರಭುವಿನಲಿ ಭಯಭಕುತಿಯುಳ್ಳವರೇ I ಭಜಿಸಿರಿ ಇಸ್ರಯೇಲರೇ, ಯಾಕೋಬ ಕುಲಜರೇ II
24 : ತೃಣೀಕರಿಸನು, ತಿರಸ್ಕರಿಸನು ದಲಿತನನು I ವಿಮುಖನಾಗನು, ಪ್ರಾರ್ಥನೆಗೆ ಕಿವಿಗೊಡುವನು II
25 : ಪ್ರಭು, ನೀನೆ ಸ್ಪೂರ್ತಿ, ತುಂಬುಸಭೆಯಲಿ ನಾ ಮಾಳ್ಪ ಸ್ತುತಿಗೆ I ಭಕ್ತಜನರ ಮುಂದೆ ನಾ ಸಲ್ಲಿಸುವೆ, ನಿನಗೆ ಹೊತ್ತ ಹರಕೆ II
26 : ಹರಿವುದು ಸ್ತುತಿ ಭಕ್ತರ ಬಾಯಿಂದ; ತುಂಬುವುದು ದಲಿತರುದರ I ಇರಲಿ ಚೈತನ್ಯಭರಿತ ನಿಮ್ಮಂತರಂಗವು ನಿರಂತರ II
27 : ಎಚ್ಚೆತ್ತು ಅಭಿಮುಖವಾಗುವುದು ಜಗದಾದ್ಯಂತ ಪ್ರಭುಗೆ I ಸಾಷ್ಟಾಂಗವೆರಗುವುವು ಧರೆಯ ಸರ್ವಜನಾಂಗಗಳು ಆತನಿಗೆ II
28 : ಪ್ರಭುವಿಗೆ ಸೇರಿದುದು ರಾಜ್ಯಭಾರವೆಲ್ಲವು I ಆತನದೆ ರಾಷ್ಟ್ರಗಳ ಒಡೆತನವೆಲ್ಲವು II
29 : ತಲೆಬಾಗುವರಾತನಿಗೆ ಧರೆಯ ಗರ್ವಿಗಳೆಲ್ಲರು I ಅಡ್ಡಬೀಳುವರವನಿಗೆ ಮರ್ತ್ಯಮಾನವರೆಲ್ಲರು II
30 : ವಂದಿಪುದು ಪ್ರಭುವನು ಮುಂದಿನ ಪೀಳಿಗೆ I ಸಾರುವುದಾತನ ವದಂತಿಯನು ಜನರಿಗೆ II
31 : ಸಾರುವರು ಮುಂದಿನ ಜನತೆಗುದ್ಧಾರವನು I ಅರುಹುವರು ಆತನೆಸಗಿದ ಮಹತ್ಕಾರ್ಯವನು II