வேதாகமம்
ಹೊಸ ಒಡಂಬಡಿಕೆ
1 ಯೊವಾನ್ನನು
3ನೇ ಅಧ್ಯಾಯ
- Verse 1: ನಾವು ದೇವರ ಮಕ್ಕಳು ಎನಿಸಿಕೊಂಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತಾರೆಂಬುದನ್ನು ಗಮನಿಸಿರಿ. ನಿಜಕ್ಕೂ ನಾವು ದೇವರ ಮಕ್ಕಳೇ. ಲೋಕವು ಅವರನ್ನು ಅರಿತುಕೊಳ್ಳಲಿಲ್ಲವಾದ ಕಾರಣ ನಾವು ಎಂಥವರೆಂದು ಅದು ಅರಿತಿಲ್ಲ.
- Verse 2: ಪ್ರಿಯರೇ, ನಾವೀಗ ದೇವರ ಮಕ್ಕಳು. ಮುಂದೆ ನಾವು ಎಂಥವರಾಗುತ್ತೇವೆ ಎಂಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ ನಾವೂ ಅವರಂತೆಯೇ ಇರುತ್ತೇವೆಂದು ಬಲ್ಲೆವು. ಏಕೆಂದರೆ, ಅವರನ್ನು ನಾವು ಅವರ ಯಥಾರ್ಥರೂಪದಲ್ಲೇ ಕಾಣುತ್ತೇವೆ.
- Verse 3: ಕ್ರಿಸ್ತಯೇಸುವಿನಲ್ಲಿ ನಂಬಿಕೆ ನಿರೀಕ್ಷೆಯನ್ನಿಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತನ್ನನ್ನು ಶುದ್ಧವಾಗಿಟ್ಟುಕೊಳ್ಳುತ್ತಾನೆ.
- Verse 4: ಪಾಪಮಾಡುವ ಪ್ರತಿಯೊಬ್ಬನೂ ದೇವರ ಆಜ್ಞೆಯನ್ನು ಮೀರುತ್ತಾನೆ. ದೇವರ ಆಜ್ಞೆಯನ್ನು ಉಲ್ಲಂಘಿಸುವುದೇ ಪಾಪ.
- Verse 5: ಪಾಪರಹಿತರಾದ ಕ್ರಿಸ್ತಯೇಸು ಪಾಪಪರಿಹಾರ ಮಾಡಲೆಂದೇ ಕಾಣಿಸಿಕೊಂಡರೆಂದು ನೀವು ಬಲ್ಲಿರಿ.
- Verse 6: ಅವರಲ್ಲಿ ನೆಲೆಸಿರುವ ಪ್ರತಿಯೊಬ್ಬನೂ ಪಾಪಮಾಡನು. ಪಾಪಮಾಡುವವನು ಅವರನ್ನು ಕಂಡವನೂ ಅಲ್ಲ, ಅರಿತವನೂ ಅಲ್ಲ.
- Verse 7: ಪ್ರಿಯಮಕ್ಕಳೇ, ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸುವುದಕ್ಕೆ ಯಾರಿಗೂ ಅವಕಾಶ ಕೊಡಬೇಡಿ. ಕ್ರಿಸ್ತಯೇಸು ಸತ್ಯಸ್ವರೂಪಿಯಾಗಿರುವಂತೆಯೇ ಸತ್ಯಕ್ಕನುಸಾರ ನಡೆಯುವ ಪ್ರತಿಯೊಬ್ಬನೂ ಸತ್ಯವಂತನೇ.
- Verse 8: ಪಾಪಮಾಡುವವನು ಸೈತಾನನ ಸಂತಾನದವನು. ಸೈತಾನನು ಆದಿಯಿಂದಲೂ ಪಾಪಮಾಡಿದವನೇ. ಅವನ ದುಷ್ಕೃತ್ಯಗಳನ್ನು ವಿನಾಶಗೊಳಿಸಲೆಂದೇ ದೇವರ ಪುತ್ರ ಕಾಣಿಸಿಕೊಂಡಿದ್ದು.
- Verse 9: ದೇವರಿಂದ ಜನಿಸಿದ ಯಾವನೂ ಪಾಪಮಾಡನು. ದೇವರ ಜೀವದ ಕುಡಿ ಅವನಲ್ಲಿರುವುದು. ಅವನು ಪಾಪದಲ್ಲಿ ಜೀವಿಸನು. ಏಕೆಂದರೆ, ಅವನು ದೇವರಿಂದ ಜನಿಸಿದವನು.
- Verse 10: ಸನ್ಮಾರ್ಗದಲ್ಲಿ ನಡೆಯದವನೂ ಸಹೋದರನನ್ನು ಪ್ರೀತಿಸದವನೂ ದೇವರಿಂದ ಜನಿಸಿದವನಲ್ಲ. ಹೀಗೆ ದೇವರ ಮಕ್ಕಳು ಯಾರು ಮತ್ತು ಸೈತಾನನ ಮಕ್ಕಳು ಯಾರು ಎಂಬುದನ್ನು ತಿಳಿಯಬಹುದು.
- Verse 11: ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬುದೇ ಮೊತ್ತಮೊದಲಿನಿಂದಲೂ ನೀವು ಕೇಳಿದ ಸಂದೇಶ.
- Verse 12: ತನ್ನ ಸಹೋದರನನ್ನೇ ಕೊಂದ ಕಾಯಿನನಂತೆ ನಾವು ಇರಬಾರದು. ಅವನು ಕಡುಕೇಡಿಗನ ಕುವರ. ಅವನು ಕೊಂದುದಾದರೂ ಏಕೆ? ತನ್ನ ಕೃತ್ಯಗಳು ದುಷ್ಟವಾಗಿದ್ದು ತನ್ನ ಸಹೋದರನ ಕೃತ್ಯಗಳು ಧರ್ಮಿಷ್ಠವಾಗಿದ್ದುದರಿಂದ ಅಲ್ಲವೇ?
- Verse 13: ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿ.
- Verse 14: ನಾವು ನಮ್ಮ ಸಹೋದರರನ್ನು ಪ್ರೀತಿಸುವುದರಿಂದ ಸಾವಿನಿಂದ ಜೀವಕ್ಕೆ ಸಾಗಿದ್ದೇವೆಂದು ತಿಳಿದಿದ್ದೇವೆ. ಪ್ರೀತಿಸದೆ ಇರುವವನು ಸಾವಿನಲ್ಲೇ ನೆಲೆಸಿರುತ್ತಾನೆ.
- Verse 15: ತನ್ನ ಸಹೋದರರನ್ನು ದ್ವೇಷಿಸುವವನು ಕೊಲೆಗಾರನೇ ಹೌದು. ಯಾವ ಕೊಲೆಗಾರನಲ್ಲೂ ನಿತ್ಯಜೀವ ಇರದೆಂದು ನೀವು ಬಲ್ಲಿರಿ.
- Verse 16: ಕ್ರಿಸ್ತಯೇಸು ನಮಗೋಸ್ಕರ ತಮ್ಮ ಪ್ರಾಣವನ್ನೇ ತೆತ್ತರು. ಇದರಿಂದ ಪ್ರೀತಿ ಎಂತಹುದೆಂದು ನಾವು ಅರಿತುಕೊಂಡೆವು. ನಾವೂ ಕೂಡ ಸಹೋದರರಿಗಾಗಿ ಪ್ರಾಣಾರ್ಪಣೆ ಮಾಡಲು ಬದ್ಧರಾಗಿದ್ದೇವೆ.
- Verse 17: ಲೋಕದ ಸುಖಸಂಪತ್ತುಳ್ಳ ಒಬ್ಬನು, ಕುಂದುಕೊರತೆಯಲ್ಲಿ ಸಿಲುಕಿರುವ ತನ್ನ ಸಹೋದರನನ್ನು ಕಂಡಾಗಲೂ ಮನಕರಗದಿದ್ದರೆ ಅವನಲ್ಲಿ ದೇವರ ಪ್ರೀತಿ ಹೇಗೆ ತಾನೇ ನೆಲೆಸೀತು?
- Verse 18: ಪ್ರಿಯಮಕ್ಕಳೇ, ನಾವು ಬರಿಯ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರಬಾರದು. ನಮ್ಮ ಪ್ರೀತಿ ಸತ್ಯದಲ್ಲೂ ಕೃತ್ಯದಲ್ಲೂ ವ್ಯಕ್ತವಾಗಬೇಕು.
- Verse 19: ಹೀಗೆ ನಾವು ಸತ್ಯಕ್ಕೆ ಸೇರಿದವರು ಎಂಬುದು ಮನದಟ್ಟಾಗುವುದಲ್ಲದೆ ದೇವರ ಮುಂದೆ ನಮ್ಮ ಮನಸ್ಸು ನೆಮ್ಮದಿಯಿಂದಿರುತ್ತದೆ.
- Verse 20: ಯಾವ ವಿಷಯದಲ್ಲಾದರೂ ನಮ್ಮ ಮನಸ್ಸಾಕ್ಷಿ ನಮ್ಮನ್ನು ಖಂಡಿಸಿದ್ದೇ ಆದರೆ ಎಲ್ಲವನ್ನೂ ಬಲ್ಲ ದೇವರು ನಮ್ಮ ಮನಸ್ಸಾಕ್ಷಿಗಿಂತಲೂ ದೊಡ್ಡವರೆಂಬುದು ನಮಗೆ ತಿಳಿದೇ ಇರುತ್ತದೆ.
- Verse 21: ಪ್ರಿಯರೇ, ನಮ್ಮ ಮನಸ್ಸಾಕ್ಷಿ ನಮ್ಮನ್ನು ಖಂಡಿಸದಿದ್ದರೆ, ನಾವು ದೇವರ ಮುಂದೆ ಧೈರ್ಯದಿಂದಿರಲು ಸಾಧ್ಯವಾಗುತ್ತದೆ.
- Verse 22: ನಾವು ದೇವರ ಆಜ್ಞೆಗಳಿಗೆ ವಿಧೇಯರಾಗಿ ಅವರಿಗೆ ಮೆಚ್ಚುಗೆಯಾದವುಗಳನ್ನೇ ಮಾಡುವುದರಿಂದ ನಾವು ಕೋರುವುದೆಲ್ಲವನ್ನೂ ಅವರಿಂದ ಪಡೆಯುತ್ತೇವೆ.
- Verse 23: ನಾವು ದೇವರ ಪುತ್ರ ಯೇಸುಕ್ರಿಸ್ತರ ನಾಮದಲ್ಲಿ ವಿಶ್ವಾಸವಿಟ್ಟು ಅವರು ವಿಧಿಸಿದಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಇದೇ ದೇವರ ಆಜ್ಞೆ.
- Verse 24: ದೇವರ ಆಜ್ಞೆಯನ್ನು ಪಾಲಿಸುವವನು ಅವರಲ್ಲಿ ನೆಲೆಸಿರುತ್ತಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. ದೇವರು ನಮ್ಮಲ್ಲಿ ನೆಲೆಸಿದ್ದಾರೆಂದು ಅವರು ದಯಪಾಲಿಸುವ ಪವಿತ್ರಾತ್ಮರಿಂದಲೇ ತಿಳಿದುಕೊಳ್ಳುತ್ತೇವೆ.