P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
49ನೇ ಅಧ್ಯಾಯ
1 : ಸರ್ವಜನಾಂಗಗಳೆ, ಗಮನಿಸಿರಿ I ಭೂನಿವಾಸಿಗಳೆ, ನನಗೆ ಕಿವಿಗೊಡಿ II
2 : ಜನಸಾಮಾನ್ಯರೆ, ಜನಾಧಿಪತಿಗಳೆ, ದರಿದ್ರರೆ, ಧನವಂತರೆ I ನೀವೆಲ್ಲರು ನನ್ನ ಮಾತುಗಳಿಗೆ ಕಿವಿಗೊಟ್ಟು ಆಲಿಸಿರೈ II
3 : ನನ್ನ ಬಾಯಿ ಬೋಧಿಸುವುದು ಸುಜ್ಞಾನವನು I ನನ್ನ ಮನ ಧ್ಯಾನಿಸುವುದು ವಿವೇಚನೆಯನು II
4 : ನಾ ಕಿವಿಗೊಟ್ಟು ಆಲಿಸುವೆನು ಧರ್ಮದ ಗಾದೆಯನು I ವೀಣೆ ನುಡಿಸುತ ವಿವರಿಸುವೆನು ಅದರ ಗೂಡಾರ್ಥವನು II
5 : ಆಪತ್ಕಾಲದಲಿ ನಾನೇಕೆ ಭಯಪಡಬೇಕು? I ದ್ವೇಷಿಗಳ ದಾಳಿಗೆ ನಾನೇಕೆ ಹೆದರಬೇಕು? II
6 : ಅವರ ಭರವಸೆ ಸಿರಿಸಂಪತ್ತಿನಲಿ I ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ II
7 : ತನ್ನನು ತಾನೇ ಮುಕ್ತಗೊಳಿಸಿಕೊಳ್ಳುವ ಜೀವಾತ್ಮನಿಲ್ಲ I ದೇವರಿಗೆ ಈಡುಕೊಟ್ಟು ಪ್ರಾಣ ಉಳಿಸಿಕೊಳ್ಳಬಲ್ಲ ನರನಿಲ್ಲ II
8 : ಪ್ರಾಣಕೆ ತೆರಬೇಕಾದ ಈಡು ಅಮೂಲ್ಯ I ಅದಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ II
9 : ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ I ಮಾನವ ಶಕ್ತಿಗೆ ಮೀರಿದುದು ಆ ಗಳಿಕೆ II
10 : ಬುದ್ಧಿಜೀವಿಗಳೂ ಸಾಯುವುದು ಖಂಡಿತ I ಮೂರ್ಖ, ಮಂದಗತಿಗಳ ಅಳಿವೂ ನಿಶ್ಚಿತ I ಅವರ ಸೊತ್ತು ಪರರ ಪಾಲು, ಇದೂ ಖಚಿತ II
11 : ತಮ್ಮ ಹೆಸರಲೆಸ್ಟೋ ಸೊತ್ತಿದ್ದರೂ I ಸಮಾಧಿಯೇ ಅವರಿಗೆ ಶಾಶ್ವತ ಮಂದಿರವು I ಅದುವದುವೇ ಅವರಿಗೆ ನಿತ್ಯ ನಿವಾಸವು II
12 : ನೆಲೆಯಾಗಿರನು ನರನು ಪಟ್ಟಪದವಿಯಲಿ I ನಾಶವಾಗುವನು ಪಶುಪ್ರಾಣಿಗಳ ಪರಿ II
13 : ಮೂಢನಂಬಿಕೆಯುಳ್ಳವರ ಗತಿ ಇದುವೇ I ಆ ಮೂಢರ ನಂಬಿ ನಡೆದವರಿಗು ಹಾಗೆಯೇ II
14 : ದೂಡುವನು ಅವರನು ಕುರಿಹಿಂಡಿನಂತೆ ಪಾತಾಳಕೆ I ಮರಣವೇ ಕುರಿಗಾಹಿ ಆ ನಿಧನ ನಿವಾಸಿಗಳಿಗೆ I ವಿನಾಶಗೊಳ್ವುದು ಆ ತಳದಲ್ಲಿ ಅವರ ರೂಪರೇಖೆ I ಆಳುವರು ಸಜ್ಜನರು ಅವರೆಲ್ಲರನು ಉದಯಕಾಲಕೆ II
15 : ನನ್ನನ್ನಾದರೊ ಸ್ವಾಗತಿಸುವನು ದೇವನು I ಪಾತಾಳದ ಹಿಡಿತದಿಂದ ಬಿಡಿಸುವನು II
16 : ಒಬ್ಬನು ಧನಿಕನಾದಾಗ ನೀ ಕಳವಳಗೊಳ್ಳಬೇಡ I ಅವನ ಮನೆಯ ಸೊಬಗನು ಕಂಡು ನಿರಾಶೆಗೊಳ್ಳಬೇಡ II
17 : ಸಾಯುವಾಗ ಏನನೂ ಕೊಂಡು ಹೋಗುವುದಿಲ್ಲ I ಘನತೆ ಅವನ ಬೆನ್ನು ಹತ್ತಿ ಹೋಗುವಂತಿಲ್ಲ II
18 : ಸಿರಿಬಂದಾಗ ಕೊರತೆಯಿರದು ಹೊಗಳಿಕೆಗೆ I ಆತ್ಮಸ್ತುತಿ, ಮುಖಸ್ತುತಿ, ಇವುಗಳ ಮೆರೆತಕೆ II
19 : ಸೇರದಿರನಾತ ಪಿತೃಗಳಧೋಗತಿಯನು I ಅವಿವೇಕಿ ಕಾಣನು ಎಂದಿಗೂ ಪರಂಜ್ಯೋತಿಯನು II
20 : ನೆಲೆಯಾಗಿರನು ಪಟ್ಟಪದವಿಯಲಿ I ನಾಶವಾಗುವನು ಪಶುಪ್ರಾಣಿಗಳ ಪರಿ II