పరిశుద్ధ గ్రంథము
ಹಳೆಯ ಒಡಂಬಡಿಕೆ
ಯೆಶಾಯ
1ನೇ ಅಧ್ಯಾಯ
- Verse 1: ಜುದೇಯ ನಾಡಿನ ಅರಸರಾಗಿದ್ದ ಉಜ್ಜೀಯ, ಯೋತಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಜುದೇಯ ಮತ್ತು ಜೆರುಸಲೇಮ್ ನಗರವನ್ನು ಕುರಿತು ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ ಇದು :
- Verse 2: ಆಕಾಶಮಂಡಲವೇ, ಕೇಳು; ಭೂಮಂಡಲವೇ, ಆಲಿಸು; ಸರ್ವೇಶ್ವರಸ್ವಾಮಿ ಆಡುತ್ತಿರುವ ಮಾತುಗಳಿಗೆ ಕಿವಿಗೊಡು: “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹವೆಸಗಿದ್ದಾರೆ.
- Verse 3: ಎತ್ತು ಯಜಮಾನನನ್ನು, ಕತ್ತೆ ಒಡೆಯನ ಕೊಟ್ಟಿಗೆಯನ್ನು ಬಲ್ಲವು. ಆದರೆ ನನ್ನ ಪ್ರಜೆಗಳಾದ ಇಸ್ರಯೇಲರಿಗೆ ಅಷ್ಟೂ ತಿಳಿದಿಲ್ಲ. ಅವರಿಗೆ ಏನೂ ತಿಳಿಯುವುದಿಲ್ಲ.
- Verse 4: ಎಲೈ ಪಾಪಿಷ್ಠ ಜನವೇ, ದೋಷಭರಿತ ಪ್ರಜೆಯೇ, ದುಷ್ಟಪೀಳಿಗೆಯೇ, ಭ್ರಷ್ಟಸಂತಾನವೇ, ನಿಮ್ಮ ಗತಿಯನ್ನು ಏನೆಂದು ಹೇಳಲಿ. ನೀವು ಸರ್ವೇಶ್ವರನನ್ನು ತೊರೆದಿದ್ದೀರಿ. ಇಸ್ರಯೇಲರ ಪರಮಪಾವನ ಸ್ವಾಮಿಯನ್ನು ಧಿಕ್ಕರಿಸಿದ್ದೀರಿ. ಅವರಿಗೆ ಬೆನ್ನುಮಾಡಿ ಬೇರೆಯಾಗಿದ್ದೀರಿ.
- Verse 5: ಏಕೆ ಹೆಚ್ಚು ಹೆಚ್ಚಾಗಿ ದ್ರೋಹಗೈದು ದಂಡನೆಗೆ ಗುರಿ ಆಗುತ್ತೀರಿ? ನಿಮ್ಮ ತಲೆತುಂಬ ಗಾಯ, ನಿಮ್ಮ ಹೃದಯವೆಲ್ಲ ದುರ್ಬಲ.
- Verse 6: ಅಂಗಾಲಿನಿಂದ ನಡುನೆತ್ತಿಯವರೆಗೆ ಪೆಟ್ಟು ಬಾಸುಂಡೆ, ಮಾಗದ ಗಾಯಗಳೇ ಹೊರತು ಮತ್ತೇನೂ ಅಲ್ಲ. ಅವನ್ನು ತೊಳೆದು ಕಟ್ಟಿಲ್ಲ. ಎಣ್ಣೆ ಸವರಿ ಮೃದುವಾಗಿಸಿಲ್ಲ.
- Verse 7: ನಿಮ್ಮ ನಾಡು ಹಾಳುಬಿದ್ದಿದೆ: ನಿಮ್ಮ ಪಟ್ಟಣಗಳು ಸುಟ್ಟು ಭಸ್ಮವಾಗಿವೆ. ನಿಮ್ಮ ಕಣ್ಮುಂದೆಯೆ ನಿಮ್ಮ ಭೂಮಿಯನ್ನು ಅನ್ಯಜನರು ಕಬಳಿಸುತ್ತಿದ್ದಾರೆ. ಅನ್ಯದೇಶಗಳು ನಾಶವಾದಂತೆಯೇ ನಿಮ್ಮ ನಾಡು ಹಾಳಾಗಿದೆ.
- Verse 8: ಸಿಯೋನ್ ನಗರವೊಂದೇ ಮುತ್ತಿಗೆಗೆ ತುತ್ತಾದ ಪಟ್ಟಣದಂತೆ, ದ್ರಾಕ್ಷಾತೋಟದ ಅಟ್ಟಣಿಯಂತೆ, ಸೌತೆ ಹೊಲದ ಗುಡಿಸಿಲಿನಂತೆ ಸುರಕ್ಷತೆಯ ಅವಕಾಶವಿಲ್ಲದೆ ಇದೆ.
- Verse 9: ಸೇನಾಧೀಶ್ವರ ಸರ್ವೇಶ್ವರ ಕೆಲವು ಜನರನ್ನಾದರೂ ಉಳಿಸದೆಹೋಗಿದ್ದರೆ, ಸೊದೋಮಿನ ಗತಿಯೇ, ಗೊಮೋರದ ದುರ್ದೆಶೆಯೇ ನಮಗೆ ಸಂಭವಿಸುತ್ತಿತ್ತು.
- Verse 10: ಸೊದೋಮಿನ ಅಧಿಪತಿಗಳಂತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ.
- Verse 11: ಸ್ವಾಮಿ ಇಂತೆನ್ನುತ್ತಾರೆ : “ನೀವು ಅರ್ಪಿಸುವ ಅಸಂಖ್ಯಾತ ಬಲಿದಾನಗಳಿಂದ ನನಗೇನು ಪ್ರಯೋಜನ? ಟಗರುಗಳು, ಸರ್ವಾಂಗಹೋಮ, ಪುಷ್ಟಪಶುಗಳ ಕೊಬ್ಬು ಇವೆಲ್ಲ ನನಗೆ ಬೇಸರ. ಹೋತಹೋರಿಗಳ, ಕುರಿಮರಿಗಳ ರಕ್ತ ನನಗೆ ತಾತ್ಸಾರ.
- Verse 12: ನನ್ನ ಸನ್ನಿಧಾನಕ್ಕೆ ಬರುವಾಗ ಇದನ್ನೆಲ್ಲ ತರಬೇಕೆಂದು ನಿಮಗೆ ಹೇಳಿದವರಾರು?
- Verse 13: ನಿಮ್ಮ ನೈವೇದ್ಯಗಳನ್ನು ಇನ್ನು ತರಬೇಡಿ, ಅವು ವ್ಯರ್ಥ. ನಿಮ್ಮ ಧೂಪಾರತಿ ನನಗೆ ಅಸಹ್ಯ. ನೀವು ಆಚರಿಸುವ ಹಬ್ಬ ಹುಣ್ಣಿಮೆ, ಸಬ್ಬತ್ ವಿಶ್ರಾಂತಿ, ನಿಮ್ಮ ಸಭೆಕೂಟಗಳು ನನಗೆ ಬೇಡ. ಅಧರ್ಮದಿಂದ ಕೂಡಿದ ಇಂಥ ಸಮಾರಂಭಗಳು ನನಗೆ ಇಷ್ಟವಿಲ್ಲ.
- Verse 14: ನಿಮ್ಮ ಹಬ್ಬ ಹುಣ್ಣಿಮೆಗಳು, ಉತ್ಸವ ದಿನಗಳು ನನ್ನ ಮನಕ್ಕೆ ವಿರುದ್ಧ, ಹೊರಲಾಗದ ಭಾರ, ಸಹಿಸಲಾಗದ ಬೇಸರ.
- Verse 15: ನೀವು ಕೈಯೆತ್ತಿ ಬೇಡುವಾಗ ನಾನು ಕಣ್ಣುಮುಚ್ಚಿಕೊಳ್ಳುವೆನು. ನೀವು ಎಷ್ಟೇ ಪ್ರಾರ್ಥನೆಗಳನ್ನು ಮಾಡಿದರೂ ನಾನು ಕಿವಿಗೊಡೆನು, ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾಗಿವೆ.
- Verse 16: ತೊಳೆದುಕೊಳ್ಳಿರಿ, ನಿಮ್ಮನ್ನೆ ಶುದ್ಧಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದಂತಿರುವ ನಿಮ್ಮ ದುಷ್ಕೃತ್ಯಗಳು ನೀಗಿಹೋಗಲಿ.
- Verse 17: ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿಂಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯ ದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ.
- Verse 18: ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಬನ್ನಿರಿ, ಈಗ ವಾದಿಸೋಣ. ನಿಮ್ಮ ಪಾಪಗಳು ಕಡುಗೆಂಪಾಗಿದ್ದರೂ ಹಿಮದಂತೆ ಬಿಳುಪಾಗುವುವು. ರಕ್ತಗೆಂಪಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವುವು.
- Verse 19: ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ.
- Verse 20: ಇದಕ್ಕೊಪ್ಪದೆ ಪ್ರತಿಭಟಿಸಿದ್ದೇ ಆದರೆ, ಸಾವಿಗೆ ತುತ್ತಾಗುವಿರಿ. ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ.”
- Verse 21: ಅಯ್ಯೋ, ಸುವ್ರತೆಯಂತಿದ್ದ ನಗರಿ ಈಗ ಸೂಳೆಯಂತಿದ್ದಾಳಲ್ಲ! ನ್ಯಾಯನೀತಿವಂತರಿಗೆ ನೆಲೆಯಾಗಿದ್ದವಳು ಈಗ ಕೊಲೆಪಾತಕರಿಗೆ ಬೀಡಾಗಿದ್ದಾಳಲ್ಲಾ!
- Verse 22: ಎಲೌ ನಗರಿಯೇ, ನಿನ್ನ ಬೆಳ್ಳಿ ಕಪ್ಪಾಗಿದೆ. ನಿನ್ನ ದ್ರಾಕ್ಷಾರಸ ನೀರಾಗಿದೆ.
- Verse 23: ನಿನ್ನ ಅಧಿಪತಿಗಳೇ ದ್ರೋಹಿಗಳಾಗಿದ್ದಾರೆ, ಕಳ್ಳರ ಗೆಳೆಯರಾಗಿದ್ದಾರೆ. ಎಲ್ಲರೂ ಲಂಚಕೋರರಾಗಿದ್ದಾರೆ. ಕಪ್ಪಕಾಣಿಕೆಗಳಿಗೆ ಕೈಯೊಡ್ಡುತ್ತಾರೆ. ಆದರೆ ಅನಾಥರ ಪರವಾಗಿ ವಾದಿಸುವುದಿಲ್ಲ. ವಿಧವೆಯರ ವ್ಯಾಜ್ಯವನ್ನು ತೀರಿಸುವುದಿಲ್ಲ.
- Verse 24: ಇಂತಿರಲು ಒಡೆಯರು, ಸೇನಾಧೀಶ್ವರರು, ಇಸ್ರಯೇಲರ ಪರಾಕ್ರಮಿಯು ಆದ ಸರ್ವೇಶ್ವರ ಹೀಗೆನ್ನುತ್ತಾರೆ: “ಇಗೋ ನನ್ನ ಶತ್ರುಗಳಾದ ನಿಮ್ಮ ಮೇಲೆ ಸೇಡು ತೀರಿಸುವೆನು. ನನ್ನ ವಿರೋಧಿಗಳಾದ ನಿಮ್ಮನ್ನು ಸದೆಬಡಿದು ಶಾಂತನಾಗಿರುವೆನು.
- Verse 25: ನಿಮ್ಮ ಮೇಲೆ ಕೈಮಾಡುವೆನು. ನಿಮ್ಮ ಲೋಹವನ್ನು ಪುಟಹಾಕಿ ನಿಮ್ಮ ಕಲ್ಮಷವನ್ನು ಪೂರ್ತಿಯಾಗಿ ಕರಗಿಸಿಬಿಡುವೆನು. ಕಂದುಕೆಸರನ್ನೆಲ್ಲ ತೊಡೆದುಹಾಕುವೆನು.
- Verse 26: ಪೂರ್ವದಲ್ಲಿದ್ದಂತೆ ನಿಮಗೆ ನ್ಯಾಯಾಧಿಪತಿಗಳನ್ನೂ ಮಂತ್ರಿಗಳನ್ನೂ ಮತ್ತೆ ನೇಮಿಸುವೆನು. ಆಗ ಜೆರುಸಲೇಮ್ ‘ಧರ್ಮಪುರಿ’, ‘ಸುವ್ರತನಗರಿ’ ಎನಿಸಿಕೊಳ್ಳುವುದು.
- Verse 27: ಸಿಯೋನಿನ ಉದ್ಧಾರ ನ್ಯಾಯನೀತಿಯಿಂದ; ಅದಕ್ಕೆ ಹಿಂದಿರುಗುವವರ ಉದ್ಧಾರ ಸತ್ಸಂಬಂಧದಿಂದ;
- Verse 28: ನಾಶವಾಗುವರು ದ್ರೋಹಿಗಳೂ ಪಾಪಿಗಳೂ ಒಟ್ಟಾಗಿ; ನಿರ್ಮೂಲವಾಗುವರು ಸ್ವಾಮಿಯನ್ನು ತೊರೆದವರು ನಿಶ್ಚಯವಾಗಿ.
- Verse 29: ನೀವು ಬಯಸಿದ ಎಲ್ಲಾ ಮರಗಳನ್ನು ಪೂಜಿಸಿದ್ದಕ್ಕಾಗಿ ಹೇಸುವಿರಿ: ಪವಿತ್ರ ವನಗಳನ್ನು ನಿರ್ಮಿಸಿದ್ದಕ್ಕಾಗಿ ನಾಚಿಕೆಪಡುವಿರಿ.
- Verse 30: ಎಲೆ ಒಣಗಿದ ಮರಗಳಂತೆ ಆಗುವಿರಿ. ಜಲವಿಲ್ಲದ ವನದಂತಾಗುವಿರಿ.
- Verse 31: ಒಣಹುಲ್ಲಿನ ಮೆದೆಗೆ ಬೆಂಕಿಯ ಕಿಡಿಬಿದ್ದು ಸುಟ್ಟುಹೋಗುವಂತೆ ನಿಮ್ಮಲ್ಲಿನ ಬಲಿಷ್ಠರು ತಮ್ಮ ದುಷ್ಕೃತ್ಯಗಳಿಂದಲೇ ನಾಶವಾಗುವರು. ಈ ವಿನಾಶವನ್ನೂ ಯಾರಿಂದಲೂ ತಡೆಗಟ್ಟಲಾಗದು.