ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ವಿಮೋಚನಕಾಂಡ
37ನೇ ಅಧ್ಯಾಯ
- Verse 1: ಬೆಚಲೇಲನು ಜಾಲೀಮರದಿಂದ ಮಂಜೂಷವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಒಂದುವರೆ ಮೊಳ ಎತ್ತರವೂ ಆಗಿತ್ತು.
- Verse 2: ಚೊಕ್ಕಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಒಳಗಡೆಯೂ ಹೊದಿಸಿದನು; ಅದರ ಮೇಲೆ ಸುತ್ತಲೂ ಚಿನ್ನದ ತೋರಣ ಕಟ್ಟಿಸಿದನು.
- Verse 3: ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ, ಅಂದರೆ ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇರಿಸಿದನು.
- Verse 4: ಮತ್ತು ಜಾಲೀಮರದ ಗದ್ದುಗೆಗಳನ್ನು ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ
- Verse 5: ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಅದನ್ನು ಹೊರುವುದಕ್ಕಾಗಿ ಸೇರಿಸಿದನು.
- Verse 6: ಅದಲ್ಲದೆ ಚೊಕ್ಕಬಂಗಾರದ ಕೃಪಾಸನವನ್ನು ಮಾಡಿದನು. ಅದು ಎರಡುವರೆ ಮೊಳ ಉದ್ದವೂ ಒಂದುವರೆ ಮೊಳ ಅಗಲವೂ ಆಗಿತ್ತು.
- Verse 7: ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ನಕಾಸಿಕೆಲಸದಿಂದ ಮಾಡಿದನು.
- Verse 8: ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿ ಕೃಪಾಸನಕ್ಕೆ ಜೋಡಿಸಿದನು.
- Verse 9: ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಇದ್ದವು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು.
- Verse 10: ಬೆಚಲೇಲನು ಜಾಲೀಮರದ ಮೇಜನ್ನು ಮಾಡಿದನು. ಅದು ಎರಡು ಮೊಳ ಉದ್ದವೂ ಒಂದು ಮೊಳ ಅಗಲವೂ ಒಂದೂವರೆ ಮೊಳ ಎತ್ತರವೂ ಆಗಿತ್ತು.
- Verse 11: ಅದಕ್ಕೆ ಚೊಕ್ಕಬಂಗಾರದ ತಗಡುಗಳನ್ನು ಹೊದಿಸಿ ಸುತ್ತಲೂ ಚಿನ್ನದ ತೋರಣ ಕಟ್ಟಿದನು.
- Verse 12: ಮೇಜಿನ ಸುತ್ತಲೂ ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿ ಅದಕ್ಕೂ ಚಿನ್ನದ ತೋರಣ ಕಟ್ಟಿದನು.
- Verse 13: ಮೇಜನ್ನು ಎತ್ತುವ ಗದ್ದಿಗೆಗಳನ್ನು ಸೇರಿಸುವುದಕ್ಕಾಗಿ ಅದಕ್ಕೆ ನಾಲ್ಕು ಚಿನ್ನದ ಬಳೆಗಳನ್ನು ಎರಕ ಹೊಯಿಸಿ ಅದರ ನಾಲ್ಕು ಕಾಲುಗಳಲ್ಲಿ ಹಚ್ಚಿದನು.
- Verse 14: ಆ ಬಳೆಗಳು ಅಡ್ಡಪಟ್ಟಿಗೆ ಹತ್ತಿಕೊಂಡಿದ್ದವು.
- Verse 15: ಮೇಜನ್ನು ಹೊರುವುದಕ್ಕೆ ಗದ್ದಿಗೆಗಳನ್ನು ಜಾಲೀಮರದಿಂದ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
- Verse 16: ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು, ಅಂದರೆ ಹರಿವಾಣಗಳು, ಧೂಪಾರತಿಗಳು, ಹೂಜಿಗಳು, ಪಾನದ್ರವ್ಯವನ್ನು ಅರ್ಪಿಸುವುದಕ್ಕೆ ಬೇಕಾದ ಬಟ್ಟಲುಗಳು ಇವುಗಳನ್ನು ಚೊಕ್ಕಬಂಗಾರದಿಂದ ಮಾಡಿದನು.
- Verse 17: ಚೊಕ್ಕಬಂಗಾರದ ದೀಪವೃಕ್ಷವನ್ನು ಮಾಡಿದನು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿದನು. ಆ ದೀಪಸ್ತಂಭವೆಲ್ಲಾ ಅಖಂಡವಾಗಿ ಮೊಗ್ಗುಗಳಂತೆಯೂ ಪುಷ್ಪಗಳಂತೆಯೂ ಅಲಂಕಾರವಾಗಿ ಕೆತ್ತಿತ್ತು.
- Verse 18: ಕಂಬದ ಒಂದೊಂದು ಪಾರ್ಶ್ವದಲ್ಲಿ ಮೂರು ಮೂರು ಕೊಂಬೆಗಳು, ಅಂತೂ ಆರು ಕೊಂಬೆಗಳಿದ್ದವು.
- Verse 19: ಪ್ರತಿಯೊಂದು ಕೊಂಬೆಯಲ್ಲಿ ಬಾದಾಮಿ ಹೂವುಗಳಂತಿರುವ ಮೂರು ಮೂರು ಪುಷ್ಪಾಲಂಕಾರಗಳಿದ್ದವು; ಒಂದೊಂದು ಅಲಂಕಾರಕ್ಕೆ ಒಂದು ಮೊಗ್ಗೂ ಒಂದು ಪುಷ್ಪವೂ ಇದ್ದವು. ಆರು ಕೊಂಬೆಗಳನ್ನೂ ಹಾಗೆಯೇ ಮಾಡಿದನು.
- Verse 20: ದೀಪವೃಕ್ಷ ಕಡ್ಡಿಯಲ್ಲಿ ಮೊಗ್ಗುಗಳೂ ಪುಷ್ಪಗಳೂ ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳು ಇದ್ದವು.
- Verse 21: ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗು ಇತ್ತು.
- Verse 22: ಮೊಗ್ಗುಗಳೂ ಕೊಂಬೆಗಳೂ ಸಹಿತವಾದ ದೀಪವೃಕ್ಷವನ್ನೆಲ್ಲಾ ಒಟ್ಟಿಗೆ ಚೊಕ್ಕಬಂಗಾರದಿಂದ ನಕಾಸಿ ಕೆಲಸದಿಂದ ಮಾಡಿದನು.
- Verse 23: ಅದರ ಏಳು ಹಣತೆಗಳನ್ನೂ ಅದರ ಕತ್ತರಿಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಚೊಕ್ಕಬಂಗಾರದಿಂದ ಮಾಡಿದನು.
- Verse 24: ದೀಪವೃಕ್ಷವೂ ಅದರ ಎಲ್ಲಾ ಉಪಕರಣಗಳೂ ಮೂವತ್ತೈದು ಕಿಲೋಗ್ರಾಂ ಚೊಕ್ಕಬಂಗಾರದವುಗಳಾಗಿದ್ದವು.
- Verse 25: ಅವನು ಜಾಲೀಮರದಿಂದ ಧೂಪವೇದಿಕೆಯನ್ನು ಮಾಡಿದನು. ಅದು ಒಂದು ಮೊಳ ಉದ್ದವಾಗಿಯೂ ಒಂದು ಮೊಳ ಅಗಲವಾಗಿಯೂ ಚಚ್ಚೌಕವಾಗಿತ್ತು; ಅದರ ಎತ್ತರವು ಎರಡು ಮೊಳವಾಗಿತ್ತು. ಅದರ ಕೊಂಬುಗಳು ಅದರ ಅಂಗಗಳಾಗಿದ್ದವು.
- Verse 26: ಅದರ ಮೇಲ್ಭಾಗಕ್ಕೂ ನಾಲ್ಕು ಪಕ್ಕಗಳಿಗೂ ಕೊಂಬುಗಳಿಗೂ ಚೊಕ್ಕಬಂಗಾರದ ತಗಡುಗಳನ್ನು ಹೊದಿಸಿದನು. ಸುತ್ತಲೂ ಚಿನ್ನದ ತೋರಣ ಕಟ್ಟಿದನು.
- Verse 27: ಅದನ್ನು ಎತ್ತುವ ಗದ್ದಿಗೆಗಳನ್ನು ಸೇರಿಸುವುದಕ್ಕಾಗಿ ಆ ತೋರಣದ ಕೆಳಗೆ ವೇದಿಕೆಯ ಎರಡು ಪಾರ್ಶ್ವಗಳ ಮೂಲೆಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಬಿಗಿಸಿದನು.
- Verse 28: ವೇದಿಕೆಯನ್ನು ಹೊರುವುದಕ್ಕೆ ಗದ್ದಿಗೆಗಳನ್ನು ಜಾಲೀಮರದಿಂದ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿದನು.
- Verse 29: ಅದಲ್ಲದೆ ಅವನು ದೇವರ ಸೇವೆಗೆ ನೇಮಕವಾದ ಅಭಿಷೇಕ ತೈಲವನ್ನು ಹಾಗು ಪರಿಮಳದ್ರವ್ಯಗಳಿಂದ ಮಾಡಲಾದ ಅಪ್ಪಟವಾದ ಧೂಪದ್ರವ್ಯವನ್ನೂ ಸುಗಂಧದ್ರವ್ಯಕಾರರ ವಿಧಾನದ ಮೇರೆಗೆ ತಯಾರಿಸಿದನು.