पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
118ನೇ ಅಧ್ಯಾಯ
- Verse 1: ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ I ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ II
- Verse 2: ಸಾರಲಿ ಇಸ್ರಯೇಲಿನ ಜನತೆ I ‘ಆತನ ಪ್ರೀತಿ ಶಾಶ್ವತ’ ಎಂದೆ II
- Verse 3: ಸಾರಲಿ ಆರೋನನ ವಂಶಲತೆ: I ‘ಆತನ ಪ್ರೀತಿ ಶಾಶ್ವತ’ ಎಂದೆ II
- Verse 4: ಸಾರಲಿ ಆತನ ಭಕ್ತರ ಪಂಥ I ಆತನ ಪ್ರೀತಿ ಶಾಶ್ವತ ಅಂಥ II
- Verse 5: ಇಕ್ಕಟ್ಟಿನಲ್ಲಿ ಮೊರೆಯಿಟ್ಟೆನು ಪ್ರಭುವಿಗೆ I ಕಿವಿಗೊಟ್ಟು ಬಿಡುಗಡೆಯಿತ್ತನು ಆತನೆನಗೆ II
- Verse 6: ಪ್ರಭು ನನ್ನ ಕಡೆ ಇರಲು ಭಯಪಡೆನು I ನನಗೇನು ಮಾಡಿಯಾನು ಮನುಜನು? II
- Verse 7: ನೆರವು ನೀಡಲು ಪ್ರಭು ಎನ್ನಕಡೆ ಇಹನು I ಶತ್ರುಗಳತ್ತ ಜೇತಾರನಾಗಿ ನೋಡುವೆನು II
- Verse 8: ಮನುಜರಲಿ ಭರವಸೆಯಿಡುವುದಕ್ಕಿಂತ I ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ II
- Verse 9: ರಾಜರಲಿ ಭರವಸೆಯಿಡುವುದಕ್ಕಿಂತ I ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ II
- Verse 10: ಶತ್ರುರಾಷ್ಟ್ರಗಳೆಲ್ಲಾ ಸುತ್ತುವರಿದಿದ್ದವು ಎನ್ನನು I ಪ್ರಭುವಿನ ನಾಮಬಲದಲಿ ಧ್ವಂಸಮಾಡಿದೆನವುಗಳನು II
- Verse 11: ಸುತ್ತಮುತ್ತಲು ಮುತ್ತಿಕೊಂಡಿದ್ದರು ಎನ್ನನು I ಪ್ರಭುವಿನ ನಾಮಬಲದಲಿ ಸಂಹರಿಸಿದೆನವರನು II
- Verse 12: ಕವಿದಿದ್ದರು ಎನ್ನನು ಜೇನುನೊಣಗಳಂತೆ I ಪ್ರಭುವಿನ ನಾಮಬಲದಲಿ ಅವರನು ಸಂಹರಿಸಿದೆ I ಮುಳ್ಳುಗಿಡವನು ಬೆಂಕಿ ಸುಟ್ಟುಹಾಕುವಂತೆ II
- Verse 13: ನನ್ನನು ತಳ್ಳಿ ಬೀಳಿಸ ನೋಡಿದರು ನೆಲಕೆ I ಆದರೆ ಪ್ರಭು ನೆರವು ನೀಡಿದನು ಎನಗೆ II
- Verse 14: ಪ್ರಭುವೇ ನನಗೆ ಬಲವು, ಧೈರ್ಯವು I ಆತನಿಂದಲೇ ನನಗೆ ಉದ್ಧಾರವು II
- Verse 15: ಜಯಘೋಷ, ಹರ್ಷಸುನಾದ ಸಜ್ಜನರ ಬಿಡಾರದಿಂದ I “ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ II
- Verse 16: ವಿಜಯಸಾಧನ ಪ್ರಭುವಿನಾ ಬಲಗೈಯಿಂದ I ಪರಾಕ್ರಮ, ಪ್ರದರ್ಶನವೂ ಅದರಿಂದ” II
- Verse 17: ಸಾಯೆನು, ಜೀವದಿಂದಿರುವೆನು ನಾನು I ಪ್ರಭುವಿನ ಕಾರ್ಯಗಳನು ಸಾರುವೆನು II
- Verse 18: ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ I ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ II
- Verse 19: ತೆರೆಯಿರಿ ಎನಗೆ ನೀತಿದ್ವಾರಗಳನು I ಒಳನುಗ್ಗಿ ಹೊಗಳುವೆನು ಪ್ರಭುವನು II
- Verse 20: ಇದುವೇ ದ್ವಾರ ಪ್ರಭುವಿನ ಮಂದಿರಕೆ I ಇದುವೇ ಪ್ರವೇಶಮಾರ್ಗ ಸಜ್ಜನರಿಗೆ II
- Verse 21: ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ I ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾವಂದನೆ II
- Verse 22: ಮನೆಕಟ್ಟುವವರು ಮೂಲೆಗೆಸೆದ ಕಲ್ಲು I ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು II
- Verse 23: ಪ್ರಭುವಿನಿಂದಲೆ ಆದ ಈ ಕಾರ್ಯ I ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! II
- Verse 24: ಪ್ರಭುವೇ ನಿಯೋಜಿಸಿದ ದಿನವಿದು I ಹರ್ಷಿಸಿ ಆನಂದಿಸೋಣ ಇಂದು II
- Verse 25: ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು I ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು II
- Verse 26: ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ I ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ II
- Verse 27: ಪ್ರಭುವೆ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು I ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ, ಹಿಡಿದು ರೆಂಬೆಗಳನು II
- Verse 28: ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ I ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ II