P. O. C ബൈബിള്
ಹಳೆಯ ಒಡಂಬಡಿಕೆ
ಆದಿಕಾಂಡ
27ನೇ ಅಧ್ಯಾಯ
- Verse 1: ಇಸಾಕನಿಗೆ ಮುಪ್ಪಿನಿಂದ ಕಣ್ಣು ಕಾಣಲಾರದಷ್ಟು ಮಬ್ಬಾಯಿತು. ಅವನು ತನ್ನ ಹಿರಿಯ ಮಗ ಏಸಾವನನ್ನು ಕರೆದು, "ಮಗನೇ,” ಎನ್ನಲು ಏಸಾವನು, “ಇಗೋ, ಇಲ್ಲೇ ಇದ್ದೇನೆ,” ಎಂದನು.
- Verse 2: ಇಸಾಕನು ಅವನಿಗೆ, “ನೋಡು, ನಾನು ಮುದುಕನಾಗಿಬಿಟ್ಟೆ. ಯಾವಾಗ ಸಾಯುತ್ತೇನೋ ಗೊತ್ತಿಲ್ಲ;
- Verse 3: ಆದುದರಿಂದ ನಿನ್ನ ಆಯುಧಗಳನ್ನೂ ಬಿಲ್ಲುಬತ್ತಳಿಕೆಗಳನ್ನೂ ತೆಗೆದುಕೊಂಡು ಕಾಡಿಗೆ ಹೋಗು; ಬೇಟೆಯಾಡಿ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಾ;
- Verse 4: ಅದರಿಂದ ನನಗಿಷ್ಟವಾಗಿರುವ ಸವಿಯೂಟವನ್ನೂ ಅಣಿಮಾಡಿ ಬಡಿಸು. ಸಾವು ಬರುವುದಕ್ಕೆ ಮುಂಚೆ ನಾನು ನಿನ್ನನ್ನು ಮನಸಾರೆ ಆಶೀರ್ವದಿಸುತ್ತೇನೆ,” ಎಂದು ಹೇಳಿದನು.
- Verse 5: ಇಸಾಕನು ತನ್ನ ಮಗ ಏಸಾವನಿಗೆ ಹೇಳಿದ ಮಾತು ರೆಬೆಕ್ಕಳ ಕಿವಿಗೆ ಬಿದ್ದಿತು. ಏಸಾವನು ಬೇಟೆಯಾಡಲು ಕಾಡಿಗೆ ಹೋಗಿದ್ದಾಗ,
- Verse 6: ಆಕೆ ತನ್ನ ಮಗ ಯಕೋಬನಿಗೆ, “ನಿನ್ನ ತಂದೆ ನಿನ್ನಣ್ಣ ಏಸಾವನ ಸಂಗಡ ಮಾತನಾಡುತ್ತಾ,
- Verse 7: ನೀನು ಹೋಗಿ ಬೇಟೆಯಾಡಿ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಾ, ಅದರಿಂದ ನನಗೆ ಸವಿ ಊಟವನ್ನು ಅಣಿಮಾಡಿ ಬಡಿಸು; ಸಾವು ಬರುವುದಕ್ಕೆ ಮುಂಚೆ ನಾನು ನಿನ್ನನ್ನು ಸರ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮನಸಾರೆ ಆಶೀರ್ವದಿಸುತ್ತೇನೆ,’ ಎಂದು ಹೇಳಿದ್ದನ್ನು ಕೇಳಿದ್ದೇನೆ.
- Verse 8: ಆದುದರಿಂದ ಮಗನೇ, ನೀನು ನನ್ನ ಮಾತಿಗೆ ಕಿವಿಗೊಟ್ಟು ನಾನು ಹೇಳುವಂತೆ ಮಾಡು:
- Verse 9: ಮೇಕೆ ಮಂದೆಯ ಬಳಿಗೆ ಹೋಗಿ ಎರಡು ಒಳ್ಳೆಯ ಮೇಕೆಮರಿಗಳನ್ನು ಬೇಗನೆ ತೆಗೆದುಕೊಂಡು ಬಾ; ಅವುಗಳಿಂದ ನಿನ್ನ ತಂದೆಗೆ ಇಷ್ಟವಾಗಿರುವ ಸವಿಯೂಟವನ್ನು ನಾನೇ ಅಣಿಮಾಡುತ್ತೇನೆ.
- Verse 10: ನೀನು ಅದನ್ನು ಅವರ ಬಳಿಗೆ ತೆಗೆದುಕೊಂಡು ಹೋಗಿ ಬಡಿಸಬೇಕು; ಹಾಗೆ ಮಾಡಿದರೆ ಅವರು ಸಾಯುವುದಕ್ಕೆ ಮುಂಚೆ ನಿನ್ನನ್ನೇ ಮನಸಾರೆ ಆಶೀರ್ವದಿಸುವರು,” ಎಂದಳು.
- Verse 11: ಅದಕ್ಕೆ ಯಕೋಬನು, “ನನ್ನ ಅಣ್ಣನ ಮೈ ತುಂಬ ರೋಮಗಳಿವೆ. ನನ್ನ ಮೈ ಆದರೋ ನುಣ್ಣಗಿದೆ;
- Verse 12: ಒಂದು ವೇಳೆ ತಂದೆ ನನ್ನನ್ನು ಮುಟ್ಟಿನೋಡಿಯಾರು; ನಾನು ಅವರಿಗೆ ವಂಚಕನಾಗಿ ತೋರಿಬಂದರೆ ಆಶೀರ್ವಾದಕ್ಕೆ ಬದಲಾಗಿ ಶಾಪ ಬರಮಾಡಿಕೊಳ್ಳುತ್ತೇನೆ,” ಎಂದನು.
- Verse 13: ಆಗ ಅವನ ತಾಯಿ, “ಮಗನೇ, ಅವರು ನಿನಗೆ ಶಾಪ ಕೊಟ್ಟರೆ ಆ ಶಾಪ ನನಗಿರಲಿ; ನೀನು ನನ್ನ ಮಾತನ್ನು ಕೇಳಿ ಆ ಮರಿಗಳನ್ನು ತೆಗೆದುಕೊಂಡು ಬಾ,” ಎಂದಳು.
- Verse 14: ಅವನು ಹೋಗಿ ಅವುಗಳನ್ನು ತಂದು ತಾಯಿಗೆ ಕೊಟ್ಟನು. ರೆಬೆಕ್ಕಳು ಅವನ ತಂದೆಗೆ ಇಷ್ಟವಾದ ಸವಿ ಊಟವನ್ನು ಸಿದ್ಧಪಡಿಸಿದಳು.
- Verse 15: ತನ್ನ ಹಿರಿಯ ಮಗ ಏಸಾವನ ಬಟ್ಟೆಗಳಲ್ಲಿ ಶ್ರೇಷ್ಠವಾದವು ಮನೆಯಲ್ಲಿ ಆಕೆಯ ವಶದಲ್ಲಿದ್ದವು. ಅವುಗಳನ್ನು ತೆಗೆದು ಕಿರಿಯ ಮಗ ಯಕೋಬನಿಗೆ ತೊಡಿಸಿದಳು
- Verse 16: ಮೇಕೆಮರಿಗಳ ಚರ್ಮವನ್ನು ಅವನ ಕೈಗಳಿಗೂ ನುಣುಪಾದ ಕೊರಳಿಗೂ ಸುತ್ತಿದಳು.
- Verse 17: ತಾನು ಸಿದ್ಧಮಾಡಿದ್ದ ಸವಿಯೂಟವನ್ನೂ ಸುಟ್ಟಿದ್ದ ರೊಟ್ಟಿಯನ್ನೂ ತನ್ನ ಮಗ ಯಕೋಬನ ಕೈಗೆ ಕೊಟ್ಟಳು.
- Verse 18: ಯಕೋಬನು ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆದನು. ತಂದೆಯು, “ಏನು ಮಗನೇ, ನೀನು ಯಾವ ಮಗನು?” ಎಂದು ಕೇಳಿದನು.
- Verse 19: ಯಕೋಬನು, “ನಾನೇ ನಿಮ್ಮ ಹಿರಿಯ ಮಗ ಏಸಾವನು; ನಿಮ್ಮ ಅಪ್ಪಣೆಯಂತೆ ಮಾಡಿಕೊಂಡು ಬಂದಿದ್ದೇನೆ. ಎದ್ದು ಕುಳಿತುಕೊಂಡು ನಾನು ತಂದಿರುವ ಬೇಟೆಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸಿ,” ಎಂದು ಹೇಳಿದನು.
- Verse 20: ಇಸಾಕನು, “ಏನು ಮಗನೇ, ಇಷ್ಟು ಬೇಗನೆ ಬೇಟೆ ಹೇಗೆ ಸಿಕ್ಕಿತು?” ಎಂದು ಕೇಳಿದನು. ಯಕೋಬನು, “ನಿಮ್ಮ ದೇವರಾದ ಸರ್ವೇಶ್ವರ ಅದನ್ನು ನನ್ನೆದುರಿಗೆ ಬರಮಾಡಿದರು,” ಎಂದನು.
- Verse 21: ಆಗ ಇಸಾಕನು ಅವನಿಗೆ, “ಮಗನೇ, ಹತ್ತಿರಕ್ಕೆ ಬಾ; ನೀನು ನನ್ನ ಮಗನೋ ಅಲ್ಲವೋ, ಎಂದು ಮುಟ್ಟಿ ತಿಳಿದುಕೊಳ್ಳಬೇಕು,” ಎಂದನು.
- Verse 22: ಯಕೋಬನು ಹತ್ತಿರಕ್ಕೆ ಬಂದಾಗ ತಂದೆ ಇಸಾಕನು ಅವನನ್ನು ಮುಟ್ಟಿ ನೋಡಿ, “ಸ್ವರವೇನೋ ಯಕೋಬನ ಸ್ವರ; ಆದರೆ ಕೈ ಏಸಾವನ ಕೈ,” ಎಂದುಕೊಂಡನು.
- Verse 23: ಯಕೋಬನ ಕೈಗಳು ಅವನ ಅಣ್ಣನ ಕೈಗಳಂತೆ ರೋಮಮಯವಾಗಿ ಇದ್ದುದರಿಂದ ಇಸಾಕನು ಅವನ ಗುರುತನ್ನು ತಿಳಿಯಲಾರದೆ ಅವನನ್ನು ಆಶೀರ್ವದಿಸಿದನು.
- Verse 24: ಆದರೂ ಮರಳಿ, “ನೀನು ನಿಶ್ಚಯವಾಗಿ ನನ್ನ ಮಗ ಏಸಾವನೋ” ಎಂದು ಕೇಳಿದನು. ಯಕೋಬನು “ಹೌದು,” ಎಂದು ಉತ್ತರಕೊಟ್ಟನು.
- Verse 25: ಆಗ ಇಸಾಕನು, “ಊಟಮಾಡಲು ಆ ಬೇಟೆಮಾಂಸವನ್ನು ತಂದು ಬಡಿಸು, ಆಮೇಲೆ ನಿನ್ನನ್ನು ಆಶೀರ್ವದಿಸುತ್ತೇನೆ,” ಎಂದನು. ಅಂತೆಯೇ ಯಕೋಬನು ಹತ್ತಿರಕ್ಕೆ ತಂದು ಬಡಿಸಿದಾಗ ಇಸಾಕನು ಊಟಮಾಡಿದನು; ಕೊಟ್ಟ ದ್ರಾಕ್ಷಾರಸವನ್ನು ಕುಡಿದನು.
- Verse 26: ಬಳಿಕ ಅವನ ತಂದೆ ಇಸಾಕನು, “ಮಗನೇ, ಹತ್ತಿರ ಬಂದು ನನಗೆ ಮುತ್ತು ಕೊಡು,” ಎಂದನು. ಅವನು ಹತ್ತಿರ ಬಂದು ಮುದ್ದಿಟ್ಟಾಗ
- Verse 27: ಇಸಾಕನು ಅವನ ಉಡುಗೆತೊಡಿಗೆಗಳ ಸುವಾಸನೆಯನ್ನು ಮೂಸಿನೋಡಿ, ಅವನಿಗೆ ಹೀಗೆಂದು ಆಶೀರ್ವಾದ ಮಾಡಿದನು - “ನನ್ನ ಸುಕುಮಾರನಿಂದೇಳುವ ಸುವಾಸನೆ ಸರ್ವೇಶ್ವರನಾಶೀರ್ವದಿಸಿದ ಮೊಗೆನೆಲದ ಸುವಾಸನೆಯಂತಿದೆ.
- Verse 28: ದಯಪಾಲಿಸಲಿ ದೇವ ನಿನಗೆ ಆಗಸದ ಮಂಜನು, ಸಾರವುಳ್ಳ ಹೊಲವನು ಅನುಗ್ರಹಿಸಲಿ ಹೇರಳ ದವಸ ಧಾನ್ಯವನು, ದ್ರಾಕ್ಷಾರಸವನು.
- Verse 29: ಸೇವೆಗೈಯಲಿ ನಿನಗೆ ಹೊರನಾಡುಗಳು ಅಡ್ಡಬೀಳಲಿ ನಿನಗೆ ಹೊರಜನಾಂಗಗಳು ಒಡೆಯನಾಗು ಸೋದರರಿಗೆ ಅಡ್ಡಬೀಳಲಿ ತಾಯಕುಡಿ ನಿನಗೆ ಶಾಪವಿರಲಿ ನಿನ್ನನ್ನು ಶಪಿಸುವವರಿಗೆ ಆಶೀರ್ವಾದವು ನಿನ್ನನ್ನು ಹರಸುವವರಿಗೆ!”
- Verse 30: ಯಕೋಬನು ತಂದೆ ಇಸಾಕನಿಂದ ಆಶೀರ್ವಾದ ಪಡೆದು ಹೊರಟುಹೋದನು. ಕೂಡಲೆ ಅವನ ಅಣ್ಣ ಏಸಾವನು ಬೇಟೆಯಿಂದ ಹಿಂದಿರುಗಿ ಬಂದನು.
- Verse 31: ಅವನು ಕೂಡ ಸವಿ ಊಟವನ್ನು ಅಣಿಮಾಡಿ ತಂದೆಯ ಬಳಿಗೆ ತಂದು, “ಅಪ್ಪಾ, ಏಳಿ; ನಿನ್ನ ಮಗನಾದ ನಾನು ತಂದಿರುವ ಬೇಟೆಯ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸಿ,” ಎಂದು ಕೇಳಿಕೊಂಡನು.
- Verse 32: “ನೀನು ಯಾರು?” ಎಂದು ತಂದೆ ಇಸಾಕನು ವಿಚಾರಿಸಲು, “ನಾನೇ ನಿಮ್ಮ ಜ್ಯೇಷ್ಠಪುತ್ರ ಏಸಾವನು” ಎಂದು ಉತ್ತರಕೊಟ್ಟನು.
- Verse 33: ಆಗ ಇಸಾಕನು ಗಡಗಡನೆ ನಡುಗುತ್ತಾ, “ಹಾಗಾದರೆ ಬೇಟೆಯಾಡಿ ನನಗೆ ಊಟ ತಂದುಕೊಟ್ಟವನಾರು? ನೀನು ಬರುವುದಕ್ಕೆ ಮುಂಚೆ ಅವನು ತಂದುದನ್ನು ಊಟಮಾಡಿ ಅವನನ್ನೇ ಅಂತಿಮವಾಗಿ ಆಶೀರ್ವದಿಸಿಬಿಟ್ಟೆನು; ಅವನಿಗೆ ಮಾಡಿದ ಆಶೀರ್ವಾದ ಇನ್ನು ತಪ್ಪಲಾರದು,” ಎಂದನು.
- Verse 34: ತಂದೆಯ ಈ ಮಾತುಗಳನ್ನು ಕೇಳಿ ಏಸಾವನು ದುಃಖಕ್ರಾಂತನಾದನು. ಬಹಳವಾಗಿ ಅತ್ತನು. “ಅಪ್ಪಾ, ತಂದೆಯೇ ನನ್ನನ್ನು, ನನ್ನನ್ನು ಕೂಡ ಆಶೀರ್ವದಿಸು,” ಎಂದು ಬೇಡಿಕೊಂಡನು.
- Verse 35: ಇಸಾಕನು, “ನಿನ್ನ ತಮ್ಮ ಮೋಸದಿಂದ ಬಂದು ನಿನಗಾಗಬೇಕಿದ್ದ ಆಶೀರ್ವಾದವನ್ನು ಪಡೆದುಕೊಂಡು ಹೋದನು,” ಎಂದನು.
- Verse 36: ಅದಕ್ಕೆ ಏಸಾವನು, “ಯಕೋಬ’ ಎಂಬ ಹೆಸರು ಅವನಿಗೆ ತಕ್ಕುದಾಗಿದೆ; ಎರಡು ಸಾರಿ ಅವನು ನನ್ನನ್ನು ವಂಚಿಸಿದ್ದಾನೆ. ಹಿಂದೆ ನನ್ನ ಜ್ಯೇಷ್ಠತನದ ಹಕ್ಕನ್ನು ಅಪಹರಿಸಿದ; ಈಗ ನನಗೆ ಬರಬೇಕಾಗಿದ್ದ ಆಶೀರ್ವಾದವನ್ನು ಕಿತ್ತುಕೊಂಡಿದ್ದಾನೆ,” ಎಂದು ಹೇಳಿ ತನ್ನ ತಂದೆಯನ್ನು ನೋಡಿ, “ನನಗೆಂದೇ ನಿಮ್ಮಲ್ಲಿ ಯಾವ ಆಶೀರ್ವಾದವೂ ಉಳಿದಿಲ್ಲವೆ?” ಎಂದು ಕೇಳಿದನು.
- Verse 37: ಆಗ ಇಸಾಕನು, “ಅವನನ್ನು ನಿನಗೆ ಒಡೆಯನನ್ನಾಗಿ ನೇಮಿಸಿದ್ದೇನೆ; ಸಹೋದರರನ್ನೇ ಅವನಿಗೆ ಕೆಲಸಗಾರರನ್ನಾಗಿ ಕೊಟ್ಟಿದ್ದೇನೆ; ದವಸಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಅವನಿಗೆ ಬಿಟ್ಟಿದ್ದೇನೆ. ಹೀಗಿರಲು ಮಗನೇ, ನಾನು ನಿನಗೇನು ತಾನೆ ಮಾಡಲು ಸಾಧ್ಯ?” ಎಂದನು.
- Verse 38: “ಅಪ್ಪಾ, ನಿಮ್ಮಲ್ಲಿ ಒಂದೇ ಆಶೀರ್ವಾದ ಮಾತ್ರ ಇತ್ತೋ? ನನ್ನನ್ನು, ನನ್ನನ್ನು ಕೂಡ ಆಶೀರ್ವಾದ ಮಾಡಪ್ಪಾ,” ಎಂದು ಗೋಳಾಡುತ್ತಾ ಅತ್ತನು.
- Verse 39: ಆಗ ಇಸಾಕನು - "ಸಾರವತ್ತಾದ ಭೂಮಿಗೆ ದೂರ ಆಗಸದಿಂದೇಳುವ ಮಂಜಿಗೆ ದೂರ ಇರುವುದು ನೀ ನೆಲೆಸುವ ಬಿಡಾರ.
- Verse 40: ಬಾಳ ನಡೆಸುವೆ ಕತ್ತಿಕಠಾರಿಯಿಂದಲೇ ಕೂಲಿಯಾಳಾಗುವೆ ಸೋದರನಿಗೆ ಮುರಿಯುವೆ ಅವ ಹೊರಿಸಿದ ನೊಗವ ಸ್ವಾತಂತ್ರ್ಯಕ್ಕಾಗಿ ನೀ ಬಂಡಾಯ ಹೂಡಿದಾಗ,”
- Verse 41: ತಂದೆಯಿಂದ ಯಕೋಬನು ಪಡೆದುಕೊಂಡ ಆಶೀರ್ವಾದದ ನಿಮಿತ್ತ ಏಸಾವನು ಯಕೋಬನ ಮೇಲೆ ಹಗೆಗೊಂಡನು. “ತಂದೆಯ ಮರಣಕ್ಕಾಗಿ ದುಃಖಿಸುವ ಕಾಲ ಸಮೀಪಿಸಿತು. ಆ ಬಳಿಕ ನನ್ನ ತಮ್ಮ ಯಕೋಬನನ್ನು ಕೊಂದುಹಾಕುತ್ತೇನೆ,” ಎಂದು ತನ್ನೊಳಗೇ ನೆನಸಿಕೊಂಡನು.
- Verse 42: ತನ್ನ ಹಿರಿಯ ಮಗ ಏಸಾವನ ಅನಿಸಿಕೆಯು ರೆಬೆಕ್ಕಳಿಗೆ ತಿಳಿದು ಬಂದಾಗ ಆಕೆ ತನ್ನ ಕಿರಿಯ ಮಗ ಯಕೋಬನನ್ನು ಕರೆದು ಹೀಗೆಂದಳು: “ನೋಡು, ನಿನ್ನ ಅಣ್ಣ ಏಸಾವನು ನಿನ್ನನ್ನು ಕೊಂದು ಸೇಡು ತೀರಿಸಿಕೊಳ್ಳಬೇಕೆಂದಿದ್ದಾನೆ.
- Verse 43: ಆದುದರಿಂದ ಮಗನೇ, ನನ್ನ ಮಾತನ್ನು ಕೇಳು; ನೀನು ಎದ್ದು ಖಾರಾನ್ ಊರಿನಲ್ಲಿರುವ ನನ್ನ ಅಣ್ಣ ಲಾಬಾನನ ಬಳಿಗೆ ಓಡಿಹೋಗು.
- Verse 44: ಕೆಲವು ಕಾಲ, ಅಂದರೆ ನಿನ್ನಣ್ಣನ ಕೋಪ ಶಮನ ಆಗುವವರೆಗೂ, ಅವನ ಬಳಿಯಲ್ಲೇ ಇರು.
- Verse 45: ನಿನ್ನ ಅಣ್ಣನು ನೀನು ಮಾಡಿರುವುದನ್ನು ಮರೆತು ತನ್ನ ಕೋಪವನ್ನು ಬಿಟ್ಟಾಗ ನಾನು ನಿನ್ನನ್ನು ಅಲ್ಲಿಂದ ಕರೆಸಿಕೊಳ್ಳುತ್ತೇನೆ. ನಾನೇತಕ್ಕೆ ನಿಮ್ಮಿಬ್ಬರನ್ನೂ ಒಂದೇ ದಿನದಲ್ಲಿ ಕಳೆದುಕೊಳ್ಳಬೇಕು?” ಎಂದು ಹೇಳಿದಳು.
- Verse 46: ಅನಂತರ ರೆಬೆಕ್ಕಳು ಇಸಾಕನಿಗೆ, “ಹಿತ್ತಿಯರಾದ ಈ ಹೆಣ್ಣುಗಳ ದೆಸೆಯಿಂದ ನನ್ನ ಬಾಳು ಬೇಸರವಾಗಿದೆ. ಯಕೋಬನು ಕೂಡ ಈ ನಾಡಿನ ಹೆಣ್ಣನ್ನು ಆರಿಸಿಕೊಂಡು ಇಂಥ ಹಿತ್ತಿಯ ಹುಡುಗಿಯನ್ನೇ ಮದುವೆಮಾಡಿಕೊಂಡರೆ ನಾನು ಇನ್ನು ಬದುಕಿ ಪ್ರಯೋಜನ ಇಲ್ಲ,” ಎಂದು ಹೇಳಿದಳು.