ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
38ನೇ ಅಧ್ಯಾಯ
- Verse 1: ಬಿರುಗಾಳಿಯೊಳಗಿಂದ ಸರ್ವೇಶ್ವರ ಯೋಬನಿಗೆ ಕೊಟ್ಟ ಪ್ರತ್ಯುತ್ತರ ಇದು:
- Verse 2: “ಅಜ್ಞಾನದ ಮಾತುಗಳನ್ನಾಡಿ ಸತ್ಯಾಲೋಚನೆಯನು ಮಂಕುಮಾಡುವ ನೀನಾರು?
- Verse 3: ಶೂರನಂತೆ ನಡುಕಟ್ಟಿ ನಿಲ್ಲು ನಾನು ಹಾಕುವ ಪ್ರಶ್ನೆಗೆ ಉತ್ತರ ನೀಡು:
- Verse 4: ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನೆಲ್ಲಿದ್ದೆ? ಉತ್ತರಕೊಡು, ನೀನು ಅಷ್ಟು ಜ್ಞಾನಿಯಾಗಿದ್ದರೆ.
- Verse 5: ಅದರಳತೆಯನ್ನು ಗೊತ್ತುಮಾಡಿದವನಾರೆಂದು ನಿನಗೆ ತಿಳಿದಿದೆಯೆ? ಅದರ ಮೇಲೆ ನೂಲು ಹಿಡಿದವನಾರೆಂದು ನಿನಗೆ ಗೊತ್ತಿದೆಯೆ?
- Verse 6: ಉದಯ ನಕ್ಷತ್ರಗಳ ಜಯಕಾರದ ನಡುವೆ ದೇವದೂತರೆಲ್ಲರ ಆನಂದಘೋಷಣೆಯ ಮಧ್ಯೆ,
- Verse 7: ಭೂಮಿಗೆ ಮೂಲೆಗಲ್ಲನು ಹಾಕಿದವನಾರು? ಅದರ ಅಡಿಗಲ್ಲು ಯಾವುದರ ಮೇಲೆ ನಿಂತಿದೆ?”
- Verse 8: “ಭೂಗರ್ಭವನ್ನು ಭೇದಿಸಿಕೊಂಡು ಬಂದ ಸಮುದ್ರವನು ದ್ವಾರಗಳಿಂದ ಬಂಧಿಸಿ ಮುಚ್ಚಿದವನಾರು?
- Verse 9: ಅದಕ್ಕೆ ಮೋಡಗಳನು ತೊಡಿಸಿ, ಕಾರ್ಗತ್ತಲನು ಉಡಿಸಿದವನು ಯಾರು?
- Verse 10: ಅದಕ್ಕೆ ಸರಹದ್ದನು ನಿಯಮಿಸಿ ಕದಗಳನೂ ಅಗುಳಿಗಳನೂ ಇಟ್ಟವನಾರು?
- Verse 11: ‘ಇಲ್ಲಿಯತನಕ ಬರಬಹುದು, ಇದನು ಮೀರಿ ಬರಕೂಡದು’ ‘ಮೊರೆವ ನಿನ್ನ ತೆರೆಗೆ ಇಲ್ಲಿಗೇ ತಡೆ’ ಎಂದು ವಿಧಿಸಿದವನು ನಾನು.
- Verse 12: ನಿನ್ನ ಜೀವಮಾನದಲಿ ಎಂದಾದರೂ ‘ಅರುಣೋದಯವಾಗಲಿ’ ಎಂದು ಆಜ್ಞಾಪಿಸಿರುವೆಯಾ?
- Verse 13: ‘ಧರಣಿಯ ಅಂಚುಗಳನು ಹಿಡಿದು ದುರುಳರನ್ನು ಅದರೊಳಗಿಂದ ಒದರಿಬಿಡು’ ಎಂದು ಅದಕ್ಕೆ ಅಪ್ಪಣೆಮಾಡಿದೆಯಾ?
- Verse 14: ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಭೂಮಿ ರೂಪತಾಳುತ್ತದೆ ಅದು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುತ್ತದೆ.
- Verse 15: ದುರುಳರಿಂದ ಬೆಳಕನು ಹಿಂತೆಗೆದುಕೊಳ್ಳಲಾಗುವುದು ಅವರು ಎತ್ತಿದ ಕೈಯನು ಮುರಿಯಲಾಗುವುದು.
- Verse 16: ನೀನೆಂದಾದರು ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ?
- Verse 17: ಮರಣದ ದ್ವಾರಗಳು ನಿನಗೆ ಗೋಚರವಾಗಿರುವುವೋ? ಘೋರಾಂಧಕಾರದ ಕದಗಳನ್ನು ನೀನು ಕಂಡಿರುವೆಯೋ?
- Verse 18: ಭೂವಿಸ್ತಾರವನ್ನು ಗ್ರಹಿಸಿರುವೆಯೋ? ಇದೆಲ್ಲವು ನಿನಗೆ ತಿಳಿದಿದ್ದರೆ ಹೇಳು, ನೋಡೋಣ!
- Verse 19: ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ?
- Verse 20: ನೀನು ಅವುಗಳನು ಅವುಗಳ ಪ್ರಾಂತ್ಯಕ್ಕೆ ಕರೆದೊಯ್ಯಬಲ್ಲೆಯಾ? ಅವುಗಳ ನಿವಾಸಕೆ ಹಾದಿಯನು ಕಂಡುಹಿಡಿಯಬಲ್ಲೆಯಾ?
- Verse 21: ಇದನ್ನು ಬಲ್ಲೆಯಾದರೆ ನೀನು ಆಗಲೇ ಹುಟ್ಟಿದ್ದಿರಬೇಕು ಮತ್ತು ಈಗ ಬಹಳ ವೃದ್ಧನಾಗಿರಬೇಕು!
- Verse 22: ಹಿಮದ ಭಂಡಾರವನು ಹೊಕ್ಕಿರುವೆಯಾ? ಕಲ್ಮಳೆಯ ಬೊಕ್ಕಸವನು ನೋಡಿರುವೆಯಾ?
- Verse 23: ಇಕ್ಕಟ್ಟಿನ ಕಾಲಕ್ಕಾಗಿ ಅವುಗಳನು ನಾನು ಇಟ್ಟಿರುವೆನು ಯುದ್ಧಕದನಗಳ ದಿನಗಳಿಗಾಗಿ ನಾನು ಕಾದಿಟ್ಟಿರುವೆನು.
- Verse 24: ಬೆಳಕು ಏರಿಬರುವ ಜಾಗವೆಲ್ಲಿ? ಬಿಸಿಗಾಳಿ ಬೀಸಿಬರುವ ಮಾರ್ಗವೆಲ್ಲಿ?
- Verse 25: ಮನುಜರಿಲ್ಲದ ಕಾಡಿನಲ್ಲೂ ನಿರ್ಜನಪ್ರದೇಶದಲ್ಲೂ ಮಳೆಯನು ಹೊಯ್ದು,
- Verse 26: ಹಾಳುಬೀಳಾದ ಭೂಮಿಯನು ತೋಯಿಸಲೆಂದು ಪಚ್ಚೆಪಸಿರಾದ ಹುಲ್ಲನು ಬೆಳೆಯಿಸಲೆಂದು,
- Verse 27: ವೃಷ್ಟಿಯ ಪ್ರವಾಹಕ್ಕೆ ಕಾಲುವೆಯನು ಕಡಿದವರಾರು? ಗರ್ಜಿಸುವ ಸಿಡಿಲಿಗೆ ದಾರಿಯನು ಮಾಡಿದವರಾರು?
- Verse 28: ಮಳೆಗೆ ತಂದೆಯೊಬ್ಬನಿದ್ದಾನೆಯೆ? ಮಂಜಿನ ಹನಿಗೆ ಹೆತ್ತವಳಿದ್ದಾಳೆಯೆ?
- Verse 29: ಹಿಮಗಡ್ಡೆ ಹೊರಡುವುದು ಯಾರ ಗರ್ಭದಿಂದ? ಆಕಾಶದ ಇಬ್ಬನಿ ಜನಿಸುವುದು ಯಾವ ತಾಯಿಂದ?
- Verse 30: ಕಲ್ಲಿನಂತೆ ನೀರು ಗಟ್ಟಿಯಾಗುತ್ತದೆ ಸಾಗರದ ಮೇಲ್ಭಾಗ ಹೆಪ್ಪುಗಟ್ಟುತ್ತದೆ.
- Verse 31: ಕೃತ್ತಿಕೆಯ ಸರಪಣಿಯನು ನೀನು ಬಿಗಿಯಬಲ್ಲೆಯಾ? ಮೃಗಶಿರದ ಸಂಕೋಲೆಯನು ಬಿಚ್ಚಬಲ್ಲೆಯಾ?
- Verse 32: ಆಯಾಯ ಕಾಲಕ್ಕೆ ನಕ್ಷತ್ರರಾಶಿಗಳನು ಬರಮಾಡುವೆಯಾ? ಸಪ್ತರ್ಷಿತಾರೆಗಳನು ಪರಿವಾರದೊಡನೆ ನಡೆಸುವೆಯಾ?
- Verse 33: ಖಗೋಳದ ನಿಯಮಗಳನು ತಿಳಿದಿರುವೆಯಾ? ಅದರ ಆಳ್ವಿಕೆಯನು ಇಳೆಯೊಳು ಸ್ಥಾಪಿಸಿರುವೆಯಾ?
- Verse 34: ನಿನ್ನಾಜ್ಞೆ ಮೋಡ ಮುಟ್ಟಿದ ಮಾತ್ರಕೆ ಹೇರಳವಾದ ನೀರು ನಿನ್ನನು ಆವರಿಸುವುದೊ?
- Verse 35: ನಿನ್ನ ಅಪ್ಪಣೆಯಂತೆ ಸಿಡಿಲುಗಳು ಹೋಗಿಬಂದು ‘ಇದೋ ಬಂದಿದ್ದೇವೆ’ ಎಂದು ನಿನಗೆ ಹೇಳುತ್ತವೆಯೊ?
- Verse 36: ಜ್ಞಾನವನು ದಯಪಾಲಿಸಿದವನಾರು ಇಬಿಸ್ ಪಕ್ಷಿಗೆ? ವಿವೇಕವನು ಅನುಗ್ರಹಿಸಿದವನಾರು ಕೋಳಿಹುಂಜಕ್ಕೆ
- Verse 37: ಯಾರಿಗಿದೆ ಮೋಡಗಳನು ಲೆಕ್ಕಿಸುವ ಶಕ್ತಿ? ಆಕಾಶದಲ್ಲಿನ ಬುದ್ದಲಿಗಳನು ಮೊಗಚಿಹಾಕುವ ಬುದ್ಧಿಶಕ್ತಿ?
- Verse 38: ದೂಳುಮಣ್ಣನು ಒತ್ತಟ್ಟಿಗೆ ಸೇರಿಸಬಲ್ಲವನಾರು? ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡಬಲ್ಲವನಾರು?
- Verse 39: ಗುಹೆಯಲ್ಲಿ ಮಲಗಿರುವ ಸಿಂಹಕೆ ಬೇಟೆಯಾಡಿ ಊಟ ಒದಗಿಸಬಲ್ಲೆಯಾ ನೀನು?
- Verse 40: ಪೊದೆಯಲ್ಲಿ ಹೊಂಚುಕೂತಿರುವ ಯುವಸಿಂಹಕೆ ಹಸಿವನು ನೀಗಿಸಬಲ್ಲೆಯಾ ನೀನು?
- Verse 41: ಆಹಾರವನು ಒದಗಿಸುವವರಾರು ತಾಯಿ ಕಾಗೆಗೆ ಅದರ ಹಸಿದ ಮರಿಗಳು ಕೊಕ್ಕೆತ್ತಿ ದೇವರಿಗೆ ಮೊರೆಯಿಡುವಾಗ?