வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
36ನೇ ಅಧ್ಯಾಯ
- Verse 1: ಜಿನುಗುಟ್ಟುತಿಹುದು ಪಾಪವು ದುಷ್ಟನ ಮನದಲಿ I ದೇವ ಭಯವೇ ಇಲ್ಲ ಅವನ ಕಣ್ಣೆದುರಿನಲಿ II
- Verse 2: “ಬೈಲಿಗೆ ಬಾರದು ನಿನ್ನ ದೋಷವು, ನಿನಗದು ಕೇಡು ತರದು” I ಇಂತುಲಿದು ಆ ಪಾಪದ ಜಿನುಗು ಅವನನು ವಂಚಿಸುತಿಹುದು II
- Verse 3: ಅವನ ಕೀಳು ಬಾಯಿಯ ತುಂಬ ಕೇಡು ಕಪಟ I ಸನ್ಮತಿ ಸತ್ಕಾರ್ಯಗಳನ್ನು ಬಿಟ್ಟೇಬಿಟ್ಟ II
- Verse 4: ಆಲೋಚಿಸುತ್ತಿಹನು ಅಕ್ರಮವನು ಹಾಸಿಗೆಯಿಂದಲೆ I ಹೇಸನು ದುಷ್ಕೃತ್ಯಕ್ಕೆ, ಮುನ್ನುಗ್ಗುವನು ದುರ್ಮಾರ್ಗದಲೆ II
- Verse 5: ನಿನ್ನ ಪ್ರೀತಿ ಪ್ರಭು, ಚುಂಬಿಸುತಿಹುದು ಗಗನವನು I ನಿನ್ನ ಸತ್ಯವು ಮುಟ್ಟುತಿಹುದು ಮೇಘಮಂಡಲವನು II
- Verse 6: ನಿನ್ನ ನೀತಿ ಸುರಗಿರಿಯಂತೆ, ನಿನ್ನ ನ್ಯಾಯ ಮಹಾಸಾಗರದಂತೆ I ಮಾನವರನು, ಪಶುಪ್ರಾಣಿಗಳನು ಪ್ರಭು, ಸಲಹುವೆ ರಕ್ಷಕನಂತೆ II
- Verse 7: ನಿನ್ನಚಲ ಪ್ರೀತಿ, ಹೇ ದೇವಾ, ಎಷ್ಟೋ ಅಮೂಲ್ಯ I ನಿನ್ನಕ್ಕರೆಯ ರೆಕ್ಕೆಗಳಡಿ ನರಮಾನವರಿಗಾಶ್ರಯ II
- Verse 8: ಅವರ ತೃಪ್ತಿ ನಿನ್ನ ಮಂದಿರದ ಸಮೃದ್ಧಿಯಿಂದ I ಅವರ ಪಾನೀಯ ನಿನ್ನ ಸಂಭ್ರಮ ಪ್ರವಾಹದಿಂದ II
- Verse 9: ನಿನ್ನಲ್ಲಿದೆ ಜೀವದ ಬುಗ್ಗೆ I ನಿನ್ನ ಬೆಳಕಿನಿಂದ ಬೆಳಕೆಮಗೆ II
- Verse 10: ನಿನ್ನನರಿತವರನು ಪ್ರೀತಿಸು ಮುಂದಕ್ಕೂ I ಒಳಿತನ್ನು ಮಾಡು ನೇರಮನಸ್ಕರಿಗೂ II
- Verse 11: ಗರ್ವಿಗಳ ಕಾಲಿಗೆ ನಾ ಬೀಳುವುದು ಬೇಡ I ದುರುಳರ ಕೈ ನನ್ನ ಹೊರದೂಡುವುದು ಬೇಡ II
- Verse 12: ಕೇಡು ಮಾಡಿದವರಿದೋ ಕೆಳಗೆ ಬಿದ್ದಿಹರು I ಮರಳಿ ಏಳಲಾಗದೆ ಮಡಿದು ಬಿದ್ದಿಹರು II