P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
147ನೇ ಅಧ್ಯಾಯ
- Verse 1: ನಮ್ಮ ದೇವರನು ಹೊಗಳಿ ಹಾಡುವುದು ಉಚಿತ I ಆತನ ಸ್ತುತಿ ಮನೋಹರ, ಅದು ಬಲುಸೂಕ್ತ II
- Verse 2: ನಿರ್ಮಿಸುತಿಹನು ಪ್ರಭು ಮರಳಿ ಜೆರುಸಲೇಮನು I ಬಂದು ಸೇರಿಸುತಿಹನು ಚದರಿದ ಇಸ್ರಯೇಲರನು II
- Verse 3: ವಾಸಿಮಾಡುವನು ಮುರಿದ ಮನಸ್ಸುಳ್ಳವರನು I ಕಟ್ಟಿ ಗುಣಪಡಿಸುವನು ಅವರ ಗಾಯಗಳನು II
- Verse 4: ನಿಯಮಿಸಿಹನು ತಾರೆಗಳ ಸಂಖ್ಯೆಯನು I ಇಟ್ಟಿಹನು ಪ್ರತಿಯೊಂದಕೂ ಹೆಸರನು II
- Verse 5: ನಮ್ಮ ಪ್ರಭು ಘನವಂತ, ಪರಾಕ್ರಮಿ I ಅಪರಿಮಿತವಾದುದು ಆತನ ಜ್ಞಾನನಿಧಿ II
- Verse 6: ಆಧಾರವಾಗಿಹನು ಪ್ರಭು ದೀನರಿಗೆ I ತುಳಿದುಬಿಡುವನು ದುರ್ಜನರನು ನೆಲಕೆ II
- Verse 7: ಧನ್ಯವಾದವಿತ್ತು ಹಾಡಿರಿ ಪ್ರಭುವನು I ಕಿನ್ನರಿಯೊಡನೆ ಭಜಿಸಿರಿ ನಮ್ಮ ದೇವನನು II
- Verse 8: ಕವಿಸುವನಾತ ಮೋಡಗಳನು ಗಗನದಲಿ I ಸುರಿಸುವನು ಮಳೆಯನು ಬುವಿಯಲಿ I ಬೆಳೆಸುವನು ಹುಲ್ಲನು ಬೆಟ್ಟಗಳಲಿ II
- Verse 9: ಪಶುಗಳಿಗೂ ಕೂಗುವ ಕಾಗೆಮರಿಗಳಿಗೂ I ಒದಗಿಸುವನು ಬೇಕಾದ ಆಹಾರಗಳನು II
- Verse 10: ಅಶ್ವಬಲದಲಿ ಆತನಿಗೆ ಇಷ್ಟವಿಲ್ಲ I ಶೂರನ ಶಕ್ತಿಯನವನು ಮೆಚ್ಚುವುದಿಲ್ಲ II
- Verse 11: ಮೆಚ್ಚುವನಾತ ತನ್ನಲಿ ಭಯಭಕ್ತಿಯುಳ್ಳವರನು I ತನ್ನಚಲ ಪ್ರೀತಿಯಲಿ ಭರವಸೆಯುಳ್ಳವರನು II
- Verse 12: ಜೆರುಸಲೇಮೇ, ಕೀರ್ತಿಸು ಪ್ರಭುವನು I ಸಿಯೋನೇ, ಸ್ತುತಿಸು ನಿನ್ನ ದೇವರನು II
- Verse 13: ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ ಅಗುಳಿಗಳನು I ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು II
- Verse 14: ನಿನ್ನ ಪ್ರಾಂತದೊಳಗೆಲ್ಲಾ ಇರುವುದು ನೆಮ್ಮದಿ I ನೀಡುವನು ನಿನಗೆ ಅತ್ಯುತ್ತಮ ಗೋದಿ II
- Verse 15: ಕಳಿಸುವನು ಧರೆಗೆ ತನ್ನ ಆಣತಿ I ಸಿದ್ಧಿಯಾಗುವುದದು ಬಲು ಶೀಘ್ರದಿ II
- Verse 16: ಸುರಿಸುವನು ಹಿಮವನು ಉಣ್ಣೆಯಂತೆ I ಹರಡುವನು ಇಬ್ಬನಿಯನು ಬೂದಿಯಂತೆ II
- Verse 17: ಸುರಿಸುವನು ಆಲಿಕಲ್ಲನು ರೊಟ್ಟಿ ತುಂಡುಗಳಂತೆ I ಕೊರೆಯುವ ಚಳಿಯನು ಕಳಿಸುವನು ಸಹಿಸಲಾಗದಂತೆ II
- Verse 18: ಕರಗುವುವು ಆ ಕಲ್ಲುಗಳು ಆತನ ಅಪ್ಪಣೆಗೆ I ಹರಿಯುವುದು ನೀರು ಆತ ಕಳುಹಿಸುವ ಗಾಳಿಗೆ II
- Verse 19: ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ I ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ II
- Verse 20: ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ I ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ I ಅಲ್ಲೆಲೂಯ! II