పరిశుద్ధ గ్రంథము
ಹಳೆಯ ಒಡಂಬಡಿಕೆ
ವಿಮೋಚನಕಾಂಡ
10ನೇ ಅಧ್ಯಾಯ
1 : ಬಳಿಕ ಸರ್ವೇಶ್ವರ ಸ್ವಾಮಿ ಮೋಶೆಗೆ: “ಫರೋಹನ ಬಳಿಗೆ ಮತ್ತೆ ಹೋಗು. ನಾನು ಅವನ ಮತ್ತು ಅವನ ಪರಿವಾರದವರ ಹೃದಯಗಳನ್ನು ಮೊಂಡಾಗಿಸಿದ್ದೇನೆ. ಏಕೆಂದರೆ ಈ ಸೂಚಕಕಾರ್ಯಗಳನ್ನು ಅವರ ಮುಂದೆ ನಡೆಸಲು ಆಸ್ಪದವಾಗಬೇಕು;
2 : ಇಸ್ರಯೇಲರು ತಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ಈ ಸೂಚಕಕಾರ್ಯಗಳನ್ನು ತಿಳಿಸಬೇಕು; ಅಲ್ಲದೆ ಸರ್ವೇಶ್ವರ ಆದ ನಾನು ಈಜಿಪ್ಟಿನವರನ್ನು ಇಷ್ಟಬಂದ ಹಾಗೆ ಆಡಿಸಿ ದಂಡಿಸಿದೆನೆಂದು ತಿಳಿಸಬೇಕು. ಹೀಗೆ ನಾನೇ ಸರ್ವೇಶ್ವರನೆಂದು ಈ ಸೂಚಕಕಾರ್ಯಗಳಿಂದ ನೀವು ತಿಳಿದುಕೊಳ್ಳುವಿರಿ,” ಎಂದರು.
3 : ಮೋಶೆ ಮತ್ತು ಆರೋನರು ಫರೋಹನ ಬಳಿಗೆ ಹೋಗಿ ಅವನಿಗೆ, "ಹಿಬ್ರಿಯರ ದೇವರಾಗಿರುವ ಸರ್ವೇಶ್ವರನ ಮಾತುಗಳಿವು: ‘ಎಲ್ಲಿಯವರೆಗೆ ನೀನು ನನಗೆ ತಲೆ ತಗ್ಗಿಸದಿರುವೆ? ನನ್ನನ್ನು ಆರಾಧಿಸ ಹೋಗಲು ನನ್ನ ಜನರಿಗೆ ಅಪ್ಪಣೆ ಕೊಡು.
4 : ಕೊಡದೆ ಹೋದರೆ ನಾಳೆ ನಿನ್ನ ರಾಜ್ಯದೊಳಗೆ ಮಿಡತೆಗಳನ್ನು ಬರಮಾಡುವೆನು.
5 : ನೆಲ ಕರ್ರಗೆ ಕಾಣಿಸುವಷ್ಟು ಅವು ಭೂಮಿಯನ್ನೆಲ್ಲಾ ಆವರಿಸಿಕೊಳ್ಳುವುವು; ಆನೆಕಲ್ಲಿನ ಮಳೆಯಿಂದ ನಾಶ ಆಗದೆ ಉಳಿದದ್ದೆಲ್ಲವನ್ನು ಮಿಡತೆಗಳು ತಿಂದುಬಿಡುವವು. ಹೊಲದಲ್ಲಿರುವ ನಿಮ್ಮ ಎಲ್ಲ ಮರಗಳ ಎಲೆಚಿಗುರುಗಳನ್ನು ತಿಂದುಬಿಡುವುವು.
6 : ನಿನ್ನ ಮನೆಗಳಲ್ಲೂ ನಿನ್ನ ಪರಿವಾರದವರ ಮನೆಗಳಲ್ಲೂ ಈಜಿಪ್ಟಿನವರ ಮನೆಗಳಲ್ಲೂ ಅವು ತುಂಬಿಕೊಳ್ಳುವುವು. ನಿಮ್ಮ ತಂದೆ ತಾತಂದಿರ ಕಾಲದಿಂದ ಇಂದಿನವರೆಗೂ ಅಂಥ ಮಿಡಿತೆದಂಡನ್ನು ಯಾರೂ ನೋಡಿಲ್ಲ.” ಹೀಗೆಂದು ಹೇಳಿ ಮೋಶೆ ಫರೋಹನ ಬಳಿಯಿಂದ ಹೊರಟುಹೋದನು.
7 : ಆಗ ಪರಿವಾರದವರು ಫರೋಹನಿಗೆ, “ಈ ಮನುಷ್ಯ ಇನ್ನೆಷ್ಟುಕಾಲ ನಮಗೆ ಉರುಳಾಗಿರುವನೋ! ಆ ಜನರು ಹೋಗಿ ತಮ್ಮ ದೇವರಾದ ಸರ್ವೇಶ್ವರನನ್ನು ಆರಾಧಿಸಲು ಅಪ್ಪಣೆಕೊಟ್ಟುಬಿಡಿ. ಈಜಿಪ್ಟ್ ದೇಶವೇ ಹಾಳಾಗುತ್ತಿದೆಯೆಂದು ತಮ್ಮ ಮನಸ್ಸಿಗೆ ತೋಚಿರಬೇಕಲ್ಲವೆ?” ಎಂದು ಹೇಳಿದರು.
8 : ಇದನ್ನು ಕೇಳಿದ ಫರೋಹನು ಮೋಶೆ ಮತ್ತು ಆರೋನರನ್ನು ಪುನಃ ಕರೆಸಿ, “ನೀವು ಹೋಗಿ ನಿಮ್ಮ ದೇವರಾದ ಸರ್ವೇಶ್ವರನನ್ನು ಆರಾಧಿಸಬಹುದು. ಆದರೆ ಯಾರ್ಯಾರು ಹೋಗಬೇಕೆನ್ನುತ್ತೀರಿ?” ಎಂದು ಕೇಳಿದನು.
9 : ಅದಕ್ಕೆ ಮೋಶೆ, “ನಾವು ಸರ್ವೇಶ್ವರ ಸ್ವಾಮಿಗಾಗಿ ಹಬ್ಬವನ್ನು ಆಚರಿಸಬೇಕಾಗಿದೆ. ಆದಕಾರಣ ಚಿಕ್ಕವರು, ಮುದುಕರು ಎಲ್ಲರು ಹೋಗುತ್ತೇವೆ; ಗಂಡುಹೆಣ್ಣು ಮಕ್ಕಳನ್ನೂ ದನಕುರಿಗಳನ್ನೂ ತೆಗೆದುಕೊಂಡು ಹೋಗುತ್ತೇವೆ,” ಎಂದು ಉತ್ತರಕೊಟ್ಟನು.
10 : ಆಗ ಫರೋಹನು, “ನೀವು ನಿಮ್ಮ ಮನೆಯವರೆಲ್ಲರನ್ನು ಕರೆದುಕೊಂಡು ಹೋಗುವುದಕ್ಕೆ ನಾನೆಂದಿಗೂ ಅಪ್ಪಣೆಕೊಡುವುದಿಲ್ಲ. ಕೊಟ್ಟೆನಾದರೆ ಸರ್ವೇಶ್ವರನ ದಯೆಯೊಂದೇ ನಿಮ್ಮನ್ನು ಕಾಪಾಡಬೇಕಾಗುವುದು. ನೋಡಿ, ನೀವು ದುರಾಲೋಚನೆಯಿಂದ ಕೂಡಿದವರು ಎಂಬುದು ಸರಿಯಷ್ಟೆ!
11 : ನಿಮ್ಮಲ್ಲಿ ಗಂಡಸರು ಮಾತ್ರ ಹೋಗಿ ಸರ್ವೇಶ್ವರನನ್ನು ಆರಾಧಿಸಬಹುದು. ನೀವು ಕೇಳಿಕೊಂಡದ್ದು ಅಷ್ಟೇ ಅಲ್ಲವೆ?” ಎಂದು ಹೇಳಿ ಅವರನ್ನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು.
12 : ಸರ್ವೇಶ್ವರ ಮೋಶೆಗೆ, “ಈಜಿಪ್ಟ್ ದೇಶದ ಮೇಲೆ ಕೈಚಾಚಿ ಮಿಡಿತೆಗಳನ್ನು ಬರಮಾಡು. ಆನೆಕಲ್ಲಿನ ಮಳೆಯಿಂದ ನಾಶ ಆಗದೆ ಉಳಿದಿರುವ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡಲಿ,” ಎಂದು ಹೇಳಿದರು.
13 : ಅಂತೆಯೇ ಮೋಶೆ ತನ್ನ ಕೋಲನ್ನು ಈಜಿಪ್ಟ್ ದೇಶದ ಮೇಲೆ ಚಾಚಿದನು. ಸರ್ವೇಶ್ವರ ಹಗಲಿರುಳು ಪೂರ್ವದಿಕ್ಕಿನಿಂದ ಗಾಳಿ ಬೀಸುವಂತೆ ಮಾಡಿದರು. ಆ ಗಾಳಿಯಿಂದಾಗಿ ಮುಂಜಾನೆಯಲ್ಲೇ ಮಿಡತೆಗಳು ಬಂದಿದ್ದವು.
14 : ಅಪರಿಮಿತ ಸಂಖ್ಯೆಯಲ್ಲಿ ಅವು ಇಡೀ ಈಜಿಪ್ಟ್ ದೇಶದಲ್ಲಿ ಬಂದಿಳಿದು ಅದರ ಎಲ್ಲಾ ಕಡೆಗಳಲ್ಲಿ ಹರಡಿಕೊಂಡವು. ಅಂಥ ಮಿಡಿತೆಯ ದಂಡು ಹಿಂದೆಂದೂ ಬಂದಿರಲಿಲ್ಲ, ಮುಂದೆಯೂ ಬರುವಂತಿಲ್ಲ.
15 : ನೆಲವೆಲ್ಲ ಕರ್ರಗೆ ಕಾಣಿಸುವಷ್ಟು ಅವು ಭೂಮಿಯನ್ನೆಲ್ಲಾ ಆವರಿಸಿಕೊಂಡವು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದ ಪಚ್ಚೆ ಪೈರುಗಳನ್ನೂ ಗಿಡಮರ ಕಾಯಿಗಳನ್ನೂ ತಿಂದುಬಿಟ್ಟವು. ಈಜಿಪ್ಟ್ ದೇಶದಲ್ಲೆಲ್ಲಾ ಹಸುರಾದ ಗಿಡಮರಗಳೊಂದೂ ಉಳಿಯಲಿಲ್ಲ.
16 : ಆಗ ಫರೋಹನು ಮೋಶೆ ಮತ್ತು ಆರೋನರನ್ನು ಕೂಡಲೆ ಕರೆಯಿಸಿ, “ನಾನು ನಿಮ್ಮ ದೇವರಾದ ಸರ್ವೇಶ್ವರನಿಗೂ ನಿಮಗೂ ದ್ರೋಹಮಾಡಿದ್ದೇನೆ.
17 : ಈ ಒಂದು ಸಾರಿ ನನ್ನನ್ನು ಕ್ಷಮಿಸಬೇಕು. ನಿಮ್ಮ ದೇವರಾದ ಸರ್ವೇಶ್ವರ ಈ ಮಾರಕ ವಿಪತ್ತನ್ನು ನನ್ನಿಂದ ತೊಲಗಿಸುವಂತೆ ಆತನನ್ನು ಪ್ರಾರ್ಥಿಸಬೇಕು,” ಎಂದು ವಿನಂತಿಸಿದನು.
18 : ಮೋಶೆ ಫರೋಹನ ಬಳಿಯಿಂದ ಹೊರಟುಹೋಗಿ ಸರ್ವೇಶ್ವರ ಸ್ವಾಮಿಯನ್ನು ಬೇಡಿಕೊಂಡನು.
19 : ಸರ್ವೇಶ್ವರ ಪಶ್ಚಿಮದಿಂದ ಬಿರುಗಾಳಿ ಬೀಸುವಂತೆ ಮಾಡಿದರು. ಅದು ಆ ಮಿಡಿತೆಗಳನ್ನು ಬಡಿದುಕೊಂಡು ಹೋಗಿ ಕೆಂಪು ಸಮುದ್ರದೊಳಗೆ ಹಾಕಿಬಿಟ್ಟಿತು. ಈಜಿಪ್ಟ್ ದೇಶದ ಮೇರೆಗಳೊಳಗೆ ಒಂದು ಮಿಡಿತೆಯನ್ನೂ ನಿಲ್ಲಲು ಬಿಡಲಿಲ್ಲ.
20 : ಆದರೂ ಫರೋಹನ ಹೃದಯವನ್ನು ಸರ್ವೇಶ್ವರ ಕಠಿಣವಾಗಿಸಿದರು. ಅವನು ಇಸ್ರಯೇಲರನ್ನು ಹೋಗಲು ಬಿಡಲಿಲ್ಲ.
21 : ಆ ಬಳಿಕ ಸರ್ವೇಶ್ವರ ಮೋಶೆಗೆ, “ಆಕಾಶದತ್ತ ನಿನ್ನ ಕೈಚಾಚು. ಆಗ ಈಜಿಪ್ಟ್ ದೇಶದಲ್ಲೆಲ್ಲಾ ಕತ್ತಲೆಯುಂಟಾಗುವುದು. ಜನರು ತಡವರಿಸಿ ನಡೆಯಬೇಕಾಗುವಷ್ಟು ಕತ್ತಲೆ ಉಂಟಾಗುವುದು.
22 : ಮೋಶೆ ಆಕಾಶದತ್ತ ಕೈಚಾಚಿದಾಗ ಈಜಿಪ್ಟ್ ದೇಶದಲ್ಲೆಲ್ಲಾ ಮೂರು ದಿವಸ ಕಾರ್ಗತ್ತಲು ಮುಚ್ಚಿಕೊಂಡಿತು.
23 : ಆ ಮೂರು ದಿವಸ ಒಬ್ಬರನ್ನೊಬ್ಬರು ನೋಡಲಾಗಲಿಲ್ಲ; ತಾವಿದ್ದ ಸ್ಥಳದಿಂದ ಏಳಲಿಲ್ಲ. ಆದರೆ ಇಸ್ರಯೇಲರೆಲ್ಲರು ವಾಸವಾಗಿದ್ದ ಸ್ಥಳಗಳಲ್ಲಿ ಬೆಳಕಿತ್ತು.
24 : ಫರೋಹನು ಮೋಶೆಯನ್ನು ಕರೆಯಿಸಿ, “ನೀವು ಹೋಗಿ ಸರ್ವೇಶ್ವರನಿಗೆ ಆರಾಧನೆ ಮಾಡಿಬರಬಹುದು; ನಿಮ್ಮ ಮಡದಿ ಮಕ್ಕಳೂ ಹೋಗಿಬರಬಹುದು; ನಿಮ್ಮ ದನಕುರಿಗಳನ್ನು ಮಾತ್ರ ಇಲ್ಲೇ ಬಿಟ್ಟು ಹೋಗಬೇಕು,” ಎಂದನು.
25 : ಅದಕ್ಕೆ ಮೋಶೆ, “ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಗೆ ನಾವು ಸಮರ್ಪಿಸಬೇಕಾದ ಬಲಿಗಳಿಗೂ ದಹನಬಲಿಗಳಿಗೂ ಬೇಕಾದ ಪ್ರಾಣಿಗಳನ್ನು ತೆಗೆದುಕೊಂಡು ಹೋಗುವುದನ್ನು ನಮಗೆ ಬಿಡಿ.
26 : ಅದು ಮಾತ್ರವಲ್ಲ, ನಮ್ಮ ಎಲ್ಲ ಪಶುಪ್ರಾಣಿಗಳನ್ನೂತೆಗೆದುಕೊಂಡು ಹೋಗಲು ಅಪ್ಪಣೆ ಕೊಡಿ. ಒಂದು ಗೊರಸನ್ನೂ ನಾವು ಬಿಟ್ಟುಹೋಗಲು ಆಗದು. ಈ ಪಶುಪ್ರಾಣಿಗಳಿಂದಲೇ ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಗೆ ಬಲಿಯೊಪ್ಪಿಸಬೇಕಾಗಿದೆ ಅಲ್ಲವೆ? ಯಾವ ಯಾವ ಪ್ರಾಣಿಗಳನ್ನು ಅರ್ಪಿಸಬೇಕೋ ಅದು ನಾವು ಅಲ್ಲಿಗೆ ಸೇರುವುದಕ್ಕೆ ಮುಂಚೆ ನಮಗೆ ತಿಳಿಯದು,” ಎಂದನು.
27 : ಸರ್ವೇಶ್ವರ ಫರೋಹನ ಹೃದಯವನ್ನು ಕಠಿಣಪಡಿಸಿದ್ದರಿಂದ ಅವನು ಅವರಿಗೆ ಅಪ್ಪಣೆಕೊಡಲು ಒಪ್ಪಲಿಲ್ಲ.
28 : ಅವನು ಮೋಶೆಗೆ, “ಇಲ್ಲಿಂದ ಹೊರಡು; ಇನ್ನು ಮುಂದೆ ನನ್ನ ಸಮ್ಮುಖಕ್ಕೆ ಬರಲೇ ಬೇಡ, ಎಚ್ಚರಿಕೆ! ತಿರುಗಿ ಬಂದೆಯಾದರೆ ಮರಣದಂಡನೆ ಆಗುವುದು,” ಎಂದು ಹೇಳಿದನು.
29 : ಅದಕ್ಕೆ ಮೋಶೆ, “ಅಪ್ಪಣೆ, ಇನ್ನು ಸಮ್ಮುಖಕ್ಕೆ ಬರುವುದೇ ಇಲ್ಲ,” ಎಂದನು.