ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
32ನೇ ಅಧ್ಯಾಯ
- Verse 1: ಯೋಬನು ತಾನು ಸತ್ಯವಂತನೆಂದು ಸಾಧಿಸಿದ್ದನು. ಇದನ್ನು ಕೇಳಿದ ಅವನ ಮೂವರು ಮಿತ್ರರು ವಾದಿಸುವುದನ್ನು ನಿಲ್ಲಿಸಿಬಿಟ್ಟರು.
- Verse 2: ಆಗ ಬೂಜ್ನವನಾದ ಬರಕೇಲನ ಮಗ ಎಲೀಹುವನಿಗೆ ಸಿಟ್ಟೇರಿತು. ಇವನು ರಾಮ್ಗೋತ್ರಕ್ಕೆ ಸೇರಿದವನು. ಯೋಬನು ತಾನು ದೇವರಿಗಿಂತ ನ್ಯಾಯವಂತನೆಂದು ಎಣಿಸಿಕೊಂಡ ಕಾರಣ ಎಲೀಹುವನಿಗೆ ಸಿಟ್ಟುಹತ್ತಿತ್ತು.
- Verse 3: ಯೋಬನ ಆ ಮೂವರು ಮಿತ್ರರ ಮೇಲೂ ಅವನು ಕೋಪಗೊಂಡನು. ಏಕೆಂದರೆ ಯೋಬನಿಗೆ ತಕ್ಕ ಉತ್ತರ ಕೊಡಲಾಗದೆ ದೇವರನ್ನೇ ತಪ್ಪಿತಸ್ಥರನ್ನಾಗಿಸಿದ್ದರು.
- Verse 4: ಆ ಮಿತ್ರರು ತನಗಿಂತ ಹಿರಿಯವರಾಗಿದ್ದುದರಿಂದ ಎಲೀಹುವನು ಮೊದಲೇ ಮಾತನಾಡದೆ ಈವರೆಗೂ ಕಾದುಕೊಂಡಿದ್ದನು.
- Verse 5: ಆ ಮೂವರ ಬಾಯಿಯಲ್ಲಿ ಉತ್ತರವೇ ಇಲ್ಲದುದನ್ನು ಕಂಡು ಕಿಡಿಕಿಡಿಯಾದನು.
- Verse 6: ಆಗ ಬೂಜಿನವನಾದ ಬರಕೇಲನ ಮಗ ಎಲೀಹುವನು ಕೊಟ್ಟ ಉತ್ತರ: “ನಾನು ಕಿರಿಯವನು, ನೀವು ಎಷ್ಟೋ ಹಿರಿಯವರು ಎಂದೇ ಸಂಕೋಚಪಟ್ಟೆನು ನನ್ನ ಅಭಿಪ್ರಾಯ ತಿಳಿಸಲು ಅಂಜಿದೆನು.
- Verse 7: ದೊಡ್ಡವರು ಮಾತಾಡಲಿ ಎಂದುಕೊಂಡೆನು ವಯೋವೃದ್ಧರು ಸುಜ್ಞಾನವನು ಬೋಧಿಸಲಿ ಎಂದೆನು.
- Verse 8: ಆದರೆ ಮಾನವರಿಗುಂಟು ಒಂದು ಆತ್ಮ ಸರ್ವಶಕ್ತಸ್ವಾಮಿಯ ಉಸಿರಿನ ಮೂಲಕ ಅವರಿಗೆ ದೊರಕುತ್ತದೆ ವಿವೇಕ.
- Verse 9: ವಯೋವೃದ್ಧರು ಮಾತ್ರ ಜ್ಞಾನಿಗಳಲ್ಲ ಮುದುಕರು ಮಾತ್ರ ನ್ಯಾಯಬಲ್ಲವರಲ್ಲ.
- Verse 10: ಆದಕಾರಣ ನನ್ನ ಕಡೆಗೂ ಕಿವಿಗೊಡಿ ನನ್ನ ಅಭಿಪ್ರಾಯ ತಿಳಿಸುತ್ತೇನೆ, ಕೇಳಿ:
- Verse 11: ನೀವು ಆಡುತ್ತಿದ್ದ ಮಾತುಗಳನು, ಮಾಡುತ್ತಿದ್ದ ಆಲೋಚನೆಗಳನು ಮುಂದಿಡುತ್ತಿದ್ದ ವಾದಗಳನು ನಾನು ಕಾದು ಕೇಳುತ್ತಿದ್ದೆನು.
- Verse 12: ಯೋಬನನು ಖಂಡಿಸಬಲ್ಲವನು, ಅವನಿಗೆ ತಕ್ಕ ಉತ್ತರಕೊಡಬಲ್ಲವನು ನಿಮ್ಮಲ್ಲಿ ಯಾರೂ ಇಲ್ಲದಿರುವುದನು ನಾನು ಗಮನಿಸಿದೆನು.
- Verse 13: ‘ನಿಮಗೆ ಬುದ್ಧಿ ಬಂದಿದೆ’ ಎಂದುಕೊಳ್ಳಬೇಡಿ ‘ದೇವರೇ ಅವನನು ಖಂಡಿಸಲಿ, ನರನಿಂದಾಗದು,’ ಎನ್ನದಿರಿ.
- Verse 14: ಯೋಬನು ನನ್ನೊಡನೆ ವಾದಮಾಡಲಿಲ್ಲ ನಿಮ್ಮ ಹಾಗೆ ಅವನಿಗೆ ನಾನು ಉತ್ತರಿಸುವುದಿಲ್ಲ.
- Verse 15: “ಯೋಬನೇ, ಇವರು ಉತ್ತರಿಸದೆ ನಿಬ್ಬೆರಗಾಗಿರುವರು ಇವರ ಸೊಲ್ಲೇ ಅಡಗಿಹೋಗಿರುವುದು.
- Verse 16: ಉತ್ತರ ಕೊಡಲಾಗದೆ ಇವರು ಮೌನದಿಂದಿರಲು ನಾನಿನ್ನೂ ಸುಮ್ಮನೆ ಕಾದುಕೊಂಡಿರಲಾಗದು.
- Verse 17: ನಾನು ನನ್ನ ಪಾಲಿನ ಉತ್ತರವನು ಹೇಳುವೆನು ನಿನಗೆ ನನ್ನ ಅಭಿಪ್ರಾಯವನು ತಿಳಿಸುವೆನು.
- Verse 18: ಹೇಳಬೇಕಾದವು ನನ್ನಲ್ಲಿ ತುಂಬಿವೆ ಹೇಳಲು ನನ್ನ ಅಂತರಾತ್ಮ ಒತ್ತಾಯಪಡಿಸುತ್ತಿದೆ.
- Verse 19: ದ್ರಾಕ್ಷಾರಸ ತುಂಬಿ ಬಾಯಿಕಟ್ಟಿದ ಹೊಸಬುದ್ದಲಿಯಂತೆ ನನ್ನ ಅಂತರಂಗವು ಬಿರಿದು ಒಡೆದುಹೋಗುವ ಹಾಗಿದೆ.
- Verse 20: ತುಟಿ ತೆರೆದು ನಾನು ಉತ್ತರಿಸಲೇಬೇಕು ನೆಮ್ಮದಿಯಿಂದಿರಲು ನಾನು ಮಾತಾಡಲೇಬೇಕು.
- Verse 21: ನಾನಾರಿಗೂ ಮುಖದಾಕ್ಷಿಣ್ಯ ತೋರುವುದಿಲ್ಲ ಯಾವ ಮಾನವನಿಗೂ ಮುಖಸ್ತುತಿ ಸಲ್ಲಿಸುವುದಿಲ್ಲ.
- Verse 22: ಮುಖಸ್ತುತಿ ಮಾಡಲು ನನ್ನಿಂದಾಗುವುದಿಲ್ಲ. ಮಾಡಿದರೆ ಸೃಷ್ಟಿಕರ್ತ ನನ್ನನು ಬೇಗ ನಿರ್ಮೂಲಮಾಡಬಲ್ಲ.”