வேதாகமம்
ಹಳೆಯ ಒಡಂಬಡಿಕೆ
ಯೆಶಾಯ
59ನೇ ಅಧ್ಯಾಯ
- Verse 1: ನಾನು ಹೇಳುವುದನ್ನು ಕೇಳಿ : ಸರ್ವೇಶ್ವರ ಸ್ವಾಮಿಯ ಕೈ ನಿಮ್ಮನ್ನು ರಕ್ಷಿಸಲಾಗದಂಥ ಮೋಟುಗೈಯಲ್ಲ, ಅವರ ಕಿವಿ ಕಿವುಡಲ್ಲ.
- Verse 2: ಬದಲಿಗೆ, ನಿಮ್ಮ ಅಪರಾಧಗಳೇ ನಿಮ್ಮನ್ನು ಜೀವದಿಂದ ಬೇರ್ಪಡಿಸುತ್ತಾ ಬಂದಿವೆ. ಅವರು ನಿಮಗೆ ಕಿವಿಗೊಡದಂತೆ ನಿಮ್ಮ ಪಾಪಗಳೇ ಅವರನ್ನು ವಿಮುಖರನ್ನಾಗಿ ಮಾಡಿವೆ.
- Verse 3: ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾದುವು, ನಿಮ್ಮ ಬೆರಳುಗಳು ಅಕ್ರಮದಿಂದ ಮಲಿನವಾಗಿವೆ, ನಿಮ್ಮ ತುಟಿಗಳು ಸುಳ್ಳು ನುಡಿಯುತ್ತವೆ. ನಿಮ್ಮ ನಾಲಿಗೆ ಕೆಡುಕನ್ನು ಗೊಣಗುತ್ತದೆ.
- Verse 4: ನ್ಯಾಯಸ್ಥಾನದಲ್ಲಿ ನ್ಯಾಯಾನುಸಾರ ವಾದಿಸುವವನು ಯಾರೂ ಇಲ್ಲ; ಸತ್ಯಾನುಸಾರ ತೀರ್ಪುಕೊಡುವವನು ಯಾರೂ ಇಲ್ಲ; ನೀವು ಶೂನ್ಯವಾದುದ್ದನ್ನೇ ನಂಬುತ್ತೀರಿ, ಅಬದ್ಧವಾದುದನ್ನೇ ಆಡುತ್ತೀರಿ, ಕೇಡನ್ನು ಬಸಿರಿಸಿ ಅಕ್ರಮವನ್ನು ಹೆರುತ್ತೀರಿ.
- Verse 5: ಹಾವಿನಂತೆ ಮೊಟ್ಟೆಗಳನ್ನು ಮರಿ ಮಾಡುತ್ತೀರಿ, ಜೇಡರ ಹುಳುವಿನಂತೆ ಬಲೆಯನ್ನು ನೇಯುತ್ತೀರಿ. ಆ ಮೊಟ್ಟೆಗಳನ್ನು ತಿನ್ನುವವನು ಸಾಯುತ್ತಾನೆ, ಅವನ್ನು ಹೊಡೆದುಬಿಡುವವನು ವಿಷದ ಮರಿಗಳು ಹೊರಬರುವಂತೆ ಮಾಡುತ್ತಾನೆ.
- Verse 6: ನಿಮ್ಮ ಆ ಬಲೆಯು ನೂಲು ಬಟ್ಟೆಯಾಗದು. ನೀವು ನೇಯ್ದದ್ದು ಹೊದಿಕೆಯಾಗದು. ನಿಮ್ಮ ಕಾರ್ಯಗಳು ಅಕ್ರಮವಾದುವು. ನಿಮ್ಮ ಕೈಕೆಲಸಗಳು ಹಿಂಸಾತ್ಮಕವಾದುವು.
- Verse 7: ನಿಮ್ಮ ಕಾಲುಗಳು ಓಡುವುದು ಕೇಡಿಗಾಗಿ, ನೀವು ತವಕಪಡುವುದು ನಿರಪರಾಧಿಯ ರಕ್ತಪಾತಕ್ಕಾಗಿ. ನಿಮ್ಮ ಈ ಆಲೋಚನೆಗಳು ದುಷ್ಟವಾದುವು, ನೀವು ಹಿಡಿದ ಹಾದಿಗಳು ತರುವುದು ನಾಶವಿನಾಶವನ್ನೇ.
- Verse 8: ಶಾಂತಿಸಮಾಧಾನದ ಮಾರ್ಗವನ್ನು ನೀವು ಅರಿಯಿರಿ. ನಿಮ್ಮ ನಡತೆಯಲ್ಲಿ ನ್ಯಾಯನೀತಿ ಎಂಬುದು ಇಲ್ಲ. ನಿಮ್ಮ ಮಾರ್ಗ ಅಂಕುಡೊಂಕಾಗಿದೆ, ಅವುಗಳಲ್ಲಿ ನಡೆಯುವವನು ಶಾಂತಿಸಮಾಧಾನವನ್ನು ಮುಟ್ಟನು.
- Verse 9: ಆಗ ಜನರು ಹೀಗೆನ್ನುತ್ತಾರೆ : ಈ ಕಾರಣದಿಂದಲೇ ನ್ಯಾಯನಿರ್ಣಯವು ನಮ್ಮಿಂದ ದೂರವಾಗಿದೆ, ಸದ್ಧರ್ಮವು ನಮಗೆ ದೊರಕದೆ ಇದೆ. ಬೆಳಕಿಗಾಗಿ ಕಾದಿರುವ ನಮ್ಮನ್ನು ಕತ್ತಲು ಆವರಿಸಿದೆ. ಜ್ಯೋತಿಯನ್ನು ನಿರೀಕ್ಷಿಸುತ್ತಿರುವ ನಮ್ಮನ್ನು ಅಂಧಕಾರವೇ ಬೆನ್ನಟ್ಟುತ್ತಿದೆ.
- Verse 10: ಗೋಡೆಯನ್ನು ತಡವರಿಸುತ್ತೇವೆ ಕುರುಡರಂತೆ, ಹೌದು, ತಡಕಾಡುತ್ತೇವೆ ಕಣ್ಣಿಲ್ಲದವರಂತೆ. ನಡುಹಗಲಲ್ಲೇ ಎಡವುತ್ತೇವೆ ಇಳಿಹೊತ್ತಿನಲ್ಲೋ ಎಂಬಂತೆ. ಸಜೀವದಿಂದಿರುವವರ ನಡುವೆ ಇದ್ದೇವೆ ಸತ್ತವರಂತೆ.
- Verse 11: ಗುರುಗುಟ್ಟುತ್ತೇವೆ ಕರಡಿಗಳಂತೆ, ಮುಲುಗುತ್ತೇವೆ ಪಾರಿವಾಳಗಳಂತೆ. ನ್ಯಾಯನಿರ್ಣಯವನ್ನು ಎದುರುನೋಡಿದರೂ ಅದು ನಮಗೆ ಸಿಗದಿದೆ; ಜೀವೋದ್ಧಾರವನ್ನು, ನಿರೀಕ್ಷಿಸಿದರೂ ಅದು ನಮ್ಮಿಂದ ದೂರವಿದೆ.
- Verse 12: “ಸರ್ವೇಶ್ವರಾ, ನಿಮಗೆ ವಿರುದ್ಧ ನಾವು ಗೈದ ಅಪರಾಧಗಳು ಹಲವು. ನಮ್ಮ ಪಾಪಗಳೇ ನಮಗೆ ವಿರೋಧವಾಗಿ ಸಾಕ್ಷಿಕೊಡುತ್ತವೆ. ನಮ್ಮ ಅಪರಾಧಗಳು ನಮ್ಮೊಡನೆಯೇ ಇವೆ. ನಮ್ಮ ದ್ರೋಹಗಳನ್ನು ನಾವು ಬಲ್ಲೆವು.
- Verse 13: ಹೌದು, ನಿಮಗೆ ತಪ್ಪುಮಾಡಿ ನಿಮ್ಮನ್ನು ಅಲ್ಲಗಳೆದಿದ್ದೇವೆ. ನಮ್ಮ ದೇವರಾದ ನಿಮ್ಮನ್ನು ಹಿಂಬಾಲಿಸದೆ ಹಿಂದಿರುಗಿದ್ದೇವೆ; ಹಿಂಸಾಚಾರವನ್ನೂ ದಂಗೆ ಏಳುವುದನ್ನೂ ಪ್ರಚೋದಿಸಿದ್ದೇವೆ. ನಮ್ಮ ಅಂತರಾಲೋಚನೆಗಳು ಹುಸಿ; ನಮ್ಮ ಬಾಯಿಮಾತು ಸುಳ್ಳು.
- Verse 14: ನ್ಯಾಯವನ್ನು ಓಡಿಸಿಬಿಟ್ಟಿದ್ದೇವೆ; ನೀತಿ ಸಮೀಪಿಸದಂತೆ ಮಾಡಿದ್ದೇವೆ. ಸತ್ಯವು ಸಾರ್ವಜನಿಕ ಚೌಕದಲ್ಲಿ ಬಿದ್ದುಹೋಗಿದೆ; ಸದಾಚಾರವು ಪ್ರವೇಶಿಸಲಾಗದಿದೆ.
- Verse 15: ಸತ್ಯವು ಅದೃಶ್ಯವಾಗಿದೆ. ಕೇಡನ್ನು ಕೈಬಿಟ್ಟವನೇ ಖೂನಿಗೆ ಗುರಿಯಾಗುತ್ತಾನೆ.”
- Verse 16: ಸರ್ವೇಶ್ವರ ಸ್ವಾಮಿ ಇದನ್ನು ನೋಡಿದ್ದಾರೆ. ನ್ಯಾಯವೇ ಇಲ್ಲದ್ದನ್ನು ಕಂಡು ಖಿನ್ನರಾಗಿದ್ದಾರೆ. ಮುಂದೆ ಬಂದು ಉದ್ಧಾರಮಾಡಬಲ್ಲ ವ್ಯಕ್ತಿ ಯಾರೂ ಇಲ್ಲದಿರುವುದನ್ನು ಅರಿತು ಸ್ತಬ್ಧರಾಗಿದ್ದಾರೆ. ಎಂತಲೇ, ಅವರು ಸ್ವಂತ ಶಕ್ತಿಯನ್ನು ಪ್ರಯೋಗಿಸಿ ಜಯಪ್ರದರಾಗುವರು. ನ್ಯಾಯನೀತಿಯೇ ಅವರಿಗೆ ಆಧಾರ.
- Verse 17: ಅವರು ನ್ಯಾಯನೀತಿಯನ್ನು ವಜ್ರಕವಚವನ್ನಾಗಿ ತೊಟ್ಟುಕೊಳ್ಳುವರು. ರಕ್ಷಣೆ ಎಂಬ ಶಿರಸ್ತ್ರಾಣವನ್ನು ಧರಿಸಕೊಳ್ಳುವರು. ಪ್ರತೀಕಾರವೆಂಬ ಉಡುಪನ್ನು ಉಟ್ಟುಕೊಳ್ಳುವರು. ಆಗ್ರಹ ಎಂಬ ನಿಲುವಂಗಿಯನ್ನು ಹಾಕಿಕೊಳ್ಳುವರು.
- Verse 18: ಅವರವರ ಕೃತ್ಯಗಳಿಗೆ ತಕ್ಕಂತೆ ದೂರದ ನಾಡುಗಳವರೆಗೂ ಮುಯ್ಯಿ ತೀರಿಸುವರು. ವಿರೋಧಿಗಳಿಗೆ ಪ್ರತೀಕಾರ ಎಸಗುವರು; ಶತ್ರುಗಳಿಗೆ ಸೇಡನ್ನು ತೀರಿಸುವರು.
- Verse 19: ಪೂರ್ವದಿಂದ ಪಶ್ಚಿಮದವರೆಗೆ ಎಲ್ಲರೂ ಸರ್ವೇಶ್ವರ ಸ್ವಾಮಿಯ ನಾಮಕ್ಕೆ ಹೆದರುವರು. ಅವರ ಘನತೆಗೆ ಅಂಜುವರು. ರಭಸದಿಂದ ನುಗ್ಗುವ ಪ್ರವಾಹದಂತೆಯೂ ವೇಗವಾಗಿ ಬೀಸುವ ಗಾಳಿಯಂತೆಯೂ ಸರ್ವೇಶ್ವರ ಸ್ವಾಮಿ ಬಂದೇ ಬರುವರು.
- Verse 20: ಸರ್ವೇಶ್ವರ ಸ್ವಾಮಿ ಜನರಿಗೆ ಹೀಗೆನ್ನುತ್ತಾರೆ : “ಸಿಯೋನಿಗೆ ಹಾಗೂ ಪಾಪವನ್ನು ತೊರೆದುಬಿಟ್ಟ ಯಕೋಬ್ಯರ ಬಳಿಗೆ ನಾನು ಉದ್ಧಾರಕನಾಗಿ ಬರುವೆನು.
- Verse 21: ಅವರೊಡನೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಇದೇ: ನಿಮ್ಮ ಮೇಲೆ ನೆಲೆಸಿರುವ ನನ್ನ ಆತ್ಮವೂ ಮತ್ತು ನಿಮ್ಮ ಬಾಯಲ್ಲಿ ನಾನಿಟ್ಟಿರುವ ವಾಕ್ಯಗಳೂ ನಿಮ್ಮ ಬಾಯಿಂದಾಗಲಿ, ನಿಮ್ಮ ಸಂತತಿಯ ಬಾಯಿಂದಾಗಲಿ, ನಿಮ್ಮ ಸಂತತಿಯ ಸಂತಾನದ ಬಾಯಿಂದಾಗಲಿ, ಇಂದಿನಿಂದ ಎಂದಿಗೂ ತೊಲಗುವುದಿಲ್ಲ.” ಇದು ಸರ್ವೇಶ್ವರ ಸ್ವಾಮಿಯ ನುಡಿ.