P. O. C ബൈബിള്
ಹಳೆಯ ಒಡಂಬಡಿಕೆ
ಆದಿಕಾಂಡ
29ನೇ ಅಧ್ಯಾಯ
- Verse 1: ಬಳಿಕ ಯಕೋಬನು ಪ್ರಯಾಣವನ್ನು ಮುಂದುವರಿಸುತ್ತಾ ಮೂಡಣದವರ ನಾಡಿಗೆ ಬಂದನು.
- Verse 2: ಕೂಡಲೆ ಅವನಿಗೆ ಆ ಅಡವಿಯಲ್ಲಿ ಬಾವಿಯೊಂದು ಕಾಣಿಸಿತು. ಅದರ ಬಳಿ ಮೂರು ಕುರಿಹಿಂಡು ಮಲಗಿದ್ದವು. ಕುರಿಗಳನ್ನು ನೀರು ಕುಡಿಸುವುದಕ್ಕಾಗಿ ಆ ಬಾವಿಗೆ ಹೊಡೆದುಕೊಂಡು ಬರುವುದು ವಾಡಿಕೆ. ಬಾವಿಯ ಮೇಲೆ ಮುಚ್ಚಿದ್ದ ಕಲ್ಲು ದೊಡ್ಡದಾಗಿತ್ತು.
- Verse 3: ಹಿಂಡುಗಳೆಲ್ಲ ಅಲ್ಲಿ ಕೂಡಿದ್ದಾಗ ಕಾಯುವವರು ಬಾವಿಯ ಮೇಲೆ ಮುಚ್ಚಿದ್ದ ಕಲ್ಲನ್ನು ಸರಿಸಿ ಕುರಿಗಳಿಗೆ ನೀರು ಕುಡಿಸಿ ಮತ್ತೆ ಕಲ್ಲನ್ನು ಬಾವಿಯ ಮೇಲೆ ಮುಚ್ಚುತ್ತಿದ್ದರು.
- Verse 4: ಯಕೋಬನು ಅವರಿಗೆ, “ಏನ್ರಪ್ಪ, ನೀವು ಯಾವ ಊರಿನವರು?” ಎಂದು ವಿಚಾರಿಸಿದನು. ಅವರು, “ನಾವು ಖಾರಾನ್ ಊರಿನವರು,” ಎಂದರು.
- Verse 5: “ನಾಹೋರನ ಮಗ-ಲಾಬಾನರನ್ನು ಬಲ್ಲಿರಾ?’ ಎಂದು ಕೇಳಿದ್ದಕ್ಕೆ “ಬಲ್ಲೆವು” ಎಂದು ಉತ್ತರಕೊಟ್ಟರು.
- Verse 6: “ಅವರು ಆರೋಗ್ಯವೇ?” ಎಂದು ಕೇಳಲು ಅವರು, “ಹೌದು ಆರೋಗ್ಯ; ಅಗೋ, ಅವರ ಮಗಳು ರಾಖೇಲಳು ಕುರಿಗಳ ಸಂಗಡ ಬರುತ್ತಿದ್ದಾಳೆ,” ಎಂದರು.
- Verse 7: ಯಕೋಬನು, “ಇನ್ನೂ ಬಹಳ ಹೊತ್ತು ಇದೆ; ಕುರಿಗಳನ್ನು ಒಟ್ಟುಗೂಡಿಸುವ ಸಮಯ ಆಗಿಲ್ಲ; ನೀರು ಕುಡಿಸಿ ಅವುಗಳನ್ನು ಮೇಯಿಸಬಾರದೇಕೆ?” ಎಂದನು.
- Verse 8: ಅವರು, “ಇಲ್ಲ, ಕುರಿಗಾಹಿಗಳೆಲ್ಲ ಒಂದುಗೂಡಿ ಬಾವಿಯ ಮೇಲೆ ಮುಚ್ಚಿರುವ ಕಲ್ಲನ್ನು ತೆಗೆಯುವ ತನಕ ಕುಡಿಸಕೂಡದು, ಅನಂತರ ಕುರಿಗಳಿಗೆ ನೀರು ಕುಡಿಸುತ್ತೇವೆ,” ಎಂದರು.
- Verse 9: ಯಕೋಬನು ಅವರೊಂದಿಗೆ ಮಾತಾಡುತ್ತ ಇರುವಾಗಲೆ ಕುರಿಗಾಹಿ ರಾಖೇಲಳು ತನ್ನ ತಂದೆಯ ಕುರಿಗಳನ್ನು ಹೊಡೆದುಕೊಂಡು ಅಲ್ಲಿಗೆ ಬಂದಳು.
- Verse 10: ತನ್ನ ಸೋದರಮಾವ ಲಾಬಾನನ ಮಗಳಾದ ಆ ರಾಖೇಲಳನ್ನೂ ಅವನ ಕುರಿಗಳನ್ನೂ ಕಂಡ ಕೂಡಲೆ ಯಕೋಬನು ಬಾವಿಯ ಹತ್ತಿರಕ್ಕೆ ಹೋಗಿ ಅದರ ಮೇಲಿದ್ದ ಕಲ್ಲನ್ನು ಸರಿಸಿ ಸೋದರಮಾವನ ಆ ಕುರಿಗಳಿಗೆ ನೀರು ಕುಡಿಸಿದನು.
- Verse 11: ಅನಂತರ ರಾಖೇಲಳಿಗೆ ಮುದ್ದಿಟ್ಟನು; ಸಂತೋಷ ಉಕ್ಕಿಬಂದು ಗಟ್ಟಿಯಾಗಿ ಅತ್ತನು.
- Verse 12: ತಾನು ಆಕೆಯ ತಂದೆಗೆ ಸೋದರಳಿಯ, ರೆಬೆಕ್ಕಳ ಮಗ ಎಂದು ತಿಳಿಸಿದನು. ರಾಖೇಲಳು ಕೂಡಲೆ ಓಡಿಹೋಗಿ ತನ್ನ ತಂದೆಗೆ ಸಮಾಚಾರ ಮುಟ್ಟಿಸಿದಳು.
- Verse 13: ಲಾಬಾನನು ತನ್ನ ಸೋದರಳಿಯ ಬಂದ ಸುದ್ದಿಯನ್ನು ಕೇಳಿ ಅವನನ್ನು ಎದುರುಗೊಳ್ಳಲು ಓಡಿಬಂದನು. ಯಕೋಬನನ್ನು ಅಪ್ಪಿಕೊಂಡು ಮುದ್ದಿಟ್ಟು, ಮನೆಗೆ ಕರೆದುಕೊಂಡು ಹೋದನು. ನಡೆದ ಸಂಗತಿಗಳನ್ನೆಲ್ಲ ಯಕೋಬನು ಲಾಬಾನನಿಗೆ ತಿಳಿಸಿದನು.
- Verse 14: ಲಾಬಾನನು, “ನಿಜವಾಗಿಯೂ ನೀನು ನನ್ನ ರಕ್ತಸಂಬಂಧಿ,” ಎಂದನು. ಅವನೊಂದಿಗೆ ಯಕೋಬನು ಒಂದು ತಿಂಗಳವರೆಗೂ ವಾಸಮಾಡಿದನು.
- Verse 15: ಆ ಬಳಿಕ ಲಾಬಾನನು ಯಕೋಬನಿಗೆ, “ನೀನು ನನ್ನ ಸಂಬಂಧಿಯೆಂದ ಮಾತ್ರಕ್ಕೆ ಬಿಟ್ಟಿ ಸೇವೆ ಮಾಡಿಸಿಕೊಳ್ಳುವುದು ಸರಿಯಲ್ಲ; ನಿನ್ನ ಕೆಲಸಕ್ಕೆ ಏನು ಸಂಬಳ ಕೊಡಲಿ, ಹೇಳು?” ಎಂದು ಕೇಳಿದನು.
- Verse 16: ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ದೊಡ್ಡವಳ ಹೆಸರು ಲೇಯಾ, ಚಿಕ್ಕವಳ ಹೆಸರು ರಾಖೇಲ್.
- Verse 17: ಲೇಯಾ ಹೊಳಪಿನ ಕಣ್ಣಿನವಳು. ರಾಖೇಲಳಾದರೋ ರೂಪವತಿ, ಲಾವಣ್ಯವತಿ.
- Verse 18: ಯಕೋಬನಿಗೆ ರಾಖೇಲಳ ಮೇಲೆ ಪ್ರೀತಿ. ಎಂತಲೇ, “ನಿಮ್ಮ ಕಿರಿಯ ಮಗಳು ರಾಖೇಲಳಿಗೋಸ್ಕರ ನಿಮ್ಮಲ್ಲಿ ಏಳು ವರುಷ ಸೇವೆಮಾಡುತ್ತೇನೆ,” ಎಂದು ಹೇಳಿದನು.
- Verse 19: ಲಾಬಾನನು, “ಆಕೆಯನ್ನು ಬೇರೆ ಒಬ್ಬನಿಗೆ ಕೊಡುವುದಕ್ಕಿಂತ ನಿನಗೆ ಕೊಡುವುದೇ ಲೇಸು, ನನ್ನಲ್ಲೇ ತಂಗಿರು,” ಎಂದನು.
- Verse 20: ಅಂತೆಯೇ ಯಕೋಬನು ರಾಖೇಲಳಿಗಾಗಿ ಏಳು ವರ್ಷಕಾಲ ಸೇವೆಮಾಡಿದನು. ಆಕೆಯ ಮೇಲೆ ಅವನಿಗೆ ಬಹಳ ಪ್ರೀತಿಯಿದ್ದುದರಿಂದ ಅದು ಅವನಿಗೆ ಕೇವಲ ಕೆಲವೇ ದಿನಗಳಂತೆ ಕಾಣಿಸಿತು.
- Verse 21: ತರುವಾಯ ಯಕೋಬನು ಲಾಬಾನನಿಗೆ, “ನನ್ನ ಸೇವಾವಧಿ ಮುಗಿಯಿತು. ಆಕೆ ನನ್ನ ಹೆಂಡತಿಯಾಗುವಂತೆ ನನ್ನ ಸ್ವಾಧೀನಕ್ಕೆ ಕೊಡಿ,” ಎಂದು ಕೇಳಿದನು.
- Verse 22: ಆಗ ಲಾಬಾನನು ಊರಿನವರನ್ನೆಲ್ಲ ಕರೆಯಿಸಿ ಔತಣವನ್ನು ಏರ್ಪಡಿಸಿದನು.
- Verse 23: ರಾತ್ರಿಯಾದಾಗ ತನ್ನ ಹಿರಿಯ ಮಗಳು ಲೇಯಳನ್ನೇ ಯಕೋಬನ ಬಳಿಗೆ ಕರೆತಂದನು. ಯಕೋಬನು ಆಕೆಯನ್ನು ಕೂಡಿದನು. (
- Verse 24: ಲಾಬಾನನು ತನ್ನ ಮಗಳು ಲೇಯಳಿಗೆ ಜಿಲ್ಪಾ ಎಂಬ ಒಬ್ಬ ದಾಸಿಯನ್ನು ಕೊಟ್ಟನು.)
- Verse 25: ಆ ಹೆಣ್ಣು ಲೇಯಳೆಂದು ಯಕೋಬನಿಗೆ ಬೆಳಿಗ್ಗೆ ತಿಳಿಯಿತು. ಅವನು ಲಾಬಾನನಿಗೆ, “ನೀವು ನನಗೇಕೆ ಹೀಗೆ ಮಾಡಿದಿರಿ? ರಾಖೇಲಳಿಗಾಗಿ ಅಲ್ಲವೆ ನಾನು ನಿಮಗೆ ಸೇವೆಮಾಡಿದ್ದು? ನನಗೆ ಮೋಸಮಾಡಿದ್ದೇಕೆ?” ಎಂದು ಕೇಳಿದನು.
- Verse 26: ಅದಕ್ಕೆ ಲಾಬಾನನು, “ಹಿರಿಯ ಮಗಳನ್ನು ಇರಿಸಿಕೊಂಡು ಕಿರಿಯ ಮಗಳನ್ನು ಮದುವೆಮಾಡಿಕೊಡುವುದು ನಮ್ಮ ನಾಡಿನ ಪದ್ಧತಿಯಲ್ಲ.
- Verse 27: ಹಿರಿಯಳೊಡನೆ ಮದುವೆಯ ವಾರವನ್ನು ಕಳೆದುಬಿಡು; ಅನಂತರ ಕಿರಿಯ ಮಗಳನ್ನೂ ನಿನಗೆ ಕೊಡುತ್ತೇನೆ. ಅವಳಿಗೋಸ್ಕರ ನೀನು ಇನ್ನೂ ಏಳು ವರ್ಷ ಸೇವೆಮಾಡುವೆಯಂತೆ,” ಎಂದನು.
- Verse 28: ಯಕೋಬನು ಅದಕ್ಕೆ ಒಪ್ಪಿ ಹಿರಿಯವಳೊಂದಿಗೆ ಮದುವೆಯ ವಾರವನ್ನು ಕಳೆದನು. ಬಳಿಕ ಲಾಬಾನನು ತನ್ನ ಮಗಳು ರಾಖೇಲಳನ್ನು ಯಕೋಬನಿಗೆ ಹೆಂಡತಿಯಾಗಿ ಕೊಟ್ಟನು.
- Verse 29: (ಆಕೆಗೆ ಬಿಲ್ಹಾ ಎಂಬ ಒಬ್ಬ ದಾಸಿಯನ್ನು ಕೊಟ್ಟನು.)
- Verse 30: ಯಕೋಬನು ರಾಖೇಲಳನ್ನು ಕೂಡಿದನು. ಆಕೆಯನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸಿದನು. ಆಕೆಗೋಸ್ಕರ ಲಾಬಾನನ ಬಳಿ ಇನ್ನೂ ಏಳು ವರ್ಷ ಸೇವೆಮಾಡಿದನು.
- Verse 31: ಹೀಗಿರಲು ಲೇಯಳ ಬಗ್ಗೆ ಯಕೋಬನಿಗೆ ಉದಾಸೀನ ಉಂಟಾಯಿತು. ಇದನ್ನು ಕಂಡು ಸರ್ವೇಶ್ವರಸ್ವಾಮಿ ಆಕೆಗೆ ತಾಯ್ತನವನ್ನು ಅನುಗ್ರಹಿಸಿದರು; ರಾಖೇಲಳು ಬಂಜೆಯಾಗೇ ಉಳಿದಳು.
- Verse 32: ಲೇಯಳು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. “ಸರ್ವೇಶ್ವರ ನನ್ನ ದೀನ ಸ್ಥಿತಿಯನ್ನು ನೋಡಿದ್ದಾರೆ, ಇನ್ನು ಮುಂದೆ ಗಂಡ ನನ್ನನ್ನು ಪ್ರೀತಿಸುತ್ತಾನೆ,” ಎಂದುಕೊಂಡು ಆ ಮಗುವಿಗೆ ‘ರೂಬೇನ್’ ಎಂದು ಹೆಸರಿಟ್ಟಳು.
- Verse 33: ಆಕೆ, ಇನ್ನೊಮ್ಮೆ ಗರ್ಭಿಣಿಯಾಗಿ ಗಂಡು ಮಗುವನ್ನೇ ಹೆತ್ತಳು. “ನಾನು ಗಂಡನ ಅಲಕ್ಷ್ಯಕ್ಕೆ ಗುರಿಯಾದೆ, ಇದನ್ನು ತಿಳಿದೇ ಸರ್ವೇಶ್ವರ ನನಗೆ ಈ ಮಗನನ್ನು ದಯಪಾಲಿಸಿದರು,” ಎಂದು ಹೇಳಿ ಆ ಮಗನಿಗೆ ‘ಸಿಮೆಯೋನ್’ ಎಂದು ಹೆಸರಿಟ್ಟಳು.
- Verse 34: ಮತ್ತೊಮ್ಮೆ ಗರ್ಭಧರಿಸಿ ಗಂಡು ಮಗುವನ್ನೇ ಹೆತ್ತಳು. “ಈಗಲಾದರೂ ನನ್ನ ಗಂಡನೂ ನಾನೂ ಒಂದಾಗುತ್ತೇವೆ. ಅವರಿಗೆ ಮೂರು ಮಂದಿ ಗಂಡುಮಕ್ಕಳನ್ನು ಹೆತ್ತಿದ್ದೇನಲ್ಲವೆ,” ಎಂದುಕೊಂಡು ಆ ಮಗುವಿಗೆ ‘ಲೇವಿ’ ಎಂದು ಹೆಸರಿಟ್ಟಳು.
- Verse 35: ಮಗದೊಮ್ಮೆ ಗರ್ಭಧರಿಸಿ ಈ ಸಾರಿಯೂ ಗಂಡು ಮಗುವನ್ನೇ ಹೆತ್ತಳು. "ಈಗ ಸರ್ವೇಶ್ವರಸ್ವಾಮಿಯ ಸ್ತುತಿಮಾಡುತ್ತೇನೆ,“ ಎಂದು ಹೇಳಿ ಆ ಮಗುವಿಗೆ “ಯೆಹೂದ" ಎಂದು ನಾಮಕರಣ ಮಾಡಿದಳು. ಆ ಮೇಲೆ ಆಕೆಗೆ ಗರ್ಭಧಾರಣೆ ಆಗುವುದು ನಿಂತುಹೋಯಿತು.