ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ವಿಮೋಚನಕಾಂಡ
1ನೇ ಅಧ್ಯಾಯ
- Verse 1: ಯಕೋಬನೊಡನೆ ಹಾಗು ತಮ್ಮ ತಮ್ಮ ಕುಟುಂಬಗಳೊಡನೆ ಈಜಿಪ್ಟ್ ದೇಶಕ್ಕೆ ಬಂದ ಇಸ್ರಯೇಲನ ಮಕ್ಕಳ ಹೆಸರುಗಳು ಇವು:
- Verse 2: ರೂಬೇನ್, ಸಿಮೆಯೋನ್, ಲೇವಿ, ಯೆಹೂದ,
- Verse 3: ಇಸ್ಸಾಕಾರ್, ಜೆಬುಲೂನ್, ಬೆನ್ಯಾಮೀನ್,
- Verse 4: ದಾನ್, ನಫ್ತಾಲಿ, ಗಾದ್ ಮತ್ತು ಆಶೇರ್.
- Verse 5: ಯಕೋಬನ ಸಂತತಿಯವರೆಲ್ಲರು ಎಪ್ಪತ್ತು ಮಂದಿ. ಜೋಸೆಫನು ಈಗಾಗಲೇ ಈಜಿಪ್ಟಿನಲ್ಲಿ ಇದ್ದನು.
- Verse 6: ಕಾಲಕ್ರಮೇಣ ಜೋಸೆಫನು, ಅವನ ಅಣ್ಣತಮ್ಮಂದಿರು ಹಾಗು ಆ ತಲೆಮಾರಿನ ಎಲ್ಲರು ತೀರಿಹೋದರು.
- Verse 7: ಆದರೂ ಇಸ್ರಯೇಲನ ವಂಶವು ಅಭಿವೃದ್ಧಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಿತು. ಅವರು ಶಕ್ತಿಶಾಲಿಗಳಾದರು. ಆ ದೇಶದಲ್ಲೆಲ್ಲಾ ತುಂಬಿಕೊಂಡರು.
- Verse 8: ಅನಂತರ ಹೊಸ ರಾಜನೊಬ್ಬನು ಈಜಿಪ್ಟ್ ದೇಶದ ಆಳ್ವಿಕೆಗೆ ಬಂದನು. ಅವನಿಗೆ ಜೋಸೆಫನ ವಿಷಯ ತಿಳಿದಿರಲಿಲ್ಲ.
- Verse 9: ಅವನು ತನ್ನ ಜನರಿಗೆ, “ಇಸ್ರಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಬಲಾಢ್ಯರಾಗಿದ್ದಾರೆ, ಅಧೀನದಲ್ಲಿರಿಸಲು ಕಷ್ಟಸಾಧ್ಯ.
- Verse 10: ಯುದ್ಧವೇನಾದರು ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಕೂಡಿಕೊಂಡು ನಮಗೆ ವಿರೋಧವಾಗಿ ಕಾದಾಡಿ ನಾಡನ್ನು ಬಿಟ್ಟು ಪಲಾಯನ ಗೈಯಬಹುದು. ಆದ್ದರಿಂದ ಅವರು ವೃದ್ಧಿಯಾಗದಂತೆ ನಾವು ಉಪಾಯ ಹೂಡಬೇಕು,” ಎಂದು ಎಚ್ಚರಿಸಿದನು.
- Verse 11: ಅದರಂತೆಯೇ ಅವನ ಜನರು ಇಸ್ರಯೇಲರಿಗೆ ಕಿರುಕುಳ ಕೊಡಲು ತೊಡಗಿದರು. ಪುಕ್ಕಟೆಯಾಗಿ ಕೆಲಸಮಾಡಿಸಿಕೊಂಡರು. ಬಿಟ್ಟೀ ಕೆಲಸ ಮಾಡಿಸುವ ಅಧಿಕಾರಿಗಳನ್ನು ನೇಮಿಸಿ ಫರೋಹನಿಗೆ ‘ಪಿತೋಮ್’ ಮತ್ತು ‘ರಾಮ್ಸೇಸ್’ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
- Verse 12: ಈಜಿಪ್ಟರು ಅವರಿಗೆ ಎಷ್ಟು ಕಿರುಕುಳ ಕೊಡುತ್ತಿದ್ದರೋ ಅಷ್ಟೂ ಹೆಚ್ಚಿ ಹರಡಿಕೊಳ್ಳುತ್ತಿದ್ದರು.
- Verse 13: ಆದ್ದರಿಂದ ಇಸ್ರಯೇಲರ ಬಗ್ಗೆ ಈಜಿಪ್ಟರು ಸಹಿಸಲಾರದಷ್ಟು ಹೆದರಿಕೆ ಉಳ್ಳವರಾದರು. ಇಸ್ರಯೇಲರಿಂದ ಕ್ರೂರತನದಿಂದ ಸೇವೆಮಾಡಿಸಿಕೊಂಡರು.
- Verse 14: ಮಣ್ಣು ಅಗೆಯುವ ಕೆಲಸದಲ್ಲೂ ಇಟ್ಟಿಗೆ ಸುಡುವ ಕೆಲಸದಲ್ಲೂ ವ್ಯವಸಾಯದ ಮತ್ತಿತರ ಕೆಲಸಕಾರ್ಯಗಳಲ್ಲೂ ಕಠಿಣವಾಗಿ ಅವರಿಂದ ದುಡಿಸಿಕೊಂಡರು. ಅವರು ಮಾಡಿಸಿಕೊಳ್ಳುತ್ತಿದ್ದ ಪ್ರತಿಯೊಂದು ಕೆಲಸವು ಜೀವನವೇ ಬೇಡವೆನ್ನುವಷ್ಟು ಕಠೋರವಾಗಿ ಇರುತ್ತಿತ್ತು.
- Verse 15: ಇದೂ ಸಾಲದೆಂದು ಈಜಿಪ್ಟಿನ ಅರಸನು ಶಿಪ್ರಾ ಮತ್ತು ಪೂಗಾ ಎಂಬ ಹಿಬ್ರಿಯ ಸೂಲಗಿತ್ತಿಯರಿಗೆ,
- Verse 16: “ನೀವು ಹಿಬ್ರಿಯ ಮಹಿಳೆಯರಿಗೆ ಹೆರಿಗೆ ಮಾಡಿಸುವಾಗ ಅವರು ಹೆರುವ ಮಗು ಗಂಡಾಗಿದ್ದರೆ ಕೊಲ್ಲಬೇಕು, ಹೆಣ್ಣಾಗಿದ್ದರೆ ಉಳಿಸಬೇಕು,” ಎಂದು ಹೇಳಿದ್ದನು.
- Verse 17: ಆದರೆ ಆ ಸೂಲಗಿತ್ತಿಯರು ದೈವಭಕ್ತರು. ಈಜಿಪ್ಟಿನ ಅರಸ ಹೇಳಿದಂತೆ ಮಾಡದೆ ಗಂಡುಮಕ್ಕಳನ್ನು ಉಳಿಸಿದರು.
- Verse 18: ಆಗ ಆ ಅರಸನು ಅವರನ್ನು ಕರೆಯಿಸಿ, “ನೀವು ಗಂಡುಮಕ್ಕಳನ್ನು ಉಳಿಸಿದ್ದು ಏಕೆ? ಎಂದು ವಿಚಾರಿಸಿದನು.
- Verse 19: ಆ ಫರೋಹನಿಗೆ ಸೂಲಗಿತ್ತಿಯರು, “ಹಿಬ್ರಿಯ ಮಹಿಳೆಯರು ಈಜಿಪ್ಟಿನ ಮಹಿಳೆಯರಂತಲ್ಲ; ಏಕೆಂದರೆ ಅವರು ಗಟ್ಟಿಮುಟ್ಟಾದವರು. ಸೂಲಗಿತ್ತಿಯರು ಹತ್ತಿರ ಬರುವುದಕ್ಕೆ ಮುಂಚೆಯೇ ಹೆರುತ್ತಾರೆ,” ಎಂದು ಹೇಳಿದರು.
- Verse 20: ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನೆ ಮಾಡಿದರು. ಅವರಲ್ಲಿ ದೈವಭಕ್ತಿ ಇದ್ದುದರಿಂದ ಅವರಿಗೆ ವಂಶಾಭಿವೃದ್ಧಿಯನ್ನು ಉಂಟುಮಾಡಿದರು. ಇತ್ತ ಇಸ್ರಯೇಲರು ಸಂಖ್ಯೆಯಲ್ಲೂ ಶಕ್ತಿಯಲ್ಲೂ ಪ್ರವರ್ಧಿಸಿದರು.
- Verse 21: ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನೆ ಮಾಡಿದರು. ಅವರಲ್ಲಿ ದೈವಭಕ್ತಿ ಇದ್ದುದರಿಂದ ಅವರಿಗೆ ವಂಶಾಭಿವೃದ್ಧಿಯನ್ನು ಉಂಟುಮಾಡಿದರು. ಇತ್ತ ಇಸ್ರಯೇಲರು ಸಂಖ್ಯೆಯಲ್ಲೂ ಶಕ್ತಿಯಲ್ಲೂ ಪ್ರವರ್ಧಿಸಿದರು.
- Verse 22: ಕಟ್ಟಕಡೆಗೆ ಫರೋಹನು ತನ್ನ ಜನರಿಗೆಲ್ಲಾ, "ಹಿಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು; ಹೆಣ್ಣು ಕೂಸುಗಳನ್ನೆಲ್ಲಾ ಉಳಿಸಬೇಕು,” ಎಂದು ಆಜ್ಞೆಮಾಡಿದನು.