P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
111ನೇ ಅಧ್ಯಾಯ
1 : ಅಲ್ಲೆಲೂಯI ಸಜ್ಜನರ ಸಂಘದೊಳು, ಸಭಾಸದಸ್ಯರೊಳು ಕೂಡಿ I ಹೊಗಳುವೆ ಪ್ರಭುವನು ಮನಃಪೂರ್ವಕವಾಗಿ ಹಾಡಿ II
2 : ಮಹತ್ತಾದವು ಪ್ರಭುವಿನಾ ಕಾರ್ಯಗಳು I ಕೊಂಡಾಡುವರು ಅವುಗಳನು ಭಕ್ತಾದಿಗಳು II
3 : ಘನತೆ ಗೌರವವುಳ್ಳವು ಆತನ ಎಲ್ಲ ಕಾರ್ಯ I ನಿಲ್ಲುವುದು ಆತನ ನ್ಯಾಯನೀತಿಯು ನಿತ್ಯ II
4 : ಆತನ ಅದ್ಭುತಕಾರ್ಯ ಸ್ಮರಣೀಯ I ಕರುಣಾವಂತ ಪ್ರಭು, ಪ್ರೀತಿಮಯ II
5 : ಆಹಾರವನೀಯುವನು ಭಯಭಕ್ತಿಯುಳ್ಳವರಿಗೆ I ತನ್ನೊಡಂಬಡಿಕೆಯ ಚಿರ ನೆನಪಿರುವುದು ಆತನಿಗೆ II
6 : ತನ್ನ ಪ್ರಜೆಗಿತ್ತಿಹನು ಅನ್ಯಜನರ ಸೊತ್ತನು I ತೋರ್ಪಡಿಸಿಹನು ಈ ಪರಿ ತನ್ನ ಸಾಮರ್ಥ್ಯವನು II
7 : ನೀತಿ ಸತ್ಯತೆಯುಳ್ಳವು ಆತನ ಸತ್ಕಾರ್ಯಗಳು I ಸುಸ್ಥಿರವಾದವು ಆತನ ನಿಯಮ ನಿಬಂಧನೆಗಳು II
8 : ಯುಗಯುಗಾಂತರಕು ದೃಢವಾಗಿರುವುವು I ಸತ್ಯನೀತಿಗಳು ಅವುಗಳಿಗೆ ಅಡಿಪಾಯವು II
9 : ವಿಮೋಚನೆಯನಿತ್ತಿಹನು ಪ್ರಭು ತನ್ನ ಪ್ರಜೆಗೆ I ಸ್ಥಿರಸ್ಥಾಪಿತವಾಗಿಹುದು ಆತನ ಒಡಂಬಡಿಕೆ I ಪರಿಶುದ್ಧ, ಪರಮಪೂಜ್ಯ ಆತನ ನಾಮಾಂಕೆ II
10 : ಸುಜ್ಞಾನಕ್ಕೆ ಮೂಲವು ದೈವಭಯವು I ಅದರ ಪಾಲನೆಯು ವಿವೇಕತನವು I ಪ್ರಭುವಿಗೆ ಸ್ತೋತ್ರ ಸದಾಕಾಲವು II