ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
16ನೇ ಅಧ್ಯಾಯ
- Verse 1: ನೀಡು ದೇವಾ ರಕ್ಷಣೆಯನು I ನಾ ನಿನಗೆ ಶರಣಾಗತನು II
- Verse 2: “ನೀನೇ ನನ್ನೊಡೆಯ"ನೆಂದು ನಾ ನುಡಿದೆ I ನಿನ್ನ ಹೊರತು ನನಗಿಲ್ಲ ಒಳಿತು” ಎಂದೇ II
- Verse 3: ಸಂತರು ನಾಡಿಗೆ ತಿಲಕವು I ಅವರಲ್ಲಿದೆ ಎನಗೆ ಒಲವು II
- Verse 4: ಅನ್ಯದೇವರನ್ನು ಬಯಸುವವರನ್ನು ಕಾದಿದೆ ಕಠಿಣ ಕಷ್ಟ I ಅವರಂತೆ ರಕ್ತಪಾನತರ್ಪಣೆ ಮಾಡಲೆನಗಿಲ್ಲ ಇಷ್ಟ I ಆ ದೇವರುಗಳ ನಾಮೋಚ್ಚಾರಣೆ ನನ್ನ ತುಟಿಗೆ ಅನಿಷ್ಟ II
- Verse 5: ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ I ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ II
- Verse 6: ನನ್ನ ಪಾಲಿಗೆ ಬಂದುದು ರಮಣೀಯವಾದುದು I ನನಗದೆ ಪರಮಾನಂದದಾಯಕವಾದುದು II
- Verse 7: ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ I ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ II
- Verse 8: ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ I ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ II
- Verse 9: ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ I ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ II
- Verse 10: ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ I ಬಿಟ್ಟುಕೊಡುವುದಿಲ್ಲ ನಿನ್ನ ಆ ಭಕ್ತನನು ಪಾತಾಳಕೆ II
- Verse 11: ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು I ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು I ನಿನ್ನ ಬಲಗೈ ನೀಡುವುದು ನಿತ್ಯಭಾಗ್ಯವನು II