ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
62ನೇ ಅಧ್ಯಾಯ
- Verse 1: ಎನ್ನ ಮನಕ್ಕೆ ಶಾಂತಿ ದೇವನಿಂದಲೆ I ನನ್ನ ಜೀವೋದ್ಧಾರ ಆತನಿಂದಲೆ II
- Verse 2: ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II
- Verse 3: ಎನಿತುಕಾಲ ದಾಳಿ ಮಾಡುವಿರಿ ಒಬ್ಬನ ಮೇಲೆ ನೀವೆಲ್ಲಾ? I ಕೆಡವಲು ಯತ್ನಿಸುವಿರಾ ಬಾಗಿದಾ ಗೋಡೆಯ, ಕುಸಿದಾ ಪೌಳಿಯ? II
- Verse 4: ದಬ್ಬುವ ದುರಾಲೋಚನೆ ಅವರದು ಗಾದಿಯಿಂದ I ಅಬದ್ಧವಾಡುವುದೆಂದರೊ ಹಬ್ಬದಾನಂದ I ಹರಸುವರು ಅಧರದಿಂದ, ಶಪಿಸುವರು ಉದರದಿಂದ II
- Verse 5: ಎನ್ನ ಮನಕೆ ಶಾಂತಿ ದೇವನಿಂದಲೆ I ನನಗೆ ನಂಬಿಕೆ ನಿರೀಕ್ಷೆ ಆತನಿಂದಲೆ II
- Verse 6: ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II
- Verse 7: ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ I ಭದ್ರವಾದ ಬಂಡೆ, ನನಗಾಶ್ರಯ ಆತನೆ II
- Verse 8: ಜನರೇ, ಸದಾ ಭರವಸೆ ಇಡಿ ದೇವನಲಿ I ತೋಡಿಕೊಳ್ಳಿ ನಿಮ್ಮ ಅಳಲನು ಆತನಲಿ II
- Verse 9: ನರಮಾನವರೆಲ್ಲರು ಬರೇ ಉಸಿರು I ನರಾಧಿಪತಿಗಳು ತೀರಾ ಹುಸಿಯು I ತ್ರಾಸಿನಲಿ ತೂಗಲು ಅವರೆಲ್ಲರು I ಉಸಿರಿಗಿಂತಲೂ ಅತ್ಯಂತ ಹಗುರು II
- Verse 10: ಹಿಂಸಾಚಾರದ ಸಂಪಾದನೆಯನು ನೆಚ್ಚಬೇಡಿ I ಸೂರೆಮಾಡಿ ಸೇರಿಕೊಂಡುದನು ಕೊಚ್ಚಬೇಡಿ I ಹೆಚ್ಚಿದ ಆಸ್ತಿಪಾಸ್ತಿಗೆ ಮನಸ್ಸು ಹಚ್ಚಬೇಡಿ II
- Verse 11: ದೇವನೊಮ್ಮೆ ನುಡಿದೀಮಾತು ನನಗಿಮ್ಮಡಿ ಕೇಳಿಸಿತು I ಸರ್ವಾಧಿಕಾರವು ದೇವನಿಗೇ ಸೇರಿದ ಸೊತ್ತು II
- Verse 12: ನಿನ್ನ ಪ್ರೀತಿ ಹೇ ಪ್ರಭು, ಅಚಲ ಹಿಮಾಚಲ I ಸರ್ವರಿಗು ನೀಡುವೆ ಕೃತ್ಯಕೆ ತಕ್ಕ ಫಲ II