ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
80ನೇ ಅಧ್ಯಾಯ
- Verse 1: ಕಿವಿಗೊಟ್ಟು ಆಲಿಸೋ, ಇಸ್ರಯೇಲರ ಮೇಷಪಾಲನೇ I ಜೋಸೆಫನ ವಂಶಜರನು ಕುರಿಹಿಂಡಂತೆ ಕರೆತಂದವನೇ I ವಿರಾಜಿಸು, ಕೆರೂಬಿಯರ ಮಧ್ಯೆ ಆಸೀನನಾದವನೇ II
- Verse 2: ಶೋಭಿಸು ಎಫ್ರಯಿಮ್, ಬೆನ್ಯಮಿನ್, ಮನಸ್ಸೆ ಕುಲಗಳ ಮುಂದೆ I ತೋರ್ಪಡಿಸು ನಿನ್ನ ಶೌರ್ಯವನು, ಬಂದು ಜಯಪ್ರದನಾಗು ನಮಗೆ II
- Verse 3: ಎಲೈ ದೇವನೇ, ಪುನರುದ್ಧಾರ ಮಾಡೆಮ್ಮನು I ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು II
- Verse 4: ಸ್ವಾಮಿ ದೇವನೇ, ಸರ್ವಶಕ್ತನೆ I ಅದೆನಿತು ಕಾಲ ನೀ ಮುನಿದಿರುವೆ I ನಿನ್ನವರ ಮೊರೆಯನಾಲಿಸದಿರುವೆ? II
- Verse 5: ರೋದನವನೆ ಅವರಿಗೆ ಅನ್ನವಾಗಿಸಿದೆ I ಹರಿಯುವ ಕಂಬನಿಯನೆ ಪಾನವಾಗಿಸಿದೆ II
- Verse 6: ನೆರೆಯವರಿಗೆ ನಮ್ಮನು ಕಲಹ ಕಾರಣವಾಗಿಸಿದೆ I ಶತ್ರುಗಳ ಅಪಹಾಸ್ಯಕೆ ನಮ್ಮನು ಗುರಿಪಡಿಸಿದೆ II
- Verse 7: ಸರ್ವಶಕ್ತನಾದ ದೇವನೆ, ಉದ್ಧರಿಸೆಮ್ಮನು I ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು II
- Verse 8: ಈಜಿಪ್ಟಿನಿಂದ ದ್ರಾಕ್ಷಾಲತೆಯೊಂದನು ನೀ ತಂದೆ I ಅನ್ಯಜನತೆಯನು ಹೊರದೂಡಿ ಅದನು ನಾಟಿಮಾಡಿದೆ II
- Verse 9: ಹದಮಾಡಿದೆ ಅದಕೆ ಬೇಕಾದ ನೆಲವನ್ನೆಲ್ಲಾ I ಬೇರೂರಿ ಹಬ್ಬಿಕೊಂಡಿತದು ನಾಡಿನಲ್ಲೆಲ್ಲಾ II
- Verse 10: ಬೆಟ್ಟಗುಡ್ಡಗಳನಿದೋ ಕವಿದಿದೆ ಅದರ ಕುಡಿಗಳು I ದೇವದಾರು ಮರಗಳ ಮೇಲೆ ಹಬ್ಬಿವೆ ಬಳ್ಳಿಗಳು II
- Verse 11: ಹರಡಿವೆ ಅದರ ಕೊಂಬೆಗಳು ಸಮುದ್ರದವರೆಗೆ I ಬೆಳೆದಿವೆ ಆ ರೆಂಬೆಗಳು ಮಹಾನದಿಯವರೆಗೆ II
- Verse 12: ಕಿತ್ತುಹಾಕಿದೆಯೇಕೆ ಅದರ ಬೇಲಿಯನು? I ತರಿದುಬಿಡುವವರಲ್ಲವೆ ದಾರಿಗರು ಅದನು? II
- Verse 13: ನಾಶಮಾಡುವುವು ಅದನು ಕಾಡುಹಂದಿಗಳು I ತಿಂದುಹಾಕುವುವು ಅದನು ಅರಣ್ಯಮೃಗಗಳು II
- Verse 14: ಸರ್ವಶಕ್ತನಾದ ದೇವರೇ, ಮರಳಿ ಮುಖತೋರಿಸು I ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು ಪರಾಮರಿಸು II
- Verse 15: ಕಾಪಾಡು ನಿನ್ನ ಬಲಗೈ ನೆಟ್ಟು ಸಾಕಿದ ಸಸಿಯನು I ಕಾದಿರಿಸು ನಿನಗೆಂದೇ ನೀ ಬೆಳೆಸಿದಾ ಬಳ್ಳಿಯನು II
- Verse 16: ಅದನು ಬೆರಣಿಯಂತೆ ಸುಟ್ಟುಹಾಕಿದವರಾದರೋ I ನಿನ್ನ ಕೋಪದೃಷ್ಟಿಯಿಂದಲೆ ನಾಶವಾಗುವರು II
- Verse 17: ಕೈ ಹಿಡಿದು ಕಾಪಾಡು ನಿನ್ನ ಬಲಗೈ ಉದ್ಧರಿಸಿದ ಪುರುಷನನು I ನಿನಗೆಂದೇ ನೀ ಸಾಕಿ ಬೆಳೆಸಿದಾ ವರಪುತ್ರನನು II
- Verse 18: ಆಗ ಬಿಟ್ಟಗಲುವುದಿಲ್ಲ ನಾವೆಂದೆಂದಿಗು ನಿನ್ನನು I ಪುನರ್ಜೀವಗೊಳಿಸು, ಮಾಳ್ಪೆವು ನಿನ್ನ ನಾಮಸ್ಮರಣೆಯನು II
- Verse 19: ಸರ್ವಶಕ್ತನಾದ ದೇವನೆ, ಉದ್ಧರಿಸು ನಮ್ಮನು I ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು II