ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
97ನೇ ಅಧ್ಯಾಯ
- Verse 1: ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ I ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ I ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ II
- Verse 2: ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು I ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು II
- Verse 3: ಚಲಿಸುತ್ತಿದೆ ಬೆಂಕಿ ಆತನ ಮುಂದುಗಡೆ I ಸುಡುತ್ತದೆ ಆತನ ವೈರಿಗಳನು ಎಲ್ಲೆಡೆ II
- Verse 4: ಇಳೆಯನು ಬೆಳಗಿಸುತ್ತದೆ ಆತನ ಮಿಂಚು I ನಡುಗುತ್ತದೆ ಭೂಮಿ ಅದಕೆ ಬೆಚ್ಚುಬಿದ್ದು II
- Verse 5: ಸಾರ್ವಭೌಮನಾದ ಪ್ರಭುವಿನ ಮುಂದೆ I ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ II
- Verse 6: ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು I ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು II
- Verse 7: ನಾಚಲಿ ವ್ಯರ್ಥವಿಗ್ರಹಗಳನು ಪೂಜಿಸಿ ಹಿಗ್ಗುವವರು I ಪ್ರಭುವಿಗೆ ಅಡ್ಡಬೀಳಲಿ ಆ ದೇವರುಗಳೆಲ್ಲರು II
- Verse 8: ಪ್ರಭು, ನಿನ್ನ ನ್ಯಾಯತೀರ್ಪನು ಕುರಿತು I ಸಿಯೋನ್ ನಗರವು ಆನಂದಪಟ್ಟಿತು I ಜುದೇಯ ಪ್ರಾಂತ್ಯವು ಹರ್ಷಗೊಂಡಿತು II
- Verse 9: ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ I ಮಹೋನ್ನತನು ನೀನು ದೇವರುಗಳಿಗೆಲ್ಲಾ II
- Verse 10: ಕೇಡನು ಹಗೆಮಾಡುವವನಿಗೆ ಪ್ರಭು ಒಲಿವನು I ತನ್ನ ಭಕ್ತರ ಪ್ರಾಣವನು ಕಾಪಾಡುವನು I ದುಷ್ಟರ ಕೈಯಿಂದವರನು ಬಿಡಿಸುವನು II
- Verse 11: ಉದಯವಾಗುವುದು ಜ್ಯೋತಿ ಸಜ್ಜನರಿಗೆ I ಆನಂದವಿದೆ ಯಥಾರ್ಥ ಹೃದಯಿಗಳಿಗೆ II
- Verse 12: ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ I ಆತನ ಶ್ರೀನಾಮವನು ಕೊಂಡಾಡಿರಿ II