ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಶಾಯ
11ನೇ ಅಧ್ಯಾಯ
- Verse 1: ಜೆಸ್ಸೆಯನ ಬುಡದಿಂದ ಒಡೆಯುವುದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು.
- Verse 2: ನೆಲಸುವುದಾತನ ಮೇಲೆ ಜ್ಞಾನವಿವೇಕದಾಯಕ ಆತ್ಮ; ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ; ಸರ್ವೇಶ್ವರನ ಅರಿವನು, ಭಯವನು ಹುಟ್ಟಿಸುವ ಆತ್ಮ ಅಹುದು, ನೆಲಸುವುದಾತನ ಮೇಲೆ ಸರ್ವೇಶ್ವರನ ಆತ್ಮ.
- Verse 3: ಸರ್ವೇಶ್ವರನ ಭಯಭಕ್ತಿ ಅವಗೆ ಪರಿಮಳದಂತೆ. ತೀರ್ಪಿಡನಾತ ಕಣ್ಣಿಗೆ ತೋಚಿದಂತೆ ನಿರ್ಣಯಿಸನಾತ ಕಿವಿಗೆ ಬಿದ್ದಂತೆ.
- Verse 4: ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ.
- Verse 5: ಸದ್ಧರ್ಮವೇ ಆತನಿಗೆ ನಡುಕಟ್ಟು ಪ್ರಾಮಾಣಿಕತೆಯೇ ಸೊಂಟಪಟ್ಟಿ.
- Verse 6: ಬಾಳುವುವು ತೋಳಕುರಿಮರಿಗಳು ಒಂದಿಗೆ ಮಲಗುವುವು ಮೇಕೆಚಿರತೆಗಳು ಜೊತೆಗೆ ಮೊಲೆಯುಣ್ಣುವುವು ಕರುಕೇಸರಿಗಳು ಒಟ್ಟಿಗೆ ನಡೆಸುವುದವುಗಳನು ಚಿಕ್ಕಮಗು ಮೇಯಿಸುವುದಕೆ.
- Verse 7: ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ ಮಲಗುವುವು ಅವುಗಳ ಮರಿಗಳು ಜೊತೆಗೆ ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ.
- Verse 8: ಆಡುವುದು ಮೊಲೆಗೂಸು ನಾಗರ ಹುತ್ತದ ಮೇಲೆ ಕೈಹಾಕುವುದು ಮೊಲೆಬಿಟ್ಟ ಮಗು ಹಾವಿನ ಬಿಲದ ಒಳಗೆ.
- Verse 9: ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ, ಧರೆಯ ಮೇಲೆ.
- Verse 10: ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿನಿಲಯವು.
- Verse 11: ಆ ದಿನದಂದು ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಸುಡಾನ್, ಏಲಾಮ್, ಬಾಬಿಲೋನಿಯ, ಹಮಾಥ್ ಹಾಗೂ ಸಮುದ್ರದ ಕರಾವಳಿ - ಈ ಸ್ಥಳಗಳಿಂದ ಸರ್ವೇಶ್ವರ ತಮ್ಮ ಅಳಿದುಳಿದ ಜನರನ್ನು ಬಿಡಿಸಿ ಬರಮಾಡಿಕೊಳ್ಳಲು ಮತ್ತೆ ಕೈನೀಡುವರು.
- Verse 12: ಇಸ್ರಯೇಲರಲ್ಲಿ ಸೆರೆಹೋದವರನ್ನು, ಜುದೇಯದಿಂದ ಚದರಿಹೋದವರನ್ನು ಕರೆತರಲು, ಧರೆಯ ಚತುರ್ದಿಕ್ಕುಗಳಿಂದವರನ್ನು ಬರಮಾಡಲು, ರಾಷ್ಟ್ರಗಳಿಗೆ ಗುರುತಾಗಿ ಧ್ವಜವನ್ನು ಆತ ಏರಿಸುವನು.
- Verse 13: ತೊಲಗುವುದು ಎಫ್ರಯಿಮಿನ ಹೊಟ್ಟೆಕಿಚ್ಚು, ನಿರ್ಮೂಲವಾಗುವುದು ಜುದೇಯದ ವೈರಿಗಳ ಒಳಸಂಚು. ಎಫ್ರಯಿಮ್, ಜುದೇಯವನ್ನು ಮತ್ಸರಿಸದು; ಜುದೇಯ, ಎಫ್ರಯಿಮನ್ನು ವಿರೋಧಿಸದು.
- Verse 14: ಒಟ್ಟಿಗೆ ಎರಗುವರು ಫಿಲಿಷ್ಟಿಯರ ಮೇಲೆ ಪಶ್ಚಿಮದಲ್ಲಿ; ಜೊತೆಯಾಗಿ ಸೂರೆಮಾಡುವರು ಜನರನ್ನು ಪೂರ್ವದಲ್ಲಿ; ಗೆಲ್ಲುವರು ಎದೋಮ್ ಮೊವಾಬ್ ನಾಡುಗಳನ್ನು; ಅಧೀನವಾಗಿಸುವರು ಅಮೋನ್ಯ ಜನರನ್ನು.
- Verse 15: ಆತ ಬತ್ತಿಸುವನು ಈಜಿಪ್ಟಿನ ಕೊಲ್ಲಿಯನ್ನು, ಒಣಗಿಸುವನು ಬಿಸಿಗಾಳಿಯಿಂದ ಯೂಫ್ರೆಟಿಸ್ ನದಿಯನ್ನು, ಸೀಳುವನದನ್ನು ಏಳು ತೊರೆಗಳನ್ನಾಗಿ. ಈ ಪರಿ ದಾಟುವರು ಜನರು ಕೆರ ಮೆಟ್ಟಿದವರಾಗಿ.
- Verse 16: ಈಜಿಪ್ಟನ್ನು ಬಿಟ್ಟು ಬಂದ ಇಸ್ರಯೇಲರಿಗೆ ಮಾರ್ಗವೊಂದು ಸಿದ್ಧವಾಯಿತು ಅಂತೆಯೆ ಸಿದ್ಧವಾಗುವುದು ರಾಜಮಾರ್ಗವೊಂದು ಅಸ್ಸೀರಿಯದಲ್ಲಿ ಅಳಿದುಳಿದ ಜನರಿಗೆ.