ಕನ್ನಡ ಸತ್ಯವೇದವು
ಹೊಸ ಒಡಂಬಡಿಕೆ
ಮಾರ್ಕ
1ನೇ ಅಧ್ಯಾಯ
- Verse 1: ದೇವರ ಪುತ್ರರಾದ ಯೇಸುಕ್ರಿಸ್ತರ ಶುಭಸಂದೇಶ. ಇದು ಪ್ರವಾದಿ ಯೆಶಾಯನು ಮೊದಲೇ ಬರೆದಿಟ್ಟ ಪ್ರಕಾರ ಪ್ರಾರಂಭವಾಯಿತು:
- Verse 2: “ ‘ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ, ಕಳಿಸುವೆನು ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ಧಗೊಳಿಸುವನು,’ ಎಂದು ದೇವರೇ ನುಡಿದಿದ್ದಾರೆ.”
- Verse 3: “ ‘ಸರ್ವೇಶ್ವರನಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ; ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ,’ ಎಂದೊಬ್ಬನು ಘೋಷಿಸುತ್ತಿದ್ದಾನೆ, ಬೆಂಗಾಡಿನಲ್ಲಿ.”
- Verse 4: ಈ ಪ್ರವಾದನೆಗೆ ಅನುಗುಣವಾಗಿ ಯೊವಾನ್ನನು, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ; ಸ್ನಾನದೀಕ್ಷೆಯನ್ನು ಪಡೆದುಕೊಳ್ಳಿ. ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು,” ಎಂದು ಬೆಂಗಾಡಿನಲ್ಲಿ ಜನರಿಗೆ ಸಾರಿ ಹೇಳುತ್ತಾ ಸ್ನಾನದೀಕ್ಷೆ ಕೊಡುತ್ತಾ ಇದ್ದನು.
- Verse 5: ಜುದೇಯ ಪ್ರಾಂತ್ಯದ ಎಲ್ಲೆಡೆಗಳಿಂದಲೂ ಜೆರುಸಲೇಮಿನಿಂದಲೂ ಜನರು ಆತನ ಬಳಿಗೆ ಹೋಗುತ್ತಿದ್ದರು. ಅವರು ತಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತಾ ಜೋರ್ಡನ್ ನದಿಯಲ್ಲಿ ಆತನಿಂದ ಸ್ನಾನದೀಕ್ಷೆ ಪಡೆದುಕೊಳ್ಳುತ್ತಿದ್ದರು.
- Verse 6: ಯೊವಾನ್ನನು ಒಂಟೆಯ ತುಪ್ಪಟದ ಹೊದಿಕೆಯನ್ನು ಹೊದ್ದು, ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆಗಳೂ ಕಾಡುಜೇನೂ ಆತನ ಆಹಾರವಾಗಿತ್ತು.
- Verse 7: ಆತನು, “ನನ್ನಾನಂತರ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ; ಬಗ್ಗಿ ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ.
- Verse 8: ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಟ್ಟೆನು; ಅವರಾದರೋ ನಿಮಗೆ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಕೊಡುವರು,” ಎಂದು ಘೋಷಿಸುತ್ತಿದ್ದನು.
- Verse 9: ಹೀಗಿರುವಲ್ಲಿ, ಒಂದು ದಿನ ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಿಂದ ಬಂದು, ಜೋರ್ಡನ್ ನದಿಯಲ್ಲಿ ಯೊವಾನ್ನನಿಂದ ದೀಕ್ಷಾಸ್ನಾನ ಪಡೆದುಕೊಂಡರು.
- Verse 10: ನೀರಿನಿಂದ ಅವರು ಮೇಲಕ್ಕೆ ಬರುತ್ತಿರುವಾಗಲೇ ಆಕಾಶವು ತೆರೆದು, ಪವಿತ್ರಾತ್ಮ ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿಯುತ್ತಿರುವುದನ್ನು ಕಂಡರು.
- Verse 11: ಇದಲ್ಲದೆ, “ನೀನೇ ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎನ್ನುವ ದೈವವಾಣಿ ಕೇಳಿಸಿತು.
- Verse 12: ಅನಂತರ ಯೇಸುಸ್ವಾಮಿಯನ್ನು ಪವಿತ್ರಾತ್ಮ ಬೆಂಗಾಡಿಗೆ ಕರೆದೊಯ್ದರು.
- Verse 13: ವನ್ಯಮೃಗಗಳಿದ್ದ ಆ ಕಾಡಿನಲ್ಲಿ ಯೇಸು ನಾಲ್ವತ್ತು ದಿನಗಳನ್ನು ಕಳೆದರು. ಆ ಅವಧಿಯಲ್ಲಿ ಸೈತಾನನು ಅವರನ್ನು ಪರಿಶೋಧಿಸಲು ಪ್ರಯತ್ನಿಸಿದನು. ದೇವದೂತರು ಅವರನ್ನು ಉಪಚರಿಸಿದರು.
- Verse 14: ಯೊವಾನ್ನನು ಬಂಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸಂದೇಶವನ್ನು ಸಾರಿದರು:
- Verse 15: “ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ. ಶುಭಸಂದೇಶದಲ್ಲಿ ವಿಶ್ವಾಸವಿಡಿ,” ಎಂದು ಘೋಷಿಸಿದರು.
- Verse 16: ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಸಿಮೋನನನ್ನೂ ಆತನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾದ ಇವರು ಸರೋವರದಲ್ಲಿ ಬಲೆಬೀಸುತ್ತಾ ಇದ್ದರು.
- Verse 17: ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು,” ಎಂದು ಕರೆದರು.
- Verse 18: ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
- Verse 19: ಇನ್ನೂ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ, ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನರನ್ನು ಯೇಸು ಕಂಡರು.
- Verse 20: ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಕೂಡಲೇ, ಯೇಸು ಅವರನ್ನು ಕರೆದರು. ಅವರೂ ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
- Verse 21: ಬಳಿಕ ಅವರೆಲ್ಲರೂ ಕಫೆರ್ನವುಮ್ ಎಂಬ ಊರನ್ನು ಸೇರಿದರು. ಸಬ್ಬತ್ದಿನ ಬಂದ ಕೂಡಲೇ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಬೋಧಿಸತೊಡಗಿದರು. ಅವರ ಉಪದೇಶವನ್ನು ಕೇಳಿ ಜನರು ಬೆರಗಾದರು.
- Verse 22: ಏಕೆಂದರೆ ಯೇಸು, ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಾಣಿಯಿಂದ ಪ್ರಬೋಧಿಸುತ್ತಿದ್ದರು. ಅಲ್ಲಿ ದೆವ್ವ ಹಿಡಿದ ಒಬ್ಬನಿದ್ದನು.
- Verse 23: ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು?
- Verse 24: ನೀವು ಯಾರೆಂದು ನನಗೆ ಗೊತ್ತು. ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಕಿರುಚಿದನು. ಆದರೆ ಯೇಸುಸ್ವಾಮಿ ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ಆ ದೆವ್ವಕ್ಕೆ ಆಜ್ಞಾಪಿಸಿದರು.
- Verse 25: ದೆವ್ವವು ಆ ಮನುಷ್ಯನನ್ನು ಒದ್ದಾಡಿಸಿ, ಗಟ್ಟಿಯಾಗಿ ಚೀರುತ್ತಾ ಅವನನ್ನು ಬಿಟ್ಟುಹೋಯಿತು.
- Verse 26: ಜನರೆಲ್ಲರೂ ಆಶ್ಚರ್ಯಚಕಿತರಾದರು.
- Verse 27: “ಇದೇನು ಹೊಸ ಬೋಧನೆ!? ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಆಜ್ಞಾಪಿಸುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವೆಯಲ್ಲ!” ಎಂದು ಪರಸ್ಪರ ಮಾತಾಡಿಕೊಂಡರು.
- Verse 28: ಕೂಡಲೇ ಗಲಿಲೇಯ ಪ್ರಾಂತ್ಯದ ಎಲ್ಲೆಡೆಗೂ ಯೇಸುವಿನ ಸಮಾಚಾರ ಹಬ್ಬಿಹರಡಿತು.
- Verse 29: ಯೇಸುಸ್ವಾಮಿ ಪ್ರಾರ್ಥನಾಮಂದಿರದಿಂದ ಹೊರಟು ಯಕೋಬ ಮತ್ತು ಯೊವಾನ್ನನ ಸಂಗಡ ಸಿಮೋನ ಹಾಗೂ ಅಂದ್ರೆಯನ ಮನೆಗೆ ಹೋದರು.
- Verse 30: ಸಿಮೋನನ ಅತ್ತೆ ಜ್ವರದಿಂದ ಮಲಗಿದ್ದಳು. ಇದನ್ನು ಯೇಸುವಿಗೆ ತಿಳಿಸಿದರು. ಯೇಸು ಆಕೆಯ ಬಳಿಗೆ ಹೋಗಿ ಕೈಹಿಡಿದು ಎಬ್ಬಿಸಿದರು. ಜ್ವರ ಬಿಟ್ಟುಹೋಯಿತು.
- Verse 31: ಆಕೆ ಅವರೆಲ್ಲರನ್ನು ಸತ್ಕರಿಸಿದಳು.
- Verse 32: ಸಂಜೆ ಸೂರ್ಯ ಮುಳುಗಿದ ಮೇಲೆ ಜನರು ರೋಗಿಗಳನ್ನೂ ದೆವ್ವಹಿಡಿದವರನ್ನೂ ಯೇಸುವಿನ ಬಳಿಗೆ ಕರೆತಂದರು.
- Verse 33: ಊರಿಗೆ ಊರೇ ಆ ಮನೆಯ ಬಾಗಿಲಲ್ಲಿ ನೆರೆಯಿತು.
- Verse 34: ನಾನಾ ರೋಗಗಳಿಂದ ನರಳುತ್ತಿದ್ದವರನ್ನು ಯೇಸು ಗುಣಪಡಿಸಿದರು. ದೆವ್ವ ಹಿಡಿದವರಿಂದ ದೆವ್ವ ಬಿಡಿಸಿದರು. ತಾವು ಯಾರೆಂಬುದನ್ನು ದೆವ್ವಗಳು ಅರಿತಿದ್ದುದರಿಂದ ಯೇಸು ಅವುಗಳಿಗೆ ಮಾತನಾಡಲು ಅವಕಾಶಕೊಡಲಿಲ್ಲ.
- Verse 35: ಮುಂಜಾನೆ ಬೆಳಕುಹರಿಯುವ ಮುನ್ನ ಯೇಸುಸ್ವಾಮಿ ಎದ್ದು ಏಕಾಂತ ಪ್ರದೇಶಕ್ಕೆ ಹೋಗಿ ಪ್ರಾರ್ಥನೆಮಾಡುತ್ತಿದ್ದರು.
- Verse 36: ಇತ್ತ, ಸಿಮೋನನೂ ಅವನ ಜೊತೆಗಾರರೂ ಯೇಸುವನ್ನು ಹುಡುಕಿಕೊಂಡು ಹೋದರು. ಅವರನ್ನು ಕಂಡಕೂಡಲೇ, “ಎಲ್ಲರು ತಮ್ಮನ್ನೇ ಹುಡುಕುತ್ತಿದ್ದಾರೆ,” ಎಂದು ತಿಳಿಸಿದರು.
- Verse 37: ಅದಕ್ಕೆ ಯೇಸು, “ಅಕ್ಕಪಕ್ಕದ ಊರುಗಳಿಗೆ ಹೋಗೋಣ.
- Verse 38: ಅಲ್ಲೂ ನಾನು ಶುಭಸಂದೇಶವನ್ನು ಸಾರಬೇಕು. ನಾನು ಬಂದಿರುವುದು ಈ ಉದ್ದೇಶಕ್ಕಾಗಿಯೇ,” ಎಂದರು.
- Verse 39: ಅನಂತರ ಯೇಸು ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾಮಂದಿರಗಳಲ್ಲಿ ಪ್ರಬೋಧಿಸುತ್ತಾ ದೆವ್ವಗಳನ್ನು ಬಿಡಿಸುತ್ತಾ ಬಂದರು.
- Verse 40: ಒಮ್ಮೆ ಕುಷ್ಠರೋಗಿಯೊಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, ಮೊಣಕಾಲೂರಿ, “ತಾವು ಮನಸ್ಸುಮಾಡಿದ್ದಲ್ಲಿ ನನ್ನನ್ನು ಗುಣಮಾಡಬಲ್ಲಿರಿ,” ಎಂದು ದೈನ್ಯದಿಂದ ಬೇಡಿಕೊಂಡನು. ಯೇಸುವಿನ ಮನ ಕರಗಿತು. ಅವರು ಕೈಚಾಚಿ, ಕುಷ್ಠರೋಗಿಯನ್ನು ಮುಟ್ಟಿ,
- Verse 41: “ಖಂಡಿತವಾಗಿ ನನಗೆ ಮನಸ್ಸಿದೆ, ನಿನಗೆ ಗುಣವಾಗಲಿ,” ಎಂದರು.
- Verse 42: ತಕ್ಷಣ ಅವನ ಕುಷ್ಠವು ಮಾಯವಾಯಿತು. ಅವನು ಗುಣಹೊಂದಿದನು.
- Verse 43: ಯೇಸು ಅವನಿಗೆ, “ಎಚ್ಚರಿಕೆ! ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು.
- Verse 44: ಯೇಸು ಅವನಿಗೆ, “ಎಚ್ಚರಿಕೆ! ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು.
- Verse 45: ಆದರೆ ಅವನು ಹೋಗಿ ಈ ಸಮಾಚಾರವನ್ನು ಎಲ್ಲೆಲ್ಲೂ ಸಾರಿದನು. ಈ ಕಾರಣ ಯೇಸು ಬಹಿರಂಗವಾಗಿ ಯಾವ ಪಟ್ಟಣದೊಳಕ್ಕೂ ಹೋಗಲು ಆಗಲಿಲ್ಲ. ಆದುದರಿಂದ ನಿರ್ಜನ ಪ್ರದೇಶಗಳಲ್ಲೇ ಇರತೊಡಗಿದರು. ಆದರೂ ಜನರು ನಾಲ್ದೆಸೆಗಳಿಂದ ಅವರು ಇದ್ದೆಡೆಗೆ ಬರುತ್ತಲೇ ಇದ್ದರು.