ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
10ನೇ ಅಧ್ಯಾಯ
1 : ನನ್ನಿಂದೇಕೆ ಪ್ರಭು, ಅಷ್ಟು ದೂರವಿರುವೆ? I ಕಷ್ಟಕಾಲದಲೇಕೆ ಕಣ್ಮರೆಯಾಗಿರುವೆ? II
2 : ಸೊಕ್ಕಿನಿಂದ ಶೋಷಿಸುತಿಹರು ದಲಿತರನು ದುರುಳರು I ಸಿಕ್ಕಿಬೀಳಲಿ ತಾವೇ ಒಡ್ಡಿದ ಉರಿಲಿನೊಳವರು II
3 : ಕೇಡಿಗನು ತನ್ನ ಮನದಾಸೆಗಾಗಿ ಹೆಮ್ಮೆಪಡುತಿಹನು I ಲಾಭಬಡುಕನು ಪ್ರಭುವನು ಶಪಿಸಿ ತಿರಸ್ಕರಿಸುತಿಹನು II
4 : ಸೊಕ್ಕೇರಿದ ಮುಖದಾತನು ಪ್ರಭುವನು ಅರಸುವುದಿಲ್ಲ I ಅವನ ಮನದೊಳಿದೊಂದೇ ಭಾವನೆ : “ದೇವರೇ ಇಲ್ಲ"! II
5 : ಗೆಲುವೆ ಅವನ ವ್ಯವಹಾರವೆಲ್ಲದರ ಸಾರ I ನಿನ್ನ ನಿರ್ಣಯ ಅವನ ಗ್ರಹಿಕೆಗೆ ಅತಿ ದೂರ II ಶತ್ರುಗಳನು ಕಂಡರೆ ಅವನಿಗೆ ತಾತ್ಸಾರ II
6 : ನೆನೆವನು ಮನದೊಳು ದುರುಳನಿಂತು: I “ಯಾರಿಗೂ ನನ್ನ ಕದಲಿಸಲಾಗದು I ಬಾರದು ನನಗೆಂದಿಗು ಆಪತ್ತು” II
7 : ತುಂಬಿದೆ ಶಾಪಕೋಪ, ಕುತಂತ್ರ ಅವನ ಬಾಯಲಿ I ಅವಿತಿದೆ ಪಾಪ, ಅತಿವಿನಾಶ ನಾಲಗೆಯಡಿಯಲಿ II
8 : ಊರು ಸಂದುಗೊಂದುಗಳಲೆ ಅವಿತಿದ್ದು I ನಿರ್ಗತಿಕರಿಗಾಗಿ ಅಲ್ಲೆ ಕಾದಿದ್ದು I ಕೊಲೆಗೈವನು ಮರೆಯಲ್ಲೆ ಮೇಲೆಬಿದ್ದು II
9 : ಹೊಂಚುಹಾಕುವನವನು ಗುಹೆಯೊಳಗಿನ ಸಿಂಹದಂತೆ I ಕಾಯ್ದು ಹಿಡಿದೆಳೆವನು ದಲಿತರನು ಬಲೆಗೆ ಬೀಳ್ವಂತೆ II
10 : ಬಲಿಯಾಗಿಹನು ಬಲತ್ಕಾರಕೆ ಅಬಲನು I ಕುಸಿದು ಬಿದ್ದಿಹನು ಜಜ್ಜರಿತವಾಗವನು II
11 : ಮನದೊಳಿಂತೆಂದು ನೆನೆದನಾ ದುರುಳನು: I “ದೇವನಿದನು ಮರೆತು ವಿಮುಖನಾಗಿಹನು I ಇನ್ನೆಂದಿಗು ನೋಡನು ಇದೆಲ್ಲವನು” II
12 : ಎದ್ದೇಳು ಪ್ರಭು, ದಲಿತನನು ಮರೆಯದಿರಯ್ಯಾ I ಆತನನು ರಕ್ಷಿಸಲು ದೇವಾ, ಕೈಚಾಚಯ್ಯಾ II
13 : ದುರುಳನು ನಿನ್ನನಲಕ್ಷ್ಯ ಮಾಡುವುದೆಂತು? I “ದೇವನೆನ್ನ ವಿಚಾರಿಸನು” ಎನ್ನುವುದೆಂತು? II
14 : ಹೌದು ದೇವಾ, ನೀ ವಿಚಾರಿಪವನು; ದುಃಖದುಗುಡ ಲೆಕ್ಕಿಸುವವನು I ತಬ್ಬಲಿಗಳಿಗೆ ತಂದೆ ನೀನು, ನಿರ್ಗತಿಕ ನಿನಗೆ ಶರಣಾಗತನು II
15 : ಧೂರ್ತನ, ದುರುಳನ ಭುಜಬಲವನು ನೀ ಮುರಿದುಬಿಡು I ಆತನ ನೀಚತನವನು ಪರೀಕ್ಷಿಸಿ ಶೂನ್ಯಮಾಡು II
16 : ಪ್ರಭುವಿನ ಶ್ರೀಸಾಮ್ರಾಜ್ಯವು ಅನವರತ I ಆತನ ನಾಡಲಿ ಮುಗಿಯಿತು ಅನ್ಯಜನರ ಉಳಿತ II
17 : ದೀನ ಕೋರಿಕೆಯನು ಪ್ರಭು, ತೀರಿಸುವೆ I ಹುರಿದುಂಬಿಸಿ, ಅವರ ಮೊರೆಗೆ ಕಿವಿಗೊಡುವೆ II
18 : ದಲಿತರಿಗೆ, ದಿಕ್ಕಿಲ್ಲದವರಿಗೆ ನ್ಯಾಯವನು ದೊರಕಿಸುವೆ I ಈ ಪರಿ ಇಳೆಮಾನವರ ತುಳಿತದಿಂದ ಪಾರುಮಾಡುವೆ II