పరిశుద్ధ గ్రంథము
ಹಳೆಯ ಒಡಂಬಡಿಕೆ
ಕೀರ್ತನೆಗಳು
109ನೇ ಅಧ್ಯಾಯ
1 : ಹೇ ದೇವಾ, ನೀ ಸ್ತುತಿಗೆ ಯೋಗ್ಯ I ನೀನು ಸುಮ್ಮನಿರುವುದು ಸರಿಯಾ? II
2 : ತೆರೆದಿಹರು ಬಾಯಿ ದುರುಳರು, ವಂಚಕರು ನನಗೆದುರಾಗಿ I ಸುಳ್ಳು ನಾಲಿಗೆಗಳು ಆಡುತ್ತಿವೆ ನನಗೆ ವಿರುದ್ಧವಾಗಿ II
3 : ಹಾಕಿಹರು ದ್ವೇಷತುಂಬಿದ ಮಾತುಗಳ ಮುತ್ತಿಗೆ I ನನ್ನ ಎದುರಿಸುತಿಹರು ನಿಷ್ಕಾರಣವಾಗಿಯೆ II
4 : ಪ್ರೀತಿಗೆ ಪ್ರತಿಯಾಗಿ ಮಾಡುತಿಹರು ಆಪಾದನೆ I ಆದರೂ ಮಾಡುತ್ತಿರುವೆ ಅವರಿಗಾಗಿ ಪ್ರಾರ್ಥನೆ II
5 : ಉಪಕಾರಕ್ಕೆ ಅಪಕಾರವನ್ನೆಸಗಿಹರು I ಗೆಳೆತನಕ್ಕೆ ಹಗೆತನವನ್ನೇ ತೋರಿಹರು II
6 : ತಪ್ಪುಹೊರಿಸುವವನನು ನಿಲ್ಲಿಸು ಆ ಶತ್ರುವಿನ ಬಲಗಡೆಗೆ I ಗುರಿಪಡಿಸು ಅವನನು ಭ್ರಷ್ಟ ನ್ಯಾಯಾಧೀಶನ ತೀರ್ಪಿಗೆ II
7 : ಅಪರಾಧಿಯಾಗಲಿ ಅವನು ನ್ಯಾಯವಿಚಾರಣೆಯಲಿ I ಅವನ ಪ್ರಾರ್ಥನೆಯೂ ಪಾಪವಾಗಿ ಎಣಿಸಲ್ಪಡಲಿ II
8 : ಅಲ್ಪವಾಗಿರಲಿ ಅವನ ಜೀವನಾವಧಿ I ಮತ್ತೊಬ್ಬನದಾಗಲಿ ಅವನಾಸ್ತಿಪಾಸ್ತಿ II
9 : ತಬ್ಬಲಿಗಳಾಗಲಿ ಅವನ ಮಕ್ಕಳುಮರಿ I ವಿಧವೆಯಾಗಲಿ ಅವನ ನಾರಿಮಣಿ II
10 : ತಿರುಕರಂತೆ ಅಲೆಯಲಿ ಅವನ ಮಕ್ಕಳು ಭಿಕ್ಷೆಬೇಡುತ I ಹೊರದೂಡಲ್ಪಡಲಿ ತಮ್ಮ ಪಾಳುಬಿದ್ದಾಮನೆಗಳಿಂದ II
11 : ಕಸಿದುಕೊಳ್ಳಲಿ ಅವನದೆಲ್ಲವನು ಸಾಲಿಗನು I ಸುಲಿದುಕೊಳ್ಳಲಿ ಪರರು ಅವನ ಕಷ್ಟಾರ್ಜಿತವನು II
12 : ಕರುಣೆತೋರುವವನಾರೂ ಅವನಿಗಿಲ್ಲವಾಗಲಿ I ಅವನ ತಬ್ಬಲಿ ಮಕ್ಕಳನಾರೂ ಕನಿಕರಿಸದಿರಲಿ II
13 : ನಿರ್ಮೂಲವಾಗಲಿ ಅವನಾ ಪೀಳಿಗೆ I ನಿರ್ನಾಮವಾಗಲಿ ಮರುವಂಶದೊಳಗೆ II
14 : ಮರೆಯದಿರಲಿ ಪ್ರಭು ಅವನಾ ಹಿರಿಯರ ದೋಷವನು I ಪರಿಹರಿಸದಿರಲಿ ಅವನ ತಾಯಿಯು ಗೈದ ಪಾಪವನು II
15 : ಅವರ ಪಾಪಗಳು ಪ್ರಭುವಿನ ನೆನಪಲ್ಲಿರಲಿ I ಅವನ ಹೆಸರೇ ಇಲ್ಲದಂತಾಗಲಿ ಧರೆಯಲಿ II
16 : ಯಾರೊಬ್ಬನಿಗು ಮರುಕತೋರೆ ಮರೆತುಬಿಟ್ಟನವನು I ಕೊಲ್ಲಲು ಯತ್ನಿಸಿದನು ದೀನರನು, ಮನಗುಂದಿದವರನು II
17 : ಅವನಿಗೆ ಪ್ರಿಯ ಶಪಿಸುವುದೆಂದರೆ, ಎರಗಲಿದೀಗ ಅವನ ಮೇಲೇ I ಆಶೀರ್ವದಿಸುವುದು ಅವನಿಗಪ್ರಿಯ, ಇರಲಿ ಅವನಿಗದು ದೂರದಲೇ II
18 : ಶಪಿಸುವುದೆಂದರೆ ಅವನಿಗೆ ಉಡಿಗೆತೊಡಿಗೆಯಂತೆ I ಇಳಿಯಲಿ ಅದೀಗ ಅವನ ದೇಹಕೆ ನೀರಿನಂತೆ I ಸೇರಲಿ ಅದೀಗ ಅವನ ಕೀಲಿಗೆ ಎಣ್ಣೆಯಂತೆ II
19 : ಅವನಿಗಿರಲಿ ಶಾಪ ಹೊದಿಕೆಯಂತೆ I ಅದುವೆ ಅನುದಿನದ ನಡುಗಟ್ಟಂತೆ II
20 : ನನಗೆದುರಾಡಿ ತಪ್ಪು ಹೊರಿಸುವವರಿಗೆ I ಅದುವೇ ಪ್ರಭುವಿನಿಂದ ಗಿಟ್ಟುವ ಕೊಡುಗೆ II
21 : ಹೇ ಪ್ರಭು, ದೇವಾ, ನನ್ನನಾದರಿಸು ಅಕ್ಕರೆಯಿಂದ I ನನ್ನ ಪಕ್ಷವಹಿಸಿ ರಕ್ಷಿಸು ನಿನ್ನ ನಾಮದ ಪ್ರಯುಕ್ತ II
22 : ಬಡವ ನಾನು, ನನಗಿದೆ ಕುಂದುಕೊರತೆ I ನನ್ನ ಎದೆಗೆ ಅಲಗೇ ನಾಟಿದಂತಿದೆ II
23 : ನಾ ಗತಿಸಿಹೋಗುತ್ತಿರುವೆ ಬೈಗಿನ ನೆರಳಂತೆ I ಬಿರುಗಾಳಿ ಕೊಂಡೊಯ್ಯುವ ಮಿಡತೆಯಂತೆ II
24 : ಬಡಕಲಾಯಿತೆನ್ನ ದೇಹ ಬರಡಿಲ್ಲದೆ I ನಡುಕ ಹುಟ್ಟಿತು ಕಾಲಿಗೆ ತ್ರಾಣವಿಲ್ಲದೆ II
25 : ಗುರಿಯಾಗಿರುವೆನು ನಾ ಜನರ ಅಪಹಾಸ್ಯಕ್ಕೆ I ನೋಡುವವರು ತಲೆಯಾಡಿಸಿ ಮಾಡುವ ನಿಂದೆಗೆ II
26 : ಹೇ ಪ್ರಭೂ, ಹೇ ದೇವಾ, ನೆರವಾಗಯ್ಯಾ I ಅಚಲಪ್ರೀತಿಯಿಂದ ನನ್ನ ರಕ್ಷಿಸಯ್ಯಾ II
27 : ನನ್ನ ರಕ್ಷಣೆ ನಿನ್ನ ಕೈಯಿಂದಾದುದೆಂದು ಅವರರಿಯಲಿ I ಅದು ನಿನ್ನಿಂದಲೇ ಹೇ ಪ್ರಭು, ಆದುದೆಂದು ಖಚಿತವಾಗಲಿ II
28 : ಅವರೆನ್ನನು ಶಪಿಸಿದರೂ ನೀನೆನ್ನನು ಹರಸು I ನನ್ನೆದುರಾಳಿಗೆ ಅಪಮಾನವನು ಹೊರಿಸು I ನಿನ್ನ ದಾಸನೆನಗೆ ಆನಂದವನು ಪಾಲಿಸು II
29 : ಮಾನಭಂಗವಾಗಲಿ ನನ್ನಾ ನಿಂದಕರಿಗೆ I ಬಟ್ಟೆಯಂತೆ ಅವರಿಗಂಟಿಕೊಳ್ಳಲಿ ಹೇಸಿಗೆ II
30 : ಕೊಂಡಾಡುವೆನು ಪ್ರಭುವನು ಬಹಳವಾಗಿ I ಕೀರ್ತಿಸುವೆನು ಆತನನು ಸಾಮೂಹಿಕವಾಗಿ II
31 : ನಿಂತಿರುವನು ಪ್ರಭು ಬಡವನ ಬಲಗಡೆ I ವಿಧಿಸುವವರಿಂದ ತಪ್ಪಿಸುವನು ಮರಣದಂಡನೆ II