P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
139ನೇ ಅಧ್ಯಾಯ
1 : ಪ್ರಭು, ಪರಿಶೋಧಿಸಿರುವೆ ನೀ ನನ್ನನು I ಅರಿತುಕೊಂಡಿರುವೆ ಅಂತರಂಗವನು II
2 : ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ I ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ II
3 : ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ I ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ II
4 : ಪ್ರಭು, ನಾ ಮಾತೆತ್ತುವುದಕ್ಕೆ ಮುಂಚಿತವಾಗಿ I ತಿಳಿದುಹೋಗಿದೆ ಎಲ್ಲ ನಿನಗೆ ಪೂರ್ತಿಯಾಗಿ II
5 : ನನ್ನ ಹಿಂದೆಯೂ ಮುಂದೆಯೂ ನೀನಿರುವೆ I ಅಭಯ ಹಸ್ತವನು ನನ್ನ ಮೇಲಿರಿಸಿರುವೆ II
6 : ನನ್ನ ಕುರಿತು ನಿನಗಿರುವ ಅರಿವು ಅಗಾಧ I ನನ್ನ ಬುದ್ಧಿಗದು ಸಿಲುಕದಷ್ಟು ಉನ್ನತ II
7 : ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು? I ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು? II
8 : ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ I ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ II
9 : ನಾನರುಣನ ರೆಕ್ಕೆಗಳನೇರಿ ಹಾರಿದರೂ I ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ II
10 : ಅಲ್ಲೂ ನನ್ನ ನಡೆಸುವುದು ನಿನ್ನ ಕೈ I ನನ್ನ ಹಿಡಿದಿರುವುದು ನಿನ್ನ ಬಲಗೈ II
11 : “ಕಾರ್ಗತ್ತಲೆನ್ನ ಕವಿಯಲಿ” ಎಂದರೂ I “ಸುತ್ತಲ ಬೆಳಕು ಇರುಳಾಗಲಿ” ಎಂದರೂ II
12 : ಕತ್ತಲು ಕತ್ತಲಲ್ಲ ನಿನಗೆ I ಇರುಳೂ ಹಗಲಾಗಿದೆ ನಿನಗೆ I ಕತ್ತಲು, ಬೆಳಕು - ಒಂದೇ ನಿನಗೆ II
13 : ನನ್ನ ಅಂತರಂಗವನು ಉಂಟುಮಾಡಿದಾತ ನೀನು I ತಾಯಗರ್ಭದಲೆ ನನ್ನ ರೂಪಿಸಿದಾತ ನೀನು II
14 : ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ I ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ I ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು ಸಮರ್ಥ II
15 : ನನ್ನ ಅಸ್ಥಿಪಂಜರವನು ರೂಪಿಸುವಾಗ I ತಾಯಗರ್ಭದೊಳು ಅಚ್ಚರದಿ ರಚಿಸುವಾಗ I ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ I ಮರೆಯಾಗಿರಲಿಲ್ಲ ನಾನು ನಿನಗಾಗ II
16 : ನಾನಿನ್ನೂ ಭ್ರೂಣವಾಗಿದ್ದಾಗ ನೋಡಿದವು ನಿನ್ನ ಕಣ್ಣುಗಳು I ಪ್ರಾರಂಭವಾಗುವುದಕ್ಕೆ ಮುನ್ನ ನನ್ನ ಆಯುಷ್ಕಾಲದ ದಿನಗಳು I ಲಿಖಿತವಾದವು ಅವುಗಳಲೊಂದೂ ತಪ್ಪದೆ ನಿನ್ನ ಪುಸ್ತಕದೊಳು II
17 : ದೇವಾ, ನಿನ್ನ ಯೋಚನೆಗಳೆಷ್ಟು ಅಮೂಲ್ಯ I ಅವುಗಳೆಷ್ಟು ಅಸಂಖ್ಯ, ನನಗದೆಷ್ಟು ಅಗಣ್ಯ II
18 : ಎಣಿಕೆಗೆ ಅವುಗಳ ಸಂಖ್ಯೆ ಸಮುದ್ರತೀರದ ಮರಳಿನಂತೆ I ಎಚ್ಚತ್ತು ಎಣಿಸಲೆತ್ನಿಸೆ ನಿನ್ನ ಮುಂದಿರುವೆ ಮುಂಚಿನಂತೆ II
19 : ದೇವಾ, ದುಷ್ಟರನು ಸಂಹರಿಸಿಬಿಟ್ಟರೆ ಎಷ್ಟೋ ಉಚಿತ I ಕೊಲೆಪಾತಕರು ನನ್ನಿಂದ ತೊಲಗಿಹೋದರೆ ಎಷ್ಟೋ ಹಿತ II
20 : ಅವರಾಡುವ ಮಾತುಗಳು ನಿನಗೆ ವಿರೋಧ I ಹಗೆಗಳನು ಎತ್ತಿಕ್ಕುವರು ನಿನಗೆ ವಿರುದ್ಧ II
21 : ಪ್ರಭು, ನಿನ್ನ ದ್ವೇಷಿಗಳನು ನಾ ದ್ವೇಷಿಸದಿರುವೆನೆ? I ನಿನ್ನ ವಿರೋಧಿಗಳನ್ನು ನಾ ತಿರಸ್ಕಾರ ಮಾಡದಿರುವೆನೆ? II
22 : ಹಗೆಮಾಡುವೆನವರನು ಸಂಪೂರ್ಣವಾಗಿ I ಭಾವಿಸುವೆನವರನು ನನ್ನ ವೈರಿಗಳನ್ನಾಗಿ II
23 : ತಿಳಿದುಕೋ ದೇವಾ, ನನ್ನ ಹೃದಯವನು ಪರೀಕ್ಷಿಸಿ I ಅರಿತುಕೋ ನನ್ನ ಆಲೋಚನೆಗಳನು ಪರಿಶೋಧಿಸಿ II
24 : ಕೇಡಿದೆಯೇ ನೋಡು ನನ್ನ ಮಾರ್ಗದಲಿ I ನಡೆಸೆನ್ನನು ಆ ಸನಾತನ ಪಥದಲಿ II