పరిశుద్ధ గ్రంథము
ಹಳೆಯ ಒಡಂಬಡಿಕೆ
1 ಸಮುವೇಲನು
20ನೇ ಅಧ್ಯಾಯ
1 : ದಾವೀದನು ರಾಮಾದ ಮಠದಿಂದ ತಪ್ಪಿಸಿಕೊಂಡು ಯೋನಾತಾನನ ಬಳಿಗೆ ಬಂದನು. “ನಿನ್ನ ತಂದೆ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುತ್ತಾನೆ; ನಾನೇನು ಮಾಡಿದೆ? ನನ್ನ ಅಪರಾಧವೇನು? ನಾನು ಅವನಿಗೆ ಮಾಡಿದ ದ್ರೋಹ ಯಾವುದು?” ಎಂದನು.
2 : ಯೋನಾತಾನನು ಅವನಿಗೆ, “ಇದು ಎಂದಿಗೂ ಆಗಲೇಬಾರದು; ನಿನಗೆ ಮರಣವಾಗಕೂಡದು. ನನ್ನ ತಂದೆ ಚಿಕ್ಕಕಾರ್ಯವನ್ನಾಗಲಿ ದೊಡ್ಡಕಾರ್ಯವನ್ನಾಗಲಿ ನನಗೆ ತಿಳಿಸದೆ ಮಾಡುವುದಿಲ್ಲ; ಇಂಥ ಕಾರ್ಯವನ್ನು ನನಗೆ ಹೇಗೆ ಮರೆಮಾಡಿಯಾರು? ಇಲ್ಲ, ಇದು ನಿಜವಲ್ಲ,” ಎಂದು ಹೇಳಿದನು.
3 : ಅದಕ್ಕೆ ದಾವೀದನು, “ನಿನಗೆ ನಾನು ಪ್ರೀತಿಪಾತ್ರನೆಂದು ನಿನ್ನ ತಂದೆಗೆ ಗೊತ್ತಿದೆ. ಆದುದರಿಂದ ಇದನ್ನು ಯೋನಾತಾನನಿಗೆ ತಿಳಿಸಿದರೆ ಅವನಿಗೆ ದುಃಖವಾಗುವುದೆಂದು ಮರೆಮಾಡುತ್ತಾರೆ. ನಿನ್ನ ಜೀವದಾಣೆ, ಸರ್ವೇಶ್ವರನ ಆಣೆ, ನನಗೂ ಮರಣಕ್ಕೂ ಒಂದು ಗೇಣು ಮಾತ್ರ ಅಂತರ,” ಎಂದು ಖಂಡಿತವಾಗಿ ಹೇಳಿದನು.
4 : ಆಗ ಯೋನಾತಾನನು ದಾವೀದನಿಗೆ, “ನಾನು ನಿನಗಾಗಿ ಏನು ಮಾಡಬೇಕು ಹೇಳು, ಮಾಡುತ್ತೇನೆ,” ಎಂದನು.
5 : ಅದಕ್ಕೆ ದಾವೀದನು, “ನಾಳೆ ಶುದ್ಧಪಾಡ್ಯಮಿ; ನಾನು ಅರಸರ ಪಂಕ್ತಿಯಲ್ಲಿ ಕುಳಿತು ಊಟಮಾಡಬೇಕಾಗಿರುವುದು; ನೀನು ಅಪ್ಪಣೆ ಕೊಟ್ಟರೆ ನಾನು ಈಗಲೆ ಹೋಗಿ ಮೂರನೆಯ ದಿನ ಸಾಯಂಕಾಲದವರೆಗೆ ಹೊಲದಲ್ಲಿ ಅಡಗಿಕೊಂಡಿರುವೆನು.
6 : ನಿನ್ನ ತಂದೆ ನನ್ನನ್ನು ಕುರಿತು ವಿಚಾರಮಾಡಿದರೆ, ನೀನು, ‘ದಾವೀದನು ತನ್ನ ಊರಾದ ಬೆತ್ಲೆಹೇಮಿಗೆ ಹೋಗಿ ಬರುವುದಕ್ಕೆ ಅಪ್ಪಣೆಯಾಗಬೇಕೆಂದು ನನ್ನನ್ನು ಬಹಳವಾಗಿ ಬೇಡಿಕೊಂಡನು; ಅವನ ಗೋತ್ರದವರು ಅಲ್ಲಿ ವಾರ್ಷಿಕ ಬಲಿದಾನ ಮಾಡುತ್ತಾರಂತೆ,’ ಎಂದು ಹೇಳು.
7 : ಅವರು ‘ಹಾಗೆಯೇ ಆಗಲಿ’ ಎಂದರೆ ನಿನ್ನ ಸೇವಕನಾದ ನಾನು ಸುರಕ್ಷಿತನಾಗಿರುವೆನು; ಸಿಟ್ಟುಮಾಡಿದರೆ ಅವರಿಂದ ನನಗೆ ಕೇಡು ಸಿದ್ಧವಾಗಿದೆ ಎಂದು ತಿಳಿದುಕೋ.
8 : ಸೇವಕನ ಮೇಲೆ ದಯವಿರಲಿ. ನೀನು ಸರ್ವೇಶ್ವರನ ಸನ್ನಿಧಿಯಲ್ಲಿ ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿರುವೆಯಲ್ಲವೆ? ನಾನು ಅಪರಾಧಿಯಾಗಿದ್ದರೆ, ನನ್ನನ್ನು ನಿನ್ನ ತಂದೆಗೆ ಒಪ್ಪಿಸಬೇಕಾಗಿಲ್ಲ, ನೀನೆ ಕೊಂದುಹಾಕು,” ಎಂದು ಹೇಳಿದನು.
9 : ಯೋನಾತಾನನು ಅವನಿಗೆ, “ಇದು ಆಗಲೇಬಾರದು; ನಿನಗೆ ನನ್ನ ತಂದೆಯಿಂದ ಕೇಡು ಸಿದ್ಧವಾಗಿದ್ದರೆ ಅದನ್ನು ನಿನಗೆ ನಾನು ತಿಳಿಸದಿರುವೆನೇ?” ಎಂದನು.
10 : ದಾವೀದನು, “ನಿನ್ನ ತಂದೆ ಬಿರುನುಡಿಯಿಂದ ಉತ್ತರಕೊಟ್ಟರೆ ಅದನ್ನು ಯಾರ ಮುಖಾಂತರವಾಗಿ ನನಗೆ ತಿಳಿಸುವೆ?” ಎಂದು ಅವನನ್ನು ಕೇಳಿದನು.
11 : ಯೋನಾತಾನನು ಅವನಿಗೆ, “ನಾವು ಅಡವಿಗೆ ಹೋಗೋಣ ಬಾ,” ಎಂದು ಹೇಳಿದನು.
12 : ಅವರಿಬ್ಬರೂ ಅಡವಿಗೆ ಹೋದರು. ಅಲ್ಲಿ ಯೋನಾತಾನನು ದಾವೀದನಿಗೆ, “ಇಸ್ರಯೇಲ್ ದೇವರಾದ ಸರ್ವೇಶ್ವರನೇ ಸಾಕ್ಷಿ! ನಾನು ನಾಳೆ ಇಲ್ಲವೆ ನಾಡಿದ್ದು ನಿನ್ನ ವಿಷಯದಲ್ಲಿ ನನ್ನ ತಂದೆಯೊಡನೆ ಮಾತಾಡಿ, ನಿನ್ನ ಮೇಲೆ ಅವರಿಗೆ ದಯೆಯುಂಟೆಂದು ಗೊತ್ತಾದರೆ ಕೂಡಲೆ ನಿನಗೆ ತಿಳಿಯಪಡಿಸುವೆನು.
13 : ನನ್ನ ತಂದೆ ನಿನಗೆ ಕೇಡುಮಾಡಲು ಮನಸ್ಸುಮಾಡಿದ್ದಾರೆಂದು ಗೊತ್ತಾದರೆ, ಅದನ್ನೂ ನಿನಗೆ ತಿಳಿಸಿ ನೀನು ತಪ್ಪಿಸಿಕೊಂಡು ಸುರಕ್ಷಿತನಾಗುವ ಹಾಗೆ ನಿನ್ನನ್ನು ಕಳುಹಿಸಿಬಿಡುವೆನು. ಹಾಗೆ ಮಾಡದಿದ್ದರೆ, ಸರ್ವೇಶ್ವರ ನನಗೆ ಏನು ಬೇಕಾದರೂ ಮಾಡಲಿ. ಅವರು ನನ್ನ ತಂದೆಯೊಂದಿಗೆ ಇದ್ದಹಾಗೆ ನಿನ್ನೊಂದಿಗೂ ಇರಲಿ.
14 : ನೀನು ಸರ್ವೇಶ್ವರಸ್ವಾಮಿಯನ್ನು ಸ್ಮರಿಸಿ ಜೀವಮಾನದುದ್ದಕ್ಕೂ ನನಗೆ ಕೃಪೆತೋರಿಸು;
15 : ನಾನು ಸತ್ತನಂತರ ನನ್ನ ಮನೆಯ ಮೇಲೂ ಶಾಶ್ವತವಾಗಿ ನಿನ್ನ ದಯೆಯಿರಲಿ. ಸರ್ವೇಶ್ವರ ನಿನ್ನ ಶತ್ರುಗಳನ್ನೆಲ್ಲ ಭೂಮಿಯಿಂದ ತೆಗೆದುಹಾಕಿದ ಮೇಲೂ ಅದು ನನ್ನ ಮನೆಯಿಂದ ಅಗಲದಿರಲಿ.
16 : ಅಗಲಿದರೆ, ಸರ್ವೇಶ್ವರನೇ ಶತ್ರುಗಳ ಕೈಯಿಂದ ದಾವೀದನಿಗೆ ಮುಯ್ಯಿ ತೀರಿಸಲಿ!” ಎಂದು ಹೇಳಿ ಅವನ ಮನೆಯವರೊಡನೆ ಒಪ್ಪಂದ ಮಾಡಿಕೊಂಡನು.
17 : ತಾನು ದಾವೀದನನ್ನು ಸ್ವಂತ ಪ್ರಾಣದಂತೆ ಪ್ರೀತಿಸುತ್ತಾ ಇದ್ದುದರಿಂದ, ಆ ಪ್ರೀತಿಸಾಕ್ಷಿಯಾಗಿ ಅವನಿಂದ ಪ್ರಮಾಣಮಾಡಿಸಿದನು.
18 : ಯೋನಾತಾನನು ದಾವೀದನಿಗೆ, “ನಾಳೆಶುದ್ಧಪಾಡ್ಯಮಿ; ನಿನ್ನ ಸ್ಥಳ ಬರಿದಾಗಿರುವುದನ್ನು ಅರಸನು ಕಂಡು ನಿನ್ನ ವಿಷಯವಾಗಿ ವಿಚಾರಿಸುವನು.
19 : ನೀನು ಮೂರನೆಯ ದಿನದಲ್ಲಿ ಮೊದಲು ಅಡಗಿಕೊಂಡಿದ್ದ ಸ್ಥಳಕ್ಕೆ ಬೇಗ ಬಂದು ಅಲ್ಲಿನ ಕಲ್ಲುಕುಪ್ಪೆಯ ಬಳಿಯಲ್ಲಿ ಕುಳಿತುಕೊಂಡಿರು.
20 : ನಾನು ಗುರಿಯಿಟ್ಟವನೋ ಎಂಬಂತೆ ಅದರ ಕಡೆಗೆ ಮೂರು ಬಾಣಗಳನ್ನು ಎಸೆದು ಕೂಡಲೆ ಅವುಗಳನ್ನು ತರುವುದಕ್ಕಾಗಿ ನನ್ನ ಆಳನ್ನು ಕಳುಹಿಸುವೆನು.
21 : ನಾನು ಅವನಿಗೆ, ‘ಬಾಣಗಳು ಈಚೆ ಬಿದ್ದಿರುತ್ತವೆ; ಅವುಗಳನ್ನು ತೆಗೆದುಕೊಂಡು ಬಾ’ ಎಂದು ಹೇಳಿದರೆ ನೀನು ಬಾ; ಸರ್ವೇಶ್ವರನಾಣೆ, ಯಾವ ಕೇಡೂ ಸಂಭವಿಸದೆ ಸುರಕ್ಷಿತನಾಗಿರುವೆ.
22 : ಆದರೆ, ‘ಬಾಣಗಳು ಆಚೆ ಬಿದ್ದಿರುತ್ತವೆ,’ ಎಂದು ಹೇಳಿದರೆ ಹೊರಟುಹೋಗು. ನೀನು ಹೋಗುವುದೇ ಸರ್ವೇಶ್ವರನ ಚಿತ್ತ.
23 : ನಮ್ಮಿಬ್ಬರ ಒಪ್ಪಂದಕ್ಕೆ ಸರ್ವೇಶ್ವರಸ್ವಾಮಿಯೇ ನಿತ್ಯಸಾಕ್ಷಿಯಾಗಿರುವರು,” ಎಂದನು.
24 : ದಾವೀದನು ಅಡವಿಯಲ್ಲಿ ಅಡಗಿಕೊಂಡನು.
25 : ಅರಸನು ಶುದ್ಧಪಾಡ್ಯಮಿಯ ದಿವಸ ಪದ್ಧತಿಯ ಪ್ರಕಾರ ಗೋಡೆಯ ಬಳಿಯಲ್ಲಿ ಇರುವ ತನ್ನ ಆಸನದ ಮೇಲೆ ಭೋಜನಕ್ಕೆ ಕುಳಿತುಕೊಂಡನು. ಅವನ ಪಾರ್ಶ್ವದಲ್ಲಿ ಅಬ್ನೇರನೂ ಕುಳಿತುಕೊಂಡನು. ಸೌಲನು ದಾವೀದನ ಸ್ಥಳ ಬರಿದಾಗಿರುವುದನ್ನು ಕಂಡರೂ
26 : ಆ ದಿವಸ ಅವನ ವಿಷಯವಾಗಿ ಏನೂ ಹೇಳಲಿಲ್ಲ. “ಅವನಿಗೆ ಏನಾದರೂ ಸಂಭವಿಸಿರಬೇಕು; ಅವನು ಹೊಲೆಯಾಗಿರಬಹುದು, ತನ್ನನ್ನು ಇನ್ನೂ ಶುದ್ಧಪಡಿಸಿಕೊಳ್ಳದೆ ಇರಬಹುದು,” ಎಂದುಕೊಂಡನು.
27 : ಮರುದಿವಸದಲ್ಲಿಯೂ, ಅಂದರೆ ತಿಂಗಳಿನ ಎರಡನೆಯ ದಿವಸದಲ್ಲಿಯೂ, ದಾವೀದನ ಸ್ಥಾನ ಬರಿದಾಗಿದ್ದುದರಿಂದ ಸೌಲನು, “ಜೆಸ್ಸೆಯನ ಮಗ ನಿನ್ನೆಯೂ ಈ ಹೊತ್ತೂ ಭೋಜನಕ್ಕೆ ಏಕೆ ಬರಲಿಲ್ಲ?” ಎಂದು ತನ್ನ ಮಗ ಯೋನಾತಾನನನ್ನು ಕೇಳಿದನು.
28 : ಅದಕ್ಕೆ ಯೋನಾತಾನನು, “ದಾವೀದನು, ಬೆತ್ಲೆಹೇಮಿನಲ್ಲಿ ತಮ್ಮ ಗೋತ್ರದವರು ಬಲಿದಾನ ಮಾಡುತ್ತಾರೆ;
29 : ತನ್ನ ಅಣ್ಣ ಅದಕ್ಕಾಗಿ ನನ್ನನ್ನು ಕರೆದಿದ್ದಾನೆ; ತಾನು ಹೋಗಿ ನನ್ನ ಅಣ್ಣಂದಿರನ್ನು ನೋಡಿಬರಲು ಅಪ್ಪಣೆಯಾಗಬೇಕು, ಎಂದು ನನ್ನನ್ನು ಬಹಳವಾಗಿ ಬೇಡಿಕೊಂಡನು. ಆದುದರಿಂದ ಅವನು ಅರಸರ ಪಂಕ್ತಿಗೆ ಬರಲಿಲ್ಲ,” ಎಂದು ಉತ್ತರಕೊಟ್ಟನು.
30 : ಆಗ ಸೌಲನು ಸಿಡಿದೆದ್ದು ಯೋನಾತಾನನಿಗೆ, “ಎಲೋ, ದುಷ್ಟದಾಸಿಯ ಮಗನೇ, ನೀನು ಜೆಸ್ಸೆಯನ ಮಗನೊಡನೆ ಸ್ನೇಹದಿಂದ ಇರುವುದು ನನಗೆ ಗೊತ್ತಿಲ್ಲವೇ? ಈ ಸ್ನೇಹದಿಂದ ನಿನಗೂ ಹೆತ್ತವಳಿಗೂ ಮಾನಭಂಗ ತರುತ್ತಾ ಇರುವೆ.
31 : ಆ ಜೆಸ್ಸೆಯನ ಮಗ ಭೂಲೋಕದಲ್ಲಿ ಇರುವವರೆಗೆ ನಿನಗಾಗಲಿ, ರಾಜನಾಗುವ ಹಕ್ಕುಬಾಧ್ಯತೆಗಳಿಗಾಗಲಿ ಉಳಿವಿಲ್ಲ. ಆದುದರಿಂದ ಹೋಗು, ಅವನನ್ನು ಕರೆಯಿಸಿ ನನ್ನ ಬಳಿಗೆ ತೆಗೆದುಕೊಂಡು ಬಾ; ಅವನು ಸಾಯಬೇಕು,” ಎಂದನು.
32 : ಅದಕ್ಕೆ ಯೋನಾತಾನನು, “ಅವನು ಏಕೆ ಸಾಯಬೇಕು? ಅವನು ಏನು ಮಾಡಿದ್ದಾನೆ?” ಎಂದು ತಂದೆಯನ್ನು ಕೇಳಿದನು.
33 : ಕೂಡಲೆ ಸೌಲನು ಅವನನ್ನು ತಿವಿಯುವವನಂತೆ ಈಟಿಯನ್ನೆಸೆದನು. ತನ್ನ ತಂದೆ ನಿಜವಾಗಿಯೂ ದಾವೀದನನ್ನು ಕೊಲ್ಲುವುದಕ್ಕೆ ನಿಶ್ಚಯಿಸಿದ್ದಾನೆಂಬುದು ಯೋನಾತಾನನಿಗೆ ಅರಿವಾಯಿತು.
34 : ಅವನು ಬಲುಸಿಟ್ಟುಗೊಂಡು ಪಂಕ್ತಿಯಿಂದೆದ್ದು ಹೋದನು. ತನ್ನ ತಂದೆ, ದಾವೀದನನ್ನು ಅಪಮಾನಪಡಿಸಿದ್ದರಿಂದ ಯೋನಾತಾನನಿಗೆ ಬಹಳ ದುಃಖವುಂಟಾಗಿ ಅವನು ಆ ದಿವಸ ಊಟಮಾಡಲೇ ಇಲ್ಲ.
35 : ಅವನು ಮರುದಿವಸ ಮುಂಜಾನೆ ಒಬ್ಬ ಹುಡುಗನನ್ನು ಕರೆದುಕೊಂಡು ದಾವೀದನನ್ನು ನೋಡುವುದಕ್ಕಾಗಿ ಅಡವಿಗೆ ಹೋದನು.
36 : ಹುಡುಗನಿಗೆ, “ಬೇಗ ಹೋಗಿ ನಾನು ಎಸೆದ ಬಾಣಗಳನ್ನು ಕೂಡಿಸಿಕೊಂಡು ಬಾ,” ಎಂದು ಹೇಳಿದನು. ಆ ಹುಡುಗ ಹೋಗುತ್ತಿರುವಾಗ ಯೋನಾತಾನನು ಬಾಣವನ್ನು ಅವನ ಆಚೆಗೆ ಎಸೆದನು.
37 : ಹುಡುಗನು ಬಾಣಬಿದ್ದ ಸ್ಥಳಕ್ಕೆ ಬಂದಾಗ ಯೋನಾತಾನನು ಗಟ್ಟಿಯಾಗಿ ಅವನಿಗೆ, “ಬಾಣ ಇನ್ನೂ ಆಚೆ ಬಿದ್ದಿದೆ.
38 : ಬೇಗ ಓಡು, ನಿಲ್ಲಬೇಡ,” ಎಂದು ಕೂಗಿದನು. ಹುಡುಗನು ಬಾಣಗಳನ್ನು ಕೂಡಿಸಿಕೊಂಡು ಯಜಮಾನನ ಬಳಿಗೆ ಬಂದನು.
39 : ಇದರ ರಹಸ್ಯ ಯೋನಾತಾನನಿಗೆ ಹಾಗು ದಾವೀದನಿಗೆ ಗೊತ್ತಾಯಿತೇ ಹೊರತು ಆ ಹುಡುಗನಿಗೆ ಗೊತ್ತಾಗಲಿಲ್ಲ.
40 : ಯೋನಾತಾನನು ತನ್ನ ಆಯುಧಗಳನ್ನು ಹುಡುಗನ ಕೈಯಲ್ಲಿ ಕೊಟ್ಟು, “ಇವುಗಳನ್ನು ಊರಿಗೆ ತೆಗೆದುಕೊಂಡು ಹೋಗು,” ಎಂದು ಹೇಳಿದನು.
41 : ಹುಡುಗನು ಹೋಗುತ್ತಲೇ ದಾವೀದನು ಕಲ್ಲುಕುಪ್ಪೆಯ ಬಳಿಯಿಂದೆದ್ದು ಬಂದು ಮೂರು ಸಾರಿ ಸಾಷ್ಟಾಂಗವಾಗಿ ಯೋನಾತಾನನನ್ನು ವಂದಿಸಿದನು. ಅವರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತರು. ದಾವೀದನು ಬಹಳವಾಗಿ ಅತ್ತನು.
42 : ಅನಂತರ ಯೋನಾತಾನನು ದಾವೀದನಿಗೆ, “ಸಮಾಧಾನದಿಂದ ಹೋಗು; ನಾವು ಸರ್ವೇಶ್ವರನ ಹೆಸರಿನಲ್ಲಿ ಆಣೆಯಿಟ್ಟು ಒಪ್ಪಂದಮಾಡಿಕೊಂಡಿದ್ದೇವಲ್ಲವೆ? ಅವರೇ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾನಕ್ಕೂ ಸದಾ ಸಂಬಂಧಸಾಕ್ಷಿಯಾಗಿರಲಿ,” ಎಂದು ಹೇಳಿದನು. ಬಳಿಕ ದಾವೀದನು ಹೊರಟುಹೋದನು. ಇತ್ತ ಯೋನಾತಾನನು ಊರಿಗೆ ಹಿಂದಿರುಗಿದನು.