வேதாகமம்
ಹಳೆಯ ಒಡಂಬಡಿಕೆ
ಯೆರೆಮೀಯ
16ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ ನನಗೆ ಈ ಸಂದೇಶವನ್ನು ದಯಪಾಲಿಸಿದರು :
- Verse 2: “ನೀನು ಮದುವೆಯಾಗಬೇಡ, ಗಂಡು ಅಥವಾ ಹೆಣ್ಣು ಮಕ್ಕಳು ನಿನಗೆ ಈ ಸ್ಥಳದಲ್ಲಿ ಹುಟ್ಟದಿರಲಿ.
- Verse 3: ಏಕೆಂದರೆ ಇಲ್ಲಿ ಆ ಗಂಡುಹೆಣ್ಣು ಮಕ್ಕಳಿಗೆ, ಅವರನ್ನು ಹೆತ್ತ ತಾಯಿಯರಿಗೆ, ಅವರನ್ನು ಈ ನಾಡಿನಲ್ಲಿ ಪಡೆದ ತಂದೆಯರಿಗೆ ಸಂಭವಿಸಲು ಇರುವುದನ್ನು ಸರ್ವೇಶ್ವರನಾದ ನಾನು ಹೇಳುತ್ತೇನೆ, ಕೇಳು:
- Verse 4: ಅವರು ಘೋರ ಮರಣಕ್ಕೆ ಗುರಿಯಾಗುವರು. ಅವರಿಗಾಗಿ ಯಾರೂ ದುಃಖಿಸುವುದಿಲ್ಲ. ಅವರನ್ನು ಯಾರೂ ಹೂಣುವುದಿಲ್ಲ. ಅವರು ಗೊಬ್ಬರವಾಗಿ ಭೂಮಿಯ ಮೇಲೆ ಬಿದ್ದಿರುವರು. ಖಡ್ಗದಿಂದ ಹಾಗು ಕ್ಷಾಮದಿಂದ ಅವರು ನಾಶವಾಗುವರು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಜಂತುಗಳಿಗೂ ಆಹಾರವಾಗುವುವು.”
- Verse 5: ಸರ್ವೇಶ್ವರ ಮತ್ತೆ ನನಗೆ ಹೀಗೆಂದರು : “ನೀನು ಸಾವು ಜರುಗಿದ ಮನೆಗಳಿಗೆ ಹೋಗಬೇಡ. ಅಲ್ಲಿ ನಡೆಯುವ ಗೋಳಾಟದಲ್ಲಿ ಸೇರಬೇಡ. ಎದೆಬಡಿದುಕೊಂಡು ಸಂತಾಪ ಸೂಚಿಸಬೇಕಾಗಿಲ್ಲ. ಏಕೆಂದರೆ, ನಾನು ದಯಪಾಲಿಸಿದ ಶಾಂತಿಯನ್ನೂ ಪ್ರೀತಿಯನ್ನೂ ಕೃಪೆಯನ್ನೂ ಆ ಜನರಿಂದ ತೆಗೆದುಬಿಟ್ಟಿದ್ದೇನೆ.
- Verse 6: ಈ ನಾಡಿನಲ್ಲಿ ದೊಡ್ಡವರು ಹಾಗುಚಿಕ್ಕವರು ಸಾಯುವರು. ಅವರನ್ನು ಯಾರು ಹೂಣಿಡುವುದಿಲ್ಲ. ಅವರಿಗಾಗಿ ಯಾರೂ ಗೋಳಾಡುವುದಿಲ್ಲ. ದೇಹವನ್ನು ಹುಣ್ಣಾಗಿಸಿಕೊಳ್ಳುವುದಿಲ್ಲ. ತಲೆ ಬೋಳಿಸಿಕೊಳ್ಳುವುದಿಲ್ಲ.
- Verse 7: ಸತ್ತವನಿಗಾಗಿ ದುಃಖಪಡುವವರನ್ನು ಸಂತೈಸುವುದಕ್ಕೋಸ್ಕರ ಯಾರೂ ಕಜ್ಜಾಯವನ್ನು ಹಂಚುವುದಿಲ್ಲ. ತಂದೆಯನ್ನಾಗಲಿ, ತಾಯಿಯನ್ನಾಗಲಿ ಕಳೆದುಕೊಂಡವರಿಗು ಕೂಡ ಯಾರೂ ಸಾಂತ್ವನದ ಪಾನಪಾತ್ರೆಯನ್ನು ನೀಡುವುದಿಲ್ಲ.
- Verse 8: “ಔತಣದ ಮನೆಗೂ ಹೋಗಬೇಡ. ಅಲ್ಲಿಯವರೊಡನೆ ಕುಳಿತು, ತಿಂದು, ಕುಡಿಯಬೇಡ,
- Verse 9: ಏಕೆಂದರೆ ಇಸ್ರಯೇಲಿನ ದೇವರೂ ಸರ್ವಶಕ್ತ ಸರ್ವೇಶ್ವರನೂ ಆದ ನಾನು ಹೇಳುತ್ತೇನೆ, ಕೇಳು : ನಿಮ್ಮ ಕಾಲದಲ್ಲೆ, ನಿಮ್ಮ ಕಣ್ಣೆದುರಿಗೆ, ಸಂತೋಷ ಸಂಭ್ರಮದ ಧ್ವನಿಯನ್ನು ನಿಲ್ಲಿಸಿಬಿಡುವೆನು. ವಧೂವರರ ಸದ್ದೂ ಇಲ್ಲವಾಗುವುದು.
- Verse 10: “ಇದನ್ನೆಲ್ಲ ನೀನು ಆ ಜನರಿಗೆ ತಿಳಿಸುವಾಗ ಅವರು, ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಸರ್ವೇಶ್ವರ ವಿಧಿಸಿದ್ದೇಕೆ? ನಾವು ಮಾಡಿದ ಅಪರಾಧವಾದರೂ ಏನು? ನಮ್ಮ ದೇವರಾದ ಸರ್ವೇಶ್ವರನಿಗೆ ವಿರುದ್ಧ ನಾವು ಕಟ್ಟಿಕೊಂಡ ಪಾಪವೇನು?’ ಎಂದು ಕೇಳುವರು.
- Verse 11: ಆಗ ನೀನು ಅವರಿಗೆ ಹೀಗೆಂದು ಹೇಳಬೇಕು : ಸರ್ವೇಶ್ವರನ ಈ ಮಾತಿಗೆ ಕಿವಿಗೊಡಿ : ‘ನಿಮ್ಮ ಪೂರ್ವಜರು ನನ್ನನ್ನು ತೊರೆದುಬಿಟ್ಟರು. ಅನ್ಯದೇವತೆಗಳನ್ನು ಹಿಂಬಾಲಿಸಿದರು. ಅವುಗಳಿಗೆ ಸೇವೆಸಲ್ಲಿಸಿ ಪೂಜಿಸಿದರು. ನನ್ನನ್ನು ಬಿಟ್ಟುದಲ್ಲದೆ ನನ್ನ ಧರ್ಮವಿಧಿಗಳನ್ನು ಮೀರಿದರು.
- Verse 12: ನೀವಾದರೊ ನಿಮ್ಮ ಪೂರ್ವಜರಿಗಿಂತ ಹೆಚ್ಚು ಕೇಡನ್ನು ಮಾಡಿದ್ದೀರಿ. ನೀವೆಲ್ಲರು ನನ್ನ ಮಾತನ್ನು ಕೇಳದೆ ದುಷ್ಟ ಹೃದಯವುಳ್ಳ ಹಟಮಾರಿಗಳಂತೆ ನಡೆಯುತ್ತಾ ಬಂದಿದ್ದೀರಿ.
- Verse 13: ಈ ಕಾರಣಗಳ ನಿಮಿತ್ತ ನೀವಾಗಲಿ ನಿಮ್ಮ ಪೂರ್ವಜರಾಗಲಿ ನೋಡದ ನಾಡಿಗೆ ನಿಮ್ಮನ್ನು ಇಲ್ಲಿಂದ ಎಸೆದುಬಿಡುವೆನು. ಅಲ್ಲಿ ಹಗಲಿರುಳೂ ಅನ್ಯದೇವತೆಗಳಿಗೆ ಸೇವೆಮಾಡುವಿರಿ, ನನ್ನ ದಯೆ ದಾಕ್ಷಿಣ್ಯ ಮಾತ್ರ ನಿಮಗೆ ದೊರಕದು".
- Verse 14: ಸರ್ವೇಶ್ವರ ಹೀಗೆನ್ನುತ್ತಾರೆ : “ಇಗೋ ಕೇಳು, ಕಾಲಬರಲಿದೆ. ಆಗ ಜನರು, ‘ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬಿಡಿಸಿ ಬರಮಾಡಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವುದನ್ನು ಬಿಟ್ಟುಬಿಡುವರು.
- Verse 15: ಬದಲಿಗೆ, ‘ಇಸ್ರಯೇಲರನ್ನು ಉತ್ತರ ದೇಶದಿಂದ ಹಾಗು ಅವರನ್ನು ತಾನು ತಳ್ಳಿಬಿಟ್ಟಿದ್ದ ಎಲ್ಲ ಸೀಮೆಗಳಿಂದ ಬಿಡಿಸಿ ಬರಮಾಡಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವರು. ನಾನು ಅವರ ಪೂರ್ವಜರಿಗೆ ದಯಪಾಲಿಸಿದ ನಾಡಿಗೆ ಅವರನ್ನು ಮರಳಿ ಬರಮಾಡುವೆನು.
- Verse 16: ಸರ್ವೇಶ್ವರ ಹೀಗೆನ್ನುತ್ತಾರೆ : “ಇಗೋ, ನಾನು ಬಹುಮಂದಿ ಬೆಸ್ತರನ್ನು ಕಳಿಸುವೆನು, ಅವರು ನನ್ನ ಜನರನ್ನು ಹಿಡಿಯುವರು, ಬಳಿಕ ಬಹುಜನ ಬೇಡರನ್ನು ಕಳಿಸುವೆನು. ಅವರು ಎಲ್ಲ ಬೆಟ್ಟಗುಡ್ಡಗಳಿಂದಲೂ ಬಂಡೆಗಳ ಸಂದುಗೊಂದುಗಳಿಂದಲೂ ನನ್ನ ಜನರನ್ನು ಹೊರಡಿಸಿ ಬೇಟೆಯಾಡುವರು.
- Verse 17: ಈ ಜನರ ನಡತೆ ನನ್ನ ಮುಖಕ್ಕೆ ಮರೆಯಾಗಿಲ್ಲ, ಎಲ್ಲವು ನನ್ನ ಕಣ್ಣಿಗೆ ಕಟ್ಟಿದಂತಿದೆ. ಅವರ ಅಕ್ರಮ ನನಗೆ ಗುಟ್ಟೇನೂ ಅಲ್ಲ, ಎಲ್ಲವು ಬಟ್ಟಬಯಲಾಗಿದೆ.
- Verse 18: ಮೊತ್ತ ಮೊದಲು ಅವರ ಅಕ್ರಮಕ್ಕೂ ಪಾಪಕ್ಕೂ ಇಮ್ಮಡಿ ಶಿಕ್ಷೆಯನ್ನು ಕೊಡುವೆನು. ಏಕೆಂದರೆ ಹೆಣಗಳಂತಿರುವ ತಮ್ಮ ಹೇಯ ವಿಗ್ರಹಗಳಿಂದ ನನ್ನ ನಾಡನ್ನು ಹೊಲಸುಮಾಡಿದ್ದಾರೆ. ಅಸಹ್ಯವಾದ ವಸ್ತುಗಳಿಂದ ಆ ನನ್ನ ಸ್ವಂತ ನಾಡನ್ನು ತುಂಬಿಸಿಬಿಟ್ಟಿದ್ದಾರೆ.”
- Verse 19: “ಹೇ ಸರ್ವೇಶ್ವರಾ, ನನ್ನ ಶಕ್ತಿಯೇ, ನನ್ನ ಕೋಟೆಯೇ, ಆಪತ್ತು ಕಾಲದಲ್ಲಿ ನನ್ನ ಆಶ್ರಯವೇ, ಜಗದ ಕಟ್ಟಕಡೆಯಿಂದ ಜನಾಂಗಗಳು ನಿಮ್ಮ ಸಮ್ಮುಖಕ್ಕೆ ಬರುವುವು. ‘ನಮ್ಮ ಪೂರ್ವಜರು ಪಾರಂಪರ್ಯವಾಗಿ ಪಡೆದವುಗಳು ನಿಶ್ಚಯವಾಗಿ ಅಬದ್ಧವಾದವುಗಳು, ಮಾಯರೂಪವಾದವುಗಳು ಹಾಗು ನಿಷ್ಪ್ರಯೋಜನವಾದವುಗಳು.
- Verse 20: ಮನುಷ್ಯ ಮಾತ್ರದವನು ದೇವರುಗಳನ್ನು ಕಲ್ಪಿಸಿಕೊಳ್ಳಬಲ್ಲನೆ? ಕಲ್ಪಿಸಿಕೊಂಡರೆ ಅವು ದೇವರುಗಳೇ ಅಲ್ಲ,’ ಎಂದು ನಿವೇದಿಸುವುವು.”
- Verse 21: ಸರ್ವೇಶ್ವರ : “ಆದುದರಿಂದ ಇಗೋ, ಇಂದೊಮ್ಮೆ ನನ್ನ ಭುಜಬಲವನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಯಪಡಿಸುವೆನು. ಚೆನ್ನಾಗಿ ಗ್ರಹಿಸುವಂತೆ ಮಾಡುವೆನು. ನನ್ನ ನಾಮಧೇಯ ಸರ್ವೇಶ್ವರ ಎಂದೇ ಅವರು ಗುರುತು ಹಚ್ಚುವರು.”