ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆರೆಮೀಯ
26ನೇ ಅಧ್ಯಾಯ
- Verse 1: ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಆರಂಭದಲ್ಲಿ ಯೆರೆಮೀಯನಿಗೆ ಸರ್ವೇಶ್ವರ ಸ್ವಾಮಿಯಿಂದ ಈ ಅಪ್ಪಣೆ ಆಯಿತು;
- Verse 2: “ನೀನು ನನ್ನ ದೇವಾಲಯದ ಪ್ರಾಕಾರದಲ್ಲಿ ನಿಂತು, ಆ ಮಂದಿರದಲ್ಲಿ ಆರಾಧಿಸುವುದಕ್ಕೆ ಬರುವ ಜುದೇಯದ ಎಲ್ಲ ಊರಿನವರಿಗೆ ನಾನು ಆಜ್ಞಾಪಿಸುವ ಮಾತುಗಳನ್ನೆಲ್ಲಾ ಹೇಳು, ಒಂದನ್ನೂ ಬಿಡಬೇಡ.
- Verse 3: ಬಹುಶಃ ಅವರು ಕಿವಿಗೊಟ್ಟು ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು. ಹಾಗೆ ಮಾಡಿದ್ದೇ ಆದರೆ, ಅವರ ದುಷ್ಕೃತ್ಯಗಳಿಗೆ ದಂಡನೆಯನ್ನು ವಿಧಿಸಬೇಕೆಂದಿದ್ದ ನನ್ನ ಮನಸ್ಸನ್ನು ಬದಲಾಯಿಸಿಕೊಳ್ಳುವೆನು.
- Verse 4: “ಅವರಿಗೆ ನೀನು ಹೇಳಬೇಕಾದುದು ಇದು: ‘ಸರ್ವೇಶ್ವರ ಹೀಗೆನ್ನುತ್ತಾರೆ - ನೀವು ನನಗೆ ಕಿವಿಗೊಡದೆ ಹೋದರೆ, ನಾನು ನಿಮ್ಮ ಮುಂದಿಟ್ಟಿರುವ ಧರ್ಮಶಾಸ್ತ್ರದ ಪ್ರಕಾರ ನಡೆಯದೆಹೋದರೆ,
- Verse 5: ಹಾಗು ನೀವು ಕೇಳದಿದ್ದರೂ ನಿಮ್ಮ ಬಳಿಗೆ ನಾನು ಪದೇಪದೇ ಕಳಿಸುತ್ತಾ ಬಂದಿರುವ ನನ್ನ ದಾಸರಾದ ಪ್ರವಾದಿಗಳ ಮಾತುಗಳನ್ನೂ ಆಲಿಸದೆಹೋದರೆ,
- Verse 6: ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.”
- Verse 7: ಯೆರೆಮೀಯನು ಸರ್ವೇಶ್ವರನ ಆಲಯದಲ್ಲಿ ಹೀಗೆ ಸಾರುವುದನ್ನು ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಕೇಳಿದರು.
- Verse 8: ಜನರಿಗೆ ತಿಳಿಸಬೇಕೆಂದು ಸರ್ವೇಶ್ವರ ಆಜ್ಞಾಪಿಸಿದ್ದನ್ನೆಲ್ಲ ಯೆರೆಮೀಯನು ನುಡಿದು ಮುಗಿಸಿದ ಮೇಲೆ ಯಾಜಕರೂ ಪ್ರವಾದಿಗಳೂ ಜನರೆಲ್ಲರೂ ಅವನನ್ನು ಸುತ್ತುಗಟ್ಟಿದರು.
- Verse 9: “ನಿನಗೆ ಖಂಡಿತವಾಗಿ ಮರಣದಂಡನೆಯಾಗಬೇಕು. ನೀನು ‘ಈ ದೇವಾಲಯಕ್ಕೆ ಶಿಲೋವಿನ ಗತಿ ಬರುವುದು, ಈ ನಗರ ಪಾಳುಬಿದ್ದು ನಿರ್ಜನ ಪ್ರದೇಶವಾಗುವುದು,’ ಎಂದು ಸರ್ವೇಶ್ವರನ ಹೆಸರೆತ್ತಿ ಪ್ರವಾದನೆ ಮಾಡಿದ್ದೇಕೆ?” ಎಂದು ಕೂಗಾಡಿದರು. ಆಲಯದಲ್ಲಿದ್ದ ಯೆರೆಮೀಯನನ್ನು ಜನರ ಗುಂಪು ಮುತ್ತಿಕೊಂಡಿತು.
- Verse 10: ಜುದೇಯದ ನಾಯಕರಿಗೂ ಈ ಸಮಾಚಾರ ಮುಟ್ಟಿತು. ಅವರು ಅರಮನೆಯಿಂದ ಧಾವಿಸಿಬಂದು ಸರ್ವೇಶ್ವರನಾಲಯದ ಹೊಸ ಬಾಗಿಲ ಬಳಿ ಆಸೀನರಾದರು.
- Verse 11: ಯಾಜಕರೂ ಪ್ರವಾದಿಗಳೂ, “ಇವನು ಮರಣದಂಡನೆಗೆ ಪಾತ್ರನು; ನಗರಕ್ಕೆ ಅಹಿತವಾದುದನ್ನು ನುಡಿದಿದ್ದಾನೆ. ಇದನ್ನು ನೀವೇ ಕೇಳಿದ್ದೀರಿ,” ಎಂದು ನಾಯಕರಿಗೂ ಜನರೆಲ್ಲರಿಗೂ ದೂರು ಇತ್ತರು.
- Verse 12: ಆಗ ಯೆರೆಮೀಯನು, “ನೀವು ಕೇಳಿದ ಮಾತುಗಳನ್ನೆಲ್ಲ, ಅಂದರೆ ಈ ದೇವಾಲಯಕ್ಕೂ ನಗರಕ್ಕೂ ವಿರುದ್ಧವಾದ ಮಾತುಗಳನ್ನು ನುಡಿಯಲು ನನ್ನನ್ನು ಕಳಿಸಿದವರು ಸರ್ವೇಶ್ವರನೇ.
- Verse 13: ಇದೀಗಲೇ ನೀವು ನಿಮ್ಮ ಮಾರ್ಗಗಳನ್ನೂ ನಡತೆಗಳನ್ನೂ ತಿದ್ದುಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ಕಿವಿಗೊಡಿ. ಆಗ ನಿಮಗೆ ತಿಳಿಸಿದ ಕೇಡು ಒದಗದಂತೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವರು.
- Verse 14: ನಾನೋ ನಿಮ್ಮ ಕೈಯಲ್ಲಿದ್ದೇನೆ. ನಿಮಗೆ ಯಾವುದು ಒಳ್ಳೆಯದು, ಯಾವುದು ನ್ಯಾಯವಾದುದು ಎಂದು ತೋರುತ್ತದೆಯೋ ಅದನ್ನು ನನಗೆ ಮಾಡಿ.
- Verse 15: ಆದರೆ ಒಂದು ವಿಷಯ ನಿಮಗೆ ಚೆನ್ನಾಗಿ ತಿಳಿದಿರಲಿ - ನೀವು ನನ್ನನ್ನು ಕೊಂದುಹಾಕಿದ್ದೇ ಆದರೆ, ನಿರ್ದೋಷಿಯ ರಕ್ತ ಸುರಿಸಿದ ಅಪರಾಧಕ್ಕೆ ನೀವೂ ಈ ನಗರವೂ ಇದರ ನಿವಾಸಿಗಳೂ ಗುರಿಯಾಗುವಿರಿ. ಏಕೆಂದರೆ ಈ ಮಾತುಗಳನ್ನೆಲ್ಲ ನಿಮ್ಮ ಕಿವಿಗೆ ಮುಟ್ಟಿಸುವಂತೆ ನನ್ನನ್ನು ಕಳಿಸಿದವರು ಸರ್ವೇಶ್ವರ ಎಂಬುದು ಸತ್ಯ,” ಎಂದು ಹೇಳಿದನು.
- Verse 16: ಇದನ್ನು ಕೇಳಿದ ನಾಯಕರು ಮತ್ತು ಸಕಲ ಜನರು ಯಾಜಕ - ಪ್ರವಾದಿಗಳಿಗೆ, “ಇವನು ಮರಣದಂಡನೆಗೆ ಪಾತ್ರನಲ್ಲ. ಏಕೆಂದರೆ ನಮ್ಮ ದೇವರಾದ ಸರ್ವೇಶ್ವರನ ಹೆಸರಿನಲ್ಲೇ ಇದನ್ನು ನಮಗೆ ನುಡಿದಿದ್ದಾನೆ,” ಎಂದರು.
- Verse 17: ತರುವಾಯ ನಾಡಿನ ಹಿರಿಯರಲ್ಲಿ ಕೆಲವರು ಎದ್ದು ನಿಂತು ನೆರೆದಿದ್ದ ಜನರನ್ನು ಉದ್ದೇಶಿಸಿ ಹೀಗೆಂದರು:
- Verse 18: “ಜುದೇಯದ ಅರಸನಾದ ಹಿಜ್ಕೀಯನ ಕಾಲದಲ್ಲಿ ಮೋರೆಷೆತ್ ಊರಿನವನಾದ ಮಿಕಾಯನು ಯೆಹೂದ್ಯರೆಲ್ಲರಿಗೆ: ‘ಸೇನಾಧೀಶ್ವರ ಸರ್ವೇಶ್ವರನ ಮಾತನ್ನು ಕೇಳಿರಿ: ಸಿಯೋನ್ ನಗರವನ್ನು ಹೊಲದಂತೆ ಉಳಲಾಗುವುದು; ಜೆರುಸಲೇಮ್ ಹಾಳುದಿಬ್ಬಗಳಾಗಿ ಮಾರ್ಪಡುವುದು; ಸರ್ವೇಶ್ವರನ ಆಲಯವಿರುವ ಪರ್ವತ ಕಾಡುಗುಡ್ಡಗಳಂತಾಗುವುದು’ ಎಂದು ಸಾರಿದ.
- Verse 19: ಆಗ ಜುದೇಯದ ಅರಸ ಹಿಜ್ಕೀಯನು ಮತ್ತು ಯೆಹೂದ್ಯರೆಲ್ಲರು, “ಅವನನ್ನು ಕೊಂದುಹಾಕಿದರೋ? ಇಲ್ಲವೇ ಇಲ್ಲ. ಬದಲಿಗೆ ಆ ಅರಸ ಭಯಭಕ್ತಿಯಿಂದ ಸರ್ವೇಶ್ವರನ ದಯೆಯನ್ನು ಬೇಡಿಕೊಂಡ. ಆಗ ಸರ್ವೇಶ್ವರ ವಿಧಿಸಬೇಕೆಂದಿದ್ದ ದಂಡನೆಯನ್ನು ವಿಧಿಸದೆ ಮನಸ್ಸನ್ನು ಬದಲಾಯಿಸಿಕೊಂಡರಲ್ಲವೆ? ಇವನನ್ನು ಕೊಂದುಹಾಕುವುದರಿಂದ ನಾವು ನಮ್ಮ ಮೇಲೆ ದೊಡ್ಡ ಕೇಡನ್ನು ಬರಮಾಡಿಕೊಳ್ಳುತ್ತೇವೆ,” ಎಂದರು.
- Verse 20: ಸರ್ವೇಶ್ವರನ ಹೆಸರಿನಲ್ಲಿ ಪ್ರವಾದನೆ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿ ಇದ್ದ. ಅವನು ಕಿರ್ಯತ್ಯಾರೀಮ್ ಊರಿಗೆ ಸೇರಿದ ಶಮಾಯನ ಮಗ ಊರೀಯ ಎಂಬುವನು. ಯೆರೆಮೀಯನು ನುಡಿದಂತೆಯೇ ಈ ನಗರಕ್ಕೂ ಈ ನಾಡಿಗೂ ಅಹಿತವಾದುದನ್ನೆ ನುಡಿಯುತ್ತಿದ್ದ.
- Verse 21: ಅರಸ ಯೆಹೋಯಾಕೀಮನು ಮತ್ತು ಅವನ ಎಲ್ಲ ವೀರಶೂರರು ಹಾಗು ನಾಯಕರು ಆ ಊರೀಯನ ಮಾತುಗಳನ್ನು ಕೇಳಿಸಿಕೊಂಡರು. ಕೂಡಲೆ ಅರಸ ಅವನನ್ನು ಕೊಂದುಹಾಕಲು ಮನಸ್ಸುಮಾಡಿದ. ಈ ಸುದ್ದಿಯನ್ನು ಕೇಳಿದ ಊರೀಯ ಭಯಪಟ್ಟು ಓಡಿಹೋಗಿ ಈಜಿಪ್ಟನ್ನು ಸೇರಿಕೊಂಡ.
- Verse 22: ಆಗ ಅರಸ ಯೆಹೋಯಾಕೀಮನು ಅಕ್ಬೋರನ ಮಗ ಎಲ್ನಾಥಾನನನ್ನೂ ಕೆಲವು ಸಂಗಡಿಗರನ್ನೂ ಅಲ್ಲಿಗೆ ಕಳಿಸಿದ.
- Verse 23: ಅವರು ಊರೀಯನನ್ನು ಈಜಿಪ್ಟಿನಿಂದ ಎಳೆದು ಅರಸ ಯೆಹೋಯಾಕೀಮನ ಬಳಿಗೆ ತಂದರು. ಅರಸ ಅವನನ್ನು ಕತ್ತಿಯಿಂದ ಕಡಿಸಿ, ಶವವನ್ನು ಜನಸಾಮಾನ್ಯರ ಸಮಾಧಿಗಳ ನಡುವೆ ಹೂಣಿಸಿದ.
- Verse 24: ಇತ್ತ ಯಾಜಕರೂ ಪ್ರವಾದಿಗಳೂ ಯೆರೆಮೀಯನನ್ನು ಜನರ ಕೈಗೆ ಸಿಕ್ಕಿಸಿ ಕೊಲ್ಲಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಯೆರೆಮೀಯನಿಗೆ ಶಾಫಾನನ ಮಗ ಅಹೀಕಾಮನ ಸಹಾಯ ದೊರಕಿತ್ತು.